ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದಲ್ಲಿ ಬರಿದಾಗುತ್ತಿದೆ ತೈಲ ದಾಸ್ತಾನು: ಇಲ್ಲಿದೆ ಕಾರಣ

Last Updated 21 ಜನವರಿ 2023, 8:46 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ತೈಲ ಆಮದಿಗೆ ಬೇಕಾದ ಸಾಲಪತ್ರ (ಲೆಟರ್‌ ಆಫ್‌ ಕ್ರೆಡಿಟ್‌ – ಆಮದುದಾರರ ಪರವಾಗಿ ಬ್ಯಾಂಕ್‌ ನೀಡುವ ಸಾಲ ಖಾತ್ರಿ ಪತ್ರ) ನೀಡಲು ಬ್ಯಾಂಕ್‌ಗಳು ನಿರಾಕರಿಸುತ್ತಿವೆ. ಹೀಗಾಗಿ ತೈಲ ಆಮದಿನಲ್ಲಿ ತೊಂದರೆಯಾಗಿದ್ದು, ದೇಶದಲ್ಲಿನ ಪೆಟ್ರೋಲಿಯಂ ಉತ್ಪನ್ನಗಳ ದಾಸ್ತಾನು ಖಾಲಿಯಾಗುತ್ತಿದೆ ಎಂದು ಪೆಟ್ರೋಲಿಯಂ ಇಲಾಖೆಯು ಸ್ಟೇಟ್‌ ಬ್ಯಾಂಕ್‌ ಆಫ್‌ ಪಾಕಿಸ್ತಾನಕ್ಕೆ (ಎಸ್‌ಬಿಪಿ) ಹೇಳಿದೆ.

ಡಾಲರ್ ವಿನಿಮಯದಲ್ಲಿನ ಸಮಸ್ಯೆ, ಎಸ್‌ಬಿಪಿಯ ನಿರ್ಬಂಧಗಳಿಂದಾಗಿ ಇತರ ವಲಯಗಳಂತೆ ಪಾಕಿಸ್ತಾನದ ತೈಲ ಉದ್ಯಮವು ಸಾಲಪತ್ರ ಪಡೆಯುವಲ್ಲಿ ತೊಂದರೆ ಅನುಭವಿಸುತ್ತಿದೆ ಎಂದು ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.

‘ಪಾಕಿಸ್ತಾನ್ ಸ್ಟೇಟ್ ಆಯಿಲ್ (ಪಿಎಸ್‌ಒ)ನ ಒಂದು ತೈಲ ಹಡಗು ಈಗಾಗಲೇ ರದ್ದುಗೊಂಡಿದೆ. ಜನವರಿ 23 ರಂದು ಲೋಡ್ ಆಗಲು ನಿಗದಿಯಾಗಿದ್ದ ಮತ್ತೊಂದು ಹಡಗಿಗೂ ಸಾಲಪತ್ರ ಇನ್ನೂ ಖಚಿತವಾಗಿಲ್ಲ’ ಎಂದು ತಿಳಿದು ಬಂದಿದೆ.

ಸಾಲಪತ್ರ ಸಿಗದೇ ತೈಲ ಸಂಸ್ಕರಣಾಗಾರಗಳು ಮತ್ತು ಮಾರ್ಕೆಟಿಂಗ್ ಕಂಪನಿಗಳು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಪೆಟ್ರೋಲಿಯಂ ಇಲಾಖೆಯು ಎಸ್‌ಬಿಪಿ ಗವರ್ನರ್‌ಗೆ ಪತ್ರ ಬರೆದು ಗಮನ ಸೆಳೆದಿದೆ.

ಮೂಲಗಳ ಪ್ರಕಾರ, ಪಾಕ್ ಅರಬ್ ರಿಫೈನರಿ ಲಿಮಿಟೆಡ್ (ಪಾರ್ಕೊ) ಎರಡು ಹಡಗುಗಳಲ್ಲಿ ತಲಾ 5,35,000 ಬ್ಯಾರೆಲ್‌ಗಳ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಕಾಯುತ್ತಿದೆ. ಆದರೆ ಬ್ಯಾಂಕುಗಳು ಸಾಲಪತ್ರ ನೀಡಲು ನಿರಾಕರಿಸುತ್ತಿವೆ ಎಂದು ಗೊತ್ತಾಗಿದೆ.

‘ಪಾಕಿಸ್ತಾನ ರಿಫೈನರಿ ಲಿಮಿಟೆಡೆ’ನ ಹಡಗು 5,32,000 ಬ್ಯಾರೆಲ್‌ಗಳ ಕಚ್ಚಾ ತೈಲ ಲೋಡ್‌ಗೆ ಕಾಯುತ್ತಿದೆ. ಜನವರಿ 30ರಂದು ಲೋಡ್‌ ನಿಗದಿಯಾಗಿದೆ. ಆದರೆ, ಬ್ಯಾಂಕ್‌ನಿಂದ ಸಾಲಪತ್ರ ಇನ್ನೂ ಸಿಕ್ಕಿಲ್ಲ. ಹೀಗಾಗಿ ಕಂಪನಿಯು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ನೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ. ಪಿಎಸ್‌ಒನ ಇನ್ನೂ ಎರಡು ಹಡುಗುಗಳ ಲೋಡ್‌ಗೂ ಸಾಲ ಪತ್ರ ಸಿಗಬೇಕಾಗಿದೆ.

ಉದ್ಯಮ ಮೂಲಗಳ ಪ್ರಕಾರ, ‘ಜಿಒ’, ‘ಬಿ ಎನರ್ಜಿ’, ‘ಅಟ್ಟೋಕ್‌ ಪೆಟ್ರೋಲಿಯಂ’, ‘ಹಾಸ್ಕೊಲ್‌ ಪಟ್ರೋಲಿಯಂ’ ಕಂಪನಿಗಳು 18 ಕಾರ್ಗೋಗಳನ್ನು ಕಾದಿರಿಸಿದ್ದು, ಸಾಲಪತ್ರಗಳಿಗಾಗಿ ಕಾಯುತ್ತಿವೆ.

ಸಮಸ್ಯೆ ಸರಿಪಡಿಸಲು ಜನವರಿ ಎರಡನೇ ವಾರದಿಂದಲೇ ಬ್ಯಾಂಕ್‌ಗಳೊಂದಿಗೆ ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT