ಪ್ರೀತಿ ಪಾತ್ರರ ಸಾವು ನಮ್ಮನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತದೆ. ಚಿಕ್ಕಮಕ್ಕಳಿಗಂತೂ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಿದ್ದಾಗ. ಸಾವಿನ ಶೋಕದಿಂದ ಹೊರತರುವುದು ಹೇಗೆ ಎನ್ನುವ ಬಗ್ಗೆ ತಜ್ಞರು ನೀಡಿದ ಸಲಹೆ ಇಲ್ಲಿದೆ.
ನನ್ನ ಸ್ನೇಹಿತೆಯ ಮಗಳಿಗೆ ಹದಿಮೂರು ವರ್ಷ. ಈಚೆಗೆ ತಂದೆಯನ್ನು ಕಳೆದುಕೊಂಡಿದ್ದಾಳೆ. ಯಾವುದರಲ್ಲಿಯೂ ಆಸಕ್ತಿ ಇಲ್ಲ. ಶೂನ್ಯದಲ್ಲಿ ದಿಟ್ಟಿಸುತ್ತ ಕೂರುತ್ತಾಳೆ. ವಿನಾಕಾರಣ ಎಂಬಂತೆ ದುಃಖಿಸುತ್ತಾಳೆ. ಏಕಾಂಗಿಯಾಗಿರಲು ಬಯಸುತ್ತಾಳೆ. ಸದಾ ಕಣ್ಣೀರು ಹಾಕುತ್ತಾಳೆ. ಈ ಹತಾಶೆ ಅಥವಾ ನಿರಂತರ ಶೋಕದಿಂದ ಆಚೆ ತರುವುದು ಹೇಗೆ? ಆಪ್ತಸಮಾಲೋಚನೆಯ ಅಗತ್ಯವಿದೆಯೇ? ಮನೆಯಲ್ಲಿಯೇ ನೀಡಬಹುದಾದ ಭಾವನಾತ್ಮಕ ಬೆಂಬಲದ ಕುರಿತೂ ಚೂರು ಹೇಳಿ
ಸಾಮಾನ್ಯವಾಗಿ ಒಂದು ಮಾತಿದೆ. ಮಗಳಿಗೆ ತಂದೆಯ ಜೊತೆ ಮತ್ತು ಮಗನಿಗೆ ತಾಯಿಯ ಜೊತೆ ಹೆಚ್ಚಿನ ಆಪ್ತತೆ ಇರುತ್ತದೆ ಅಂತ. ಇದು ಮನೋವೈಜ್ಞಾನಿಕವಾಗಿಯೂ ಒಪ್ಪಿತವಾದದ್ದೇ. ಅಂತೆಯೇ, ಈ ೧೩ ವರ್ಷದ ಕೂಸಿಗೆ ಕೂಡಾ ತನ್ನ ತಂದೆಯ ಜೊತೆ ಬಹಳ ಆಪ್ತತೆ ಇದ್ದಿರಬೇಕು. ಹಾಗಿರುವಾಗ, ಅವರನ್ನು ಕಳೆದುಕೊಂಡ ದುಃಖ ಆಕೆಯನ್ನು ಅತಿಯಾಗಿ ಕಾಡುತ್ತಿದೆ.
ನಮ್ಮ ಜೀವನದಲ್ಲಿ ಬಹಳ ಹತ್ತಿರವಿರುವಂತಹ ಯಾವುದೇ ಒಬ್ಬ ವ್ಯಕ್ತಿ ಇನ್ನಿಲ್ಲವಾದಾಗ ಅದು ಉಂಟುಮಾಡುವಂತಹ ಖಾಲಿತನವನ್ನು ವಿವರಿಸುವುದಕ್ಕೆ ಸಾಧ್ಯವಿಲ್ಲ. ಹಾಗಂತ ಅದೇ ಮನಸ್ಥಿತಿಯಲ್ಲಿ ಉಳಿದುಬಿಟ್ಟರೆ ಅದು ಇನ್ನಷ್ಟು ತೊಂದರೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಆಕೆಯನ್ನು ದುಃಖದ ಮಡುವಿನಿಂದ ಹೊರತರುವುದು ಅಗತ್ಯ. ಕಳೆದುಕೊಂಡು ಒಂದಷ್ಟು ದಿನ ಕಳೆದ ಮೇಲೆ, ನಿಧಾನವಾಗಿ ಅದರಿಂದ ಹೊರಬರುವುದಕ್ಕೆ ಸಹಾಯ ಮಾಡಬೇಕು. ಅದಕ್ಕೆ ಮನಶ್ಶಾಸ್ತ್ರೀಯ ಚಿಕಿತ್ಸೆ ಕೊಡಿಸಿದರೆ ಒಳ್ಳೆಯದು. ಅದಕ್ಕೂ ಮೊದಲು ಆಕೆಯ ತಾಯಿ ಆಕೆಗೆ ಧೈರ್ಯವನ್ನು ತುಂಬಬೇಕು. ತಾನು ಆಕೆಯ ಜೊತೆಗಿದ್ದೇನೆ ಎನ್ನುವ ಭರವಸೆಯನ್ನು ಮೂಡಿಸಬೇಕು. ಮತ್ತು ತಂದೆಯಿಂದ ಕಲಿತಿರುವಂತಹ ಉತ್ತಮ ಗುಣಗಳನ್ನು, ಹವ್ಯಾಸಗಳನ್ನು, ಮೌಲ್ಯಗಳನ್ನು ಮತ್ತು ಜೀವನ ಕೌಶಲ್ಯಗಳನ್ನು ತನ್ನ ಜೀವನದಲ್ಲಿ ಉತ್ತಮ ರೀತಿಯಲ್ಲಿ ಅಳವಡಿಸಿಕೊಂಡು, ತನ್ನ ಜೀವನದ ಗುರಿಯನ್ನು ಸಾಧಿಸುವತ್ತ ಪ್ರೇರೇಪಿಸಬೇಕು. ಭೌತಿಕವಾಗಿ ಆಕೆಯ ತಂದೆ ಇಲ್ಲವಾದಾರೂ, ಮಾನಸಿಕವಾಗಿ ಅವರನ್ನು ಆಕೆ ತನ್ನ ಹೃದಯದಲ್ಲಿ ಇಟ್ಟುಕೊಂಡು ತನ್ನ ಜೀವನದ ಮಜಲುಗಳನ್ನು ಹತ್ತುತ್ತಾ, ತಂದೆಗೆ ಅವರು ತೋರಿಸಿರುವ ಮಾರ್ಗದರ್ಶನಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ ಮುಂದುವರಿಯುವಂತೆ ಪೋಷಿಸಬೇಕು. ಹಾಗೆ ಮಾಡಿದಾಗ, ಆಕೆಯಲ್ಲಿ ಜೀವಿಸುವ ಪ್ರವೃತ್ತಿ (Living instinct) ಹೆಚ್ಚುತ್ತದೆ. ಮತ್ತು ಅಂತಃಶಕ್ತಿ ವೃದ್ಧಿಸುತ್ತದೆ.
ಇದಿಷ್ಟೂ ಮಾಡಿದ ಮೇಲೂ ವ್ಯತ್ಯಾಸ ಕಂಡು ಬರದಿದ್ದಲ್ಲಿ, ದಯವಿಟ್ಟು ಮನಃಶ್ಶಾಸ್ತ್ರಜ್ಞರ ಬಳಿ ಕರೆದುಕೊಂಡು ಹೋಗಿ. ಆಕೆಯನ್ನು ಚಿತ್ರ ಬಿಡಿಸುವ ಅಥವಾ ಕವನ ರಚಿಸುವ ಅಥವಾ ಇನ್ಯಾವುದಾದರೂ ಆಕೆಗೆ ಇಷ್ಟವಾಗುವ ಒಂದಷ್ಟು ಹೊಸ ಹವ್ಯಾಸಗಳಿಗೂ ಹಚ್ಚಬಹುದು.
ಉದಾಹರಣೆಗೆ ಹೇಳುವುದಾದರೆ,
ಇತ್ತೀಚೆಗೆ ಒಬ್ಬ ೧೭ ವರ್ಷದ ಹುಡುಗ ಒಂದು ವಾಹನ ಅಪಘಾತದಲ್ಲಿ ತನ್ನ ತಮ್ಮನನ್ನು ಕಳೆದುಕೊಂಡ. ತಮ್ಮನ ಜೊತೆಗೆ ಬಹಳ ಆಪ್ತವಾಗಿದ್ದ ಆತನಿಗೆ ಈ ಆಘಾತವನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಎರಡು ದಿನ ನಿರಂತರವಾಗಿ ಅತ್ತುಕೊಂಡು, ಊಟ - ತಿಂಡಿ ಏನನ್ನೂ ತಿನ್ನದೇ ನಿದ್ದೆಯನ್ನೂ ಮಾಡದೆ ಇದ್ದ. ಆತನ ಸ್ನೇಹಿತೆ ನನ್ನನ್ನು ಸಂಪರ್ಕಿಸಿ ಏನು ಮಾಡಬಹುದು ಎಂದು ಕೇಳಿದಾಗ, ನಾನು ಮೇಲೆ ಹೇಳಿದಂತಹ ಕೆಲವೊಂದು ಚಟುವಟಿಕೆಗಳನ್ನು ಮಾಡಿಸಲು ಹೇಳಿದೆ. ಮತ್ತೆರಡು ಮೂರು ದಿನಗಳಲ್ಲಿ ಆ ಬಾಲಕ ಎಷ್ಟು ಧೈರ್ಯವನ್ನು ತಂದುಕೊಂಡ ಎಂದರೆ, ತನ್ನ ತಮ್ಮ ಏನು ಮಾಡಬೇಕು ಅಂತ ಇದ್ದನೋ, ಅವೆಲ್ಲವನ್ನೂ ತನ್ನ ಕನಸುಗಳ ಜೊತೆಗೆ ಜೋಡಿಸಿಕೊಂಡು ಸಾಕಾರಗೊಳಿಸುವ ದೃಢ ನಿರ್ಧಾರವನ್ನು ತೆಗೆದುಕೊಂಡು ಮತ್ತೆ ತನ್ನ ಕೈಂಕರ್ಯದಲ್ಲಿ ತೊಡಗಿದ.
ಹೀಗೆ, ಎಷ್ಟೋ ಬಾರಿ, ಕಳೆದುಕೊಂಡ ದುಃಖವನ್ನು ಭರಿಸುವ ಶಕ್ತಿಯನ್ನು ನಾವು ಅವರ ಜೊತೆಗಿದ್ದೇವೆ ಎನ್ನುವ ಬೆಂಬಲವನ್ನು ವ್ಯಕ್ತಪಡಿಸುವ ಮೂಲಕ ತುಂಬಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.