ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀವ್ರ ಹಸಿವಿನಲ್ಲಿ 59 ದೇಶಗಳ 28.2 ಕೋಟಿ ಜನರು: ವಿಶ್ವಸಂಸ್ಥೆ

Published 25 ಏಪ್ರಿಲ್ 2024, 13:49 IST
Last Updated 25 ಏಪ್ರಿಲ್ 2024, 13:49 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: 2023ರಲ್ಲಿ ವಿಶ್ವದ 59 ದೇಶಗಳಲ್ಲಿ ಸುಮಾರು 28.2 ಕೋಟಿ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ. ಅಲ್ಲದೆ, ಯುದ್ಧದಿಂದ ಹಾನಿಗೊಳಗಾದ ಗಾಜಾ, ಕ್ಷಾಮ ಎದುರಿಸುತ್ತಿರುವ ಪ್ರದೇಶವಾಗಿದೆ ಎಂದು ವಿಶ್ವಸಂಸ್ಥೆ ಬುಧವಾರ ಬಿಡುಗಡೆ ಮಾಡಿರುವ ಆಹಾರ ಬಿಕ್ಕಟ್ಟುಗಳ ಜಾಗತಿಕ ವರದಿ ಹೇಳಿದೆ.

2022ರಲ್ಲಿ ಆಹಾರದ ಕೊರತೆ ಎದುರಿಸಿದ ಜನಸಂಖ್ಯೆಗಿಂತಲೂ 2.4 ಕೋಟಿ ಹೆಚ್ಚು ಜನರು ನಂತರದ ವರ್ಷದಲ್ಲಿ ಆಹಾರದ ತೀವ್ರ ಕೊರತೆ ಎದುರಿಸಿದ್ದಾರೆ ಎಂದು ಈ ವರದಿ ಹೇಳಿದೆ.

ಆಹಾರ ಭದ್ರತೆಯು ವಿಶೇಷವಾಗಿ ಗಾಜಾ ಪಟ್ಟಿ ಮತ್ತು ಸುಡಾನ್‌ನಲ್ಲಿ ತೀವ್ರ ಹದಗೆಟ್ಟ ಕಾರಣ, ಆಹಾರ ಬಿಕ್ಕಟ್ಟು ಎದುರಿಸುತ್ತಿರುವ ರಾಷ್ಟ್ರಗಳ ಸಂಖ್ಯೆ ಸಹ ಹೆಚ್ಚಾಗಿದೆ ಎಂದು ಅದು ಹೇಳಿದೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞ ಮ್ಯಾಕ್ಸಿಮೊ ಟೊರೆರೊ, ಐದು ದೇಶಗಳಲ್ಲಿ 7.05 ಲಕ್ಷ ಜನರು ಹಸಿವಿನ 5ನೇ ಹಂತದಲ್ಲಿದ್ದಾರೆ. ಇದು ಅಂತರರಾಷ್ಟ್ರೀಯ ತಜ್ಞರು ನಿರ್ಧರಿಸಿದ ಹಸಿವಿನ ಪ್ರಮಾಣದ ಗರಿಷ್ಠ ಮಟ್ಟವಿದು. 2016ರಲ್ಲಿ ಜಾಗತಿಕ ವರದಿ ಪ್ರಾರಂಭವಾದಾಗಿನಿಂದ, ಇದು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.

 ಕ್ಷಾಮ ಎದುರಿಸುತ್ತಿರುವವರಲ್ಲಿ ಶೇಕಡ 80ಕ್ಕಿಂತ ಹೆಚ್ಚು ಜನರು (5.77 ಲಕ್ಷ ಜನರು) ಗಾಜಾದಲ್ಲಿದ್ದಾರೆ. ದಕ್ಷಿಣ ಸುಡಾನ್, ಬುರ್ಕಿನಾ ಫಾಸೊ, ಸೊಮಾಲಿಯಾ ಮತ್ತು ಮಾಲಿಯಲ್ಲಿ ಸಾವಿರಾರು ಜನರು ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಈ ವರದಿ ಕುರಿತು ‘ಮಾನವ ವೈಫಲ್ಯಗಳ ಪರಿಣಾಮವಿದು. ಜಗತ್ತಿನಲ್ಲಿ, ಸಾಕಷ್ಟು ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ. 

ಎಲ್ ನಿನೊ ಎಫೆಕ್ಟ್‌:
ಎಲ್ ನಿನೊ ವಿದ್ಯಮಾನವು 2024ರ ಆರಂಭದಲ್ಲಿ ಉತ್ತುಂಗಕ್ಕೇರಿದೆ. ಪೂರ್ವ ಆಫ್ರಿಕಾದ ಕೆಲವು ಭಾಗಗಳಲ್ಲಿ ಪ್ರವಾಹ ಮತ್ತು ಮಳೆ ಕೊರತೆ, ದಕ್ಷಿಣ ಆಫ್ರಿಕಾ, ವಿಶೇಷವಾಗಿ ಮಲಾವಿ, ಜಾಂಬಿಯಾ ಮತ್ತು ಜಿಂಬಾಬ್ವೆಯಲ್ಲಿ ಬರ ಉಂಟು ಮಾಡಿದೆ. ಇದರ ಸಂಪೂರ್ಣ ಪರಿಣಾಮ ವರ್ಷವಿಡೀ ಆಹಾರ ಭದ್ರತೆಯ ಮೇಲೆ ತಟ್ಟಲಿದೆ ಎಂದು ವಿಶ್ವಸಂಸ್ಥೆಯ ಈ ವರದಿಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT