ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಸ್ವಾತಂತ್ರ ದಿನಾಚರಣೆ: ಒಗ್ಗಟ್ಟಿಗೆ ಕರೆ ನೀಡಿದ ಅಧ್ಯಕ್ಷ ಅಲ್ವಿ

Published 14 ಆಗಸ್ಟ್ 2023, 23:30 IST
Last Updated 14 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ದೇಶದ ರಾಜಕಾರಣಿಗಳು ಭಿನ್ನಾಭಿಪ್ರಾಯ ಮತ್ತು ಹಗೆತನವನ್ನು ಬದಿಗಿಡಬೇಕು ಎಂದು ಪಾಕಿಸ್ತಾನದ ಅಧ್ಯಕ್ಷ ಆರಿಫ್‌ ಅಲ್ವಿ ಅವರು ಸೋಮವಾರ ಮನವಿ ಮಾಡಿದರು. ರಾಜಕೀಯ ಮತ್ತು ಆರ್ಥಿಕ ಪ್ರಕ್ಷುಬ್ಧತೆ ನಡುವೆಯೇ ಪಾಕಿಸ್ತಾನವು 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ಹಿನ್ನೆಲೆಯಲ್ಲಿ ಹೀಗೆ ಹೇಳಿದರು.

ಇಲ್ಲಿಯ ಜಿನ್ಹಾ ಕನ್ವೆನ್ಷನ್‌ ಸೆಂಟರ್‌ನಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ನೆರವು ನೀಡಿದ್ದಕ್ಕಾಗಿ ಚೀನಾ, ಸೌದಿ ಅರೇಬಿಯಾ, ಅರಬ್‌ ಸಂಯುಕ್ತ ಸಂಸ್ಥಾನ, ಇರಾನ್‌ ಮತ್ತು ಟರ್ಕಿ ರಾಷ್ಟ್ರಗಳಿಗೆ ಧನ್ಯವಾದ ಸಲ್ಲಿಸಿದರು. ಜೊತೆಗೆ, ಇನ್ನು ಕೆಲವೇ ವರ್ಷಗಳಲ್ಲಿ ಪಾಕಿಸ್ತಾನವು ಅಭಿವೃದ್ಧಿ ಹೊಂದಿರುವ ರಾಷ್ಟ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷಮೆಯ ಹಾದಿಯನ್ನು ತುಳಿಯುವಂತೆ ರಾಜಕಾರಣಿಗಳು ಮತ್ತು ಸಂಬಂಧಪಟ್ಟ ಇತರರಿಗೆ ಸಲಹೆ ನೀಡಿದ ಅವರು, ‘ಒಗ್ಗಟ್ಟಿನಿಂದ ಇರಲು ಈ ದೇಶದ ನಾಯಕರಲ್ಲಿ ನಾನು ಮನವಿ ಮಾಡುತ್ತೇನೆ’ ಎಂದರು.

ದೇಶದ 2.70 ಕೋಟಿ ಮಕ್ಕಳು ಶಾಲೆಯಿಂದ ಹೊರಬಿದ್ದಿದ್ದಾರೆ. ದೇಶದ ಶ್ರೀಮಂತರು ಮುಂದೆ ಬಂದು ಆ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಬೇಕು ಎಂದರು. ಜೊತೆಗೆ, ದೇಶದ ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಮಹತ್ವವನ್ನು ಒತ್ತಿ ಹೇಳಿದರು.

ಭಯೋತ್ಪಾದನೆ ಕುರಿತು ಮಾತನಾಡಿದ ಅವರು, ‘ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ತನ್ನ ಬದ್ಧತೆ ಮುಂದುವರೆಸುತ್ತದೆ’ ಎಂದರು.

ಷರೀಫ್‌ ಭಾಷಣ: ಸ್ವಾತಂತ್ರ್ಯ ದಿನದ ಭಾಷಣ ಮಾಡಿದ ಪಾಕಿಸ್ತಾನದ ನಿರ್ಗಮಿತ ಪ್ರಧಾನಿ ಶಹಬಾಜ್‌ ಷರೀಫ್‌ ಅವರು, ಈ ದೇಶವು ಹಲವು ವಿರೋಧಾಭಾಸಗಳನ್ನು ಮಣಿಸಿದೆ ಮತ್ತು ಹಲವು ಮೈಲುಗಲ್ಲುಗಳನ್ನು ಸಾಧಿಸಿದೆ. ಪಾಕಿಸ್ತಾನದ ಯಶೋಗಾಥೆಯು ತನ್ನ ಪರಾಕಾಷ್ಠೆಯನ್ನು ಇನ್ನಷ್ಟೇ ತಲುಪಬೇಕಿದೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT