ಭಾನುವಾರ, ಏಪ್ರಿಲ್ 18, 2021
31 °C

ಪ್ಯಾರಿಸ್: ನಾಟ್ರೆ ಡೇಮ್ ಕ್ಯಾಥೊಲಿಕ್ ಚರ್ಚ್‌ನಲ್ಲಿ ಬೆಂಕಿ ಅನಾಹುತ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಪ್ಯಾರಿಸ್: ಪ್ಯಾರಿಸ್‌ನ ಇತಿಹಾಸ ಪ್ರಸಿದ್ಧ 12ನೇ ಶತಮಾನದ ನಾಟ್ರೆ ಡೇಮ್ ಚರ್ಚ್‌ನಲ್ಲಿ ಸೋಮವಾರ ಸಂಜೆ 6.50ಕ್ಕೆ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಚರ್ಚ್‌ನ ಮೇಲ್ಭಾಗದಲ್ಲಿನ ಪಿರಮಿಡ್ ಆಕೃತಿ ಮತ್ತು ಛಾವಣಿ ಬೆಂಕಿಗೆ ಆಹುತಿಯಾಗಿವೆ. ಆದರೆ ಚರ್ಚ್‌ನ 69 ಮೀ. ಎತ್ತರದ ಅವಳಿ ಗೋಪುರಗಳಿಗೆ ಅವಘಡದಲ್ಲಿ ಯಾವುದೇ ಹಾನಿಯಾಗಿಲ್ಲ. 

‘ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ. 12 ತಾಸುಗಳ ಕಾರ್ಯಾಚರಣೆ ಬಳಿಕ ಅಗ್ನಿಶಾಮಕ ಸಿಬ್ಬಂದಿ ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

‘ಚರ್ಚ್‌ನಲ್ಲಿ ನಡೆಯುತ್ತಿದ್ದ ನವೀಕರಣ ಕಾರ್ಯವೇ ಅಗ್ನಿ ಆಕಸ್ಮಿಕಕ್ಕೆ ಕಾರಣವಾಗಿರಬಹುದು. ಸದ್ಯಕ್ಕೆ ಇದು ದುರದೃಷ್ಟಕರ ಘಟನೆ ಎಂದಷ್ಟೆ ಪರಿಗಣಿಸಲಾಗಿದೆ. ಭಯೋತ್ಪಾದಕರ ಕೈವಾಡದ ಶಂಕೆ ಇಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಿಕೊಂಡಿರುವ ಈ ಚರ್ಚ್‌ಗೆ ವಾರ್ಷಿಕ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. 

‘ಪುನರ್‌ನಿರ್ಮಾಣಕ್ಕೆ ಬದ್ಧ’: ‘ನಮ್ಮ ಒಂದು ಭಾಗವಾಗಿರುವ’ ಚರ್ಚ್‌ನ ಪುನರ್‌ನಿರ್ಮಾಣಕ್ಕೆ ಬದ್ಧ ಎಂದು ಫ್ರಾನ್ಸ್ ಅಧ್ಯಕ್ಷ  ಎಮಾನ್ಯುಯಲ್ ಮ್ಯಾಕ್ರೊನ್ ಹೇಳಿದ್ದಾರೆ. 

‘ನಾಟ್ರೆ ಡೇಮ್ ಚರ್ಚ್ ಪ್ಯಾರಿಸ್‌ನ ಇತಿಹಾಸ, ಸಾಹಿತ್ಯ. ಇದು ನಮ್ಮ ಜೀವನದ ಕೇಂದ್ರಬಿಂದು’ ಎಂದು ಅವರು ತಿಳಿಸಿದ್ದಾರೆ. 

ನೆರವಿನ ಮಹಾಪೂರ: ಚರ್ಚ್‌ನ ಪುನರ್‌ನಿರ್ಮಾಣ ಕಾರ್ಯಕ್ಕೆ ಫ್ರಾನ್ಸ್‌ನ ಎಲ್ಲೆಡೆಯಿಂದ ನೆರವಿನ ಹಸ್ತ ಬಂದಿದೆ. ಶ್ರೀಮಂತ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರು ತಮ್ಮ ಕಂಪನಿ ಎಲ್‌ವಿಎಂಎಚ್ ಮೂಲಕ ₹ 1572 ಕೋಟಿ ನೆರವು ನೀಡುವುದಾಗಿ ಹೇಳಿ
ದ್ದಾರೆ. ಫ್ರಾನ್ಸ್‌ನ ಬೃಹತ್ ತೈಲ ಕಂಪನಿ ‘ಟೋಟಲ್’ ₹ 786.35 ಕೋಟಿ ನೆರವು ನೀಡುವುದಾಗಿ ಘೋಷಿಸಿದೆ.


ಚಿತ್ರ ಕೃಪೆ: ನ್ಯೂಯಾರ್ಕ್‌ ಟೈಮ್ಸ್

‘ಕ್ರೈಸ್ತ ವಿರೋಧಿ ದಾಳಿಗೆ ಸಂಬಂಧ’

ಬರ್ಲಿನ್‌: ಈ ಹಿಂದೆ ಫ್ರಾನ್ಸ್‌ನಲ್ಲಿ ನಡೆದ ಕ್ರೈಸ್ತ ವಿರೋಧಿ ದಾಳಿಗಳಿಗೂ ಮತ್ತು ಚರ್ಚ್‌ನಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕಕ್ಕೆ ಸಂಬಂಧ ಇರಬಹುದು ಎಂದು ಜರ್ಮನ್‌ನ ಎಎಫ್‌ಡಿ ಪಕ್ಷದ ನಾಯಕಿ ಅಲಿಸ್ ವೈಡಲ್ ಹೇಳಿದ್ದಾರೆ. ‘ಯುರೋಪ್‌ನಲ್ಲಿ ಕ್ರೈಸ್ತರ ವಿರುದ್ಧ ಅಸಹಿಷ್ಣುತೆ ಹೆಚ್ಚುತ್ತಿದೆ. ಈಸ್ಟರ್ ಪವಿತ್ರ ವಾರದ ಆರಂಭದಲ್ಲಿ ನಾಟ್ರೆ ಡೇಮ್ ಚರ್ಚ್‌ನಲ್ಲಿ ಅಗ್ನಿ ಆಕಸ್ಮಿಕ ನಡೆದಿದೆ. ಮಾರ್ಚ್‌ನಲ್ಲಿ ಎರಡನೇ ಅತಿದೊಡ್ಡ ಚರ್ಚ್ ಸೇಂಟ್ ಸಲ್ಪೈಸ್‌ನಲ್ಲಿ ಅವಘಡ. ಫೆಬ್ರುವರಿ: ಫ್ರಾನ್ಸ್‌ನಲ್ಲಿ 47 ದಾಳಿಗಳು ನಡೆದಿವೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ಪುನರ್‌ನಿರ್ಮಾಣ ಅವಧಿ ಅನಿಶ್ಚಿತ’

‘ಚರ್ಚ್‌ ಪುನರ್‌ನಿರ್ಮಾಣಕ್ಕೆ ವರ್ಷಗಳು ಅಥವಾ ದಶಕಗಳೇ ಬೇಕಾಗಬಹುದು. ಇದು ಅನಿಶ್ಚಿತ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

‘ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಪುನರ್‌ನಿರ್ಮಾಣ ಕಾರ್ಯ ಕೈಗೊಳ್ಳಲು ವಾಸ್ತುಶಿಲ್ಪಿಗಳಿಗೆ 3ಡಿ ಸ್ಕ್ಯಾನ್‌ನಂತಹ ಆಧುನಿಕ ತಂತ್ರಜ್ಞಾನ ಬಳಸಿ ಸಂಗ್ರಹಿಸಲಾಗಿರುವ ಈಚೆಗಿನ ಮಾಹಿತಿ ಅವಶ್ಯವಾಗುತ್ತದೆ’ ಎಂದು 1000 ವರ್ಷ ಹಳೆಯದಾದ ಸ್ಟ್ರಾಸ್‌ಬರ್ಗ್ ಚರ್ಚ್‌ ನವೀಕರಣದ ಉಸ್ತುವಾರಿ ಹೊತ್ತಿದ್ದ ಎರಿಕ್ ಫಿಶರ್ ಅವರು ಹೇಳಿದ್ದಾರೆ.

ನೆರವಿನ ಮಹಾಪೂರ

ಚರ್ಚ್‌ನ ಪುನರ್‌ನಿರ್ಮಾಣ ಕಾರ್ಯಕ್ಕೆ ಫ್ರಾನ್ಸ್‌ನ ಎಲ್ಲೆಡೆಯಿಂದ ನೆರವಿನ ಹಸ್ತ ಬಂದಿದೆ. ಶ್ರೀಮಂತ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರು ತಮ್ಮ ಕಂಪನಿ ಎಲ್‌ವಿಎಂಎಚ್ ಮೂಲಕ ₹ 1572 ಕೋಟಿ ನೆರವು ನೀಡುವುದಾಗಿ ಹೇಳಿದ್ದಾರೆ. ಫ್ರಾನ್ಸ್‌ನ ಬೃಹತ್ ತೈಲ ಕಂಪನಿ ‘ಟೋಟಲ್’ ₹ 786.35 ಕೋಟಿ ನೆರವು ನೀಡುವುದಾಗಿ ಘೋಷಿಸಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು