ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಿ ಅರ್ಥ ವ್ಯವಸ್ಥೆಯಲ್ಲಿ ಆಶಾದಾಯಕ ಬೆಳವಣಿಗೆ

Last Updated 11 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಕಳೆದ ವಾರದಿಂದ ಈಚೆಗೆ ದೇಶಿ ಷೇರು­ಪೇಟೆಯಲ್ಲಿ ಖರೀದಿ ಉತ್ಸಾಹ ಮತ್ತೆ ಗರಿಗೆದರಿದೆ.  ಸಂವೇದಿ ಸೂಚ್ಯಂಕವು ದಿನೇ ದಿನೇ ಹೊಸ ದಾಖಲೆ ಬರೆಯು­ತ್ತಿದೆ. ಮುಂಬೈ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರುಪೇಟೆ­ಗಳಲ್ಲಿ ವಹಿ­ವಾಟು ಹಠಾತ್ತಾಗಿ ಏರಿಕೆ ಕಂಡಿದೆ. ಪೇಟೆಯಲ್ಲಿ ಇದುವರೆಗೆ ನಿಷ್ಕ್ರಿಯ­ಗೊಂಡಿದ್ದ ಷೇರುಗಳೆಲ್ಲ ಈ ಅನಿರೀಕ್ಷಿತ ಬೆಳವಣಿಗೆಯಿಂದ ಮೈಕೊಡವಿಕೊಂಡು ಉತ್ಸಾಹದ ವಹಿವಾಟು ಎದುರು ನೋಡುತ್ತಿವೆ. ಬಿಎಸ್ಇ ಸಂವೇದಿ ಸೂಚ್ಯಂಕವು ಹೊಸ ಎತ್ತರಕ್ಕೆ ತಲು­ಪಿದ್ದು, ಇನ್ನಷ್ಟು ಏರಿಕೆ ಕಾಣುವ ತವಕದಲ್ಲಿ ಇದೆ. ಇನ್ನೊಂದೆಡೆ ರೂಪಾಯಿ ಮೌಲ್ಯವು ಡಾಲರ್ ಎದುರು ಬಲಗೊಳ್ಳುತ್ತಿದ್ದು, ವಿನಿಮಯ ದರ ಸ್ಥಿರಗೊಳ್ಳುತ್ತಿದೆ.

ಈ ಮಧ್ಯೆ, ಇನ್ನೊಂದು ಬೆಳವಣಿ­ಗೆಯಲ್ಲಿ, ಅಮೆರಿಕ ಸರ್ಕಾರದ ಖಜಾನೆಯು ಮಾರುಕಟ್ಟೆ­ಯಿಂದ ಸಾಲ­ಪತ್ರಗಳ ಖರೀದಿ ಪ್ರಕ್ರಿಯೆ ಕಡಿಮೆ ಮಾಡಿದೆ. ಇದರಿಂದ ಅಮೆರಿಕದ ಹಣಕಾಸು ಮಾರುಕಟ್ಟೆಗೆ ಹಣದ ಹರಿವು ಕಡಿಮೆಯಾಗಿದೆ.  ಹೋದ ವರ್ಷ ಅಮೆರಿಕದ ಕೇಂದ್ರೀಯ ಬ್ಯಾಂಕ್ ಕೈಗೊಂಡಿದ್ದ ಇದೇ ಬಗೆಯ ಕ್ರಮಗಳಿಂದ ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ತಲ್ಲಣ ಮೂಡಿತ್ತು.  ಅಮೆರಿಕದ ಫೆಡರಲ್ ರಿಸರ್ವ್‌ನ ಹಿಂದಿನ ಮುಖ್ಯಸ್ಥ ಬೆನ್ ಬೆರ್ನಂಕೆ ಅವರು ಇದೇ ಬಗೆಯ ಕ್ರಮಗಳನ್ನು ಕೈಗೊಂಡಿದ್ದಾಗ ಭಾರತದ ಮೇಲೂ ತೀವ್ರ ಪರಿಣಾಮ ಉಂಟಾಗಿತ್ತು.

  ಭಾರತದ ಹಣಕಾಸು ಮಾರುಕಟ್ಟೆ, ಷೇರುಪೇಟೆ ಮತ್ತು ವಿದೇಶಿ ವಿನಿಮಯ ವಹಿವಾಟಿನ ಮೇಲೆ ಇದರ ಪರಿಣಾಮ ತೀವ್ರವಾಗಿತ್ತು.  ಆಗ ಡಾಲರ್ ಎದುರಿಗಿನ ರೂಪಾಯಿ ವಿನಿಮಯ ದರವು ಗರಿಷ್ಠ ಪ್ರಮಾಣ­ದಲ್ಲಿ ಕುಸಿತ ದಾಖಲಿ­ಸಿತ್ತು. ಒಂದು ಡಾಲರ್‌ಗೆ ₨ ದರ 65ಕ್ಕೆ ಕುಸಿದಿತ್ತು. ಷೇರುಪೇಟೆಯಲ್ಲಿಯೂ ತಲ್ಲಣ ಉಂಟಾಗಿತ್ತು. ಸಂವೇದಿ ಸೂಚ್ಯಂಕವೂ ದಾಖಲೆ ಪ್ರಮಾಣದಲ್ಲಿ ಕುಸಿದಿತ್ತು. ಆದರೆ, ಈ ಬಾರಿ ಭಾರತದ ಮೇಲೆ ಇಂತಹ ಕ್ರಮ ಯಾವುದೇ ಪ್ರತಿಕೂಲ ಪರಿಣಾಮ ಬೀರಿಲ್ಲ.

ಈ ಬಾರಿ ರೂಪಾಯಿ ವಿನಿಮಯ ದರದ ಹೆಚ್ಚಳ ಮತ್ತು ಷೇರುಪೇಟೆ­ಯಲ್ಲಿನ ಸದ್ಯದ ಉತ್ಸಾಹವು ಹೊಸ ಭರವಸೆ ಮೂಡಿಸಿದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್, ಸಾಲಪತ್ರಗಳ ಖರೀದಿ ಪ್ರಮಾಣ ತಗ್ಗಿಸಿರುವುದು ದೇಶದ ಹಣಕಾಸು ಪೇಟೆಯ ಮೇಲೆ ಸದ್ಯಕ್ಕೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ.

2013ರ ಜುಲೈನಲ್ಲಿ ದೇಶದ ಹಣಕಾಸು ಮಾರುಕಟ್ಟೆಯಿಂದ ವಿದೇಶಿ ಬಂಡವಾಳವು ಭಾರಿ ಪ್ರಮಾಣದಲ್ಲಿ ದೇಶದಿಂದ ಹೊರ ಹೋಯಿತು. ವಿದೇಶಿ ಸಾಂಸ್ಥಿಕ  ಹೂಡಿಕೆ­ದಾರರು (ಎಫ್‌ಐಐ) ಗಮನಾರ್ಹ ಪ್ರಮಾಣ­ದಲ್ಲಿ ಬಂಡ­ವಾಳವನ್ನು ದೇಶದಿಂದ ಹೊರಗೆ ಸಾಗಿಸಿದರು. ಪೇಟೆಯಲ್ಲಿ ಏನಾಗುತ್ತಿದೆ ಎನ್ನುವ ಅರಿವಿಲ್ಲದೇ  ಷೇರು ಮಾರು­ಕಟ್ಟೆಯು ಇದನ್ನೆಲ್ಲ ಅಸಹಾಯಕತೆ­ಯಿಂದ ಮೂಕ ಪ್ರೇಕ್ಷಕನಂತೆ ನೋಡುತ್ತ ನಿಲ್ಲಬೇಕಾಯಿತು.

ಅಂತಹ ವಿದ್ಯಮಾನಕ್ಕೆ ಪ್ರತೀಕಾರ ಎಂಬಂತೆ ಈಗ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರು­ಕಟ್ಟೆಗೆ ಮರಳಿ ಬಂದಿದ್ದಾರೆ. ದೇಶಿ ಪೇಟೆಯಿಂದ  ಭಾರಿ ಪ್ರಮಾಣದಲ್ಲಿ ಬಂಡವಾಳ ಹೊರಗೆ ಸಾಗಿಸಿದ್ದ ವಿದೇಶಿ ಸಾಂಸ್ಥಿಕ ಹೂಡಿಕೆ­ದಾರರ ಪಾಲಿಗೆ ಭಾರತದ ಷೇರುಪೇಟೆ ಈಗ ಮತ್ತೆ ಹೆಚ್ಚು ಆಕರ್ಷಕವಾಗಿ ಕಂಡಿದೆ. ಈ ಅವಕಾಶ ಬಾಚಿಕೊಳ್ಳಲು ಅವರೆಲ್ಲ ಮುಂದಾಗಿ­ದ್ದಾರೆ.

ಮುಂಬೈ ಷೇರುಪೇಟೆಯ ಇತ್ತೀಚಿನ ವಹಿ­ವಾಟಿನ ದಿನಗಳಲ್ಲಿ 100 ಕೋಟಿ ಡಾಲರ್‌­ಗಳಷ್ಟು (₨ 6200 ಕೋಟಿ) ಬಂಡವಾಳವು ಹೂಡಿಕೆ­ಯಾಗಿರುವ ಅಂದಾಜಿದೆ. ಇದು ದಿನೇ ದಿನೇ ಹೆಚ್ಚುತ್ತಲೇ ಸಾಗಿದೆ. ವಿದೇಶಿ ವಿನಿಮಯ ಪರಿಸ್ಥಿತಿಯೂ ಚೇತೋಹಾರಿಯಾಗಿದೆ. ಅಮೆ­ರಿಕದ ಡಾಲರ್ ಎದುರು ರೂಪಾಯಿ ವಿನಿ­ಮಯ ದರ ಹಿಂದೊಮ್ಮೆ ₨ 67ಕ್ಕೆ ಕುಸಿದಿತ್ತು. ಕಳೆದ ವಾರದ ಹೊತ್ತಿಗೆ ಈ ವಿನಿಮಯ ದರ ₨61ಕ್ಕೆ ತಲುಪಿತ್ತು. ಹೆಚ್ಚುತ್ತಿರುವ ವಿದೇಶಿ ಸಾಂಸ್ಥಿಕ ಹೂಡಿಕೆಯ ಫಲವಾಗಿ ರೂಪಾಯಿ ಮೌಲ್ಯ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.
ಚಾಲ್ತಿ ಖಾತೆ ಪರಿಸ್ಥಿತಿಯೂ ಇತ್ತೀಚಿನ ತ್ರೈಮಾಸಿಕ ಅವಧಿಯಲ್ಲಿ ನಾಟಕೀಯವಾಗಿ ಸುಧಾ­ರಿಸಿದೆ. ಚಿನ್ನದ ಆಮದು ನಿರ್ಬಂಧ­ಗೊಳಿಸಲು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡ ಕಠಿಣ ಕ್ರಮಗಳು ಫಲ ನೀಡಿವೆ.

ಗಂಡಾಂತರಕಾರಿ ಮಟ್ಟ ತಲುಪಿದ್ದ ಚಾಲ್ತಿ ಖಾತೆ ಕೊರತೆಯು (ಆಮದು ಮತ್ತು ರಫ್ತು ಅಂತರ) ಹಠಾತ್ತಾಗಿ ಕಡಿಮೆಯಾಗುತ್ತಿದ್ದು,  ವರ್ಷಾಂತ್ಯದ ಹೊತ್ತಿಗೆ ಒಟ್ಟಾರೆ ಪರಿಸ್ಥಿತಿ ಗಮನಾರ್ಹ ಸುಧಾರಣೆ ಕಾಣುವ ನಿರೀಕ್ಷೆ ಇದೆ. ರಫ್ತು ಪ್ರಮಾಣ ಹೆಚ್ಚಳಗೊಂಡಿರುವುದು ಮತ್ತು ಆಮದು ಗಮನಾರ್ಹವಾಗಿ ಕಡಿಮೆಯಾಗಿರು­ವುದರಿಂದ ಚಾಲ್ತಿ ಖಾತೆ ಕೊರತೆ ಸಮಸ್ಯೆ ನಿಧಾನವಾಗಿ ದೂರವಾಗುತ್ತಿದೆ. ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಮತ್ತು ಆರ್‌ಬಿಐ ಗವರ್ನರ್ ರಘುರಾಂ ರಾಜನ್ ಅವರ ಜಂಟಿ ಪ್ರಯತ್ನಗಳು ಅರ್ಥ ವ್ಯವಸ್ಥೆಗೆ ಉತ್ತಮ ಕೊಡುಗೆ ನೀಡುತ್ತಿರುವುದು ಅನುಭವಕ್ಕೆ ಬರುತ್ತಿದೆ.

ನಾನು ಇತ್ತೀಚೆಗೆ ಬ್ರೆಜಿಲ್‌ಗೆ ಭೇಟಿ­ಕೊಟ್ಟಾಗ ಆ ದೇಶದ ಅರ್ಥ ವ್ಯವಸ್ಥೆ ಕುಂಠಿತಗೊಂಡಿರು ವುದು ಅನುಭವಕ್ಕೆ ಬಂದಿತು. ಉದ್ಯಮ ವಹಿವಾಟಿನ ಉತ್ಸಾಹ ತಗ್ಗಿರುವ ಬಗ್ಗೆ ಮತ್ತು  ಸಂಭವನೀಯ ಸವಾಲುಗಳ ಬಗ್ಗೆ    ಸ್ಥಳೀಯ ಮಾಧ್ಯಮಗಳಲ್ಲಿ ಲೇಖನಗಳು  ಪ್ರಕಟ ವಾಗಿದ್ದವು. ಆರ್ಥಿಕ ವೃದ್ಧಿ ದರವು ಶೇ 2ಕ್ಕಿಂತ ಕಡಿಮೆ ಇರುವುದು ಮತ್ತು ಚಾಲ್ತಿ ಖಾತೆ ಸಮತೋಲನವು ಒತ್ತಡ­ದಲ್ಲಿ ಇರುವುದು ಇಂತಹ ಲೇಖನಗಳಿಂದ ತಿಳಿದು ಬಂದಿತು. ಒಂದು ವರ್ಷದಲ್ಲಿ ಅಲ್ಲಿನ ಕರೆನ್ಸಿಯು ಶೇ 20ರಷ್ಟು ಅಪಮೌಲ್ಯಗೊಂಡಿದೆ. ಅಲ್ಲಿನ ಬ್ಯಾಂಕ್ ಬಡ್ಡಿ ದರಗಳು ವಿಶ್ವದಲ್ಲಿಯೇ ಅತಿ ದುಬಾರಿಯಾಗಿದ್ದು, ಉದ್ದಿಮೆ ವಹಿವಾಟು ವಿಸ್ತರಣೆಗೆ ನೆರವಾಗುತ್ತಿಲ್ಲ.

ಚೀನಾದಲ್ಲಿನ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಆರ್ಥಿಕ ವೃದ್ಧಿ ದರದ ಕುಸಿತ ಆರಂಭಗೊಂಡಿದೆ. ಇದೇ ಮೊದಲ ಬಾರಿಗೆ ಚೀನಾದ ಕರೆನ್ಸಿಯು ದುರ್ಬಲಗೊಂಡಿರು­ವುದಲ್ಲದೇ ಬಾಂಡ್‌ಗಳ ಹಣ ಮರು ಪಾವತಿ ಸಾಧ್ಯವಾಗದ ಪರಿಸ್ಥಿತಿ ಉದ್ಭವಿಸಿದೆ.  ಹಣಕಾಸು ಮಾರು­ಕಟ್ಟೆ ಉದಾರೀಕರಣಗೊಳಿಸಿದ ನಂತರ ಮೊದಲ ಬಾರಿಗೆ ಇಂತಹ ಪರಿ­ಸ್ಥಿತಿ ಉದ್ಭವಿಸಿದೆ. ಚೀನಾ ಕಮ್ಯುನಿಸ್ಟ್ ಪಕ್ಷವು ಆರ್ಥಿಕ ಬೆಳವಣಿಗೆ ಮಂದ­ಗೊಳಿಸಲು, ಭ್ರಷ್ಟಾಚಾರ ನಿಗ್ರಹ ಮತ್ತು ಪರಿಸರ ರಕ್ಷಣೆ ವಿದ್ಯಮಾನಗಳತ್ತ ಹೆಚ್ಚು ಗಮನ ನೀಡಲು ನಿರ್ಧರಿಸಿದೆ.

ಸಾಮಾಜಿಕ ಕಾರಣಗಳ ಮಹತ್ವವು ಚೀನಾ ಸರ್ಕಾರಕ್ಕೆ ಕೊನೆಗೂ ಮನವರಿಕೆ­ಯಾಗಿರುವಂತೆ ಭಾಸವಾಗುತ್ತದೆ. ಇದೇ ಕಾರಣಕ್ಕೆ ‘ಕುಟುಂಬಕ್ಕೆ ಒಂದೇ ಮಗು’ ನಿಯಮ ಸಡಿಲಿಸಿದೆ.  ಕಠಿಣ ಸ್ವರೂಪದ ಸಾಲ ನೀತಿಯಿಂದಾಗಿ ಚೀನಾದ ಬ್ಯಾಂಕಿಂಗ್ ವ್ಯವಸ್ಥೆಯು ತೀವ್ರ ಒತ್ತಡಕ್ಕೆ ಸಿಲು­ಕಿದೆ. ಕೇಂದ್ರೀಯ ಬ್ಯಾಂಕ್ ಸಾಲದ ಬಡ್ಡಿ ದರ­ಗಳನ್ನು ನಿಯಂತ್ರಿಸುತ್ತಿದೆ. ಈ ಎಲ್ಲ ಕಾರಣಗಳು ಆರ್ಥಿಕ ವೃದ್ಧಿಯ ಉತ್ಸಾಹ ಉಡುಗಿಸಿವೆ. ಆದಾಗ್ಯೂ ಚೀನಾದ ಅರ್ಥ ವ್ಯವಸ್ಥೆಯು ಶೇ 7 ರಿಂದ ಶೇ 8ರ ವೃದ್ಧಿ ದರದ ಬೆಳವಣಿಗೆ ಕಾಣುತ್ತಿದೆ. ಈ ಹಿಂದಿನ ಮೂರು ದಶಕ­ಗಳಲ್ಲಿನ ಎರಡಂಕಿಯ ಬೆಳವಣಿಗೆಗೆ ಹೋಲಿಸಿದರೆ ಇದು ಕಡಿಮೆ ಮಟ್ಟದಲ್ಲಿ ಇದೆ.

ಇನ್ನೊಂದೆಡೆ ರಷ್ಯಾದ ಅರ್ಥ ವ್ಯವಸ್ಥೆಯೂ ಇತ್ತೀಚಿನ ವರ್ಷಗಳಲ್ಲಿ ಗಮನಿಸಬೇಕಾದ ಸಾಧನೆ­ಯನ್ನೇನೂ ಮಾಡುತ್ತಿಲ್ಲ. ಉಕ್ರೇನ್ ಜತೆಗಿನ ರಾಜಕೀಯ ಸಂಘರ್ಷದ ಕಾರಣಕ್ಕೆ ವಿಶ್ವ ಸಮುದಾಯದ ಕಣ್ಣಲ್ಲಿ ಅದರ ಪ್ರತಿಷ್ಠೆಗೂ ಈಗ ಧಕ್ಕೆ ಒದಗಿದೆ.
‘ಬ್ರಿಕ್ಸ್’ ದೇಶಗಳ ಇನ್ನೊಂದು ಸದಸ್ಯ ದೇಶ­ವಾಗಿರುವ ದಕ್ಷಿಣ ಆಫ್ರಿಕಾ­ದಲ್ಲಿಯೂ ಇದೇ ಬಗೆಯ ನಿರುತ್ಸಾಹದ ಆರ್ಥಿಕ ಬೆಳವಣಿಗೆಯ ಚಿತ್ರಣ ಇದೆ. ಹಣದುಬ್ಬರ ಮತ್ತು ಚಾಲ್ತಿ ಖಾತೆ ಕೊರತೆ ಸಮಸ್ಯೆ ತೀವ್ರವಾಗಿದೆ.

ವಿಶ್ವದ ಇತರ ಪ್ರಮುಖ ದೇಶಗಳ ಅರ್ಥ ವ್ಯವಸ್ಥೆಗೆ ಹೋಲಿಸಿದರೆ ಭಾರ­ತದ ಅರ್ಥ ವ್ಯವಸ್ಥೆಯ ಚಿತ್ರಣ ಹೆಚ್ಚು ಆಶಾದಾಯಕ­ವಾಗಿದೆ. ಅಂತರ­ರಾಷ್ಟ್ರೀಯ ನಿಧಿಗಳು ಭಾರತದ ಬಗ್ಗೆ ಸಕಾರಾತ್ಮಕ ನಿಲುವು ತಳೆದಿವೆ. ಇದೇ ಕಾರಣಕ್ಕೆ ದೇಶದ ಷೇರುಪೇಟೆಗೆ ವಿದೇಶಿ ಬಂಡವಾಳವು ಗಮನಾರ್ಹ ಪ್ರಮಾಣ­ದಲ್ಲಿ ಹರಿದು ಬರುತ್ತಿದೆ.

ದೇಶದಲ್ಲಿ ನಡೆಯಲಿರುವ ಸಾರ್ವ­ತ್ರಿಕ ಚುನಾವಣೆಯೂ ಬಂಡವಾಳ ಹೂಡಿಕೆದಾರರ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಿದೆ. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಗೆಲುವಿನ ಬಗ್ಗೆ ಅಂತರರಾಷ್ಟ್ರೀಯ ಸಂಸ್ಥೆಗಳು ನುಡಿ­ದಿರುವ ಭವಿಷ್ಯವೂ ಷೇರುಪೇಟೆಯ ವಹಿ­ವಾಟಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.

ಚುನಾವಣಾ ಫಲಿತಾಂಶ ಪ್ರಕಟ­ವಾಗುವ ಮುಂಚಿನ ಎರಡು ತಿಂಗಳ ಅವಧಿಯು ದೇಶದ ಅರ್ಥ ವ್ಯವಸ್ಥೆಯ ಪಾಲಿಗೆ ತುಂಬ ಮಹತ್ವ­ದ್ದಾಗಿದೆ. ದೇಶಿ ಹಣಕಾಸು ಮಾರುಕಟ್ಟೆಯು ಅದೆಷ್ಟು ಸೂಕ್ಷ್ಮವಾಗಿದೆ ಎಂದರೆ ಚುನಾವಣಾ ಪೂರ್ವ ಸಮೀಕ್ಷೆಗಳಿಂದಲೂ ಅದು ಪ್ರಭಾವಕ್ಕೆ ಒಳಗಾಗಿದೆ. ಆದರೂ, ಪೇಟೆಯಲ್ಲಿ ಈಗಲೂ ಕಾದು ನೋಡುವ ತಂತ್ರ ಅನುಸರಿಸ­ಲಾಗುತ್ತಿ­ದೆ ಎಂಬುದು ಸುಳ್ಳಲ್ಲ.

ದೀರ್ಘ ಕಾಲದಿಂದ ನನೆಗುದಿಗೆ ಬಿದ್ದಿದ್ದ ಬೃಹತ್ ಯೋಜನೆಗಳಿಗೆ ಅನುಮೋದನೆ ನೀಡಲು ಕೇಂದ್ರ ಸರ್ಕಾರ ಈಗ ಗಮನ ಕೇಂದ್ರೀ­ಕರಿಸಿದ್ದು, ಕೈತಪ್ಪಿದ ಅವಕಾಶ ಸದುಪಯೋಗ ಮಾಡಿಕೊಳ್ಳಲು ಹೊರಟಿದೆ. ಸರ್ಕಾರದ ಈ ನಡೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿರುವ ಷೇರುಪೇಟೆಯು  ಮೋದಿ ಅವರ ಗೆಲುವಿನ ನಿರೀಕ್ಷೆಯಲ್ಲಿದೆ. ಮೋದಿ ಅವರ ಗೆಲುವು ಖಚಿ­ತವೇ? ಅಥವಾ ಆಮ್ ಆದ್ಮಿ ಪಕ್ಷವು ಬಿಜೆಪಿಯ ಉತ್ಸಾಹಕ್ಕೆ ತಣ್ಣೀರೆರ­ಚುವುದೇ? ಕಾದು ನೋಡಬೇಕಷ್ಟೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT