ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮಾಣು ಇಂಧನ ಮಾರಾಟ: ರಷ್ಯಾಕ್ಕೆ ಪಾಶ್ಚಾತ್ಯರಿಂದ ಆದಾಯ

Published 10 ಆಗಸ್ಟ್ 2023, 14:43 IST
Last Updated 10 ಆಗಸ್ಟ್ 2023, 14:43 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಉಕ್ರೇನ್‌ ವಿರುದ್ಧದ ಸೇನಾ ಕಾರ್ಯಾಚರಣೆಗೆ ಪ್ರತಿಯಾಗಿ ಅಮೆರಿಕ ಮತ್ತು ಐರೋಪ್ಯ ಮಿತ್ರ ರಾಷ್ಟ್ರಗಳು ರಷ್ಯಾ ವಿರುದ್ಧ ಹಲವು ನಿರ್ಬಂಧಗಳನ್ನು ವಿಧಿಸಿವೆಯಾದರೂ, ಪರಮಾಣು ಇಂಧನ ಮತ್ತು ಉತ್ಪನ್ನಗಳನ್ನು ಭಾರಿ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿವೆ. ಪರಿಣಾಮವಾಗಿ ಯುದ್ಧ ಮುನ್ನಡೆಸಲು ಹಣದ ಕೊರತೆ ಎದುರಿಸುತ್ತಿರುವ ರಾಷ್ಟ್ರಕ್ಕೆ ನೂರಾರು ಮಿಲಿಯನ್‌ ಡಾಲರ್‌ಗಳ ಆದಾಯ ಪಾಶ್ಚಾತ್ಯ ರಾಷ್ಟ್ರಗಳಿಂದಲೇ ಲಭ್ಯವಾಗುತ್ತಿದೆ.  

ವಿದ್ಯುತ್‌ ಉತ್ಪಾದನಾ ರಿಯಾಕ್ಟರ್‌ಗಳಿಗೆ ಪರಮಾಣು ಇಂಧನ ಅಗತ್ಯ. ಹೀಗಾಗಿ ರಷ್ಯಾದ ಪರಮಾಣು ಉತ್ಪನ್ನಗಳಿಗೆ ನಿಷೇಧ ಹೇರಲು ಪಾಶ್ಚಾತ್ಯ ರಾಷ್ಟ್ರಗಳು ಹಿಂದೇಟು ಹಾಕುತ್ತಿವೆ. ಅಮೆರಿಕ ಮತ್ತು ಯುರೋಪ್‌ ರಾಷ್ಟ್ರಗಳು 2022ರಲ್ಲಿ ರಷ್ಯಾದಿಂದ 1.7 ಬಿಲಿಯನ್‌ ಡಾಲರ್‌ (₹14,052 ಕೋಟಿ) ಮೌಲ್ಯದ ಪರಮಾಣು ಉತ್ಪನ್ನಗಳನ್ನು ಖರೀದಿಸಿವೆ ಎಂದು ವ್ಯಾಪಾರ ವಹಿವಾಟಿನ ದತ್ತಾಂಶ ವಿಶ್ಲೇಷಕರು ತಿಳಿಸಿದ್ದಾರೆ.   

‘ಅಮೆರಿಕ ಇಂಧನ ಮಾಹಿತಿ ಆಡಳಿತ’ದ ಪ್ರಕಾರ ಕಳೆದ ವರ್ಷ ಅಮೆರಿಕದ ಪರಮಾಣು ಉದ್ಯಮಕ್ಕೆ ರಷ್ಯಾ ಶೇ 12 ರಷ್ಟು ಯುರೇನಿಯಂ ಪೂರೈಸಿದೆ. ಇದೇ ವರ್ಷ ಐರೋಪ್ಯ ರಾಷ್ಟ್ರಗಳು ಶೇ 17ರಷ್ಟು ಯುರೇನಿಯಂ ಅನ್ನು ರಷ್ಯಾದಿಂದಲೇ ಪಡೆದುಕೊಂಡಿವೆ.  

ಉಕ್ರೇನ್‌ ವಿರುದ್ಧ ರಷ್ಯಾ 2022ರಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಿದ್ದಕ್ಕೆ ಪ್ರತಿಯಾಗಿ ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾದ ತೈಲ, ಅನಿಲ, ವೋಡ್ಕ ಸೇರಿದಂತೆ ಹಲವು ವಸ್ತುಗಳ ಮೇಲೆ ನಿರ್ಬಂಧ ವಿಧಿಸಿವೆ. ಅದರ ನಡುವೆಯೇ ಪರಮಾಣು ಉತ್ಪನ್ನಗಳ ವಹಿವಾಟು ಭಾರಿ ಪ್ರಮಾಣದಲ್ಲಿ ನಡೆದಿರುವುದು, ರಷ್ಯಾ ಮೇಲಿನ ಪಾಶ್ಚಾತ್ಯ ರಾಷ್ಟ್ರಗಳ ಅವಲಂಬನೆಯನ್ನು ಬಯಲು ಮಾಡಿದೆ.  

ರಷ್ಯಾದ ಪರಮಾಣು ಇಂಧನದ ಆಮದಿಗೆ ಬಹುತೇಕ ರಾಷ್ಟ್ರಗಳು ಯಾವುದೇ ನಿರ್ಬಂಧ ವಿಧಿಸಿಲ್ಲ. ಹೀಗಾಗಿ ರಷ್ಯಾದ ಪರಮಾಣು ಶಸ್ತ್ರಾಸ್ತ್ರದ ಅಭಿವೃದ್ಧಿಗೆ ಆರ್ಥಿಕ ನೆರವು ಸಿಗುತ್ತಿದೆ. ಇನ್ನೊಂದೆಡೆ, ರಷ್ಯಾದ ಯುದ್ಧ ಸಾಮರ್ಥ್ಯವನ್ನು ಕಡಿಮೆ ಮಾಡುವ ಪ್ರಯತ್ನಗಳಿಗೆ ಅಡ್ಡಿಯುಂಟಾಗಿದೆ ಎಂದು ಅಮೆರಿಕದ ಪರಮಾಣು ಪ್ರಸರಣ ನಿಷೇಧದ ತಜ್ಞರು ಮತ್ತು ಚುನಾಯಿತ ಪ್ರತಿನಿಧಿಗಳು ಆತಂಕ ವ್ಯಕ್ತಪಡಿಸಿದ್ದಾರೆ. 

ರಷ್ಯಾದ ಪರಮಾಣು ಉತ್ಪನ್ನಗಳ ಮೇಲಿನ ಅವಲಂಬನೆಯು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ಮುಂದೊಂದು ದಿನ ಸಮಸ್ಯೆ ತಂದೊಡ್ಡಲಿದೆ. ಒಂದು ವೇಳೆ, ಅಧ್ಯಕ್ಷ ಪುಟಿನ್‌ ಏನಾದರೂ ಏಕಾಏಕಿ ಉತ್ಪನ್ನಗಳ ಪೂರೈಕೆ ನಿಲ್ಲಿಸಿದರೆ, ಇಂಧನದ ಕೊರತೆ ಎದುರಿಸಬೇಕಾಗುತ್ತದೆ. ಹವಾಮಾನ ಬದಲಾವಣೆ ತಡೆಯಲು ಬಹುತೇಕ ರಾಷ್ಟ್ರಗಳು ಈಗ ಮಾಲಿನ್ಯ ರಹಿತ ವಿದ್ಯುತ್‌ ಉತ್ಪಾದನೆಗೆ ಆದ್ಯತೆ ನೀಡುತ್ತಿವೆ. ಇದಕ್ಕೂ ಪರಮಾಣು ಇಂಧನ ಅಗತ್ಯ. ಇದು ಹೀಗೇ ನಡೆದರೆ ಮುಂದೊಂದು ದಿನ ರಷ್ಯಾದಿಂದ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

‘ಶಸ್ತ್ರಾಸ್ತ್ರಗಳನ್ನು ತಯಾರಿಸುವವರಿಗೆ ನಾವು ಹಣ ಕೊಡಬೇಕೇ? ಅದು ಅಸಂಬದ್ಧವಲ್ಲವೇ? ಪರಮಾಣು ವಿದ್ಯುತ್‌ ಪೂರೈಕೆದಾರರು ರಷ್ಯಾದಿಂದ ಪರಮಾಣು ಇಂಧನ ಆಮದು ಮಾಡಿಕೊಳ್ಳುವುದನ್ನು ತಡೆಯಲು ನಮ್ಮಲ್ಲಿ ಸ್ಪಷ್ಟ ನಿಯಮಗಳು ಇಲ್ಲದೇ ಹೋದರೆ ಇನ್ನೇನಾಗುತ್ತದೆ? ಅಗ್ಗದ ದರಕ್ಕೆ ಉತ್ಪನ್ನಗಳನ್ನು ಅಲ್ಲಿಂದಲೇ ಕೊಳ್ಳುತ್ತಾರೆ‘ ಎಂದು ವಾಷಿಂಗ್ಟನ್‌ ಮೂಲದ ಪರಮಾಣು ಪ್ರಸರಣ ನಿಷೇಧ ನೀತಿ ಶಿಕ್ಷಣ ಕೇಂದ್ರದ ಕಾರ್ಯಕಾರಿ ನಿರ್ದೇಶಕ ಹೆನ್ರಿ ಸೊಕೊಲ್‌ಸ್ಕಿ ಹೇಳಿದ್ದಾರೆ.  

ಪಳೆಯುಳಿಕೆ ಇಂಧನಕ್ಕೆ ಪರ್ಯಾಯವಾಗಿ ಪರಮಾಣು ಶಕ್ತಿಯನ್ನು ಬಳಸಿಕೊಳ್ಳುವುದರತ್ತ ಬಹುತೇಕ ರಾಷ್ಟ್ರಗಳು ಈಗ ಆದ್ಯತೆ ನೀಡುತ್ತಿವೆ. ಹೀಗಾಗಿ ಅದರ ಮೇಲಿನ ಅವಲಂಬನೆಯು ಮುಂಬರುವ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆಗಳು ದಟ್ಟವಾಗಿವೆ. ಪರಮಾಣು ಶಕ್ತಿ ಸ್ಥಾವರಗಳಿಂದ ಮಾಲಿನ್ಯ ರಹಿತ ವಿದ್ಯುತ್‌ ಉತ್ಪಾದನೆಯೇನೋ ಸಾಧ್ಯ. ಆದರೆ, ವಿಕಿರಣ ತ್ಯಾಜ್ಯದ ವಿಲೇವಾರಿಯ ಬಗ್ಗೆ ತಜ್ಞರು ಹಿಂದಿನಿಂದಲೂ ಆತಂಕ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಪ್ರಪಂಚದಾದ್ಯಂತ ಸುಮಾರು 60 ರಿಯಾಕ್ಟರ್‌ಗಳು ನಿರ್ಮಾಣ ಹಂತದಲ್ಲಿವೆ, 300 ರಿಯಾಕ್ಟರ್‌ಗಳು ಯೋಜನಾ ಹಂತದಲ್ಲಿವೆ. ಇವುಗಳಿಗೆ ಪರಮಾಣುವಿನ ಅಗತ್ಯ ಎದುರಾಗಲಿದ್ದು, ರಷ್ಯಾದ ಮೇಲಿನ ಅವಲಂಬನೆಯೂ ಏರುವ ಆತಂಕ ವ್ಯಕ್ತವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT