ವಾಷಿಂಗ್ಟನ್: ಲೆಬನಾನ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಇಸ್ರೇಲ್‌ಗೆ ಅಮೆರಿಕ ಗುಪ್ತಚರ ನೆರವು ಒದಗಿಸುತ್ತಿಲ್ಲ ಎಂದು ಯುಎಸ್ ಸೇನೆಯ ಪ್ರಧಾನ ಕಚೇರಿ 'ಪೆಂಟಗನ್' ಬುಧವಾರ ಸ್ಪಷ್ಟಪಡಿಸಿದೆ.
ಲೆಬನಾನ್‌ನಲ್ಲಿ ಇಸ್ರೇಲ್ ಸೇನಾ ಕಾರ್ಯಾಚರಣೆಯನ್ನು ಅಮೆರಿಕ ಬೆಂಬಲಿಸುತ್ತಿದೆಯೇ, ಗುಪ್ತಚರ ನೆರವು ನೀಡುತ್ತಿದೆಯೇ ಎಂಬ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ 'ಪೆಂಟಗನ್' ವಕ್ತಾರೆ ಸಬ್ರಿನಾ ಸಿಂಗ್, 'ಇಲ್ಲ. ನಮ್ಮ ಬೆಂಬಲವಿಲ್ಲ' ಎಂದಿದ್ದಾರೆ.
'ಲೆಬನಾನ್‌ಗೆ ಸಂಬಂಧಿಸಿದಂತೆ ಇಸ್ರೇಲ್ ಕಾರ್ಯಾಚರಣೆಯಲ್ಲಿ ಅಮೆರಿಕ ಸೇನೆಯು ಯಾವುದೇ ರೀತಿಯಲ್ಲೂ ಪಾಲ್ಗೊಳ್ಳುವುದಿಲ್ಲ' ಎಂದು ಖಚಿತಪಡಿಸಿದ್ದಾರೆ.
ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಪರಿಸ್ಥಿತಿಯನ್ನು ತಿಳಿಗೊಳಿಸಲು ಅಮೆರಿಕ ರಾಜತಾಂತ್ರಿಕ ಪ್ರಯತ್ನ ಮಾಡುತ್ತಿದೆ ಎಂದು ಸಿಂಗ್ ಪ್ರತಿಪಾದಿಸಿದ್ದಾರೆ.
ಇಸ್ರೇಲ್ ಸೇನಾ ಮುಖ್ಯಸ್ಥ, ಹಿಜ್ಬುಲ್ಲಾ ಬಂಡುಕೋರರ ನೆಲೆಗಳನ್ನು ನಾಶ ಮಾಡುವ ನಿಟ್ಟಿನಲ್ಲಿ ವಾಯುದಾಳಿ ಮುಂದುವರಿಯಲಿದೆ ಮತ್ತು ತನ್ನ ಪಡೆಗಳು ಲೆಬನಾನ್ ನೆಲದಲ್ಲಿ ಕಾರ್ಯಾಚರಣೆಗೆ ಸಜ್ಜಾಗಲಿವೆ ಎಂದು ಬುಧವಾರ ಹೇಳಿದ್ದರು.
ಹಿಜ್ಬುಲ್ಲಾ ಬಂಡುಕೋರರ ತಾಣವನ್ನು ಗುರಿಯಾಗಿಸಿಕೊಂಡು ಲೆಬನಾನ್ ರಾಜಧಾನಿ ಬೈರೂತ್‌ನ ದಕ್ಷಿಣ ಭಾಗದ ಮೇಲೆ ಇಸ್ರೇಲ್ ಸೇನೆ ಮಂಗಳವಾರ ವೈಮಾನಿಕ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ, ಇಸ್ರೇಲ್‌ನ ಪ್ರಮುಖ ನಗರ ಟೆಲ್ ಅವಿವ್ ಮೇಲೆ ಲೆಬನಾನ್ ಬುಧವಾರ ಕ್ಷಿಪಣಿ ದಾಳಿ ನಡೆಸಿದೆ.