ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಫ್ಗಾನಿಸ್ತಾನ: ’ಸರಿಯಾಗಿ ಹಿಜಾಬ್‌ ಧರಿಸದ’ ಮಹಿಳೆಯರ ಬಂಧನ

Published 4 ಜನವರಿ 2024, 16:23 IST
Last Updated 4 ಜನವರಿ 2024, 16:23 IST
ಅಕ್ಷರ ಗಾತ್ರ

ಕಾಬೂಲ್‌: ಅಫ್ಗಾನಿಸ್ತಾನ ಆಡಳಿತ ಚುಕ್ಕಾಣಿ ಹಿಡಿದ ನಂತರ ಕಠಿಣ ಕ್ರಮಗಳನ್ನು ಜಾರಿಗೊಳಿಸಿರುವ ತಾಲಿಬಾನ್‌, ‘ಸರಿಯಾಗಿ ಹಿಜಾಬ್‌ ಧರಿಸಿಲ್ಲ’ ಎಂಬ ಕಾರಣಕ್ಕೆ ರಾಜಧಾನಿ ಕಾಬೂಲ್‌ನಲ್ಲಿ ಮಹಿಳೆಯರನ್ನು ಬಂಧಿಸಿದೆ.

ಈ ಕುರಿತು ದುರಾಚಾರ ಸದಾಚಾರ ಸಚಿವಾಲಯ ವಕ್ತಾರ ಅಬ್ದುಲ್ ಗಫಾರ್ ಫಾರೂಕ್‌ ಅವರು ಗುರುವಾರ ಹೇಳಿಕೆ ಬಿಡುಗಡೆ ಮಾಡಿದ್ದು, ಹಿಜಾಬ್‌ ಧರಿಸುವುದು ಸೇರಿದಂತೆ ವಸ್ತ್ರಸಂಹಿತೆ ಪಾಲನೆ ಮಾಡದ ಮಹಿಳೆಯರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಮೂರು ದಿನಗಳ ಹಿಂದೆ ಮಹಿಳೆಯರನ್ನು ಬಂಧಿಸಲಾಗಿದೆ ಎಂದು ತಿಳಿಸಿರುವ ಅವರು, ಎಷ್ಟು ಜನರನ್ನು ಬಂಧಿಸಲಾಗಿದೆ ಹಾಗೂ ಯಾವ ರೀತಿ ಹಿಜಾಬ್‌ ಧರಿಸಬಾರದು ಎಂಬ ಬಗ್ಗೆ ವಿವರಗಳನ್ನು ನೀಡಿಲ್ಲ.

ಈ ಬಗ್ಗೆ ಅವರು ದಿ ಅಸೋಸಿಯೇಟೆಡ್‌ ಪ್ರೆಸ್‌ ಸುದ್ದಿಸಂಸ್ಥೆಗೆ ಧ್ವನಿಸಂದೇಶ ಕಳುಹಿಸಿದ್ದಾರೆ. 

‘ಕೆಲ ಮಹಿಳೆಯರು ಸಮರ್ಪಕವಾಗಿ ಹಿಜಾಬ್‌ ಧರಿಸುತ್ತಿಲ್ಲ. ಆ ಮೂಲಕ ಅವರು ಇಸ್ಲಾಮಿಕ್‌ ಮೌಲ್ಯಗಳು ಹಾಗೂ ಆಚರಣೆಗಳನ್ನು ಉಲ್ಲಂಘಿಸಿದ್ದಾರೆ. ಇದನ್ನೇ ಅನುಸರಿಸುವಂತೆ ಇತರರಿಗೆ ಈ ಮಹಿಳೆಯರು ಉತ್ತೇಜನ ನೀಡಿದಂತಾಗಿದೆ’ ಎಂದು ಹೇಳಿದ್ದಾರೆ.

‘ಈ ವಿಷಯವನ್ನು ಪೊಲೀಸರು ನ್ಯಾಯಾಂಗ ಅಧಿಕಾರಿಗಳ ಗಮನಕ್ಕೆ ತರಲಿದ್ದು, ಕಠಿಣ ಷರತ್ತುಗಳನ್ನು ವಿಧಿಸಿ ಮಹಿಳೆಯರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುವುದು’ ಎಂದೂ ಅವರು ಹೇಳಿದ್ದಾರೆ.

ಈಗಾಗಲೇ, ಶಿಕ್ಷಣ, ಉದ್ಯೋಗ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಓಡಾಡುವ ಸ್ವಾತಂತ್ರ್ಯ ಕಳೆದುಕೊಂಡಿರುವ ಅಫ್ಗಾನಿಸ್ತಾನದ ಮಹಿಳೆಯರು ಹಾಗೂ ಬಾಲಕಿಯರಿಗೆ, ಕಠಿಣವಾದ ಈ ಹೊಸ ವಸ್ತ್ರಸಂಹಿತೆ ಮತ್ತೊಂದು ಆಘಾತ ನೀಡಿದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT