ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ನಲ್ಲಿ ನಿಮ್ಮ ಖಾತೆಯ ಪ್ರತಿ ಸೃಷ್ಟಿ? ಸುಳ್ಳು ಸಂದೇಶಗಳಿಗೆ ಮರುಳಾಗದಿರಿ

Last Updated 9 ಅಕ್ಟೋಬರ್ 2018, 16:49 IST
ಅಕ್ಷರ ಗಾತ್ರ

ಸಾಮಾಜಿಕ ಮಾಧ್ಯಮಗಳ ಬಳಕೆದಾರರಿಗೆ ತಮ್ಮ ಫೇಸ್‌ಬುಕ್‌ ಖಾತೆಯ ಪ್ರತಿ ಸೃಷ್ಟಿಯಾಗಿರುವ ಬಗ್ಗೆ ಭಾನುವಾರ ಸಂದೇಶಗಳು ತಲುಪಿವೆ. ನಮ್ಮ ಅರಿವಿಗೆ ಬಾರದಂತೆ ನಮ್ಮದೇ ಮತ್ತೊಂದು ಖಾತೆ ಸೃಷ್ಟಿಯಾಗಿದೆ ಎಂಬ ಭ್ರಮೆ ಸೃಷ್ಟಿಸುವಂತಹ ಸಂದೇಶಗಳನ್ನು ಹರಿಯಬಿಡಲಾಗಿತ್ತು.

’ನಿಮ್ಮ ಖಾತೆಯಿಂದ ನನಗೆ ಫ್ರೆಂಡ್‌ ರಿಕ್ವೆಸ್ಟ್‌ ಬಂದಿದೆ. ಆದರೆ, ನಾನು ಅದನ್ನು ಪರಿಗಣಿಸಲಿಲ್ಲ. ನಿಮ್ಮ ಖಾತೆಯನ್ನು ಒಮ್ಮೆ ಪರಿಶೀಲಿಸುವುದು ಸೂಕ್ತ. ಈ ಸಂದೇಶವನ್ನು ನಿಮ್ಮ ಇತರೆ ಸ್ನೇಹಿತರಿಗೂ ತಲುಪಿಸಲು, ಸಂದೇಶದ ಮೇಲೆ ಒತ್ತಿ ಹಿಡಿದು ಫಾರ್ವರ್ಡ್‌ ಆಯ್ಕೆ ಬರುವವರೆಗೂ ಕಾಯಿರಿ. ನಂತರ ಸಂದೇಶವನ್ನು ರವಾನಿಸಿ...’ – ಈ ಸಂದೇಶವನ್ನು ನಿಜವೆಂಬ ನಂಬಿದ ಅನೇಕರು ತಮ್ಮ ಖಾತೆಯ ನೂರಾರು ಸ್ನೇಹಿತರಿಗೂ ರವಾನಿಸಿದ್ದಾರೆ. ಹೀಗೆ, ಮುಂದುವರಿದು ಸುಳ್ಳು ಸಂದೇಶವೊಂದು ವೈರಲ್‌ ಆಗಿದೆ.

ಸಂದೇಶ ಪಡೆಯುವವರು ಕ್ಲೋನ್ಡ್‌ ಅಥವಾ ಖಾತೆಯ ಮತ್ತೊಂದು ಪ್ರತಿ ಸೃಷ್ಟಿಸುವ ಹಗರಣದಲ್ಲಿ ಸಿಲುಕಿದ ಸಂತ್ರಸ್ತರಾಗುತ್ತಾರೆ. ಸಂದೇಶ ಪಡೆಯುವವರ ಖಾತೆಗೆ ಕನ್ನ ಹಾಕುವ ಕಿಡಿಗೇಡಿ ಬಳಕೆದಾರ ಚಿತ್ರಗಳು ಹಾಗೂ ಇತರೆ ಮಾಹಿತಿಗಳನ್ನು ಸಂಗ್ರಹಿಸಿಕೊಂಡು ಪ್ರತಿರೂಪಿನ ಖಾತೆ ಸೃಷ್ಟಿಸಿಕೊಳ್ಳುತ್ತಾನೆ. ಅಲ್ಲಿಂದ ಸಂತ್ರಸ್ತನ ಸ್ನೇಹಿತರ ಖಾತೆಗಳಿಗೆ ಫ್ರೆಂಡ್‌ ರಿಕ್ವೆಸ್ಟ್‌ ರವಾನಿಸುತ್ತ, ಕ್ಲೋನ್‌ ಕುರಿತ ಸಂದೇಶ ಪಸರಿಸುವಂತೆ ಮಾಡುತ್ತಾನೆ.

2016ರಲ್ಲಿ ಇಂಥದ್ದೇ ಸಾಮೂಜಿಕ ಕ್ಲೋನಿಂಗ್‌ ಸಂದೇಶಗಳು ಹರಡಿದ್ದವು. ಆದರೆ, ಈ ಸಂದೇಶಗಳು ಖಾತೆಯ ಪ್ರತಿ ಸೃಷ್ಟಿಯ ಜಾಲ ಅಥವಾ ದತ್ತಾಂಶ ಕದಿಯುವುದಕ್ಕೆ ಸಂಬಂಧಿಸಿದ್ದಲ್ಲ ಎಂದು ಫೇಸ್‌ಬುಕ್‌ ಅಧಿಕಾರಿಗಳು ಪ್ರಕಟಿಸಿದ್ದರು.

ಯಾವುದೇ ಕ್ಲೋನ್‌ ಖಾತೆಯಿಂದ ಫ್ರೆಂಡ್‌ ರಿಕ್ವೆಸ್ಟ್‌ ಬಾರದೆಯೇಭಾನುವಾರ ಕ್ಲೋನ್‌ ಖಾತೆಯ ಆತಂಕದ ಸಂದೇಶಗಳು ವೈರಲ್‌ ಆಗಿವೆ. ಖಾತೆಗಳು ಹ್ಯಾಕ್‌ ಆಗಿರುವ ಬಗ್ಗೆ ಒಂದರಿಂದೊಂದು ಸಂದೇಶಗಳು ಬಂದಿರುವುದಕ್ಕೆ ಹಲವು ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂಥ ಸುಳ್ಳು ಸಂದೇಶಗಳು ನಿಮಗೂ ಬಂದರೆ; ಏನು ಮಾಡುವಿರಿ?– ಸಂದೇಶವನ್ನು ಡಿಲೀಟ್‌ ಮಾಡಿ ನಿಮ್ಮ ಕೆಲಸಗಳಲ್ಲಿ ಮುಂದುವರಿಯಿರಿ. ನಿಮ್ಮದೇ ಮತ್ತೊಂದು ಖಾತೆ ಇರುವ ಬಗ್ಗೆ ಅನುಮಾನವಿದ್ದರೆ, ನೀವೇ ನಿಮ್ಮ ಹೆಸರು ನೀಡಿ ಹುಡುಕಾಡಿ; ಆ ಬಗ್ಗೆ ಫೇಸ್‌ಬುಕ್‌ಗೆ ದೂರು ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT