ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಜತೆಗಿನ ಯುದ್ಧ ಸ್ಥಗಿತಗೊಂಡಿಲ್ಲ: ಝೆಲೆನ್‌ಸ್ಕಿ

Published 4 ನವೆಂಬರ್ 2023, 15:52 IST
Last Updated 4 ನವೆಂಬರ್ 2023, 15:52 IST
ಅಕ್ಷರ ಗಾತ್ರ

ಕೀವ್‌ (ಉಕ್ರೇನ್‌): ರಷ್ಯಾ ಜತೆಗಿನ ಉಕ್ರೇನ್‌ ಯುದ್ಧವು ಮುಂದಕ್ಕೆ ಸಾಗದ ಸ್ಥಿತಿ ತಲುಪಿದೆ ಎನ್ನುವುದನ್ನು ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಶನಿವಾರ ಅಲ್ಲಗಳೆದಿದ್ದಾರೆ.

‘ಸಮಯ ಕಳೆದಿದೆ, ಜನರು ದಣಿದಿದ್ದಾರೆ. ಆದರೆ, ಇದು ಯುದ್ಧ ಸ್ಥಗಿತವಲ್ಲ’ ಎಂದು ಝೆಲೆನ್‌ಸ್ಕಿ ಅವರು ಕೀವ್‌ನಲ್ಲಿ ಐರೋಪ್ಯ ಒಕ್ಕೂಟ ಆಯೋಗದ ಮುಖ್ಯಸ್ಥೆ ಉರ್ಸುಲಾ ವಾನ್‌ ಡೆರ್‌ ಲೆಯೆನ್‌ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಶಾಂತಿ ಮಾತುಕತೆಗಾಗಿ ಲಾಬಿ ನಡೆಸುತ್ತಿರುವ ಪಶ್ಚಿಮದ ರಾಷ್ಟ್ರಗಳ ನಾಯಕರು ಈ ನಿಟ್ಟಿನಲ್ಲಿ ಮಾತುಕತೆಗೆ ಕುಳಿತುಕೊಳ್ಳುವಂತೆ ಉಕ್ರೇನ್‌ ಅಧ್ಯಕ್ಷರಿಗೆ ಸಲಹೆ ನೀಡಿದ್ದಾರೆ ಎನ್ನುವುದನ್ನೂ ಝೆಲೆನ್‌ಸ್ಕಿ ತಳ್ಳಿಹಾಕಿದ್ದಾರೆ. ‘ನಮ್ಮ ಪಾಲುದಾರ ರಾಷ್ಟ್ರಗಳಲ್ಲಿ ಯಾರೂ ಸಹ ರಷ್ಯಾದೊಂದಿಗೆ ಮಾತುಕತೆ ನಡೆಸಲು ಒತ್ತಡ ಹೇರುತ್ತಿಲ್ಲ’ ಎಂದೂ ಸ್ಪಷ್ಟಪಡಿಸಿದರು.

ಶಾಂತಿ ಮಾತುಕತೆಗಳ ಕುರಿತು ಅಮೆರಿಕ ಮತ್ತು ಯುರೋಪ್‌ ಒಕ್ಕೂಟದ ಅಧಿಕಾರಿಗಳು ಉಕ್ರೇನ್‌ ಅಧ್ಯಕ್ಷರ ಜತೆ ಮಾತನಾಡಿದ್ದಾರೆ ಎನ್ನುವ ವರದಿಗಳು ಕೇಳಿ ಬರುತ್ತಿರುವ ನಡುವೆಯೇ ಝೆಲೆನ್‌ಸ್ಕಿ ಈ ಹೇಳಿಕೆ ನೀಡಿದ್ದಾರೆ.

‘ಉಕ್ರೇನ್‌ ಸಂಘರ್ಷದ ಮೇಲಿನ ಗಮನ ಈಗ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಕಡೆಗೆ ಹರಿದಿರುವುದು ಸ್ಪಷ್ಟ. ಇದೇ ‘ರಷ್ಯಾದ ಗುರಿ’ಯೂ ಆಗಿತ್ತು. ನಾವು ಈಗಾಗಲೇ ಬಹಳಷ್ಟು ಕಷ್ಟಕರ ಸನ್ನಿವೇಶದಲ್ಲಿ ಇದ್ದೇವೆ. ಈ ಸವಾಲನ್ನು ನಾವು ಖಂಡಿತವಾಗಿಯೂ ಜಯಿಸುತ್ತೇವೆ’ ಎಂದು ಝೆಲೆನ್‌ಸ್ಕಿ ಹೇಳಿದರು.   

ಯುದ್ಧವು 20ನೇ ತಿಂಗಳಿಗೆ ಕಾಲಿಟ್ಟಿರುವಾಗ, ಮುಂಚೂಣಿಯಲ್ಲಿ ಕಾದಾಡುತ್ತಿರುವ ಎರಡೂ ಕಡೆಯ ಪಡೆಗಳು ಸುಮಾರು ಒಂದು ವರ್ಷದಿಂದ ಇದ್ದ ಸ್ಥಳದಿಂದ ಆಚೀಚೆ ಕದಲಿಲ್ಲ. ಈ ವಾರ ಉಭಯ ದೇಶಗಳ ಸೇನಾಪಡೆಗಳ ನಡುವೆ ಸಂಘರ್ಷ ಸ್ಥಗಿತಗೊಂಡಿದೆ ಎಂದು ಉಕ್ರೇನಿನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.  

ಉಕ್ರೇನ್‌ ಪಡೆಗಳು, ರಷ್ಯಾದ ಮೇಲೆ ಪ್ರತಿದಾಳಿ ನಡೆಸಿ, ಕಳೆದುಕೊಂಡಿರುವ ನೆಲವನ್ನು ಪುನಃ ವಶಕ್ಕೆ ಪಡೆಯಲು ಹೆಣಗಾಡುತ್ತಿದೆ.

ರಷ್ಯಾ ಸೋಲಿಸಲು ಉಕ್ರೇನ್‌ ಎಷ್ಟು ಸಮಯ ತೆಗೆದುಕೊಳ್ಳುತ್ತದೆಯೋ ಅಲ್ಲಿಯವರೆಗೂ ಆ ದೇಶಕ್ಕೆ ಮಿಲಿಟರಿ ಮತ್ತು ಆರ್ಥಿಕ ನೆರವು ನೀಡಲು ಸಿದ್ಧವೆಂದು ಅಮೆರಿಕ ಸೇರಿದಂತೆ ಉಕ್ರೇನ್ ಬೆಂಬಲಿಗ ದೇಶಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT