ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ಗೇಮ್ಸ್‌ಗಳಿಂದ ಮಕ್ಕಳಲ್ಲಿ ಹೃದಯ ಸಂಬಂಧಿ ಗಂಭೀರ ಸಮಸ್ಯೆ: ಅಧ್ಯಯನ

Last Updated 11 ಅಕ್ಟೋಬರ್ 2022, 12:00 IST
ಅಕ್ಷರ ಗಾತ್ರ

ಮೆಲ್ಬರ್ನ್‌: ‘ವಿಡಿಯೊ ಗೇಮ್ಸ್‌ಗಳಿಂದ ಮಕ್ಕಳಲ್ಲಿ ಗಂಭೀರ ಸ್ವರೂಪದ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು’ ಎಂದು ಈಚೆಗೆ ನಡೆದಿರುವ ಅಧ್ಯಯನ ವರದಿಯೊಂದು ಎಚ್ಚರಿಸಿದೆ.

‘ಹಾರ್ಟ್‌ ರೈಮ್‌’ ನಿಯತಕಾಲಿಕದಲ್ಲಿ ಈಚೆಗೆ ಈ ಅಧ್ಯಯನ ವರದಿಯು ಪ್ರಕಟವಾಗಿದೆ. ಮಕ್ಕಳಲ್ಲಿನ ಹೃದಯಬಡಿತ ಕ್ರಮದಲ್ಲಿ ಏರುಪೇರಾಗಬಹುದು ಹಾಗೂ ವಿಡಿಯೊ ಗೇಮ್ಸ್‌ ಆಡುವಾಗಲೇ ಪ್ರಜ್ಞೆ ಕಳೆದುಕೊಳ್ಳುವ ಸಂದರ್ಭಗಳು ತಲೆದೋರಬಹುದು ಎಂದು ವರದಿ ತಿಳಿಸಿದೆ.

‘ವಿಡಿಯೊ ಗೇಮ್ಸ್‌ಗಳು ಮಕ್ಕಳನ್ನು ಅಸಹಜ ಸ್ಥಿತಿಗೆ ಒಯ್ಯಲಿವೆ. ಆದರೆ, ಹೃದಯಸಂಬಂಧಿ ಸಮಸ್ಯೆಗಳ ಲಕ್ಷಣಗಳು ಮುಂದಾಗಿಯೇ ಗೋಚರಿಸದಿರಬಹುದು’ ಎಂದು ಅಧ್ಯಯನ ತಂಡದ ನೇತೃತ್ವವನ್ನು ವಹಿಸಿದ್ದ ಆಸ್ಟ್ರೇಲಿಯದ ದ ಹಾರ್ಟ್‌ ಸೆಂಟರ್‌ನ ಕ್ಲೇರ್‌ ಎಂ.ಲಾಲಿ ಅವರು ಅಭಿಪ್ರಾಯಪಡುತ್ತಾರೆ.

ಎಲೆಕ್ಟ್ರಾನಿಕ್‌ ಪರಿಕರಗಳ ಜೊತೆಗೆ ಆಟವಾಡುವಾಗ ಮಕ್ಕಳು ಹಠಾತ್ತನೇ ಪ್ರಜ್ಞೆ ಕಳೆದುಕೊಳ್ಳಬಹುದು. ಇಂಥ ಲಕ್ಷಣಗಳು ಭವಿಷ್ಯದಲ್ಲಿ ಅವರಿಗೆ ಗಂಭೀರ ಸಮಸ್ಯೆ ತಂದೊಡ್ಡಬಹುದು. ಹೀಗಾಗಿ, ಹೃದ್ರೋಗ ತಜ್ಞರ ತಪಾಸಣೆಗೆ ಒಳಪಡಿಸುವುದು ಉತ್ತಮ ಎಂದೂಸಲಹೆ ಮಾಡುತ್ತಾರೆ.

ಮಕ್ಕಳು ಹಠಾತ್ತನೇ ಪ್ರಜ್ಞೆ ಕಳೆದುಕೊಂಡಿರುವ ವಿವಿಧ ಪ್ರಕರಣಗಳ ಅಧ್ಯಯನದ ಜೊತೆಗೆ ಪೂರಕವಾದ ಸಂಶೋಧನಾ ಲೇಖನಗಳನ್ನುಅಧ್ಯಯನ ತಂಡ ಪರಾಮರ್ಶೆ ಮಾಡಿದೆ. 22 ಪ್ರಕರಣಗಳನ್ನು ಗಮನಿಸಿದ್ದು, ಹೆಚ್ಚಿನ ಪ್ರಕರಣಗಳಲ್ಲಿ ಸಮಸ್ಯೆಗೆ ಮೂಲ ಕಾರಣವೇ ವಿಡಿಯೊ ಗೇಮ್ಸ್ ಎಂಬುದು ದೃಢಪಟ್ಟಿದೆ ಎಂದು ಹೇಳಿದ್ದಾರೆ.

ಕೆಲವು ಮಕ್ಕಳು ಹೃದಯಸ್ತಂಭನದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಕೆಲವು ಪ್ರಕರಣಗಳನ್ನು ತಪಾಸಣೆಗೆ ಒಳಪಡಿಸಿದಾಗ ಮಕ್ಕಳು ಗಂಭೀರ ಸಮಸ್ಯೆಗೆ ತುತ್ತಾಗಿರುವುದು ಕಂಡುಬಂದಿದೆ. ಇನ್ನು ಕೆಲ ಸಂದರ್ಭಗಳಲ್ಲಿ ಮಕ್ಕಳ ಕುಟುಂಬದ ಸದಸ್ಯರಲ್ಲಿಯೂ ಇಂತ ಲಕ್ಷಣಗಳು ಕಂಡುಬಂದಿವೆ ಎಂದು ಹೇಳಿದ್ದಾರೆ.

ಎಲೆಕ್ಟ್ರಾನಿಕ್ ಗೇಮ್ಸ್‌ನಿಂದಾಗುವ ಪ್ರತಿಕೂಲ ಪರಿಣಾಮಗಳ ಕುರಿತು ಕುಟುಂಬಗಳು ಮತ್ತು ಆರೋಗ್ಯ ಕ್ಷೇತ್ರದ ಪ್ರಮುಖರು ಚಿಂತನೆ ನಡೆಸುವುದು ಅಗತ್ಯ. ಮಕ್ಕಳು ಗೇಮ್ಸ್‌ ಜೊತೆಗೆ ಭಾವನಾತ್ಮಕವಾಗಿ ಬೆಸೆಯುವುದರಿಂದ ಅದರ ಪರಿಣಾಮವು ನರವ್ಯವಸ್ಥೆಯ ಮೇಲೂ ಆಗಲಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಹೃದಯಾಘಾತದ ಸಂದರ್ಭದಲ್ಲಿ ಬಹುತೇಕ ರೋಗಿಗಳು ಉದ್ವೇಗದ ಸ್ಥಿತಿಯಲ್ಲಿ ಅಂದರೆ ಆಟದಲ್ಲಿ ಜಯ ಅಥವಾ ಸೋಲಿನ ಸಂದರ್ಭದಲ್ಲಿ ಇರುತ್ತಾರೆ. ಅಥವಾ ತನ್ನ ಜೊತೆಗೆ ಆಟವಾಡುತ್ತಿರುವವರ ಜೊತೆಗೆ ಸಂಘರ್ಷದ ಮನಸ್ಥಿತಿಯಲ್ಲಿ ಇರುತ್ತಾರೆ ಎಂದು ಹೇಳಿದ್ದಾರೆ.

ಹೃದಯ ಸಂಬಂಧಿ ಸಮಸ್ಯೆಗಳಿರುವ ಮಕ್ಕಳು ತೀವ್ರ ಸ್ಪರ್ಧೆಯುಳ್ಳ ಆಟೋಟಗಳಲ್ಲಿ ತೊಡಗಿದಾಗ ಅಪಾಯಕ್ಕೆ ಗುರಿಯಾಗಬಹುದು ಎಂದು ಈಗಾಗಲೇ ತಿಳಿದಿತ್ತು. ಆದರೆ, ವಿಡಿಯೊ ಗೇಮ್ಸ್‌ನಲ್ಲಿಯೂ ಗಂಭೀರ ಸಮಸ್ಯೆ ಕಾಣಿಸಲಿದೆ ಎಂಬುದು ಆಘಾತ ಮೂಡಿಸುವ ಸಂಗತಿ ಎಂದು ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಕ್ರಿಸ್ಟಿಯನ್‌ ಟರ್ನರ್ ಹೇಳಿದರು.

ವಿಡಿಯೊ ಗೇಮ್ಸ್‌ಗಳು ಮಕ್ಕಳಿಗೆ ಒಂದು ಸುರಕ್ಷಿತ ಚಟುವಟಿಕೆ ಎಂದು ಇದುವರೆಗೂ ಭಾವಿಸಲಾಗಿತ್ತು. ಆದರೆ, ವಾಸ್ತವ ಸಂಗತಿಯು ಹಾಗಿಲ್ಲ ಎಂಬುದೇ ಈ ಅಧ್ಯಯನದಲ್ಲಿ ಕಂಡುಬಂದಿರುವ ಪ್ರಮುಖ ಅಂಶವಾಗಿದೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT