ವಾಷಿಂಗ್ಟನ್: ಚೀನಾ ನಾಗರಿಕರಿಗೆ ಹತ್ತು ವರ್ಷಗಳ ಕಾಲ ಮಾನ್ಯತೆ ಹೊಂದಿರುವ ವೀಸಾ ನೀಡುವುದನ್ನು ನಿಷೇಧಿಸುವ ಮಸೂದೆಯನ್ನು ರಿಪಬ್ಲಿಕನ್ ಸಂಸದರು ಸೆನೆಟ್‌ನಲ್ಲಿ ಮಂಡಿಸಿದ್ದಾರೆ.
ತನ್ನ ಆರ್ಥಿಕ ಹಾಗೂ ಕೈಗಾರಿಕೆ ಕ್ಷೇತ್ರಗಳಿಗೆ ಸಂಬಂಧಿಸಿ ಅಮೆರಿಕ ಬೇಹುಗಾರಿಕೆ ನಡೆಸುತ್ತಿದೆ ಎಂಬುದಾಗಿ ತಾನು ಮಾಡುತ್ತಿರುವ ಅಪಪ್ರಚಾರವನ್ನು ಚೀನಾ ನಿಲ್ಲಿಸುವವರೆಗೆ, ವೀಸಾದ ಮೇಲಿನ ಈ ನಿಷೇಧ ಜಾರಿಯಲ್ಲಿರುತ್ತದೆ ಎಂದು ಮೂಲಗಳು ಹೇಳಿವೆ.
ಸಂಸದರಾದ ಮಾರ್ಷ್ ಬ್ಲ್ಯಾಕ್‌ಬರ್ನ್, ಟಾಮ್ ಕಾಟನ್, ರಿಕ್ ಸ್ಕಾಟ್, ಟೆಡ್ ಕ್ರೂಜ್, ಮಾರ್ಕೊ ರುಬಿಯೊ ಅವರು ‘ವೀಸಾ ಸೆಕ್ಯುರಿಟಿ ಆ್ಯಕ್ಟ್’ ಎಂಬ ಮಸೂದೆಯನ್ನು ಮಂಡಿಸಿದ್ದಾರೆ.
ಅಮೆರಿಕ ವಿರುದ್ಧ ಬೇಹುಗಾರಿಕೆ ಕುರಿತ ಅಪಪ್ರಚಾರ ನಿಲ್ಲಿಸಿರುವ ಹಾಗೂ ತೈವಾನ್ ಕುರಿತಂತೆ ತನ್ನ ಧೋರಣೆಯನ್ನು ಚೀನಾ ಬದಲಿಸಿದ್ದನ್ನು ವಿದೇಶಾಂಗ ಸಚಿವಾಲಯ ದೃಢೀಕರಿಸಬೇಕು. ಅಲ್ಲಿಯವರೆಗೆ ಚೀನಾ ಪ್ರಜೆಗಳಿಗೆ ಬಿ–1, ಬಿ–2 ವೀಸಾ ನೀಡುವುದನ್ನು ನಿಷೇಧಿಸಲು ಈ ಕಾಯ್ದೆಯಡಿ ಅವಕಾಶ ಇರುತ್ತದೆ.
ಈ ವೀಸಾಗಳ ಅವಧಿ 10 ವರ್ಷ. ವಾಣಿಜ್ಯ ಉದ್ದೇಶ, ಪ್ರವಾಸಕ್ಕಾಗಿ ಅಮೆರಿಕಕ್ಕೆ ಭೇಟಿ ನೀಡುವವರಿಗೆ ಈ ವೀಸಾ ನೀಡಲಾಗುತ್ತದೆ.