ಟೊರೊಂಟೊ: ಸದನದಲ್ಲಿ ಹಿರಿಯ ನಾಜಿ ಯೋಧನನ್ನು ಗೌರವಿಸಿದ್ದಕ್ಕಾಗಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಸಂಸತ್ತಿನ ಪರವಾಗಿ ಕ್ಷಮೆಯಾಚಿಸಿದ್ದಾರೆ.
ಸೆಪ್ಟೆಂಬರ್ 22ರಂದು ಕೆನಡಾದ ಸಂಸತ್ತನ್ನುದ್ದೇಶಿಸಿ ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಭಾಷಣ ಮಾಡಿದ್ದರು. ಈ ವೇಳೆ 98 ವರ್ಷದ ನಾಜಿ ಮಾಜಿ ಯೋಧ ಯಾರೋಸ್ಲಾವ್ ಹುಂಕಾ ಅವರನ್ನು ಕೆನಡಾದ ಸ್ಪೀಕರ್ ಆ್ಯಂಥೋನಿ ರೋಟಾ ಗೌರವಿಸಿದ್ದರು. ಹುಂಕಾ ಅವರು ಎರಡನೇ ಮಹಾ ಯುದ್ಧದಲ್ಲಿ ಭಾಗವಹಿಸಿದ್ದರು.
ನಾಜಿ ಯೋಧನಿಗೆ ಗೌರವ ನೀಡಿರುವುದನ್ನು ಖಂಡಿಸಿದ್ದ ವಿರೋಧ ಪಕ್ಷಗಳು ಟ್ರುಡೊ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದವು.
‘ನಮ್ಮ ನಡೆಯಿಂದ ಸಂಸತ್ತು ಮತ್ತು ಕೆನಡಾಕ್ಕೆ ತೀವ್ರ ಮುಜುಗರ ಉಂಟಾಗಿದೆ. ಶುಕ್ರವಾರ ಈ ಸದನದಲ್ಲಿದ್ದ ನಾವೆಲ್ಲರೂ ಪೂರ್ವಪರ ಯೋಚಿಸಿದೆ ನಿಂತು ಚಪ್ಪಾಳೆ ತಟ್ಟಿದ್ದೇವೆ. ಅದಕ್ಕಾಗಿ ತೀವ್ರವಾಗಿ ವಿಷಾದಿಸುತ್ತೇವೆ’ ಎಂದು ಟ್ರುಡೊ ಹೇಳಿದ್ದಾರೆ.
‘ಮಾಜಿ ಯೋಧ ಯಾರೋಸ್ಲಾವ್ ಹುಂಕಾ ಅವರನ್ನು ಗೌರವಿಸಿರುವುದು ಹತ್ಯಾಕಾಂಡದಲ್ಲಿ ಮಡಿದ ಜನರಿಗೆ ಮಾಡಿದ ದೊಡ್ಡ ಅವಮಾನವಾಗಿದೆ. ಇದರಿಂದ ಯುಹೂದಿ ಸೇರಿದಂತೆ ಎರಡನೇ ಮಹಾಯುದ್ಧದಲ್ಲಿ ನಾಜಿ ಆಡಳಿತದಿಂದ ತತ್ತರಿಸಿದ ಅನೇಕ ಗುಂಪುಗಳಿಗೆ ನೋವಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಆ ವ್ಯಕ್ತಿಯನ್ನು(ನಾಜಿ ಯೋಧ) ಆಹ್ವಾನಿಸಿ ಗೌರವಿಸಿರುವ ಸಂಬಂಧ ಸ್ಪೀಕರ್ ಅವರು ತಪ್ಪೊಪ್ಪಿಕೊಂಡು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ’ ಎಂದು ಹೇಳಿದರು.
‘ಉಕ್ರೇನ್ ಯಾವುದಕ್ಕಾಗಿ ಹೋರಾಡುತ್ತಿದೆ ಎಂಬುದರ ಕುರಿತು ಸುಳ್ಳು ಪ್ರಚಾರ ನೀಡಲು ರಷ್ಯಾ ಮತ್ತು ಅದರ ಬೆಂಬಲಿಗ ರಾಷ್ಟ್ರಗಳು ಈ ಸಣ್ಣ ದೋಷವನ್ನು ರಾಜಕೀಯಗೊಳಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.
ಈ ವಿಚಾರವಾಗಿ ಸ್ಪೀಕರ್ ಆ್ಯಂಥೋನಿ ರೋಟಾ ಮಂಗಳವಾರ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.