ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆರು ಅಧ್ಯಕ್ಷ ಹುದ್ದೆಗೆ ಕಂಟಕವಾದ ರೊಲೆಕ್ಸ್ ವಾಚ್‌

Published 2 ಏಪ್ರಿಲ್ 2024, 16:24 IST
Last Updated 2 ಏಪ್ರಿಲ್ 2024, 16:24 IST
ಅಕ್ಷರ ಗಾತ್ರ

ಲಿಮಾ: 2018ರಿಂದ ಪೆರು ರಾಷ್ಟ್ರ ಆರು ಅಧ್ಯಕ್ಷರನ್ನು ಕಂಡಿದೆ. ಸದ್ಯ ರಾಷ್ಟ್ರದ ಉನ್ನತ ಹುದ್ದೆಯಲ್ಲಿ ಡಿನಾ ಬೊಲರ್ಟೆ ಇದ್ದಾರೆ. ಆದರೆ ಅವರ ಬಳಿ ಇರುವ ದುಬಾರಿ ಬೆಲೆಯ ರೊಲೆಕ್ಸ್ ಕೈಗಡಿಯಾರಕ್ಕೆ ದಾಖಲೆ ಇಲ್ಲದಿರುವುದೇ ಈಗ ಅವರ ಅಧ್ಯಕ್ಷ ಸ್ಥಾನಕ್ಕೂ ಕಂಟಕ ತಂದಿದೆ.

ರೊಲೆಕ್ಸ್ ಕೈಗಡಿಯಾರ ಇರುವ ಮಾಹಿತಿ ಪಡೆದ ಪೊಲೀಸರು ಹಾಗೂ ಅಧಿಕಾರಿಗಳು ಈಸ್ಟರ್ ದಿನವೇ ಅವರ ಮನೆ ಹಾಗೂ ಕಚೇರಿಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. 

ಪೆರು ಅಧ್ಯಕ್ಷರಾಗಿ ಡಿನಾ ಅವರು 2022ರಲ್ಲಿ ಅಧಿಕಾರ ವಹಿಸಿಕೊಂಡರು. ರಾಷ್ಟ್ರದ ಕಾಂಗ್ರೆಸ್ ಅನ್ನು ಅಕ್ರಮವಾಗಿ ನಿಷ್ಕ್ರಿಯಗೊಳಿಸಲು ಪ್ರಯತ್ನಿಸಿದ್ದಕ್ಕಾಗಿ ಹಿಂದಿನ ಅಧ್ಯಕ್ಷರು ಅಧಿಕಾರ ಕಳೆದುಕೊಂಡಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವುದರಿಂದ ಡಿನಾ ಅವರ ರಾಜೀನಾಮೆಗೆ ಒತ್ತಡ ಹೆಚ್ಚಿತ್ತು. ಆದರೂ ಹುದ್ದೆಯಲ್ಲಿ ಅವರು ಮುಂದುವರಿದಿದ್ದರು. ಆದರೆ ಈ ಹಗರಣವೇ ಈಗ ಅವರ ತಲೆದಂಡಕ್ಕೆ ಕಾರಣವಾಗುವುದೇ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ದಾಳಿ ನಂತರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿರುವ ಅವರು, ‘ಈ ದಾಳಿ ನಿಂದನೀಯ. 2026ರವರೆಗೂ ನನ್ನ ಅಧಿಕಾರವಧಿ ಇದ್ದು. ಅಲ್ಲಿಯವರೆಗೂ ಮುಂದುವರಿಯುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಧಿಕಾರಕ್ಕೆ ಕಂಟಕವಾದ ರೊಲೆಕ್ಸ್‌ ವಾಚ್‌ನ ಕಥೆ ಏನು..?

‘ಲಾ ಎನ್‌ಸೆರೊನಾ’ ಎಂಬ ಯುಟ್ಯೂಬ್‌ನ ಕಾರ್ಯಕ್ರಮದಲ್ಲಿ ಡಿನಾ ಅವರ ಹಲವು ಚಿತ್ರಗಳು ಇತ್ತೀಚೆಗೆ ಪ್ರದರ್ಶನಗೊಂಡವು. ಅವುಗಳಲ್ಲಿ 14 ಸಾವಿರ ಅಮೆರಿಕನ್ ಡಾಲರ್ ಹಾಗೂ 25 ಸಾವಿರ ಅಮೆರಿಕನ್ ಡಾಲರ್‌ನ ರೊಲೆಕ್ಸ್‌ ವಾಚ್‌ಗಳನ್ನು ಅವರು ಧರಿಸಿದ್ದ ಚಿತ್ರಗಳೂ ಪ್ರದರ್ಶನಗೊಂಡವು. ಇದನ್ನು ಗಮನಿಸಿದ ಪೆರುವಿನ ಪ್ರಾಸಿಕ್ಯೂಟರ್ ಕಚೇರಿಯು, ಪ್ರಾಥಮಿಕ ತನಿಖೆಗೆ ಆದೇಶಿಸಿತು. 

ಶುಭ ಶುಕ್ರವಾರದ ದಿನ ಪೊಲೀಸರು ಹಾಗೂ ಅಧಿಕಾರಿಗಳು ಡಿನಾ ಅವರ ಅಧಿಕೃತ ನಿವಾಸದ ಮೇಲೆ ದಾಳಿ ನಡೆಸಿ, ಕೈಗಡಿಯಾರಗಳನ್ನು ತೋರಿಸುವಂತೆ ಮತ್ತು ಮಾಹಿತಿ ನೀಡುವಂತೆ ಸೂಚಿಸಿದರು. ಆದರೆ ಇದಕ್ಕೆ ಡಿನಾ ನಿರಾಕರಿಸಿದರು ಎಂದು ಅಧಿಕಾರಿಗಳು ಹೇಳಿದರು. ನಂತರ ಶೋಧ ಕಾರ್ಯ ಮುಂದುವರಿಸಿದ ಪೊಲೀಸರಿಗೆ, 2023ರ ಜುಲೈನಲ್ಲಿ ಖರೀದಿಸಿದ ಒಂದು ರೊಲೆಕ್ಸ್‌ ವಾಚ್ ಸಿಕ್ಕಿತು. ಇದರ ಬೆಲೆ ಕಂಪನಿಯ ಅಂತರ್ಜಾಲ ತಾಣದಲ್ಲಿ 14 ಸಾವಿರ ಅಮೆರಿಕನ್ ಡಾಲರ್ ಎಂದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವುದಾಗಿ ಎನ್‌ಡಿಟಿವಿ ಹೇಳಿದೆ.

ರೊಲೆಕ್ಸ್‌ ಜತೆಗೆ ಇತರ ಕಂಪನಿಗಳ ಎಂಟು ವಾಚುಗಳು ಪತ್ತೆಯಾಗಿವೆ. ಡಿನಾ ಅವರ ವೇತನ ಮಾಸಿಕ 4,200 ಅಮೆರಿಕನ್ ಡಾಲರ್‌ನಷ್ಟಿದೆ. ಅವರ ದೈನಂದಿನ ಖರ್ಚು ಮತ್ತು ಮನೆಯ ನಿರ್ವಹಣೆಯ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.

ಡಿನಾ ಅವರ ಈ ರೊಲೆಕ್ಸ್‌ ಪ್ರಕರಣದ ನಂತರ ಅವರ ರಾಜೀನಾಮೆಗೆ ವಿರೋಧಪಕ್ಷಗಳು ಒತ್ತಡ ಹೇರಿವೆ. ಜತೆಗೆ ಅಧ್ಯಕ್ಷರ ಪದಚ್ಯುತಿಯ ಚಿಂತನೆಯೂ ವಿರೋಧಿ ಪಾಳಯದಲ್ಲಿ ನಡೆದಿದೆ ಎಂದು ವರದಿಯಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT