ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷನಾಗಿ ಆಯ್ಕೆ ಮಾಡದಿದ್ದರೆ ಅಮೆರಿಕದಲ್ಲಿ ರಕ್ತಪಾತ: ಟ್ರಂಪ್ ಬೆದರಿಕೆ

Published 17 ಮಾರ್ಚ್ 2024, 6:13 IST
Last Updated 17 ಮಾರ್ಚ್ 2024, 6:13 IST
ಅಕ್ಷರ ಗಾತ್ರ

ವಂಡಾಲಿಯಾ (ಅಮೆರಿಕ): ‘ಅಮೆರಿಕ ಅಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡದಿದ್ದರೆ ರಾಷ್ಟ್ರದಲ್ಲಿ ರಕ್ತಪಾತವಾಗಲಿದೆ’ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಗುಡುಗಿದ್ದಾರೆ.

ರಿಪಬ್ಲಿಕನ್ ಅಭ್ಯರ್ಥಿಯಾಗಿ ತಮ್ಮ ಸ್ಥಾನ ಭದ್ರಪಡಿಸಿಕೊಂಡ ಕೆಲವು ದಿನಗಳ ನಂತರ, ಶನಿವಾರ ಓಹಿಯೋದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಅವರು ಮಾತನಾಡಿದರು.

‘ಮೆಕ್ಸಿಕೊದಲ್ಲಿ ಕಾರುಗಳನ್ನು ತಯಾರಿಸಿ ಅವುಗಳನ್ನು ಅಮೆರಿಕನ್ನರಿಗೆ ಮಾರಾಟ ಮಾಡುವುದು ಚೀನಿಯರ ಯೋಜನೆಗಳಾಗಿವೆ. ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ, ಚೀನಾದ ಆಮದು ಕಾರಿಗೆ ಶೇ 100 ತೆರಿಗೆ ವಿಧಿಸುವೆ. ಆಗ ಒಂದೇ ಒಂದು ಕಾರು ಮಾರಾಟ ಮಾಡಲು ಅವರಿಗೆ ಸಾಧ್ಯವಾಗುವುದಿಲ್ಲ’ ಎಂದು ಗುಡುಗಿದರು. 

‘ಈಗ ನಾನು ಚುನಾಯಿತನಾಗದಿದ್ದರೆ ಅದು ರಕ್ತಪಾತಕ್ಕೆ ಕಾರಣವಾಗುತ್ತದೆ. ಆಗ ಇಡೀ ರಾಷ್ಟ್ರದಲ್ಲಿ ರಕ್ತದೋಕುಳಿಯಾಗಲಿದೆ. ಅದು ಕನಿಷ್ಠವಾಗಿರಬಹುದು. ಆದರೆ, ಆಗ ಅವರು ಆ ಕಾರುಗಳನ್ನು ಮಾರಾಟ ಮಾಡಲು ಹೋಗುವುದಿಲ್ಲ’ ಎಂದರು.

‘ನವೆಂಬರ್‌ 5ರ ದಿನಾಂಕ ನೆನಪಿಟ್ಟುಕೊಳ್ಳಿ, ಅಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆ ಅಮೆರಿಕ ಇತಿಹಾಸದಲ್ಲಿಯೇ ಅತ್ಯಂತ ಪ್ರಮುಖ ದಿನ. ತಾನು ನಡೆಸುತ್ತಿರುವ ಪ್ರಚಾರವು ದೇಶಕ್ಕೆ ಒಂದು ಮಹತ್ವದ ತಿರುವು ನೀಡಲಿದೆ’ ಎಂದು ಬಣ್ಣಿಸಿದರು.

ತಮ್ಮ ಎದುರಾಳಿ, ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್‌ ಅವರ ವಿರುದ್ಧ ಹರಿಹಾಯ್ದ ಟ್ರಂಪ್‌, ಬೈಡನ್‌ ದೇಶದ ಅತ್ಯಂತ ಕೆಟ್ಟ ಅಧ್ಯಕ್ಷ ಎಂದು ಟೀಕಿಸಿದರು.

ಟ್ರಂಪ್‌ ಹೇಳಿಕೆ ಬೈಡನ್‌ ಟೀಕೆ

ಟ್ರಂಪ್‌ ಅವರ ಈ ಭಾಷಣ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದ್ದಂತೆ ಬೈಡನ್‌ ಅವರು ತಮ್ಮ ಪ್ರಚಾರದ ಹೇಳಿಕೆ ಬಿಡುಗಡೆ ಮಾಡಿದ್ದು, ‘2020ರ ಚುನಾವಣೆಯಲ್ಲಿ ಸೋತ ರಿಪಬ್ಲಿಕನ್‌ ಅಭ್ಯರ್ಥಿ ರಾಜಕೀಯ ಹಿಂಸಾಚಾರದ ಬೆದರಿಕೆ ದ್ವಿಗುಣಗೊಳಿಸುತ್ತಿದ್ದಾರೆ’ ಎಂದು ಟೀಕಿಸಿದರು.

2021ರಲ್ಲಿ ಅಮೆರಿಕದ ರಾಜಧಾನಿ ಮೇಲೆ ಟ್ರಂಪ್‌ ಬೆಂಬಲಿಗರು ನಡೆಸಿದ ದಾಳಿ ಉಲ್ಲೇಖಿಸಿ, ‘ಅವರಿಗೆ ಇನ್ನೊಂದು ಜನವರಿ 6ರ ದಂಗೆ ಬೇಕಿದೆ. ಆದರೆ, ಅಮೆರಿಕದ ಜನರು ಈ ನವೆಂಬರ್‌ನಲ್ಲಿ ಅವರಿಗೆ ಮತ್ತೊಂದು ಚುನಾವಣಾ ಸೋಲನ್ನು ನೀಡಲಿದ್ದಾರೆ. ಅವರ ಉಗ್ರವಾದ, ಹಿಂಸೆಯ ಮೇಲಿನ ಪ್ರೀತಿ ಮತ್ತು ಸೇಡು ತೀರಿಸಿಕೊಳ್ಳುವ ದಾಹವನ್ನು ಜನತೆ ತಿರಸ್ಕರಿಸುತ್ತಿದ್ದಾರೆ’ ಎಂದು ಬೈಡನ್‌ ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT