ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ–ಚೀನಾ ಕಾರಿಡಾರ್‌ ಯೋಜನೆಗೆ ಕೈಜೋಡಿಸಲಿದೆ ಸೌದಿ ಅರೇಬಿಯಾ

Last Updated 22 ಸೆಪ್ಟೆಂಬರ್ 2018, 9:34 IST
ಅಕ್ಷರ ಗಾತ್ರ

ಇಸ್ಲಮಾಬಾದ್‌: ಪಾಕಿಸ್ತಾನ ಹಾಗೂ ಚೀನಾ ದೇಶಗಳು ನಿರ್ಮಿಸಲು ಉದ್ದೇಶಿಸಿರುವ ಬಹುಕೋಟಿ ವೆಚ್ಚದ ಆರ್ಥಿಕ ಕಾರಿಡಾರ್‌ಯೋಜನೆಗೆ ಸೌದಿ ಅರೇಬಿಯಾ ದೇಶವುಮೂರನೇ ಪಾಲುದಾರ ರಾಷ್ಟ್ರವಾಗಿ ಬಂಡವಾಳ ಹೂಡಲಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.

ಪಾಕಿಸ್ತಾನ ಮೂಲಕ ಅರಬ್ಬೀ ಸಮುದ್ರ ಹಾಗೂ ಪಾಶ್ಚಾತ್ಯ ಚೀನಾ ವಲಯದ ನಡುವಣ ಸಂಪರ್ಕ ಕಲ್ಪಿಸುವುದುಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಯೋಜನೆಯ ಉದ್ದೇಶವಾಗಿದೆ. ಯೋಜನೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ ಬಂಡವಾಳ ಹೂಡಿಕೆ ಮಾಡಬೇಕಿದ್ದ ಪಾಕಿಸ್ತಾನ ಸದ್ಯ ಆರ್ಥಿಕ ಸಂಕಷ್ಟದಲ್ಲಿದೆ. ಚೀನಾ ನೀಡುವ ಸಾಲವೂ ಅದಕ್ಕೆ ಹೊರೆಯಾಗಿ ಪರಿಗಣಿಸಿದೆ.

ಹೀಗಾಗಿ ಬಂಡವಾಳ ಹೂಡಿಕೆಗಾಗಿ ತುರ್ತು ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಹೊಸ ಪ್ರಧಾನಿ ಇಮ್ರಾನ್‌ ಖಾನ್‌ ಸರ್ಕಾರದ ಮೇಲಿತ್ತು. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ(ಐಎಂಎಫ್‌) ನೆರವಿನ ನಿರೀಕ್ಷೆಯಲ್ಲಿರುವ ಪಾಕಿಸ್ತಾನ, ಪರ್ಯಾಯವಾಗಿ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಸೌದಿ ಅರೇಬಿಯಾವನ್ನು ಇತ್ತೀಚೆಗೆ ಆಹ್ವಾನಿಸಿತ್ತು.

ಪ್ರಧಾನಿಯಾಗಿಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡಿದ್ದ ಇಮ್ರಾನ್‌ ಖಾನ್‌ ಇತ್ತೀಚೆಗೆ ಸೌದಿಗೆ ಭೇಟಿ ನೀಡಿದ್ದರು. ಅವರ ಭೇಟಿ ಬಳಿಕ ಬಂಡವಾಳ ಹೂಡಿಕೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಮಾಹಿತಿ ಪ್ರಸಾರ ಸಚಿವ ಫವಾದ್‌ ಚೌಧರಿ, ‘ಸಿಪಿಇಸಿ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ನಾವು ಆಹ್ವಾನಿಸುತ್ತಿರುವ ಮೊದಲ ದೇಶ ಸೌದಿ ಅರೇಬಿಯಾ’ ಎಂದು ತಿಳಿಸಿದ್ದರು.

ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದ ಆಂತರಿಕ ಯೋಜನೆ ಹಾಗೂ ಅಭಿವೃದ್ಧಿ ಇಲಾಖೆಯ ಮಾಜಿ ಸಚಿವ ಹಸನ್‌ ಇಕ್ಬಾಲ್‌ ಅವರು, ‘ಸಿಪಿಇಸಿ ದ್ವಿಪಕ್ಷೀಯ ಯೋಜನೆಯಾಗಿದ್ದು, ಸೌದಿ ಅರೇಬಿಯಾವನ್ನು ಯೋಜನೆಯಲ್ಲಿ ಸೇರ್ಪಡೆಗೊಳಿಸುವ ಸಂಬಂಧ ಚೀನಾವನ್ನು ವಿಶ್ವಾಸಕ್ಕೆ ಪಡೆಯಲಾಗಿದೆಯೇ’ ಎಂದು ಪ್ರಶ್ನಿಸಿದ್ದರು.

ಇದಕ್ಕೆ ಉತ್ತರಿಸಿರುವ ಫವಾದ್‌, ‘ಯೋಜನೆಗೆ ಬಂಡವಾಳ ಹೂಡಿಕೆ ಮಾಡಲು ಸೌದಿ ಅರೇಬಿಯಾ ಸಹಭಾಗಿತ್ವ ವಹಿಸುತ್ತಿರುವುದು ಚೀನಾದ ಆತ್ಮವಿಶ್ವಾಸವನ್ನು ವೃದ್ಧಿಸಿದೆ’ ಎಂದಿದ್ದಾರೆ.

2013ರಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಗಲೂ ಪಾಕಿಸ್ತಾನ ವಿಶ್ವಬ್ಯಾಂಕ್‌ ನಿಂದ ಸುಮಾರು ₹ 48 ಸಾವಿರ ಕೋಟಿ ಸಾಲ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT