ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ಲಕ್ಷ ರೋಗಿಗಳ ಮಾಹಿತಿ ಕಳವು

ಸಿಂಗಪುರದಲ್ಲಿ ಸೈಬರ್‌ ಅಪರಾಧ
Last Updated 20 ಜುಲೈ 2018, 19:30 IST
ಅಕ್ಷರ ಗಾತ್ರ

ಸಿಂಗಪುರ : ಪ್ರಧಾನಿ ಲೀ ಸಿಯೆನ್ ಲೂಂಗ್ ಒಳಗೊಂಡಂತೆ 15 ಲಕ್ಷ ರೋಗಿಗಳ ವೈಯಕ್ತಿಕ ಮಾಹಿತಿಯನ್ನು ಕಂಪ್ಯೂಟರ್‌ ಹ್ಯಾಕರ್‌ಗಳು ಕಳವು ಮಾಡಿದ್ದಾರೆ. ಸಿಂಗಪುರದ ಸೈಬರ್‌ ಇತಿಹಾಸದಲ್ಲೇ ಅತಿ ದೊಡ್ಡ ಕಳವು ಇದಾಗಿದ್ದು, ಬೃಹತ್‌ ಆರೋಗ್ಯ ಸಮೂಹದ ಮಾಹಿತಿಗೆ ಕನ್ನ ಹಾಕಲಾಗಿದೆ.

2015‌ರ ಮೇ 1ರಿಂದ 2018ರ ಜುಲೈ 4ರವರೆಗೆ ಸಂಗ್ರಹವಾಗಿದ್ದ 1.60 ಲಕ್ಷ ಹೊರರೋಗಿಗಳ ಆರೋಗ್ಯ ದಾಖಲೆಗಳು ಸಹ ಇದರಲ್ಲಿ ಸೇರಿವೆ. ಆದರೆ, ಹ್ಯಾಕರ್‌ಗಳು ಯಾವುದೇ ಮಾಹಿತಿಯನ್ನು ಅಳಿಸಿಹಾಕಿಲ್ಲ ಮತ್ತು ತಿದ್ದುಪಡಿ ಮಾಡಿಲ್ಲ ಎಂದು ಆರೋಗ್ಯ ಹಾಗೂ ಮಾಹಿತಿ ಸಚಿವಾಲಯಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಹ್ಯಾಕರ್‌ಗಳು ನಿರ್ದಿಷ್ಟವಾಗಿ ಮತ್ತು ಪದೇ ಪದೇ ಪ್ರಧಾನಿ ಲೂಂಗ್ ಅವರ ಮಾಹಿತಿಗೆ ಲಗ್ಗೆ ಇಟ್ಟಿದ್ದಾರೆ. ರೋಗಿಗಳ ಹೆಸರು, ರಾಷ್ಟ್ರೀಯ ನೋಂದಣಿ ಗುರುತು ಕಾರ್ಡ್ ಸಂಖ್ಯೆ, ವಿಳಾಸ, ಲಿಂಗ, ರಾಷ್ಟ್ರೀಯತೆ, ಹುಟ್ಟಿದ ದಿನಾಂಕದ ಮಾಹಿತಿಯನ್ನು ಕದಿಯಲಾಗಿದೆ.

‘ಇದು ಸಾಮಾನ್ಯ ಹ್ಯಾಕರ್‌ಗಳ ಕೃತ್ಯವಲ್ಲ. ಉದ್ದೇಶಪೂರ್ವಕವಾಗಿ ಗುರಿ ಇಟ್ಟು ಮಾಡಿರುವ ವ್ಯವಸ್ಥಿತ ಸೈಬರ್‌ ದಾಳಿ’ ಎಂದು ದೇಶದ ಸೈಬರ್‌ ಭದ್ರತಾ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ. ಆದರೆ, ಇದರ ಹಿಂದೆ ಯಾವುದಾದರೂ ದೇಶದ ಕೈವಾಡ ಇರಬಹುದೇ ಎಂಬುದಕ್ಕೆ ಉತ್ತರಿಸಲು ಅವು ನಿರಾಕರಿಸಿವೆ. ಆರೋಗ್ಯ ಸಚಿವ ಗ್ಯಾನ್‌ ಕಿಮ್‌ ಯಾಂಗ್‌, ಮಾಹಿತಿ ಕಳವಿಗೆ ಗುರಿಯಾಗಿರುವ ರೋಗಿಗಳ ಕ್ಷಮೆ ಕೋರಿದ್ದಾರೆ. ‘ಇದರಿಂದ ನಾವು ಚೇತರಿಸಿಕೊಳ್ಳಬೇಕಾಗಿದೆ ಮತ್ತು ಪಾಠ ಕಲಿಯಬೇಕಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT