ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

MH 370 ವಿಮಾನ ನಿಗೂಢ ಕಣ್ಮರೆಯಾಗಿ ಒಂದು ದಶಕ: ಪೈಲಟ್ ಆತ್ಮಾಹುತಿಯೇ ಕಾರಣವೇ?

ಮಲೇಷ್ಯಾ ಏರಲೈನ್ಸ್‌ನ ಎಂಎಚ್ 370 ಪ್ರಯಾಣಿಕರ ವಿಮಾನ ಹಾರುವಾಗಲೇ ಕಣ್ಮರೆಯಾಗಿ ಒಂದು ದಶಕ ಕಳೆಯಿತು. ಈತನಕ ಅದರ ನಿಖರ ಸುಳಿವು ಇನ್ನೂ ಯಾರಿಗೂ ಲಭ್ಯವಾಗಿಲ್ಲ.
Published 10 ಮಾರ್ಚ್ 2024, 13:16 IST
Last Updated 10 ಮಾರ್ಚ್ 2024, 13:16 IST
ಅಕ್ಷರ ಗಾತ್ರ

ಬೆಂಗಳೂರು: ಅದು 2014ರ ಮಾರ್ಚ್ 8.. ಮಲೇಷ್ಯಾದ ರಾಜಧಾನಿ ಕೌಲಾಲಂಪುರದಿಂದ ಚೀನಾ ರಾಜಧಾನಿ ಬಿಜಿಂಗ್‌ಗೆ ಹೊರಟಿದ್ದ ಮಲೇಷ್ಯಾ ಏರಲೈನ್ಸ್‌ನ ಎಂಎಚ್ 370 ಪ್ರಯಾಣಿಕರ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ನಿಗೂಢವಾಗಿ ನಾಪತ್ತೆಯಾಗಿತ್ತು.

ಆ ಸುದ್ದಿ ಕೆಲವೇ ಗಂಟೆಗಳಲ್ಲಿ ಜಗತ್ತಿನಾದ್ಯಂತ ಕಾಳ್ಗಿಚ್ಚಿನಂತೆ ಹರಡಿತು. ಈ ವಿಮಾನದಲ್ಲಿದ್ದ 239 ಜನರ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.

ಆ ನತದೃಷ್ಟ ವಿಮಾನ ಅಂದು ಕಣ್ಮರೆಯಾಗಿ 2024ರ ಮಾರ್ಚ್ 8ಕ್ಕೆ ಅಂದರೆ ಮೊನ್ನೆಗೆ ಒಂದು ದಶಕವೇ ಉರುಳಿತು. ಆದರೆ, ಈತನಕ ಅದರ ನಿಖರ ಸುಳಿವು ಇನ್ನೂ ಲಭ್ಯವಾಗಿಲ್ಲ.

ಸತತ ನಾಲ್ಕು ವರ್ಷ ಮಲೇಷ್ಯಾ, ಚೀನಾ, ಆಸ್ಟ್ರೇಲಿಯಾ ಹಾಗೂ ಜಗತ್ತಿನ ಇತರ ಅನೇಕ ದೇಶಗಳು ಮುಂದೆ ನಿಂತು ಲಭ್ಯವಿರುವ ಎಲ್ಲ ತಂತ್ರಗಳನ್ನು ಉಪಯೋಗಿಸಿ ಶೋಧ ಕಾರ್ಯ ನಡೆಸಿದರೂ ಇದುವರೆಗೆ ಆ ವಿಮಾನ ಏನಾಯಿತು? ಅದರಲ್ಲಿದ್ದವರು ಏನಾದರು? ಎನ್ನುವುದು ಅಧಿಕೃತವಾಗಿ ತಿಳಿದು ಬಂದಿಲ್ಲ. ಕಳೆದ ಕೆಲ ವರ್ಷಗಳ ಹಿಂದೆ ಶೋಧ ಕಾರ್ಯಾಚರಣೆಯೂ ಅಧಿಕೃತವಾಗಿ ಯಾವುದೇ ನಿಖರ ಫಲಿತಾಂಶ ಇಲ್ಲದೇ ಅಂತ್ಯಗೊಂಡಿತ್ತು.

ಅಂತಿಮ ತೀರ್ಮಾನಕ್ಕೆ ಬಂದ ವಿಮಾನಯಾನ ತಜ್ಞ: ಪೈಲಟ್‌ನಿಂದ ಆತ್ಮಾಹುತಿ!

ಎಂಎಚ್‌ 370 ದುರಂತ ನಡೆದು ಒಂದು ದಶಕ ಕಳೆದ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನ ವಿಮಾನಯಾನ ತಜ್ಞರೊಬ್ಬರು, ‘ಮಲೇಷ್ಯಾ ಏರ್‌ಲೈನ್ಸ್ ವಿಮಾನದ ಪೈಲಟ್‌ ತಾನೂ ಸೇರಿ 239 ಜನರನ್ನು ಆತ್ಮಾಹುತಿ ತೆಗೆದುಕೊಂಡಿದ್ದಾನೆ ಎಂಬ ತೀರ್ಮಾನಕ್ಕೆ ಬಂದಿದ್ದೇನೆ’ ಎಂದು ಶನಿವಾರ ಹೇಳಿದ್ದಾರೆ.

‘ದಿ ಸನ್’ ವೆಬ್‌ಸೈಟ್ ಜೊತೆ ಸಂದರ್ಶನದಲ್ಲಿ ಮಾತನಾಡಿರುವ ಬೊಯಿಂಗ್ ವಿಮಾನಗಳ ತಜ್ಞ ಸಿಮೋನ್ ಹಾರ್ಡಿ ಅವರು ಪೈಲಟ್ ಸಹ ಹೌದು. ವಿಮಾನಗಳ ಕಾರ್ಯನಿರ್ವಹಣೆ, ಅಪಘಾತಗಳ ಬಗ್ಗೆ ಸುಮಾರು 20 ವರ್ಷಕ್ಕೂ ಹೆಚ್ಚು ಅನುಭವ ಹೊಂದಿರುವ ಅವರು ಎಂಎಚ್ 370 ವಿಮಾನದ ದುರಂತಕ್ಕೆ ಕಾರಣ ಏನಾಗಿರಬಹುದು? ಎಂಬುದನ್ನು ಧೀರ್ಘವಾಗಿ ವಿವರಿಸಿದ್ದಾರೆ.

‘ಎಂಎಚ್ 370 ವಿಮಾನದ ಪೈಲಟ್ ಆಗಿದ್ದ ಕ್ಯಾಪ್ಟನ್ ಜಹಾರಿ ಅಹಮ್ಮದ್ ಶಾ ಮಾನಸಿಕ ಸಮಸ್ಯೆಯಿಂದ ತನ್ನನ್ನೂ ಸೇರಿ ವಿಮಾನದಲ್ಲಿದ್ದ ಅಷ್ಟೂ ಜನರನ್ನು ಆತ್ಮಾಹುತಿ ತೆಗೆದುಕೊಂಡಿರುವ ಬಲವಾದ ಅನುಮಾನವನ್ನು ನಾನು ಅಂತಿಮಗೊಳಿಸಿದ್ದೇನೆ. ಕ್ಯಾಪ್ಟನ್ ಜಹಾರಿ ಅತ್ಯಂತ ವ್ಯವಸ್ಥಿತವಾಗಿ ಯೋಜನೆ ರೂಪಿಸಿ ವಿಮಾನವನ್ನು ಟೇಕ್‌ ಆಫ್ ಆದ ಕೆಲವೇ ನಿಮಿಷಗಳಲ್ಲಿ ರಡಾರ್ ಕಣ್ತಪ್ಪಿಸಿ, ಮಾರ್ಗ ಬದಲಿಸಿ ಕೆಲ ಗಂಟೆ ಹಾರಿಸಿದ್ದ. ಇದಕ್ಕಾಗಿ ಆತ ವಿಮಾನಕ್ಕೆ ಹೆಚ್ಚುವರಿ ಇಂಧನ ಹಾಗೂ ಆಮ್ಲಜನಕ ಮೊದಲೇ ಸೇರಿಸಿಕೊಂಡಿದ್ದ. ಯೋಜನೆಯಂತೆ ವಿಮಾನ ಹಾರುವಾಗಲೇ ಎಲ್ಲರನ್ನೂ ಉಸಿರುಗಟ್ಟಿ ಸಾಯುವಂತೆ ಮಾಡಿ ವಿಮಾನವನ್ನು ಅತ್ಯಂತ ವೇಗವಾಗಿ ಸಮುದ್ರಾಳಕ್ಕೆ ನುಗ್ಗಿಸಿ ಮಹಾ ದುರಂತಕ್ಕೆ ಕಾರಣನಾಗಿರಬಹುದು’ ಎಂದು ಹೇಳಿದ್ದಾರೆ.

‘ಆ ನತದೃಷ್ಟ ವಿಮಾನ ದಕ್ಷಿಣ ಹಿಂದೂ ಮಹಾಸಾಗರದ Geelvinck Fracture Zone ಎಂಬಲ್ಲಿ ಪತನವಾಗಿರಬಹುದು. ಆಳವಾದ ಕಂದಕದಲ್ಲಿ ಸಿಲುಕಿರಬಹುದು’ ಎಂದು ಅವರು ಕಳೆದ 10 ವರ್ಷಗಳಿಂದ ನಡೆಸಿದ ದತ್ತಾಂಶಗಳ ವಿಶ್ಲೇಷಣೆಯನ್ನು ಅನುಸರಿಸಿ ತಮ್ಮದೇಯಾದ ಈ ಅಭಿಪ್ರಾಯವನ್ನು ‘ದಿ ಸನ್‌’ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.

‘Geelvinck Fracture Zone ಎಂಬುದು ಭೂಕಂಪ ಪೀಡಿತ ಪ್ರದೇಶ. ವಿಮಾನ ಸಾಗರದಾಳದ ಕಂದಕದಲ್ಲಿ ಸಿಲುಕಿದ್ದ ವೇಳೆ ಭೂಕಂಪವಾಗಿ ಅದು ಅಲ್ಲಿಯೇ ಸಮಾಧಿಯೂ ಆಗಿರಬಹುದು’ ಎಂದು ಅವರು ಹೇಳಿದ್ದಾರೆ.

‘ಆ ಸಮಯದಲ್ಲಿ ಕ್ಯಾಪ್ಟನ್ ಜಹಾರಿ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಿರಬಹುದಾಗಿದ್ದರಿಂದ ಎಲ್ಲರನ್ನೂ ಸಾಯಿಸುವುದನ್ನು ಅವನು ಆಗ ಸಂಭ್ರಮಿಸಿರಬಹುದು’ ಎಂದು ಹಾರ್ಡಿ ಹೇಳಿದ್ದಾರೆ.

ಎಂಎಚ್ 370 ವಿಮಾನ ದುರಂತದ ಲಕ್ಷಾಂತರ ದತ್ತಾಂಶಗಳನ್ನು ವಿಶ್ಲೇಷಿಸಿ ನಾನು ಈ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಹಾರ್ಡಿ ತಿಳಿಸಿದ್ದಾರೆ. ಅನೇಕ ದತ್ತಾಂಶಗಳನ್ನು ದಿ ಸನ್ ಜೊತೆ ಅವರು ಹಂಚಿಕೊಂಡಿದ್ದಾರೆ.

ಸಂಬಂಧಿಕರಿಗೆ ಇನ್ನೂ ಇದೆ ಆಶಾಭಾವನೆ

ಮಾರ್ಚ್ 8 ರಂದು ಮಲೇಷ್ಯಾ, ಚೀನಾ ಸೇರಿದಂತೆ ಹಲವೆಡೆ ಈ ದುರಂತಕ್ಕೆ ಸಂತಾಪ ಸೂಚಿಸಿ ಅನೇಕರು ಪುಷ್ಪ ನಮನಗಳನ್ನು ಸಲ್ಲಿಸಿದ್ದಾರೆ.

‘ಆ ವಿಮಾನದಲ್ಲಿದ್ದ ತಮ್ಮವರು ಇನ್ನೂ ಬದುಕಿರಬಹುದು’ ಎನ್ನುವ ಆಶಾಭಾವನೆಯನ್ನು ಸಂಬಂಧಿಕರು ಇನ್ನೂ ಹೊಂದಿದ್ದಾರೆ. ದುರಂತಕ್ಕೆ ಒಂದು ದಶಕ ಆಗಿದ್ದರಿಂದ ಅವರನ್ನು ಸ್ಮರಿಸಲು ಶುಕ್ರವಾರ ಬೀಜಿಂಗ್ ವಿಮಾನ ನಿಲ್ದಾಣಕ್ಕೆ ಬಂದಿದ್ದ ನಾಪತ್ತೆಯಾದವರ ಸಂಬಂಧಿಗಳು, ಇನ್ನೂ ಅವರ ಬರುವಿಕೆಯನ್ನು ಎದುರು ನೋಡುತ್ತಿದ್ದಾರೆ.

50 ವರ್ಷದ ಚೀನಾದ ಜಿಯಾಂಗ್ ಹುಯಿ ಅವರು ತಮ್ಮ ತಾಯಿಯ ಸ್ಮರಣೆಯಲ್ಲಿ ಮೇಣದ ಬತ್ತಿ ಬೆಳಗಿಸಿ ಸಂತಾಪ ಸೂಚಿಸಿದರು. ‘ನನಗೆ ಗೊತ್ತು ನಾನು ನನ್ನ ತಾಯಿಗೆ ಸಂತಾಪ ಸೂಚಿಸುತ್ತಿರುವುದು ತಪ್ಪು ಎಂದು, ಏಕೆಂದರೆ ಅವರು ಸತ್ತಿದ್ದಾರೆ ಎಂದು ಇದುವರೆಗೆ ಯಾರೂ ಘೋಷಣೆ ಮಾಡಿಲ್ಲ, ಆದರೆ ಮನಸ್ಸಿನ ಸಮಾಧಾನಕ್ಕೆ ದೀಪ ಹಚ್ಚಿದ್ದೇನೆ. ಅವರು ಬರುತ್ತಾರೆ ಎನ್ನುವ ನಿರೀಕ್ಷೆ ಇದೆ’ ಎಂದು ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ಹೇಳಿಕೊಂಡಿದ್ದಾರೆ.

1,20,000 ಚ.ಕಿ.ಮೀ. ವ್ಯಾಪ್ತಿಯಲ್ಲಿ ಶೋಧ ನಡೆದಿತ್ತು!

ಹಲವು ವರ್ಷಗಳ ಕಾರ್ಯಾಚರಣೆ ಬಳಿಕ, ’ಎಂಎಚ್ 370 ವಿಮಾನ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಬಿದ್ದಿರಬಹುದು. ಆದರೆ, ಅದು ಬಿದ್ದ ನಿಖರ ಸ್ಥಳ ಮತ್ತು ವಿಮಾನವಿರುವ ಸ್ಥಳ ಹುಡುಕಲು ಸಾಧ್ಯವಾಗಿಲ್ಲ’ ಎಂದು ಮಲೇಷ್ಯಾ ಸರ್ಕಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿತ್ತು.

ದಕ್ಷಿಣದ ಹಿಂದೂ ಮಹಾಸಾಗರದ 1,20,000 ಚ.ಕಿ.ಮೀ. ವ್ಯಾಪ್ತಿಯಲ್ಲಿ ಶೋಧ ನಡೆಸಿರುವುದಾಗಿ ಚೀನಾ, ಮಲೇಷ್ಯಾ ಹಾಗೂ ಆಸ್ಟ್ರೇಲಿಯಾ ಜಂಟಿ ಹೇಳಿಕೆ ತಿಳಿಸಿದ್ದವು.‌

‘ಲಭ್ಯವಿರುವ ಅತ್ಯುತ್ತಮ ತಂತ್ರಜ್ಞಾನ ಹಾಗೂ ಶ್ರೇಷ್ಠ ತಜ್ಞರ ಸಹಾಯ ಪಡೆದು ಎಲ್ಲಾ ರೀತಿಯ ಪ್ರಯತ್ನ ಮಾಡಿದರೂ  ವಿಮಾನ ಪತ್ತೆಯಾಗದಿರುವುದು ಬೇಸರ ತಂದಿದೆ’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿತ್ತು.

ಜಾಗತಿಕ ವಿಮಾನಯಾನ ಇತಿಹಾಸದಲ್ಲಿ ಈ ವಿಮಾನದ ದುರಂತವನ್ನು ಅತ್ಯಂತ ದೊಡ್ಡದಾದ ನಿಗೂಢ ವಿಮಾನ ದುರಂತ ಎಂದು ಪರಿಗಣಿಸಲಾಗಿದೆ. ಆ ವಿಮಾನದಲ್ಲಿ ಚೀನಾ ಪ್ರಜೆಗಳೇ ಹೆಚ್ಚಿದ್ದರು.

ದುರಂತಕ್ಕೆ ಅನೇಕ ತಜ್ಞರು ತಮ್ಮದೇಯಾದ ಥಿಯರಿಗಳನ್ನು ಮಂಡಿಸಿದ್ದರು. ಇನ್ನೂ ಕೆಲವರು ಇದು ಏಲಿಯನ್‌ಗಳ ಕೈವಾಡ ಇರಬಹುದು ಎಂದು ಶಂಕಿಸಿದ್ದರು. ಆಗಲೂ ಕೂಡ ಇದೊಂದು ಆತ್ಮಾಹುತಿ ಇರಬಹುದು ಎಂದು ಕೆಲವರು ಹೇಳಿದ್ದರು. ಆದರೆ, ಸಿಮೋನ್ ಹಾರ್ಡಿ ಅವರು ‘ದಿ ಸನ್’ ವೆಬ್‌ಸೈಟ್ ಎದುರು ತಮ್ಮ ಥಿಯರಿಗೆ ಅನುಗುಣವಾಗಿ ಸಾಕಷ್ಟು ಪೂರಕ ದಾಖಲೆಗಳನ್ನು ಮಂಡಿಸಿದ್ದಾರೆ.

ಮತ್ತೆ ಹುಡುಕಾಟ?

ಸಿಮೋನ್ ಹಾರ್ಡಿ ಅವರ ಸಂದರ್ಶನದ ಬೆನ್ನಲ್ಲೇ ಮಾತನಾಡಿರುವ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು, ‘ಬಲವಾದ ಪುರಾವೆಗಳಿದ್ದರೆ ನಾಪತ್ತೆಯಾದ ವಿಮಾನವನ್ನು ಹುಡುಕುವ ಕೆಲಸವನ್ನು ಪುನರಾರಂಭಿಸಲಾಗುವುದು’ ಎಂದು ಹೇಳಿರುವುದಾಗಿ ವರದಿಯಾಗಿದೆ.

****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT