ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9/11ರ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಮೇಲಿನ ದಾಳಿಗೆ 22 ವರ್ಷ

ಅಮೆರಿಕದ ವಿವಿಧೆಡೆ ಸ್ಮರಣೆ, ಅಗಲಿದವರಿಗೆ ಪುಷ್ಪನಮನ
Published 11 ಸೆಪ್ಟೆಂಬರ್ 2023, 13:05 IST
Last Updated 11 ಸೆಪ್ಟೆಂಬರ್ 2023, 13:05 IST
ಅಕ್ಷರ ಗಾತ್ರ

ನ್ಯೂಯಾರ್ಕ್ : ಅಮೆರಿಕದ ನೆಲದಲ್ಲಿ ನಡೆದಿದ್ದ ಆಘಾತಕಾರಿ ಭಯೋತ್ಪಾದನಾ ದಾಳಿಗೆ ಈಗ 22 ವರ್ಷ. ಇಲ್ಲಿನ ‘ವರ್ಲ್ಡ್‌ ಟ್ರೇಡ್‌ ಸೆಂಟರ್‌’ನ ಜೋಡಿ ಕಟ್ಟಡಕ್ಕೆ ವಿಮಾನ ಡಿಕ್ಕಿ ಹೊಡೆಸಿ ಉಗ್ರರು ನಡೆಸಿದ್ದ ಕೃತ್ಯ 9/11 ಎಂದೇ ಇತಿಹಾಸದಲ್ಲಿ ದಾಖಲಾಗಿದೆ. 

ಕಟ್ಟಡ ನೆಲಸಮಗೊಂಡ ಸ್ಥಳವು ಸೇರಿದಂತೆ ಅಮೆರಿಕದ ವಿವಿಧೆಡೆ ಅಲಾಸ್ಕಾದಿಂದ ಪಿನಿಸಿಲ್ವೇನಿಯಾವರೆಗೆ ವಿವಿಧೆಡೆ ಜನರು ಗುಂಪುಗೂಡಿ ಉಗ್ರರ ದಾಳಿ ಕೃತ್ಯದಲ್ಲಿ ಅಸುನೀಗಿದವರಿಗೆ ಸಂತಾಪ ಸೂಚಿಸಿದರು. ದುಃಸ್ವಪ್ನವಾಗಿರುವ ಕರಾಳ ಘಟನೆ ಮತ್ತೊಮ್ಮೆ ಅಮೆರಿಕದ ಜನರನ್ನು ಕಾಡಿತು.

ಅಧ್ಯಕ್ಷ ಜೋ ಬೈಡನ್‌ ಅವರು ಸೇನಾನೆಲೆ ಆಂಕರೇಜ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಭಾರತ ಮತ್ತು ವಿಯೆಟ್ನಾಂ ಪ್ರವಾಸದ ಬಳಿಕ ವಾಷಿಂಗ್ಟನ್‌ ಡಿ.ಸಿಗೆ ಮರಳುವ ಮಾರ್ಗದಲ್ಲಿ ಬೈಡನ್‌ ಆಂಕರೇಜ್‌ ಸೇನಾ ನೆಲೆಗೆ ಭೇಟಿ ನೀಡಿದ್ದರು.

ಅಪಹರಿಸಿದ್ದ 2 ವಿಮಾನಗಳನ್ನು ಬಳಸಿ ಜೋಡಿ ಕಟ್ಟಡಗಳಿಗೆ ಡಿಕ್ಕಿ ಹೊಡೆಸಿ ಭಯೋತ್ಪಾದಕರು ಕೃತ್ಯ ಎಸಗಿದ್ದರು. ಈ ದುರಂತದಲ್ಲಿ ಸುಮಾರು 3,000 ಜನರು ಸತ್ತಿದ್ದರು. ಈ ಕೃತ್ಯವು ಅಮೆರಿಕದ ವಿದೇಶಾಂಗ ನೀತಿಯ ಆಮೂಲಾಗ್ರ ಬದಲಾವಣೆಗೂ ಕಾರಣವಾಯಿತು.

‘ಆ ಕೃತ್ಯದ ಬಳಿಕ ಅಮೆರಿಕನ್ನರಲ್ಲಿ ನಾವು ಒಂದು ರಾಷ್ಟ್ರ. ನಾವೆಲ್ಲರೂ ಒಂದೇ. ಹಾಗೆ ಇರಬೇಕು ಎಂಬ ಭಾವನೆ ದಟ್ಟವಾಗಿದೆ. ಎಲ್ಲ ಕಡೆ ಒಟ್ಟುಗೂಡಿದ್ದೇವೆ. ಇದನ್ನೇ ನಾವು ಮಾಡಬೇಕಿರುವುದು’ ಎಂದು ವರ್ಜಿನಿಯಾದ ಅಗ್ನಿಶಾಮಕ ಸೇವೆಯ ಅಧಿಕಾರಿ ಎಡ್ಡೀ ಫರ್ಗ್ಯುಸನ್‌ ಹೇಳಿದರು.

ವರ್ಜಿನಿಯಾವು ಪೆಂಟಗನ್‌ನಿಂದ 160 ಕಿ.ಮೀ, ನ್ಯೂಯಾರ್ಕ್‌ನಿಂದ ಸುಮಾರು 500 ಕಿ.ಮೀ ದೂರವಿದೆ. ಆದರೆ, 9/11 ಕೃತ್ಯವನ್ನು ಕುರಿತಂತೆ ಎಲ್ಲ ಕಡೆಯು ಒಂದೇ ಭಾವನೆ ಬೇರೂರಿದೆ. ಕುಸಿದ ಜೋಡಿ ಕಟ್ಟಡದ ಕಬ್ಬಿಣದ ಅವಶೇಷ ಬಳಸಿ ವಿವಿಧೆಡೆ ಸ್ಥಳೀಯವಾಗಿ ಸ್ಮಾರಕಗಳನ್ನು ನಿರ್ಮಾಣ ಮಾಡಲಾಗಿದೆ.

ನ್ಯೂಯಾರ್ಕ್‌ನಲ್ಲಿ ಜೋಡಿ ಕಟ್ಟಡ ನೆಲಸಮಗೊಂಡಿದ್ದ ಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಕಮಲಾಹ್ಯಾರಿಸ್‌ ಭಾಗವಹಿಸಿದ್ದರು. ರಾಜಕಾರಣಿಗಳಿಗೆ ಬದಲಾಗಿ ಘಟನೆಯಲ್ಲಿ ಅಸುನೀಗಿದ್ದವರ ಸಂಬಂಧಿಕರಿಗೆ ವೇದಿಕೆ ಬಿಡಲಾಗಿತ್ತು. ಮೃತರ ಹೆಸರು ಓದುವ ಮೂಲಕ ದುರಂತ ಘಟಿಸಿ 22 ವರ್ಷಗಳ ನಂತರವೂ ಅವರನ್ನು ಸ್ಮರಿಸಲಾಯಿತು. ಸಂಬಂಧಿಕರು, ಸಭಿಕರ ಕಣ್ಣಾಲಿಗಳು ತುಂಬಿದ್ದವು.

ಕೃತ್ಯದಲ್ಲಿ ಜೋಸೆಫ್‌ ಗಿಯಾಕೊನ್‌ ಮೃತಪಟ್ಟಿದ್ದು, ಇವರ ಸಹೋದರ ಜೇಮ್ಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿ ವರ್ಷವೂ ತಪ್ಪದೇ ಭಾಗವಹಿಸುತ್ತಿದ್ದಾರೆ. ‘ಅಗಲಿದವರ ಹೆಸರನ್ನು ಗಟ್ಟಿಯಾಗಿ ಹೇಳಿದರೆ, ಅವರ ನೆನಪು ಮಾಸುವುದಿಲ್ಲ’ ಎಂದು ಜೇಮ್ಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT