ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದಾದ್ಯಂತ ಬಲವಂತವಾಗಿ ಸ್ಥಳಾಂತರಗೊಂಡವರ ಸಂಖ್ಯೆ 11 ಕೋಟಿ: ಯುಎನ್‌ಎಚ್‌ಸಿಆರ್‌

Published 14 ಜೂನ್ 2023, 4:39 IST
Last Updated 14 ಜೂನ್ 2023, 4:39 IST
ಅಕ್ಷರ ಗಾತ್ರ

ಜಿನೆವಾ: ವಿಶ್ವದಾದ್ಯಂತ ದಾಖಲೆಯ 11 ಕೋಟಿಯಷ್ಟು ಜನರು ಬಲವಂತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಹೈ–ಕಮಿಷನ್‌ (ಯುಎನ್‌ಎಚ್‌ಸಿಆರ್‌) ಬುಧವಾರ ಹೇಳಿದೆ.

ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ಕದನ, ಅಫ್ಗಾನಿಸ್ತಾನದಿಂದ ನಿರಾಶ್ರಿತರ ವಲಸೆ ಮತ್ತು ಸುಡಾನ್‌ನಲ್ಲಿನ ಬಿಕ್ಕಟ್ಟು ಆಂತರಿಕ ಕಲಹ ಸ್ಥಳಾಂತರದ ಸಂಖ್ಯೆಯನ್ನು ಹೆಚ್ಚಿಸಿದ್ದು, ಜನರು ಹಿಂದೆಂದಿಗಿಂತಲೂ ಹೆಚ್ಚಾಗಿ ತಮ್ಮದೇ ದೇಶದಲ್ಲಿ ನೆಲೆ ಕಳೆದುಕೊಳ್ಳುವಂತೆ ಮತ್ತು ವಿದೇಶಗಳಲ್ಲಿ ನೆಲೆ ಹುಡುಕಿಕೊಳ್ಳುವಂತೆ ಮಾಡಿದೆ ಎಂದು ಯುಎನ್‌ಎಚ್‌ಸಿಆರ್‌ ತಿಳಿಸಿದೆ.

ಬಲವಂತದ ಸ್ಥಳಾಂತರದ ಜಾಗತಿಕ ಪ್ರವೃತ್ತಿ ಕುರಿತ ವಾರ್ಷಿಕ ವರದಿ ಬಿಡುಗಡೆ ಮಾಡಿರುವ ಯುಎನ್‌ಎಚ್‌ಸಿಆರ್‌, ಕಳೆದ ವರ್ಷದ ಅಂತ್ಯದ ವೇಳೆಗೆ 10.84 ಕೋಟಿ ಜನರು ಸ್ಥಳಾಂತರಗೊಂಡಿದ್ದರು ಎಂದು ಮಾಹಿತಿ ನೀಡಿದೆ.

ಸುಡಾನ್‌ ಬಿಕ್ಕಟ್ಟು ಈ ವರ್ಷ ಮೇ ವೇಳೆಗೆ ಜಾಗತಿಕ ಸ್ಥಳಾಂತರದ ಪ್ರಮಾಣವನ್ನು ಅಂದಾಜು 11 ಕೋಟಿಗೆ ತಲುಪುವಂತೆ ಮಾಡಿದೆ.

'ಬಿಕ್ಕಟ್ಟು, ಹಿಂಸಾಚಾರ, ತಾರತಮ್ಯ, ಗಲಭೆ, ಹವಾಮಾನ ವೈಪರೀತ್ಯ ಹಾಗೂ ಇತರ ಕಾರಣದಿಂದಾಗಿ 11 ಕೋಟಿ ನಿರಾಶ್ರಿತರನ್ನು ಹೊಂದಿದ್ದೇವೆ. ಇದು ಪ್ರಪಂಚದ ವಸ್ತುಸ್ಥಿತಿಯ ಮೇಲಿನ 'ದೋಷಾರೋಪ'ವಾಗಿದೆ' ಎಂದು ಯುಎನ್‌ಎಚ್‌ಸಿಆರ್‌ ಮುಖ್ಯಸ್ಥ ಫಿಲಿಪ್ಪೋ ಗ್ರಾಂಡಿ ಹೇಳಿದ್ದಾರೆ.

2022ರಲ್ಲಿ ಜಾಗತಿಕ ಒಟ್ಟು ಸಂಖ್ಯೆಯಲ್ಲಿ 3.53 ಕೋಟಿ ನಿರಾಶ್ರಿತರು ವಿದೇಶಗಳಿಗೆ ಹೋಗಿದ್ದಾರೆ. 6.25 ಕೋಟಿಯಷ್ಟು ಮಂದಿ ತಮ್ಮದೇ ದೇಶಗಳಲ್ಲಿ ಸ್ಥಳಾಂತರಗೊಂಡಿದ್ದಾರೆ.

'ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂಬುದು ಆತಂಕಕಾರಿ' ಎಂದೂ ಗ್ರಾಂಡಿ ಕಳವಳ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT