ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ ವಿಮಾನ ದುರಂತಕ್ಕೆ ಪೈಲಟ್‌ನ ಭಾವನಾತ್ಮಕ ಒತ್ತಡ ಕಾರಣ: ತನಿಖಾ ವರದಿ ಸೋರಿಕೆ

Last Updated 27 ಆಗಸ್ಟ್ 2018, 11:08 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ಅಪಘಾತಕ್ಕೆ ಪೈಲಟ್ ಅಬಿದ್‌ ಸುಲ್ತಾನ್‌ ಭಾವನಾತ್ಮಕ ಒತ್ತಡಕ್ಕೆ ಒಳಗಾಗಿದ್ದು ಕಾರಣ ಎಂಬುದು ತಿಳಿದುಬಂದಿದೆ. ದುರಂತಕ್ಕೆ ಸಂಬಂಧಿಸಿದ ತನಿಖಾ ವರದಿ ಸೋಮವಾರ ಸೋರಿಕೆಯಾಗಿದೆ.

ಮಾರ್ಚ್‌ 12 ರಂದು ಬಾಂಗ್ಲಾದೇಶದ ಢಾಕಾದಿಂದ ಬಂದಿದ್ದ ವಿಮಾನವು ಕಠ್ಮಂಡು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇಯಿಂದ ಜಾರಿ ಪಕ್ಕದ ಫುಟ್‌ಬಾಲ್‌ ಮೈದಾನದಲ್ಲಿ ಬಿದ್ದಿತ್ತು. ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಪೈಲಟ್ ಸೇರಿ 51 ಮಂದಿ ಮೃತಪಟ್ಟಿದ್ದರು.20 ಮಂದಿ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದರು.

ಮಹಿಳಾ ಸಿಬ್ಬಂದಿಯೊಬ್ಬರು ಸುಲ್ತಾನ್ ಅವರ ತರಬೇತಿಯ ಕೌಶಲ ಪ್ರಶ್ನಿಸಿದ್ದರಿಂದ ಭಾವನಾತ್ಮಕವಾಗಿ ಕುಸಿದು ಮತ್ತು ಒತ್ತಡಕ್ಕೆ ಒಳಗಾಗಿ ವಿಮಾನವನ್ನು ಸರಿಯಾಗಿ ಭೂಸ್ಪರ್ಶ ಮಾಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

’ಸುಲ್ತಾನ್‌ ಅಪನಂಬಿಕೆ ಮತ್ತು ಒತ್ತಡಕ್ಕೆ ಸಿಲುಕಿ ಕಾಕ್‌ಪಿಟ್‌ನಲ್ಲಿ ನಿರಂತರವಾಗಿ ಧೂಮಪಾನ ಮಾಡಿದ್ದಾರೆ. ವಿಮಾನದಲ್ಲಿ ಹಲವಾರು ಬಾರಿ ಭಾವನಾತ್ಮಕವಾಗಿ ಕುಸಿದಿದ್ದಾರೆ. ವಿಮಾನ ಹಾರಾಟದ ಸಮಯದಲ್ಲಿ ಹಲವು ಬಾರಿ ಅತ್ತಿದ್ದಲ್ಲದೆ ಸೀನಿದ್ದಾರೆ’ ಎಂದು ವರದಿಯಲ್ಲಿ ಹೇಳಲಾಗಿದೆ.

‘ಬಾಂಗ್ಲಾದೇಶದ ವಾಯುಪಡೆಯ ನಿವೃತ್ತ ಪೈಲಟ್‌ ಹಾಗೂ ಏರ್‌ಲೈನ್‌ನಲ್ಲಿ ತರಬೇತುದಾರರಾಗಿದ್ದ ಸುಲ್ತಾನ್‌, ಢಾಕಾದಿಂದ ಕಠ್ಮಂಡುವಿಗೆ ಬರುತ್ತಿದ್ದ ವಿಮಾನದಲ್ಲಿ ಕಿರಿಯ ಸಹ ಪೈಲಟ್‌ ಮೇಲೆ ತನ್ನ ಕೌಶಲ ಮತ್ತು ಸಾಮರ್ಥ್ಯದ ಕುರಿತು ಪ್ರಭಾವ ಬೀರಲು ಯತ್ನಿಸಿದ್ದರು. ಇದರಿಂದ ಸಹ ಪೈಲಟ್‌ ಪೃಥುಲಾ ರಶೀದ್‌ ಸಂಪೂರ್ಣ ದಿಗ್ಭ್ರಮೆಗೊಳಗಾಗಿದ್ದರು. ಅಲ್ಲದೆ, ಅವರು ಇದುವರೆಗೆ ವಿಮಾನವನ್ನು ಲ್ಯಾಂಡಿಂಗ್ ಮಾಡಿಸಿದ ಅನುಭವ ಹೊಂದಿರಲಿಲ್ಲ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದು ನೇಪಾಳದ ಏಕೈಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಕಿರಿದಾದ ಬೌಲ್-ಆಕಾರದ ಕಣಿವೆಯಲ್ಲಿ ಹಿಮಾಲಯದ ಉತ್ತರಕ್ಕಿದೆ. ಇಲ್ಲಿ ವಿಮಾನವನ್ನು ಭೂ ಸ್ಪರ್ಶ ಮಾಡಿಸುವುದು ಸವಾಲಿನ ಕೆಲಸ.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT