ವಾಷಿಂಗ್ಟನ್ (ಪಿಟಿಐ): ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯು ಆರ್ಥಿಕತೆ ದೃಷ್ಟಿಯಿಂದ ಅತ್ಯಂತ ಯಶಸ್ವಿಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಆರ್ಥಿಕ ಸಲಹೆಗಾರ ಜಾರ್ಡ್ ಬರ್‌ಸ್ಟೀನ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಭಾರತ ಮತ್ತು ಅಮೆರಿಕ ಸ್ನೇಹವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಜೂನ್ 21 ಮತ್ತು 23ರಂದು ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದರು. ದ್ವಿಪಕ್ಷೀಯ ಸಂಬಂಧಗಳ ವೃದ್ಧಿಗೆ ಪೂರಕವಾದ ಹಲವು ಐತಿಹಾಸಿಕ ನಿರ್ಧಾರಗಳನ್ನು ಭೇಟಿ ವೇಳೆ ಕೈಗೊಳ್ಳಲಾಗಿತ್ತು.
ಭಾರತ–ಅಮೆರಿಕ ನಡುವಿನ ದೀರ್ಘಕಾಲದ ಸ್ನೇಹ ಸಂಬಂಧ ಮತ್ತು ವ್ಯಾಪಾರ–ಹೂಡಿಕೆ, ಮಿಲಿಟರಿ–ಭದ್ರತೆ, ಇಂಧನ, ಹವಾಮಾನ ಬದಲಾವಣೆ, ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದ ವಿಷಯಗಳು ಮೋದಿ ಮತ್ತು ಜೋ ಬೈಡನ್ ಅವರ ನಡುವೆ ಚರ್ಚೆಯಾಗಿತ್ತು.
ಈ ಭೇಟಿ ಕುರಿತು ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಬರ್‌ಸ್ಟೀನ್, ‘ಭಾರತವನ್ನು ಮಿತ್ರ ರಾಷ್ಟ್ರವಾಗಿ, ಮುಖ್ಯವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರಜಾಪ್ರಭುತ್ವ ರಾಷ್ಟ್ರವಾಗಿಯೂ ಪರಿಗಣಿಸುತ್ತೇವೆ. ಹಲವು ಭೇಟಿಗಳ ಫಲವಾಗಿ ಎರಡೂ ರಾಷ್ಟ್ರಗಳ ಸಂಬಂಧಗಳು ಗಟ್ಟಿಯಾಗಿವೆ. ಆರ್ಥಿಕತೆ ದೃಷ್ಟಿಯಿಂದ ನೋಡುವುದಾದರೆ ನಾವು ಜಾಗತಿಕ ವ್ಯಾಪಾರಕ್ಕೆ ಮುಕ್ತವಾಗಿದ್ದೇವೆ. ಕೆಲವು ರಾಷ್ಟ್ರಗಳೊಂದಿಗೆ ವ್ಯಾಪಾರಕ್ಕೆ ಸದಾ ಸಿದ್ಧರಿರುತ್ತೇವೆ’ ಎಂದು ಅವರು ಹೇಳಿದ್ದಾರೆ.
‘ಭಾರತದೊಂದಿಗೆ ಕೆಲವು ಚರ್ಚೆಗಳು ಸಾಗುತ್ತಿವೆ. ಅದೇ ಸಮಯದಲ್ಲಿ, ನಾವು ದೇಶೀಯವಾಗಿ ಹೂಡಿಕೆ ಮಾಡುತ್ತಿದ್ದೇವೆ. ಇತರ ದೇಶಗಳಿಂದ ವಿದೇಶಿ ನೇರ ಹೂಡಿಕೆಯನ್ನು ಸ್ವಾಗತಿಸುತ್ತಿದ್ದೇವೆ‘ ಎಂದು ಅವರು ತಿಳಿಸಿದರು.