ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪನ್ನೂ ಹತ್ಯೆ ಸಂಚಿನಲ್ಲಿ ಭಾರತೀಯ ಅಧಿಕಾರಿ ಭಾಗಿ; ನಿರಾಧಾರ ಆಪಾದನೆ: ಭಾರತ

ಪನ್ನೂ ಹತ್ಯೆ ಸಂಚು: ವಾಷಿಂಗ್ಟನ್‌ ಪೋಸ್ಟ್‌ ವರದಿಯಲ್ಲಿ ‘ರಾ’ ಅಧಿಕಾರಿ ಕುರಿತು ಉಲ್ಲೇಖ
Published 30 ಏಪ್ರಿಲ್ 2024, 12:41 IST
Last Updated 30 ಏಪ್ರಿಲ್ 2024, 12:41 IST
ಅಕ್ಷರ ಗಾತ್ರ

ನವದೆಹಲಿ: ಸಿಖ್ ಪ್ರತ್ಯೇಕತವಾದಿ ನಾಯಕ ಗುರುಪತ್ವಂತ್‌ ಸಿಂಗ್‌ ಪನ್ನೂ ಅವರ ಹತ್ಯೆಗೆ ರೂಪಿಸಲಾಗಿತ್ತು ಎನ್ನಲಾದ ಸಂಚಿನಲ್ಲಿ ಭಾರತೀಯ ಅಧಿಕಾರಿ ಭಾಗಿಯಾಗಿದ್ದರು ಎಂಬುದಾಗಿ ‘ವಾಷಿಂಗ್ಟನ್‌ ಪೋಸ್ಟ್‌’ ಪತ್ರಿಕೆ ಪ್ರಕಟಿಸಿರುವ ವರದಿ ನಿರಾಧಾರ ಮತ್ತು ಸಮರ್ಥನೀಯವಲ್ಲದ ಆರೋಪಗಳಿಂದ ಕೂಡಿದೆ ಎಂದು ಭಾರತ ಮಂಗಳವಾರ ಪ್ರತಿಕ್ರಿಯಿಸಿದೆ.

‘ಅಮೆರಿಕದಲ್ಲಿ ನಡೆದಿದ್ದ, ಸಿಖ್ ಪ್ರತ್ಯೇಕತಾವಾದಿ ಪನ್ನೂ ಹತ್ಯೆಯ ಸಂಚಿನಲ್ಲಿ ‘ರಾ’ ಅಧಿಕಾರಿ ವಿಕ್ರಮ್ ಯಾದವ್ ಅವರು ಭಾಗಿಯಾಗಿದ್ದರು’ ಎಂದು ‘ವಾಷಿಂಗ್ಟನ್‌ ಪೋಸ್ಟ್’ ದೈನಿಕ ವರದಿ ಮಾಡಿದೆ. ವಿಕ್ರಮ್ ಯಾದವ್ ಅವರು ಸಂಚಿನ ಭಾಗವಾಗಲು ಆಗ ಭಾರತೀಯ ಗುಪ್ತದಳ ಸಂಸ್ಥೆ ‘ರಾ’ ಮುಖ್ಯಸ್ಥರಾಗಿದ್ದ ಸಾಮಂತ್‌ ಗೋಯಲ್ ಅವರ ಅನುಮೋದನೆ ಸಿಕ್ಕಿತ್ತು ಎಂದೂ ಈ ವರದಿಯು ಉಲ್ಲೇಖಿಸಿದೆ.

ಈ ವರದಿ ಪ್ರಕಟಗೊಂಡ ಮಾರನೇ ದಿನವೇ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವಾಲಯ ವಕ್ತಾರ ರಣಧೀರ್ ಜೈಸ್ವಾಲ್‌,‘ಪನ್ನೂ ಹತ್ಯೆ ಸಂಚಿನಲ್ಲಿ ಭಾರತೀಯ ಅಧಿಕಾರಿ ಪಾತ್ರವಿದೆ ಎಂಬ ಆರೋಪ ಗಂಭೀರವಾದುದು. ಇಂತಹ ವಿಷಯ ಕುರಿತು ವಾಷಿಂಗ್ಟನ್‌ ಪೋಸ್ಟ್‌ ಪ್ರಕಟಿಸಿರುವ ವರದಿಯಲ್ಲಿ ಆಧಾರ ರಹಿತ ಆರೋಪಗಳನ್ನು ಮಾಡಲಾಗಿದೆ’ ಎಂದರು.

‘ಈ ಪ್ರಕರಣದ ಬೆನ್ನಲ್ಲೇ, ಜಾಗತಿಕ ಮಟ್ಟದಲ್ಲಿರುವ ಸಂಘಟಿತ ಅಪರಾಧಿಗಳ, ಭಯೋತ್ಪಾದಕರ ಮತ್ತು ಇತರರ ಜಾಲಗಳು ಹಾಗೂ ಭದ್ರತೆಗೆ ಅವುಗಳು ಒಡ್ಡಿರುವ ಬೆದರಿಕೆ ಕುರಿತು ಭಾರತದೊಂದಿಗೆ ಅಮೆರಿಕ ತನ್ನ ಕಳವಳ ಹಂಚಿಕೊಂಡಿತ್ತು. ಈ ಕುರಿತು ಭಾರತ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ತನಿಖೆಯೂ ನಡೆಯುತ್ತಿದೆ’ ಎಂದು ಹೇಳಿದರು.

ಪನ್ನೂ ಹತ್ಯೆಗೆ ನಿಖಿಲ್‌ ಗುಪ್ತಾ ಎಂಬ ಭಾರತೀಯ ನಡೆಸಿದ್ದ ಯತ್ನವನ್ನು ವಿಫಲಗೊಳಿಸಲಾಗಿತ್ತು. ಭಾರತೀಯ ಉದ್ಯೋಗಿಯೊಬ್ಬರ ಬಳಿ ನಿಖಿಲ್‌ ನೌಕರನಾಗಿದ್ದ ಎಂದು ಅಮೆರಿಕ ಕಳೆದ ವರ್ಷ ನವೆಂಬರ್‌ನಲ್ಲಿ ಆರೋಪ ಮಾಡಿತ್ತು.

ಈ ಕುರಿತು ಡಿಸೆಂಬರ್ 7ರಂದು ಸಂಸತ್‌ನಲ್ಲಿ ಹೇಳಿಕೆ ನೀಡಿದ್ದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌,‘ರಾಷ್ಟ್ರದ ಭದ್ರತೆ ಮೇಲೆ ಪರಿಣಾಮ ಬೀರುವಂತಹ ಈ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕ ಹಂಚಿಕೊಂಡಿರುವ ಮಾಹಿತಿ ಕುರಿತು ಪರಿಶೀಲನೆ ನಡೆಸಿ, ತನಿಖೆ ಕೈಗೊಳ್ಳುವ ಸಂಬಂಧ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ’ ಎಂದಿದ್ದರು.

ಹಲವು ಭಯೋತ್ಪಾದನಾ ಕೃತ್ಯಗಳಿಗೆ ಸಂಬಂಧಿಸಿ ಪನ್ನೂ ಭಾರತಕ್ಕೆ ಬೇಕಾಗಿದ್ದಾನೆ. ಈತ, ಅಮೆರಿಕ ಹಾಗೂ ಕೆನಡಾದ ಪೌರತ್ವ ಹೊಂದಿದ್ದಾನೆ.

ಈ ಪ್ರಕರಣ ಕುರಿತಂತೆ ಊಹಾತ್ಮಕ ಮತ್ತು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುವುದರಿಂದ ಯಾವುದೇ ಪ್ರಯೋಜನ ಇಲ್ಲ ರಣಧೀರ್ ಜೈಸ್ವಾಲ್ ವಕ್ತಾರ ವಿದೇಶಾಂಗ ಸಚಿವಾಲಯ

ಭಾರತ ಗಂಭೀರವಾಗಿ ಪರಿಗಣಿಸಿದೆ- ಶ್ವೇತಭವನ: ‘ಸಿಖ್‌ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್‌ ಸಿಂಗ್‌ ಪನ್ನೂ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಆರೋಪಗಳನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ’ ಎಂದು ಶ್ವೇತಭವನ ಪತ್ರಿಕಾ ಕಾರ್ಯದರ್ಶಿ ಕರೀನ್‌ ಜೀನ್‌ ಪಿಯರ್‌  ಹೇಳಿದ್ದಾರೆ.  ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ಆರೋಪಗಳ ಕುರಿತು ಎಫ್‌ಬಿಐ ನಡೆಸುತ್ತಿರುವ ತನಿಖೆ ಹಾಗೂ ನ್ಯಾಯಾಂಗ ಇಲಾಖೆ ದಾಖಲಿಸಿರುವ ಪ್ರಕರಣ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಿಲ್ಲ. ‘ಈ ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ. ಯಾವುದೇ ನಿರ್ದಿಷ್ಟ ಉತ್ತರ ಬೇಕು ಎಂದಾದಲ್ಲಿ ನ್ಯಾಯಾಂಗ ಇಲಾಖೆಯನ್ನೇ ನೀವು ಸಂಪರ್ಕಿಸಬೇಕು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ‘ಭಾರತ ನಮ್ಮ ಬಹುಮುಖ್ಯ ಪಾಲುದಾರ ರಾಷ್ಟ್ರ. ಹಲವು ಕ್ಷೇತ್ರಗಳಲ್ಲಿ ಉಭಯ ದೇಶಗಳು ಸಹಕಾರ ವೃದ್ಧಿಸುವ ಕಾರ್ಯಸೂಚಿಯನ್ನು ಹೊಂದಿವೆ. ಆದರೆ ಪನ್ನೂ ಹತ್ಯೆಗೆ ನಡೆದಿದ್ದ ಸಂಚಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಹಲವಾರು ಸಭೆಗಳಲ್ಲಿ ಪ್ರಸ್ತಾಪಿಸಿದ್ದೇವೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT