ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರದ ಕೆಸರಲ್ಲಿ ಹೂತುಹೋದ ನೈತಿಕತೆಯ ಕಮಲ

Last Updated 16 ಜೂನ್ 2018, 9:26 IST
ಅಕ್ಷರ ಗಾತ್ರ

ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರು ತಮ್ಮ ಪೂರ್ವಾಶ್ರಮದ ರಾಜಕೀಯ ಜೀವನದಲ್ಲಿ ನೂರಾ ಒಂದು ತಪ್ಪುಗಳನ್ನು ಮಾಡಿರಬಹುದು. ಇಂದಿರಾಗಾಂಧಿ ಕುಟುಂಬಕ್ಕೆ ಸಂಕಟಗಳು ಎದುರಾದಾಗೆಲ್ಲ ಅದರಿಂದ ಪಾರು ಮಾಡಲು ಆ ಕುಟುಂಬಕ್ಕೆ ನಿಷ್ಠರಾದ ಭಾರದ್ವಾಜ್ ಸಕ್ರಮ-ಅಕ್ರಮ ಮಾರ್ಗಗಳೆರಡನ್ನೂ ತುಳಿದಿರಬಹುದು. ರಾಜ್ಯಪಾಲರಾಗಿ ಕರ್ನಾಟಕಕ್ಕೆ ಬಂದ ಮೇಲೆ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಯಾವ ಅವಕಾಶವನ್ನೂ ಬಿಡದೆ ಮೇಲೇರಿ ಹೋಗಿರಬಹುದು. ಅಲ್ಲಲ್ಲಿ ಅವರು ಆಡಿದ ಹಗುರ ಮಾತುಗಳು ರಾಜ್ಯಪಾಲರ ಹುದ್ದೆಯ ಗೌರವಕ್ಕೆ ತಕ್ಕದಾಗಿರದೆ ಇರಬಹುದು. ಆದರೆ ಈ ಕಾರಣಗಳಿಂದಾಗಿ ರಾಜ್ಯಪಾಲರ ಕುರ್ಚಿಯಲ್ಲಿ ಕೂತು ಸಂವಿಧಾನದ ಚೌಕಟ್ಟಿನಲ್ಲಿ ಅವರು ಕೈಗೊಂಡ ನಿರ್ಧಾರಗಳೆಲ್ಲ ಅಬದ್ಧ ಎಂದು ಹೇಳಬಹುದೇ?

ಭಾರತೀಯ ಜನತಾ ಪಕ್ಷದ ನಾಯಕರು ಮತ್ತು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹೇಳುತ್ತಿರುವುದು ಇದನ್ನೇ. ‘ರಾಜ್ಯಪಾಲರು ಕಾಂಗ್ರೆಸ್ ಏಜೆಂಟ್, ಆದ್ದರಿಂದ ಅವರು ಕೈಗೊಂಡಿರುವ ನಿರ್ಧಾರ ಮಾನ್ಯವಲ್ಲ’ ಎನ್ನುವುದು ಅವರ ಒಕ್ಕೊರಲಿನ ಆರೋಪ. ಈ ‘ಕಾಂಗ್ರೆಸ್ ಏಜೆಂಟ್’ ಎಂಬ ಆರೋಪವನ್ನು ಬಿಜೆಪಿ ಹೇಗೆ ವ್ಯಾಖ್ಯಾನಿಸುತ್ತದೋ ಮತ್ತು ಅದನ್ನು ಹೇಗೆ ಸಾಬೀತುಪಡಿಸಲಿದೆಯೋ ಗೊತ್ತಿಲ್ಲ. ಭಾರದ್ವಾಜ್ ಅವರು ಕಾಂಗ್ರೆಸ್ ಏಜೆಂಟ್ ಅನಿಸಿಕೊಳ್ಳಲು ರಾಜ್ಯಪಾಲರಾಗುವ ಮೊದಲು ಅವರು ಆ ಪಕ್ಷದ ಸದಸ್ಯರಾಗಿದ್ದದ್ದೇ ಕಾರಣ ಎಂದಾದರೆ, ಆರು ವರ್ಷಗಳ ಕಾಲ ಎನ್‌ಡಿಎ ಅಧಿಕಾರವಧಿಯಲ್ಲಿ ರಾಜ್ಯಪಾಲರಾಗಿ ನೇಮಕಗೊಂಡಿದ್ದವರೆಲ್ಲ ‘ಬಿಜೆಪಿ ಏಜೆಂಟ್’ಗಳೇ?

ರಾಜ್ಯಪಾಲರಾಗಿ ನೇಮಕಗೊಳ್ಳಲು ಸಂವಿಧಾನ ನಿಗದಿಪಡಿಸಿರುವ ಅರ್ಹತೆಗಳೆಲ್ಲವೂ ಇದ್ದ ಕಾರಣಕ್ಕಾಗಿಯೇ ಭಾರದ್ವಾಜ ಅವರನ್ನು ಆ ಸ್ಥಾನಕ್ಕೆ ನೇಮಕ ಮಾಡಲಾಗಿದ್ದಲ್ಲವೇ? ಅದರಲ್ಲಿ ಏನಾದರೂ ಲೋಪವಾಗಿದ್ದರೆ ಅದನ್ನು ರಾಷ್ಟ್ರಪತಿಗಳ ಗಮನಕ್ಕೆ ತರಲು ಬಿಜೆಪಿ ನಾಯಕರು ಈಗಲೂ ಸ್ವತಂತ್ರರಿದ್ದಾರೆ. ಅದನ್ನು ಯಾರೂ ಮಾಡಿದ ಹಾಗಿಲ್ಲ. ರಾಜ್ಯಪಾಲರ ಹುದ್ದೆ ಬಗ್ಗೆ ರಾಜಕೀಯ ಪಕ್ಷಗಳು ತಕರಾರು ಎತ್ತುವುದೇ ವಿರೋಧಪಕ್ಷದಲ್ಲಿದ್ದಾಗ. ಅಧಿಕಾರದಲ್ಲಿದ್ದಾಗ ಅದೇ ರಾಜಭವನವನ್ನು ರಾಜಕೀಯ ಸ್ವಾರ್ಥಕ್ಕೆ ಬಳಸಲು ಅವರು ಹಿಂಜರಿಯುವುದಿಲ್ಲ. ರಾಜ್ಯಪಾಲರಾಗುವವರ ಅರ್ಹತೆ ಮತ್ತು ಅವರ ನೇಮಕವಿಧಾನದ ಬಗ್ಗೆ ಸರ್ಕಾರಿಯಾ ಆಯೋಗ ವಿವರವಾಗಿ ಶಿಫಾರಸುಗಳನ್ನು ಮಾಡಿದೆ. ರಾಜ್ಯಪಾಲರ ಸ್ಥಾನಮಾನದ ಬಗ್ಗೆ ಈಗ ಭಾಷಣ ಮಾಡುತ್ತಿರುವ ಬಿಜೆಪಿ ವಕ್ತಾರ ಅರುಣ್ ಜೇಟ್ಲಿ ಅವರು ಕಾನೂನು ಸಚಿವರಾಗಿದ್ದಾಗ ಅವುಗಳನ್ನು ಯಾಕೆ ಅನುಷ್ಠಾನಕ್ಕೆ ತರಲಿಲ್ಲ?

 ಸ್ವತಂತ್ರಭಾರತದ ರಾಜಕೀಯ ಇತಿಹಾಸದಲ್ಲಿ ಖಳನಾಯಕರಂತೆ ಚಿತ್ರಣಗೊಂಡ ರಾಜ್ಯಪಾಲರಿಗೆ ಸಂಬಂಧಿಸಿದ ಬಹುತೇಕ ವಿವಾದಗಳು ಮೂರು ಸಂದರ್ಭಗಳಲ್ಲಿ ಸೃಷ್ಟಿಯಾದದ್ದು. ಮೊದಲನೆಯದು ಚುನಾವಣೆಯ ನಂತರ ಸರ್ಕಾರ ರಚನೆಗೆ ಮುಂದಾಗುವ ಪಕ್ಷಗಳು ಹೊಂದಿರುವ ಬಹುಮತದ ಬಗ್ಗೆ ನಿರ್ಧಾರ, ಎರಡನೆಯದು ಅವಿಶ್ವಾಸ ಮತಕೋರಿಕೆಯ ಹಿನ್ನೆಲೆಯಲ್ಲಿ ಆಡಳಿತಾರೂಢ ಪಕ್ಷ ಬಹುಮತ ಸಾಬೀತುಪಡಿಸಲು ನಡೆಸುವ ಪ್ರಯತ್ನ. ಮೂರನೆಯದ್ದು ಸಂವಿಧಾನಕ್ಕನುಗುಣವಾಗಿ ಸರ್ಕಾರ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ಆರೋಪ. ಈ ಮೂರೂ ಸಂದರ್ಭಗಳಲ್ಲಿನ ವಿವಾದ ಹಲವಾರು ರಾಜಕೀಯ ಬಿಕ್ಕಟ್ಟುಗಳಿಗೆ ಕಾರಣವಾಗಿವೆ. ಎಷ್ಟೋ ಬಾರಿ ಈ ವಿವಾದಗಳು ನ್ಯಾಯಾಲಯದ ಮೆಟ್ಟಿಲುಗಳನ್ನು ಕೂಡಾ ಹತ್ತಿವೆ. ಇದಕ್ಕೆ ಮುಖ್ಯ ಕಾರಣ ಈ ಮೂರೂ ಸಂದರ್ಭಗಳಲ್ಲಿ ರಾಜ್ಯಪಾಲರ ಕರ್ತವ್ಯಗಳೇನು ಎಂಬುದನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸದೆ ಇರುವುದು.

ಸಂವಿಧಾನದ 164ನೇ ಪರಿಚ್ಚೇದದ ಪ್ರಕಾರ ‘ರಾಜ್ಯಪಾಲರು ಇಚ್ಚಿಸುವವರೆಗೆ ಮುಖ್ಯಮಂತ್ರಿಗಳು ಅಧಿಕಾರದಲ್ಲಿರಬಹುದು’. 356ನೇ ಪರಿಚ್ಚೇದದ ಪ್ರಕಾರ ಸಂವಿಧಾನಕ್ಕನುಗುಣವಾಗಿ ಕಾರ್ಯನಿರ್ವಹಿಸದ ಸರ್ಕಾರವನ್ನು ರಾಜ್ಯಪಾಲರು ವಜಾ ಮಾಡಬಹುದು. ಈ ನಿರ್ಧಾರಗಳನ್ನು ರಾಜ್ಯಪಾಲರು ತಮ್ಮ ವಿವೇಚನೆಯನ್ನು ಬಳಸಿಕೊಂಡು ಕೈಗೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ವಿವೇಚನೆಯ ಅಧಿಕಾರದ ಚಲಾವಣೆಯಲ್ಲಿ ವೈಯಕ್ತಿಕ ಹಿತಾಸಕ್ತಿಗಳು ಕೂಡ ಕೆಲಸ ಮಾಡುವುದರಿಂದ ಮತ್ತು ಅಂತಿಮವಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವೇ ತೀರ್ಮಾನ ಕೈಗೊಳ್ಳುವುದರಿಂದ ಅವು ರಾಜಕೀಯ ವಿವಾದದ ರೂಪು ಪಡೆಯುತ್ತವೆ. ಆದರೆ ರಾಜ್ಯಪಾಲರ ನಿರ್ಧಾರಗಳು ಸಂವಿಧಾನದ ಚೌಕಟ್ಟನ್ನು ಮೀರಿದೆ ಎಂದು ಅನಿಸಿದಾಗೆಲ್ಲ ಸುಪ್ರೀಂಕೋರ್ಟ್ ಮಧ್ಯೆಪ್ರವೇಶಿಸಿ ಪರಿಹಾರವನ್ನು ನೀಡಿದೆ.

ಕರ್ನಾಟಕದಲ್ಲಿನ ಈಗಿನ ರಾಜಕೀಯ ಬಿಕ್ಕಟ್ಟು ಮೇಲೆ ಹೇಳಿರುವ ಮೂರು ಸಂದರ್ಭಗಳಲ್ಲಿ ಸೃಷ್ಟಿಯಾದುದಲ್ಲ. ಇಬ್ಬರು ವಕೀಲರು ಮಾಹಿತಿ ಹಕ್ಕು ಕಾಯಿದೆಯನ್ನು ಬಳಸಿಕೊಂಡು ಮುಖ್ಯಮಂತ್ರಿ ವಿರುದ್ಧದ ಆರೋಪಗಳ ಬಗ್ಗೆ ಸಾಕ್ಷಾಧಾರಗಳನ್ನು ಸಂಗ್ರಹಿಸಿದ್ದಾರೆ.ಅವುಗಳನ್ನು ರಾಜ್ಯಪಾಲರ ಮುಂದಿಟ್ಟು ‘ಭ್ರಷ್ಟಾಚಾರ ನಿಗ್ರಹ ಕಾಯಿದೆ -1988’ ರಡಿಯಲ್ಲಿ ಮುಖ್ಯಮಂತ್ರಿ ಅವರನ್ನು ಪ್ರಾಸಿಕ್ಯೂಟ್ ಮಾಡಲು ಅವಕಾಶ ನೀಡಬೇಕೆಂದು ಕೋರಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ಮುಂದಿರುವ ಸಾಕ್ಷ್ಯಾಧಾರಗಳ ಸತ್ಯಾಸತ್ಯತೆಯನ್ನು ತಮಗೆ ಇರುವ ಅಧಿಕಾರದ ವ್ಯಾಪ್ತಿಯಲ್ಲಿ ದೃಢೀಕರಿಸಿ ಮೇಲ್ನೋಟಕ್ಕೆ ಆರೋಪದಲ್ಲಿ ಹುರುಳಿದೆ ಎಂದು ರಾಜ್ಯಪಾಲರಿಗೆ ಮನವರಿಕೆಯಾದರೆ ಮುಖ್ಯಮಂತ್ರಿಗಳನ್ನು ಪ್ರಾಸಿಕ್ಯೂಟ್ ಮಾಡಲು ಅವಕಾಶ ನೀಡಬಹುದಾಗಿದೆ. ಇದು ರಾಜ್ಯಪಾಲರ ಸಂವಿಧಾನದತ್ತ ಅಧಿಕಾರ, ಅದನ್ನು ಭಾರದ್ವಾಜ ಚಲಾಯಿಸಿದ್ದಾರೆ.  ಆದ್ದರಿಂದ ರಾಜ್ಯಪಾಲರು ತಮ್ಮ ಅಧಿಕಾರದ ದುರುಪಯೋಗ ಮಾಡಿದ್ದಾರೆ ಇಲ್ಲವೇ ಕಾನೂನಿನ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸುವ ಹಾಗಿಲ್ಲ.

ಹೌದು, ರಾಜ್ಯಪಾಲರು ಮನಸ್ಸು ಮಾಡಿದ್ದರೆ ವಕೀಲರ ಮನವಿಯನ್ನು ತಿರಸ್ಕರಿಸಬಹುದಿತ್ತು, ಆದರೆ ಇಂತಹ ಮನವಿಗಳನ್ನು ತಿರಸ್ಕರಿಸಬೇಕೆಂದಾಗಲಿ, ಇಲ್ಲವೇ ಪ್ರಾಸಿಕ್ಯೂಟ್ ಮಾಡಲು ಅವಕಾಶ ನೀಡುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ ಎಂದಾಗಲಿ ಸಂವಿಧಾನದಲ್ಲಿ ಎಲ್ಲೂ ಹೇಳಲಿಲ್ಲ.ಆದ್ದರಿಂದ ರಾಜ್ಯಪಾಲರು ಸಂವಿಧಾನದ ಚೌಕಟ್ಟಿನೊಳಗೆಯೇ ಕರ್ತವ್ಯ ನಿರ್ವಹಿಸಿದ್ದಾರೆ ಎನ್ನುವುದು ಸ್ಪಷ್ಟ. ಅವರಿಂದ ಕಾನೂನಿನ ಉಲ್ಲಂಘನೆಯಾಗಿದೆ ಎಂದಾದರೆ ಪ್ರಶ್ನಿಸಲು ಸುಪ್ರೀಂಕೋರ್ಟ್ ಇದೆ, ಅದಕ್ಕಾಗಿ ಆರೋಪ, ನಿಂದೆ, ಹಾರಾಟ, ಚೀರಾಟ, ಪ್ರತಿಭಟನೆ, ಬಂದ್‌ಗಳ ಅಡಾವುಡಿ ಯಾಕೆ ಬೇಕು?

ರಾಜ್ಯಪಾಲರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಬೇರೆ ಕಾರಣಗಳೂ ಇವೆ. ಮುಖ್ಯಮಂತ್ರಿಗಳ ವಿರುದ್ಧದ ಆರೋಪ ಇದೇ ಮೊದಲ ಸಲ ಕೇಳಿಬಂದದ್ದಲ್ಲ. ಈಗಾಗಲೇ ಲೋಕಾಯುಕ್ತರು ಮತ್ತು ಸರ್ಕಾರವೇ ನೇಮಿಸಿರುವ ತನಿಖಾ ಆಯೋಗ ಇವುಗಳಲ್ಲಿನ ಅನೇಕ ಆರೋಪಗಳ ಬಗ್ಗೆ ತನಿಖೆಯನ್ನೂ ಮಾಡುತ್ತಿವೆ. ಮುಖ್ಯಮಂತ್ರಿಗಳ ವಿರುದ್ಧ ಮೊಕದ್ದಮೆ ಹೂಡಲು ಅವಕಾಶ ನೀಡಬಾರದೆಂದು ರಾಜ್ಯಪಾಲರನ್ನು ಒತ್ತಾಯಿಸಿರುವ ರಾಜ್ಯಸಚಿವ ಸಂಪುಟದ ನಿರ್ಣಯ ಕೂಡಾ ಇದನ್ನು ಉಲ್ಲೇಖಿಸಿದೆ.

ಆರೋಪಗಳಲ್ಲಿ ಕನಿಷ್ಠ ಮೇಲ್ನೋಟದ ಸತ್ಯಾಂಶ ಕೂಡಾ ಇಲ್ಲದೆ ಇದ್ದಲ್ಲಿ ಲೋಕಾಯುಕ್ತರಾದರೂ ಹೇಗೆ ತನಿಖೆಗೆ ಮುಂದಾಗುತ್ತಿದ್ದರು? ರಾಜ್ಯ ಸರ್ಕಾರವಾದರೂ ಯಾಕೆ ಆ ಆರೋಪಗಳ ತನಿಖೆಗೆ ಆಯೋಗವನ್ನು ನೇಮಿಸುತ್ತಿತ್ತು?
ಯಡಿಯೂರಪ್ಪನವರು ತಮ್ಮನ್ನು ಸಮರ್ಥಿಸಿಕೊಳ್ಳಲು ಎರಡು ಆರೋಪಗಳನ್ನು ಮಾಡುತ್ತಿದ್ದಾರೆ. ರಾಜ್ಯಪಾಲರು ವಿರೋಧಪಕ್ಷಗಳ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎನ್ನುವುದು ಮೊದಲನೆಯದು. ಈಗಿನ ವಿರೋಧ ಪಕ್ಷಗಳು ಹಿಂದೆ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ನಡೆಸಿವೆ ಎನ್ನುವುದು ಎರಡನೆಯದು. ಯಡಿಯೂರಪ್ಪನವರು ಹೇಳುತ್ತಿರುವುದು ಒಂದು ರೀತಿಯಲ್ಲಿ ಸರಿಯಾಗಿಯೇ ಇದೆ,

ಹಿಂದಿನವರು ಯಾರೂ ಮಾಡದಿರುವುದನ್ನು ಅವರೇನು ಮಾಡಿಲ್ಲ ನಿಜ. ಆದರೆ ವಿರೋಧಿಗಳ ಭ್ರಷ್ಟಾಚಾರ ಸ್ವಂತ ಭ್ರಷ್ಟಾಚಾರಕ್ಕೆ ಹೇಗೆ ಸಮರ್ಥನೆಯಾಗಬಲ್ಲದು? ಯಾವ ನ್ಯಾಯಾಲಯ ಇದನ್ನು ಒಪ್ಪಿಕೊಳ್ಳುತ್ತದೆ ಎನ್ನುವುದನ್ನು ಮುಖ್ಯಮಂತ್ರಿಯಂತಹ ಜವಾಬ್ದಾರಿ ಸ್ಥಾನದಲ್ಲಿ ಕೂತಿರುವ ಯಡಿಯೂರಪ್ಪನವರೇ ಸ್ಪಷ್ಟಪಡಿಸಬೇಕು. ಇನ್ನೊಂದು ಬಗೆಯಲ್ಲಿ ಈ ಆರೋಪ ಕೂಡಾ ತಿರುಗುಬಾಣವಾಗಿ ಅವರ ವಿರುದ್ಧವೇ ಪ್ರಯೋಗವಾಗುವ ಸಾಧ್ಯತೆ ಕೂಡಾ ಇದೆ ಎನ್ನುವುದು ಅವರಿಗೆ ತಿಳಿದಿಲ್ಲ.
 
ಹಿಂದಿನ ಸರ್ಕಾರಗಳು ಭ್ರಷ್ಟಾಚಾರ ನಡೆಸಿಯೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡಿದ್ದರೆ ಅದಕ್ಕೆ ಆಗಿನ ವಿರೋಧಪಕ್ಷಗಳ ನಿಷ್ಕ್ರಿಯತೆ ಕೂಡಾ ಕಾರಣವಾಗುವುದಿಲ್ಲವೇ? ಆಗ ವಿರೋಧಪಕ್ಷದ ನಾಯಕರಾಗಿದ್ದ ನೀವೇನು ಮಾಡುತ್ತಿದ್ದೀರಿ ಎಂದು ಯಾರಾದರೂ ಪ್ರಶ್ನಿಸಿದರೆ ಯಡಿಯೂರಪ್ಪನವರಲ್ಲಿ ಏನು ಉತ್ತರ ಇದೆ?  ಈಗಾಗಲೇ ಎರಡು ಸಂಸ್ಥೆಗಳು ತನಿಖೆ ನಡೆಸುತ್ತಿರುವಾಗ ಮೂರನೆಯದು ಯಾಕೆ ಎನ್ನುವ ಪ್ರಶ್ನೆಯನ್ನೂ ಕೇಳಲಾಗುತ್ತಿದೆ. ಈ ಪರಂಪರೆಯನ್ನು ಪ್ರಾರಂಭಿಸಿದ್ದು ಬಿಜೆಪಿ ಸರ್ಕಾರವೇ ಅಲ್ಲವೇ? ಲೋಕಾಯುಕ್ತರು ತನಿಖೆ ಮಾಡುತ್ತಿದ್ದ ಪ್ರಕರಣಗಳನ್ನು ಅವರ ಗಮನಕ್ಕೂ ತರದೆ ತಾವೇ ನೇಮಿಸಿದ ತನಿಖಾ ಆಯೋಗಕ್ಕೆ ಒಪ್ಪಿಸಿದಾಗ ಎರಡೆರಡು ತನಿಖೆಗಳು ಸರಿ ಅಲ್ಲ ಎಂದು ಸರ್ಕಾರಕ್ಕೆ ಅನಿಸಲಿಲ್ಲವೇ?

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನಿಜವಾಗಿಯೂ ಈಗ ಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಮೂರು ಬಗೆಯ ತನಿಖೆಯ ಉರುಳು ಅವರನ್ನು ಸುತ್ತುವರಿಯುತ್ತಿದೆ. ಕುರ್ಚಿಯನ್ನು ಉಳಿಸಿಕೊಳ್ಳಲು ಅವರ ಕೈಯಲ್ಲಿ ಈಗ ಹೆಚ್ಚು ಆಯ್ಕೆಗಳು ಉಳಿದಿಲ್ಲ. ಈಗಿನ ಪ್ರತಿಭಟನೆ, ಬಂದ್, ರಾಜ್ಯಪಾಲರ ವಿರುದ್ಧದ ಆರೋಪಗಳ ಗದ್ದಲದಿಂದ ಇನ್ನು ಒಂದಷ್ಟು ದಿನ ಅವರಿಗೆ ಜೀವದಾನ ಸಿಗಬಹುದು.ಆದರೆ ಇದರ ಬಲದಿಂದಲೇ ಅವರು ಮುಖ್ಯಮಂತ್ರಿಯಾಗಿ ಪೂರ್ಣ ಅವಧಿಯನ್ನು ಮುಗಿಸುವುದು ಸಾಧ್ಯವಾಗಲಾರದು.ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ.
 
ರಾಜಕೀಯದ ಆಟಗಳಿಗೆ ನಿಯಮಗಳಿಲ್ಲದೆ ಇರಬಹುದು. ಆದರೆ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯದ ಆಟವನ್ನು ಸಂವಿಧಾನದ ಗಡಿರೇಖೆಯೊಳಗೆ ಆಡಬೇಕಾಗುತ್ತದೆ, ಆಗ ಅಲ್ಲಿನ ಆಟದ ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ. ತಪ್ಪಿದರೆ ಮೈದಾನದಿಂದ ಹೊರಬೀಳುವುದು ಅನಿವಾರ್ಯವಾಗುತ್ತದೆ. ಅಂತಹದ್ದೊಂದು ಪರಿಸ್ಥಿತಿಯನ್ನು ಯಡಿಯೂರಪ್ಪ ತಾವೇ ಸೃಷ್ಟಿಸಿಕೊಂಡಿದ್ದಾರೆ.

ಅಪರಾಧ ಸಾಬೀತು ಆಗುವ ವರೆಗೆ ವ್ಯಕ್ತಿ ಆರೋಪಿಯೇ ಹೊರತು ಅಪರಾಧಿ ಅಲ್ಲ ಎನ್ನುವ ಕಾನೂನುಶಾಸ್ತ್ರದ ಚುಂಗು ಹಿಡಿದು ಯಡಿಯೂರಪ್ಪನವರು ಈಗಲೂ ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನ ಮಾಡಬಹುದು. ಆರೋಪಗಳು ಎದುರಾದ ಮಾತ್ರಕ್ಕೆ ಇಲ್ಲವೇ ತನಿಖೆ ಪ್ರಾರಂಭವಾದರೆ ಕಾನೂನು ಪ್ರಕಾರ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕಾಗಿಲ್ಲ. ಆದರೆ ಭಿನ್ನ ಬಗೆಯ ರಾಜಕೀಯದ ಆದರ್ಶದ ಮಾತುಗಳನ್ನಾಡುತ್ತಾ ಬಂದಿರುವ ಭಾರತೀಯ ಜನತಾ ಪಕ್ಷ ನೈತಿಕ ಪ್ರಶ್ನೆಗೆ ಉತ್ತರಿಸದೆ ಮುಖ ತಿರುಗಿಸಲು ಹೇಗೆ ಸಾಧ್ಯ? ಇದೇ ಬಗೆಯ ಆರೋಪಗಳು ಎದುರಾದಾಗ ನಟವರ್‌ಸಿಂಗ್ ಅವರಿಂದ ಹಿಡಿದು ಅಶೋಕ್ ಚವಾಣ್ ವರೆಗೆ ತಮ್ಮ ನಾಯಕರನ್ನು ಸಾಲುಸಾಲಾಗಿ ಮನೆಗೆ ಕಳುಹಿಸಿದ ಕಾಂಗ್ರೆಸ್ ಪಕ್ಷವನ್ನು ವಿರೋಧಪಕ್ಷದ ಸ್ಥಾನದಲ್ಲಿ ಕೂತು ಬಿಜೆಪಿ ಈಗಿನ ಕಳಂಕಿತ ಮುಖ ಹೊತ್ತು ಹೇಗೆ ಎದುರಿಸಲಿದೆ? ಜೈನ್ ಹವಾಲ ಪ್ರಕರಣದಲ್ಲಿ ಡೈರಿಯಲ್ಲಿ ತಮ್ಮ ಹೆಸರನ್ನು ಹೋಲುವ ಅಕ್ಷರಗಳು ಇದ್ದ ಕಾರಣಕ್ಕೆ ಎಲ್.ಕೆ.ಅಡ್ವಾಣಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದನ್ನು ಇಂದಿನ ಬಿಜೆಪಿ ನಾಯಕರು ಮರೆತೇ ಬಿಟ್ಟಿದ್ದಾರೆ. ಭಾರತೀಯ ಜನತಾಪಕ್ಷದ್ದು ಎಂತಹ ನೈತಿಕ ಅಧಃಪತನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT