ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾದಲ್ಲಿ ಈಜಿಪ್ಟ್ ಮೂಲದ ಮೂವರು ಕ್ರೈಸ್ತ್ ಸನ್ಯಾಸಿಗಳ ಬರ್ಬರ ಹತ್ಯೆ

ದಕ್ಷಿಣ ಆಫ್ರಿಕಾದ ಚರ್ಚ್‌ ಒಂದರಲ್ಲಿ ಈಜಿಪ್ಟ್ ಮೂಲದ ‘ಕಾಪ್ಟಿಕ್ ಅರ್ಥಡಾಕ್ಸ್ ಚರ್ಚ್‌’ನ ಮೂವರು ಸನ್ಯಾಸಿಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
Published 13 ಮಾರ್ಚ್ 2024, 10:17 IST
Last Updated 13 ಮಾರ್ಚ್ 2024, 10:17 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್, ದಕ್ಷಿಣ ಆಫ್ರಿಕಾ: ದಕ್ಷಿಣ ಆಫ್ರಿಕಾದ ಚರ್ಚ್‌ ಒಂದರಲ್ಲಿ ಈಜಿಪ್ಟ್ ಮೂಲದ ‘ಕಾಪ್ಟಿಕ್ ಅರ್ಥಡಾಕ್ಸ್ ಚರ್ಚ್‌’ನ ಮೂವರು ಸನ್ಯಾಸಿಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ದಕ್ಷಿಣ ಆಫ್ರಿಕಾದ ಪೂರ್ವ ಭಾಗವಾದ ಪ್ರಿಟೋರಿಯಾದಿಂದ ಸುಮಾರು 50 ಕಿ.ಮೀ ದೂರ ಇರುವ ಸಣ್ಣ ಪಟ್ಟಣವಾದ ಕಲ್ಲಿನಾನ್ (cullinan) ಎಂಬ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ ಎಂದು ದಕ್ಷಿಣ ಆಫ್ರಿಕಾ ಪೊಲೀಸ್‌ ಸರ್ವಿಸ್‌ನ (SAPS) ಅಧಿಕಾರಿಗಳು ತಿಳಿಸಿದ್ದಾರೆ.

‘ದುಷ್ಕರ್ಮಿಗಳು ಹರಿತ ಆಯುಧಗಳಿಂದ ಮೂವರು ಸನ್ಯಾಸಿಗಳನ್ನು ಕತ್ತು ಸೀಳಿ, ಎದೆಗೆ ಇರಿದು ಹತ್ಯೆ ಮಾಡಿದ್ದಾರೆ. ಘಟನೆ ನಡೆಯುವಾಗ ಸ್ಥಳದಲ್ಲಿಯೇ ಇದ್ದ ಇನ್ನೊಬ್ಬ ಸನ್ಯಾಸಿ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ತನಿಖೆ ಕೈಗೆತ್ತಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹತ್ಯೆಯಾದವರನ್ನು ಫಾದರ್ ಹೆಗುಮನ್ ಟಾಕಲಾ (55) ಯೋಸತೊಸಾ ಅವಾ ಮಾರ್ಕೊಸ್ (43) ಮತ್ತು ಮಿನಾ ಅವಾ ಮಾರ್ಕೋಸ್ (42) ಎಂದು ಗುರುತಿಸಲಾಗಿದೆ.

ಬದುಕುಳಿದ ಇನ್ನೊಬ್ಬ ಸನ್ಯಾಸಿಯ ಗುರುತನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಹಂತಕರು ಸ್ಥಳದಿಂದ ಯಾವುದೇ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗಿಲ್ಲ. ಪರಿಚಯಸ್ಥರೇ ಕೃತ್ಯ ಎಸಗಿರುವ ಸಂಭವ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ದಕ್ಷಿಣ ಆಫ್ರಿಕಾದಲ್ಲಿನ ಕಾಪ್ಟಿಕ್ ಅರ್ಥಡಾಕ್ಸ್ ಚರ್ಚ್‌ನ ಸಮುದಾಯದವರಿಗೆ ದೊಡ್ಡ ಆಘಾತ ನೀಡಿದೆ. ಈ ಪಂಥ ಅನುಸರಿಸುವ ಸುಮಾರು 4,500 ಕುಟುಂಬಗಳು ದಕ್ಷಿಣ ಆಫ್ರಿಕಾದಲ್ಲಿವೆ.(ದಕ್ಷಿಣ ಆಫ್ರಿಕಾದ ಒಟ್ಟು ಜನಸಂಖ್ಯೆ 6 ಕೋಟಿ).

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ South African Archdiocese of the Coptic Orthodox Church, ‘ಇದೊಂದು ಅತ್ಯಂತ ಕೆಟ್ಟ ಹಾಗೂ ಆಘಾತಕಾರಿ ಘಟನೆ, ತಪ್ಪಿತಸ್ಥರಿಗೆ ಪೊಲೀಸರು ಸೂಕ್ತ ಶಿಕ್ಷೆ ನೀಡಬೇಕು’ ಎಂದು ಆಗ್ರಹಿಸಿದೆ.

ಇತ್ತೀಚೆಗೆ ದಕ್ಷಿಣ ಆಫ್ರಿಕಾ ಜಗತ್ತಿನಲ್ಲಿಯೇ ಅತಿ ಹೆಚ್ಚು ಅಪರಾಧ ಪ್ರಕರಣಗಳನ್ನು ದಾಖಲಿಸುತ್ತಿದೆ. 2023ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ 84 ಕೊಲೆ ಪ್ರಕರಣಗಳು ಅಲ್ಲಿ ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT