ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಖ್‌ ಪ್ರತ್ಯೇಕತಾವಾದಿ ನಾಯಕನ ಹತ್ಯೆ ಯತ್ನ ವಿಫಲಗೊಳಿಸಿದ್ದ ಅಮೆರಿಕ: ವರದಿ

ಹತ್ಯೆಕೋರರ ಗುರಿಯಾಗಿದ್ದ ಪನ್ನೂ * ಭಾರತಕ್ಕೆ ಎಚ್ಚರಿಕೆ ನೀಡಲಾಗಿತ್ತು: ಫೈನಾನ್ಶಿಯಲ್‌ ಟೈಮ್ಸ್‌ನಲ್ಲಿ ವರದಿ
Published 22 ನವೆಂಬರ್ 2023, 16:40 IST
Last Updated 22 ನವೆಂಬರ್ 2023, 16:40 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕದಲ್ಲಿ ನಡೆದಿದ್ದ ಸಿಖ್‌ ಪ್ರತ್ಯೇಕತಾವಾದಿ ನಾಯಕನೊಬ್ಬನ ಹತ್ಯೆ ಯತ್ನವನ್ನು ಅಮೆರಿಕದ ಅಧಿಕಾರಿಗಳು ವಿಫಲಗೊಳಿಸಿದ್ದರು. ಇದರಲ್ಲಿ ಭಾರತದ ಕೈವಾಡವಿತ್ತು ಎಂಬ ಕಳವಳ ವ್ಯಕ್ತಪಡಿಸಿದ್ದ ಅಮೆರಿಕ, ಈ ವಿಚಾರವಾಗಿ ಭಾರತಕ್ಕೆ ಎಚ್ಚರಿಕೆಯನ್ನೂ ನೀಡಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ಫೈನಾನ್ಶಿಯಲ್‌ ಟೈಮ್ಸ್‌ ವರದಿ ಮಾಡಿದೆ.

ಘೋಷಿತ ಖಾಲಿಸ್ತಾನಿ ಉಗ್ರ ಹಾಗೂ ನಿಷೇಧಿತ ಸಂಘಟನೆ ಸಿಖ್ಸ್‌ ಫಾರ್‌ ಜಸ್ಟೀಸ್‌ನ (ಎಸ್‌ಜೆಎಫ್‌) ಗುರುಪತ್ವಂತ್ ಸಿಂಗ್ ಪನ್ನೂ ಹತ್ಯೆಗೆ ಯತ್ನ ನಡೆಸಲಾಗಿತ್ತು ಎಂದೂ ಫೈನಾನ್ಶಿಯಲ್‌ ಟೈಮ್ಸ್‌ ತನ್ನ ವರದಿಯಲ್ಲಿ ಹೇಳಿದೆ.

‘ಈ ವರದಿಗೆ ಸಂಬಂಧಿಸಿ ಪತ್ರಿಕೆ ಮಾಡಿದ್ದ ಮನವಿಗೆ ಭಾರತದ ವಿದೇಶಾಂಗ ಸಚಿವಾಲಯ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ’ ಎಂದೂ ಪತ್ರಿಕೆ ತಿಳಿಸಿದೆ.

ಇನ್ನೊಂದೆಡೆ, ‘ರಾಜತಾಂತ್ರಿಕ ವಿಷಯಗಳು, ಗುಪ್ತಚರ ಸೇರಿದಂತೆ ವಿವಿಧ ಸಂಸ್ಥೆಗಳ ವಿಚಾರವಾಗಿ ತನ್ನ ಪಾಲುದಾರ ರಾಷ್ಟ್ರಗಳೊಂದಿಗೆ ನಡೆಸಿರುವ ಮಾತುಕತೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂಬುದಾಗಿ ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ’ ಎಂದಿದೆ.

ರಾಜತಾಂತ್ರಿಕ ಮಟ್ಟದಲ್ಲಿ ಪ್ರತಿಭಟನೆ ದಾಖಲಿಸುವ ಜೊತೆಗೆ, ಕನಿಷ್ಠ ಒಬ್ಬ ಶಂಕಿತನ ವಿರುದ್ಧ ನ್ಯೂಯಾರ್ಕ್ ಜಿಲ್ಲಾ ನ್ಯಾಯಾಲಯದಲ್ಲಿ ಸರ್ಕಾರಿ ವಕೀಲರು ಆರೋಪಪ‍ಟ್ಟಿ ಸಲ್ಲಿಸಿದ್ದಾರೆ ಎಂದು  ವರದಿಯಲ್ಲಿ ಹೇಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಜೂನ್‌ನಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಈ ವಿಚಾರವಾಗಿ ಅಧ್ಯಕ್ಷ ಜೋ ಬೈಡನ್ ಪ್ರತಿಭಟನೆ ದಾಖಲಿಸಿದ್ದರು.

ನಿಜ್ಜರ್‌ ಹತ್ಯೆ ವಿಚಾರವಾಗಿ ಭಾರತದ ವಿರುದ್ಧ ಕೆನಡಾ ಆರೋಪಗಳನ್ನು ಮಾಡಿದ ನಂತರ, ತನ್ನ ನೆಲದಲ್ಲಿ ಸಿಖ್‌ ಪ್ರತ್ಯೇಕತಾವಾದಿ ನಾಯಕನ ಹತ್ಯೆ ಯತ್ನವನ್ನು ವಿಫಲಗೊಳಿಸಿದ್ದರ ಕುರಿತ ವಿವರಗಳನ್ನು  ಮಿತ್ರರಾಷ್ಟ್ರಗಳೊಂದಿಗೆ ಅಮೆರಿಕ ಹಂಚಿಕೊಂಡಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜೂನ್‌ನಲ್ಲಿ ನಡೆದಿದ್ದ ಸಿಖ್‌ ಪ್ರತ್ಯೇಕತಾವಾದಿ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂಬ ಬಗ್ಗೆ ನಂಬಲರ್ಹ ಆರೋಪಗಳಿವೆ ಎಂಬುದಾಗಿ ಕೆನಡಾ ಹೇಳಿತ್ತು. ಈ ಹೇಳಿಕೆ ಹೊರಬಿದ್ದ ಎರಡು ತಿಂಗಳ ನಂತರ, ಫೈನಾನ್ಶಿಯಲ್‌ ಟೈಮ್ಸ್‌ನಲ್ಲಿ ಈ ವರದಿ ಪ್ರಕಟವಾಗಿದೆ. 

ಕೆನಡಾದ ಆರೋಪಗಳನ್ನು ಭಾರತ ತಿರಸ್ಕರಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT