ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬೇಹುಗಾರಿಕೆ ಪ್ರಕರಣ: ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಬಿಡುಗಡೆ

Published : 25 ಜೂನ್ 2024, 2:34 IST
Last Updated : 25 ಜೂನ್ 2024, 2:34 IST
ಫಾಲೋ ಮಾಡಿ
Comments
ತಪ್ಪೊಪ್ಪಿಗೆ: ಅಸ್ಸಾಂಜೆ ಇಂದು ನ್ಯಾಯಾಲಯಕ್ಕೆ ಹಾಜರು?
ಬ್ಯಾಂಕಾಕ್‌: ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರು ಪ್ರಯಾಣಿಸುತ್ತಿರುವ ವಿಮಾನವು ಮಂಗಳವಾರ ಬ್ಯಾಂಕಾಕ್‌ನಲ್ಲಿ ಇಂಧನ ಭರ್ತಿಗಾಗಿ ಇಳಿಯಿತು. ಅಸ್ಸಾಂಜೆ ಅವರ ಪತ್ನಿ ಸ್ಟೆಲ್ಲಾ ಅವರು ತಮ್ಮ ಪತಿ ಪ್ರಯಾಣಿಸುತ್ತಿರುವ ಚಾರ್ಟರ್ಡ್ ವಿಮಾನವು ಲಂಡನ್‌ನಿಂದ ಹೊರಟು  ಡಾನ್ ಮುವಾಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿರುವುದನ್ನು ಖಚಿತಪಡಿಸಿದ್ದಾರೆ. ವರ್ಗೀಕೃತ ದಾಖಲೆಗಳ ಸಂಗ್ರಹಿಸಿ ಪ್ರಕಟಿಸಿದ ಬೇಹುಗಾರಿಕೆ ಆರೋಪದ ಪ್ರಕರಣದಲ್ಲಿ ಅಮೆರಿಕ ಸರ್ಕಾರಕ್ಕೆ ನೀಡಿರುವ ತಪ್ಪೊಪ್ಪಿಗೆಯ ಪತ್ರದ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಸ್ಸಾಂಜೆ ಅವರು ಲಂಡನ್‌ನಿಂದ ಪ್ರಯಾಣ ಆರಂಭಿಸಿದ್ದಾರೆ.  ವಿಮಾನವು ಉತ್ತರ ಮರಿಯಾನಾ ದ್ವೀಪಗಳ ರಾಜಧಾನಿ ಸೈಪಾನ್‌ ತಲುಪಲಿದೆ. ಪೆಸಿಫಿಕ್‌ನಲ್ಲಿರುವ ಅಮೆರಿಕದ ಕಾಮನ್‌ವೆಲ್ತ್‌ ನ್ಯಾಯಾಲಯಕ್ಕೆ ಅಸ್ಸಾಂಜೆ ಬುಧವಾರ ಹಾಜರಾಗುವ ನಿರೀಕ್ಷೆಯಿದೆ ಎಂದು ಅಲ್ಲಿನ ಅಧಿಕಾರಿಗಳು ‘ಅಸೋಸಿಯೇಟೆಡ್ ಪ್ರೆಸ್‌’ಗೆ ತಿಳಿಸಿದ್ದಾರೆ. ‘ವರ್ಗೀಕೃತ ರಾಷ್ಟ್ರೀಯ ರಕ್ಷಣಾ ಮಾಹಿತಿಯನ್ನು ಕಾನೂನುಬಾಹಿರವಾಗಿ ಪಡೆದುಕೊಳ್ಳಲು ಮತ್ತು ಪ್ರಸಾರ ಮಾಡಲು ಪಿತೂರಿ ನಡೆಸಿದ ಬೇಹುಗಾರಿಕೆ ಕಾಯ್ದೆ ಉಲ್ಲಂಘನೆಯ ಆರೋಪದಲ್ಲಿ ತಪ್ಪೊಪ್ಪಿಗೆ ಸಲ್ಲಿಸಲಿದ್ದಾರೆ ಎನ್ನುವುದನ್ನು ನಿರೀಕ್ಷಿಸಲಾಗಿದೆ’ ಎಂದು ಅಮೆರಿಕ ನ್ಯಾಯಾಂಗ ಇಲಾಖೆಯು ನ್ಯಾಯಾಲಯಕ್ಕೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದೆ. ಅಸ್ಸಾಂಜೆ ಅವರು ತಪ್ಪೊಪ್ಪಿಗೆಯ ಮನವಿ ಮತ್ತು ಶಿಕ್ಷೆಯ ನಂತರ ತನ್ನ ತಾಯ್ನಾಡು ಆಸ್ಟ್ರೇಲಿಯಾಕ್ಕೆ ಮರಳುವ ನಿರೀಕ್ಷೆಯಿದೆ. ಅಮೆರಿಕಕ್ಕೆ ಪ್ರಯಾಣಿಸಲು ಅಸ್ಸಾಂಜೆ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಆಸ್ಟ್ರೇಲಿಯಾದ ಮಿತ್ರರಾಷ್ಟ್ರ ಸೈಪಾನ್‌ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ. ‘ನ್ಯಾಯಾಧೀಶರು ಆದೇಶ ಪ್ರತಿಗೆ ಸಹಿ ಹಾಕಿದ ನಂತರ ಒಪ್ಪಂದದ ವಿವರಗಳನ್ನು ಬಹಿರಂಗಪಡಿಸಲಾಗುವುದು’ ಎಂದು ಸ್ಟೆಲ್ಲಾ ಅವರು ಆಸ್ಟ್ರೇಲಿಯಾದಿಂದ ‘ಬಿಬಿಸಿ’ಗೆ ತಿಳಿಸಿದ್ದಾರೆ. ಅಸ್ಸಾಂಜೆ ಅವರ ವಕೀಲರೂ ಆದ ಸ್ಟೆಲ್ಲಾ 2022ರಲ್ಲಿ ಅಸ್ಸಾಂಜೆ ಜೈಲಿನಲ್ಲಿರುವಾಗಲೇ ಅವರನ್ನು ವಿವಾಹವಾಗಿದ್ದಾರೆ. ಅಸ್ಸಾಂಜೆ ಅವರನ್ನು ವಿಮಾನದಲ್ಲಿ ಕರೆತರಲು ಸುಮಾರು ₹4.17 ಕೋಟಿ (5 ಲಕ್ಷ ಡಾಲರ್‌) ವೆಚ್ಚವಾಗುತ್ತಿದ್ದು ಅದನ್ನು ಪಾವತಿಸಲು ನಿಧಿಸಂಗ್ರಹ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಸ್ಟೆಲ್ಲಾ ಬ್ರಿಟನ್ನಿನ ಸುದ್ದಿಸಂಸ್ಥೆ ‘ಪಿಎ’ಗೆ ತಿಳಿಸಿದ್ದಾರೆ. ಅಸ್ಸಾಂಜೆ ಅವರು ಪತ್ರಕರ್ತರಾಗಿ ಅಮೆರಿಕದ ಮಿಲಿಟರಿ ಪ್ರಮಾದಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಪತ್ರಿಕಾಸ್ವಾತಂತ್ರ್ಯ ಪರ ವಾದಿಸುವವರು ಪ್ರತಿಪಾದಿಸಿದ್ದಾರೆ. ತನಿಖಾಧಿಕಾರಿಗಳು ಇದಕ್ಕೆ ವ್ಯತಿರಿಕ್ತವಾಗಿ ಅಸ್ಸಾಂಜೆ ಅವರ ಕ್ರಮಗಳು ಸೂಕ್ಷ್ಮ ಮಾಹಿತಿ ರಕ್ಷಣೆ ಕಾನೂನುಗಳನ್ನು ಉಲ್ಲಂಘಿಸಿವೆ ಅಲ್ಲದೆ ದೇಶದ ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಪದೇ ಪದೇ ಪ್ರತಿಪಾದಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT