ಲಂಡನ್: ತಾವೂ ಜನಾಂಗೀಯ ದ್ವೇಷ ಅನುಭವಿಸಿದ್ದಾಗಿ ಭಾರತ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ತಿಳಿಸಿದ್ದಾರೆ.
ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವರ್ಸಸ್ ಆಸ್ಟ್ರೇಲಿಯಾ ಆ್ಯಷಸ್ ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸಲು ವಿಶೇಷ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡರು.
ಎಲ್ಲಾ ಹಂತದ ಕ್ರಿಕೆಟ್‌ನಲ್ಲಿ ಜನಾಂಗೀಯ ದ್ವೇಷ, ಪ್ರತ್ಯೇಕತಾವಾದ, ವರ್ಗಾಧಾರಿತ ಪಕ್ಷಪಾತ ಆಳವಾಗಿ ಬೇರೂರಿದೆ ಎಂಬ ವರದಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕ್ರಿಕೆಟ್‌ನಲ್ಲಿ ನನಗೆ ಈ ಅನುಭವ ಆಗಿಲ್ಲ. ಆದರೆ ಜೀವನ ಆರಂಭಿಕ ದಿನಗಳಲ್ಲಿ ಜನಾಂಗೀಯ ದ್ವೇಷದ ಅನುಭವ ಆಗಿತ್ತು’ ಎಂದು ಹೇಳಿದರು.
‘ನನ್ನ ಕೆಲಸದಲ್ಲಿ ಪ್ರತಿ ದಿನ, ಪ್ರತಿ ಗಂಟೆ, ನಿಮಿಷ–ನಿಮಿಷವೂ ಟೀಕೆಗಳನ್ನು ಕೇಳುತ್ತೇನೆ. ಆದರೆ ಜನಾಂಗೀಯ ದ್ವೇಷವು ಗಾಯವೇ ಇಲ್ಲದಂತೆ ಒಳಗೊಳಗೆ ಚುಚ್ಚುತ್ತದೆ’ ಎಂದು ಹೇಳಿದರು.
‘ನಾನು ಬಾಲ್ಯದಲ್ಲಿದ್ದಾಗ ಜನಾಂಗೀಯ ದ್ವೇಷವನ್ನು ಅನುಭವಿಸಿದ್ದೆ. ಆದರೆ ನನ್ನ ಮಕ್ಕಳಿಗೂ ಈ ಅನುಭವವಾಗುತ್ತಿದೆ ಎಂದು ಅನ್ನಿಸುವುದಿಲ್ಲ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.