ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾಗೆ ಜೀವರಕ್ಷಕ ನೆರವು ಹರಿದು ಬರಬೇಕಾದ ಸಮಯವಿದು: ವಿಶ್ವಸಂಸ್ಥೆ ಕಾರ್ಯದರ್ಶಿ

Published 24 ಮಾರ್ಚ್ 2024, 2:43 IST
Last Updated 24 ಮಾರ್ಚ್ 2024, 2:43 IST
ಅಕ್ಷರ ಗಾತ್ರ

ರಫಾ: ಯುದ್ಧ ಪೀಡಿತ ಗಾಜಾಗೆ ಜೀವರಕ್ಷಕ ನೆರವು ಹರಿದು ಬರಬೇಕಾದ ಸಮಯ ಇದು. ಅಲ್ಲಿಯವರ ಹಸಿವು ನೈತಿಕ ಅಕ್ರೋಶ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ ಹೇಳಿದ್ದಾರೆ. ಅಲ್ಲದೆ ತಕ್ಷಣವೇ ಯುದ್ಧ ನಿಲ್ಲಿಸಬೇಕು ಎಂದು ಇಸ್ರೇಲ್ ಹಾಗೂ ಹಮಾಸ್ ಜೊತೆ ಮನವಿ ಮಾಡಿದ್ದಾರೆ.

ರಫಾ ನಗರಕ್ಕೆ ಸಮೀಪ ಇರುವ ಗಾಜಾದ ಈಜಿಪ್ಟ್ ಭಾಗದ ಗಡಿಯಲ್ಲಿ ನಿಂತು ಮಾತನಾಡಿದ ಅವರು, ಹೆಚ್ಚಿನ ಆಕ್ರಮಣವು ಪರಿಸ್ಥಿತಿಯನ್ನು ಮತ್ತಷ್ಟು ಕಠಿಣಗೊಳಿಸಲಿವೆ. ಪಾಲೆಸ್ಟೀನಿಯನ್ನರಿಗೆ ಹಾಗೂ ಒತ್ತೆಯಾಳುಗಳಿಗೆ ಮತ್ತಷ್ಟು ಸಂಕಷ್ಟ ಉಂಟುಮಾಡಲಿವೆ ಎಂದು ಹೇಳಿದರು.

ಗಾಜಾಗೆ ನೆರವು ಸಾಗಿಸುವುದಕ್ಕೆ ಉಂಟಾಗಿರುವ ತೊಂದರೆಗಳ ಬಗ್ಗೆ ಅವರು ಪದೇ ಪದೇ ಪ್ರಸ್ತಾಪಿಸಿದರು.

‘ಈ ಗಡಿ ಭಾಗದಿಂದ ಹೃದಯ ವಿದ್ರಾವಕ ಹಾಗೂ ಹೃದಯ ಶೂನ್ಯ ಪರಿಸ್ಥಿತಿಗಳನ್ನು ನಾವು ನೋಡಬಹುದು. ‍‍ಪರಿಹಾರ ಸಾಮಗ್ರಿಗಳನ್ನು ಹೊತ್ತ ಟ್ರಕ್‌ಗಳ ಉದ್ದದ ಸರತಿ ಸಾಲು ಒಂದು ಕಡೆಯಾದರೆ, ಇನ್ನೊಂದು ಬದಿಯಲ್ಲಿ ಹಸಿವಿನ ಕರಾಳತೆ ಕಾಣಿಸುತ್ತದೆ’ ಎಂದು ಅವರು ನುಡಿದಿದ್ದಾರೆ.

ಗಾಜಾಗೆ ಮಾನವೀಯ ನೆರವು ಸಿಗುವಂತೆ, ಸಹಾನುಭೂತಿಯ ರಂಜಾನ್ ಮನೋಭಾವದಲ್ಲಿ ಇಸ್ರೇಲ್ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ. ಎಲ್ಲಾ ಒತ್ತೆಯಾಳುಗಳನ್ನು ತಕ್ಷಣವೇ ಬಿಡುಗಡೆ ಮಾಡುವ ಸಮಯವೂ ಬಂದಿದೆ. ಮಾನವೀಯ ನೆಲೆಯಲ್ಲಿ ಕದನ ವಿರಾಮ ಹಾಗೂ ಒತ್ತೆಯಾಳುಗಳ ಬಿಡುಗಡೆ ಏಕಕಾಲದಲ್ಲಿ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪರಿಹಾರ ಸರಕುಗಳನ್ನು ಹೊತ್ತ ಸುಮಾರು 7 ಸಾವಿರ ಟ್ರಕ್‌ಗಳು ಉತ್ತರ ಈಜಿಪ್ಟ್‌ನ ಸೈನಿ ಪ್ರಾಂತ್ಯದಲ್ಲಿ ಗಾಜಾಗೆ ಪ್ರವೇಶಿಸಿಲು ಕಾದು ಕುಳಿತಿವೆ ಎಂದು ಗವರ್ನರ್‌ ಮೊಹಮ್ಮದ್ ಅಬ್ದಲ್ ಫದೇಯಿಲ್‌ ಶೌಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಸ್ರೇಲ್‌ನಿಂದಾಗಿ ಗಾಜಾಗೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಂತರರಾಷ್ಟ್ರೀಯ ನೆರವು ಸಂಸ್ಥೆಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT