ಆಗಾಗ ಈ ಪುಟಗಳಲ್ಲಿ ಕನ್ನಡ ಸಾಹಿತ್ಯ ಪತ್ರಿಕೆಗಳಿಂದ ಆಯ್ದ ಲೇಖನಗಳನ್ನು ಪ್ರಕಟಿಸಲಾಗುವುದು. ಪ್ರಸ್ತುತ
ಲೇಖನ `ಅರುಹು ಕುರುಹು~ ಪತ್ರಿಕೆಯ ಸಂಚಿಕೆ 8ರಿಂದ ಆಯ್ದುಕೊಳ್ಳಲಾಗಿದೆ.

ಕನ್ನಡಿಗರಿಗೆ ನಿಘಂಟು ರಚನೆಯ ವಿಧಾನವು ಸಂಸ್ಕೃತದಿಂದ ಬಂದಿರಬಹುದೆನ್ನುವುದರ ಬಗ್ಗೆ ಸಂದೇಹವಿಲ್ಲ. ಸಂಸ್ಕೃತ ನಿಘಂಟುಕಾರರಲ್ಲಿ ವರರುಚಿ, ಬಾಗುರಿ, ಶಾಶ್ವತ, ಅಮರಸಿಂಹ, ಗೋಪಾಲಕ, ಧನಂಜಯ, ಹಲಾಯುಧ ಮೊದಲಾದವರ ನಿಘಂಟುಗಳ ಪ್ರಭಾವ ಕನ್ನಡ ನಿಘಂಟುಗಾರರ ಮೇಲೆ ಆಗಿದೆ.

ಸಂಸ್ಕೃತ ನಿಘಂಟುಗಳ ರಚನೆಯ ವಿನ್ಯಾಸಕ್ಕೆ ತಕ್ಕಂತೆ ಪ್ರಾಚೀನ ಕನ್ನಡ ನಿಘಂಟುಗಳು ರಚಿತವಾದವು. ಸಂಸ್ಕೃತ ನಿಘಂಟುಗಳು ಶ್ಲೋಕಗಳ ರೂಪದಲ್ಲಿ ರಚಿತವಾದರೆ ಕನ್ನಡ ನಿಘಂಟುಗಳು ಕಂದ, ಷಟ್ಟದಿಗಳಲ್ಲಿ ರಚಿತವಾದವು.
ಪ್ರಾಚೀನ ಕನ್ನಡ ನಿಘಂಟುಗಳು ಪಂಡಿತರಿಂದ ಪಂಡಿತರಿಗಾಗಿ ರಚಿತವಾಗಿದ್ದು ವಾಸ್ತವದಲ್ಲಿ ಅವು ಪದ ಸಂಗ್ರಹಗಳೋ ಅಪೂರ್ಣ ಅರ್ಥಕೋಶಗಳೋ ಆಗಿವೆ. ಕಾಲಕ್ರಮೇಣ ಅವು ಸಾರ್ವಜನಿಕ ಉಪಯೋಗಿಯಾದ ಸಾಮಾನ್ಯ ಕೋಶಗಳಿಗೂ ಆಧುನಿಕ ಭಾಷಾಶಾಸ್ತ್ರದ ತಳಹದಿಯ ಮೇಲೆ ರಚಿತವಾಗುತ್ತಿರುವ ಆಧುನಿಕ ಕೋಶಗಳಿಗೂ ಆಕರವಾದವು. ಪ್ರಾಚೀನ ನಿಘಂಟುಗಳು ಹಳಗನ್ನಡ ಸಾಹಿತ್ಯಾಧ್ಯಯನಕ್ಕೆ ಅತ್ಯಗತ್ಯವಾದ ಕೈಪಿಡಿಗಳಾಗಿವೆ. ಇಲ್ಲಿ ಅಂಥ ಕೆಲವು ನಿಘಂಟುಗಳ ಬಗ್ಗೆ ಚರ್ಚಿಸಿದೆ.
ರನ್ನ ಕಂದ (ಸು. 990): ನಮಗೆ ಉಪಲಬ್ಧವಿರುವ ಮೊದಲನೆಯ ಪ್ರಾಚೀನ ನಿಘಂಟು ಇದಾಗಿದೆ. ಇದರ ಕರ್ತೃ ರನ್ನನಿರಬಹುದೆಂದು ಕವಿ ಚರಿತ್ರೆಕಾರರ ಅಭಿಪ್ರಾಯ. ಇದಕ್ಕೆ ಆಧಾರವೆಂದರೆ ಪ್ರತಿಯೊಂದು ಪದ್ಯವು ಕವಿ ರತ್ನಾ ಇಲ್ಲವೇ ಕವಿ ರನ್ನಾ ಎಂದು ಮುಗಿಯುವುದು. ಕೃತಿಕಾರ ತನ್ನ ಕಾಲದಲ್ಲಿ ಪ್ರಚಲಿತವಾಗಿದ್ದ ಹಳಗನ್ನಡ ರೂಪಗಳ ಅರ್ಥಗಳನ್ನು ಕಂದಗಳಲ್ಲಿ ಕೊಟ್ಟಿದ್ದಾನೆ. ಆದರೆ ಈ ನಿಘಂಟು ಪೂರ್ಣವಾಗಿ ಉಪಲಬ್ಧವಾಗಿಲ್ಲ. ತ.ಸು. ಶಾಮರಾಯರು ಹನ್ನೊಂದು ಪದ್ಯಗಳಿರುವ ಓಲೆಯ ಪ್ರತಿಗಳನ್ನಾಧರಿಸಿ `ರನ್ನಕಂದ~ ಎಂಬ ಹೆಸರಿನಲ್ಲಿ ಈ ನಿಘಂಟನ್ನು ಪ್ರಕಟಿಸಿದ್ದಾರೆ (ಕನ್ನಡ ಸಾಹಿತ್ಯ ಪರಿಷ್ಪತ್ರಿಕೆ ಸಂ.31, ಸಂ. 34). ಇದು ತೀರ ಅಶುದ್ಧವೂ ಸ್ಖಾಲಿತ್ಯಗಳಿಂದ ಕೂಡಿದುದೂ ಆಗಿದೆ. ಇದಾದ ನಂತರ ಎಂ.ಎಂ.ಕಲಬುರ್ಗಿ ಅವರು ಕೊಲ್ಲಾಪುರದಲ್ಲಿ ತಮಗೆ ದೊರೆತ ಎರಡು ಹಸ್ತಪ್ರತಿಗಳ ಮೂಲಕ `ರನ್ನ ನಿಘಂಟು~ ಎಂಬ ಹೆಸರಿನಿಂದ ಸಂಪಾದಿಸಿದ್ದಾರೆ (ಮಾರ್ಗ ಸಂ. 1). ಇದರಲ್ಲಿ 45 ಕಂದಪದ್ಯಗಳಿವೆ. ಇದು ಸಹಿತ ಅಶುದ್ಧವೂ ಸ್ಖಾಲಿತ್ಯಯುಕ್ತವೂ ಆಗಿದೆ. ಈ ನಿಘಂಟಿನಲ್ಲಿ ಕೆಲವು ತಮಿಳ್ ಶಬ್ದಗಳಿರುವುದು ಕಂಡುಬರುತ್ತದೆ. ಒಟ್ಟಿನಲ್ಲಿ ಇದು ಕನ್ನಡದ ಪ್ರಥಮ ನಿಘಂಟು ಎಂಬ ಕೀರ್ತಿಗೆ ಪಾತ್ರವಾಗಿದೆ.
ಅಭಿಧಾನ ವಸ್ತುಕೋಶ (ಸು. 1042): ಎರಡನೆಯ ನಾಗವರ್ಮನಿಂದ ರಚಿತವಾದ `ಅಭಿಧಾನ ವಸ್ತುಕೋಶ~ ಕಂದ ಮತ್ತು ವೃತ್ತಗಳಲ್ಲಿ ರಚಿತವಾಗಿದೆ. ಸಂಸ್ಕೃತ ನಿಘಂಟುಗಳೇ ಈ ಕೋಶದ ರಚನೆಗೆ ಪ್ರೇರಣೆಯಾಗಿದೆಯೆಂದು ನಿಘಂಟುಕಾರ ಹೇಳಿದ್ದಾನೆ. ಈ ಕೋಶವು ಸಂಸ್ಕೃತ ಕೋಶ ಶಿಲ್ಪದ ಹಾಗೆ ಏಕಾರ್ಥ ಕಾಂಡ, ನಾನಾರ್ಥ ಕಾಂಡ ಮತ್ತು ಸಾಮಾನ್ಯ ಕಾಂಡ ಎಂಬ ಮೂರು ಕಾಂಡಗಳನ್ನೊಳಗೊಂಡಿದೆ. ಕನ್ನಡ ಕಾವ್ಯಗಳಲ್ಲಿ ಬಳಕೆಯಾಗುವ ಸಂಸ್ಕೃತ ಶಬ್ದಗಳಿಗೆ ಕನ್ನಡದಲ್ಲಿ ಅರ್ಥ ತಿಳಿಸುವ ಮೊದಲನೆಯ ಸಂಸ್ಕೃತ ಕನ್ನಡ ನಿಘಂಟು ಇದಾಗಿದೆ. ಪ್ರಾಚೀನ ಕನ್ನಡ ನಿಘಂಟುಗಳಲ್ಲಿ ಇದು ವಿಷಯ ಭರಿತವೂ ವ್ಯಾಪ್ತಿಯುಳ್ಳದ್ದೂ ಆಗಿದೆ.
ಶಬ್ದಮಣಿದರ್ಪಣ (ಸು. 1260): ಕನ್ನಡ ಪ್ರಸಿದ್ಧ ವ್ಯಾಕರಣಕಾರನಾದ ಕೇಶಿರಾಜ ತನ್ನ ಶಬ್ದಮಣಿದರ್ಪಣದ ಅಕ್ಷರ ಪ್ರಕರಣದಲ್ಲಿ ಬಂದಿರುವ `ಱೞಕುಳ~ಗಳ ಪಟ್ಟಿ ಹಾಗೂ ಕನ್ನಡ ಕ್ರಿಯಾ ರೂಪಗಳನ್ನು ಹೇಳುವ `ಧಾತು ಪ್ರಕರಣ~ ಹಾಗೂ ಹಳಗನ್ನಡ ಶಬ್ದಗಳಿಗೆ ಅರ್ಥಹೇಳುವ `ಪ್ರಯೋಗಸಾರ~ ಈ ಪ್ರಕರಣಗಳು ಒಂದು ರೀತಿಯಲ್ಲಿ ನಿಘಂಟಿನಂತೆ ಸಿದ್ಧವಾಗಿವೆ. ಸಹಸ್ರಾರು ಹಳಗನ್ನಡ ಶಬ್ದಗಳನ್ನು ಸಂಗ್ರಹಿಸಿ ಕೋಶಾಧ್ಯಯನಕ್ಕೆ ಮಹೋಪಕಾರ ಮಾಡಿದ್ದಾನೆ. ಈತನ ತರುವಾಯ ಬಂದ ನಿಘಂಟುಕಾರರಿಗೆಲ್ಲ ಇದೂ ಒಂದು ಆಕರ ಗ್ರಂಥವಾಯಿತು.
ಕರ್ನಾಟಕ ಶಬ್ದಸಾರಂ (ಸು. 1400): ಕನ್ನಡ ಪದಗಳಿಗೆ ಕನ್ನಡದಲ್ಲಿ ಅರ್ಥ ಹೊಂದಿರುವ ಮೊದಲನೆಯ ಕನ್ನಡ-ಕನ್ನಡ ನಿಘಂಟು ಇದಾಗಿದೆ. ಈ ಕೋಶದ ಕರ್ತೃ, ಕಾಲ ತಿಳಿದು ಬಂದಿಲ್ಲ. ಕವಿ ಚರಿತ್ರೆಕಾರರು ಇದರ ಕಾಲ ಸು. 1400 ಎಂದಿದ್ದಾರೆ. ಶಬ್ದಗಳ ಆಯ್ಕೆ ಪರಿಮಿತಿವಾಗಿದ್ದು ಅರ್ಥ ಹೇಳಲು ಕೋಶಕಾರನು ತನಗೆ ಸುಲಭವೆಂದು ತೋರಿದ ಕನ್ನಡ ಮತ್ತು ಸಂಸ್ಕೃತ ಶಬ್ದಗಳನ್ನು ಬಳಸಿದ್ದಾನೆ. ಆ ಕಾಲದ ನಾಡುಗರ ಆಟಗಳು, ಅರಣ್ಯದ ವನಸ್ಪತಿಗಳು ಹಾಗೂ ಪ್ರಾಣಿ-ಪಕ್ಷಿಗಳು ಮೊದಲಾದ ಶಬ್ದಗಳನ್ನು ಪರಿಚಯಿಸುವ ಈ ನಿಘಂಟು ತನ್ನ ಮಿತಿಯಲ್ಲಿ ಒಂದು ಬೆಲೆಯುಳ್ಳ ಸಾಂಸ್ಕೃತಿಕ ನಿಘಂಟಾಗಿದೆ.

ಕಬ್ಬಿಗರ ಕೈಪಿಡಿ (ಸು. 1530): ವಾರ್ಧಕ ಷಟ್ಟದಿಯಲ್ಲಿ ರಚನೆಗೊಂಡಿರುವ ಈ ಕೋಶ 100 ಪದ್ಯಗಳನ್ನೊಳಗೊಂಡಿದೆ. ಇದರಲ್ಲಿ ಹಳಗನ್ನಡ ಶಬ್ದಗಳ ಅರ್ಥಗಳನ್ನು ಹೇಳಲಾಗಿದೆ. ದೇಶ್ಯ, ಗೂಢಾರ್ಥ, ತತ್ಸಮ, ತದ್ಭವಗಳಿಗೆ ಅರ್ಥ ಹೇಳಿದೆ. ಈ ಕೋಶಕ್ಕೆ ಶಬ್ದಮಣಿದರ್ಪಣ, ಶಬ್ದಸಾರ ಮೊದಲಾದ ಹಳಗನ್ನಡ ನಿಘಂಟುಗಳು ಆಧಾರಗಳಾಗಿವೆ. ಮಧ್ಯಕಾಲೀನ ವೀರಶೈವ ಕವಿಗಳು ಬಳಸುತ್ತಿದ್ದ ವಿಶಿಷ್ಟವಾದ ಶಬ್ದರೂಪಗಳಿಗೂ ಸಮಸ್ತ ರೂಪಗಳಿಗೂ ಅರ್ಥ ಕೊಡಲಾಗಿದೆ. ಈ ನಿಘಂಟಿಗೆ ಹೆಸರುಘಟ್ಟದ ಹೊನ್ನಪ್ಪ `ಚಕೋರ ಚಂದ್ರಿಕೆ~ ಎಂಬ ಟೀಕೆಯನ್ನು ಬರೆದಿದ್ದಾನೆ.

ಕರ್ನಾಟಕ ಭಾರತ ನಿಘಂಟು (ಸು. 1600): ಈ ಕೋಶದ ಕರ್ತೃ, ಕಾಲ ತಿಳಿದುಬಂದಿಲ್ಲ. ಇದರ ಕರ್ತೃ ಕುಮಾರವ್ಯಾಸ ಭಾರತದಲ್ಲಿನ ಪದ್ಯಗಳಿಗೆ ಅರ್ಥವನ್ನು ನಿರೂಪಿಸಿರುವುದಾಗಿ ಹೇಳಿದ್ದಾನೆ. ಇದರಿಂದ ಕುಮಾರವ್ಯಾಸನ ನಂತರ ಈ ಕೃತಿರಚನೆಯಾಗಿರುವುದೆಂದು ಸ್ಪಷ್ಟವಾಗಿ ತಿಳಿಯುತ್ತದೆ. 68 ಕಂದಪದ್ಯಗಳು ಇದರಲ್ಲಿವೆ. ಕುಮಾರವ್ಯಾಸ ಭಾರತದಲ್ಲಿನ ಕೆಲವು ದೇಶ್ಯಗಳಿಗೆ, ತದ್ಭವಗಳಿಗೆ ಅರ್ಥವಿವರಣೆಯನ್ನು ನಿರೂಪಿಸಲಾಗಿದೆ.
ಕವಿಕಂಠಹಾರ (ಸು. 1640): ಪ್ರಾಚೀನ ನಿಘಂಟುಗಳಲ್ಲಿ ಇದು ಕೊನೆಯದು. ಇದರ ಕರ್ತೃ ಸೂರ್ಯ ಕವಿ. ಇದರಲ್ಲಿ 271 ಕಂದಪದ್ಯಗಳಿವೆ. ಕರ್ನಾಟಕ ಶಬ್ದಸಾರ, ಶಬ್ದಮಣಿದರ್ಪಣ ಮೊದಲಾದ ಪೂರ್ವ ಕೋಶಗಳ ಆಧಾರದಿಂದ ಸಿದ್ಧವಾಗಿದೆ. ದೇಶ್ಯ ಮತ್ತು ತದ್ಭವ ಶಬ್ದಗಳಿಗೆ ಅರ್ಥ ವಿವರಣೆ ಇಲ್ಲಿದೆ.

ಈ ಲೇಖನದಲ್ಲಿ ಚರ್ಚಿಸದ ಕೆಲವು ನಿಘಂಟುಗಳೆಂದರೆ, ಚತುರಾಸ್ಯ ನಿಘಂಟು (ಸು. 1450), ಕರ್ನಾಟಕ ನಿಘಂಟು (ಸು. 1400), ಅಭಿನವಾಭಿಧಾನಂ (ಸು. 1398), ಕರ್ನಾಟಕ ಶಬ್ದ ಮಂಜರಿ (ಸು. 1500) ಮತ್ತು ಕರ್ನಾಟಕ ಸಂಜೀವನಂ (ಸು. 1600). ಪ್ರಾಚೀನ ನಿಘಂಟುಗಳಲ್ಲಿ ಕೆಲವು ಸೀಮಿತ ಉದ್ದೇಶದಿಂದ ರಚಿತವಾಗಿದೆ. ಅವುಗಳಲ್ಲಿ ಕೆಲವು ಇಂತಿವೆ. ಅಜ್ಞಾತ ಕಾಲ, ಕರ್ತೃಕ `ಶಬ್ದ ರತ್ನಾಕರ~ (ಸು. 1600), `ಪದ್ಯ ನಾನಾರ್ಥ~ (ಸು. 1600), ಚೆನ್ನಕವಿಯ `ಶಬ್ದಾಗಮ~ (ಸು. 1600), `ನಾನಾರ್ಥಕಂದ~ (ಸು. 1600), ದೇವೋತ್ತಮನ `ನಾನಾರ್ಥ ರತ್ನಾಕರ~ (ಸು. 1600), ಈ ಬಗೆಯ ನಿಘಂಟುಗಳು ಮುಖ್ಯವಾಗಿ ಕನ್ನಡ ಕಾವ್ಯಭ್ಯಾಸಿಗಳಿಗೆ ಸಹಾಯಕವಾಗಿವೆ. ಅಮೃತಾನಂದಿನಿ `ಅ~ ಕಾರಾದಿ ವೈದ್ಯ ನಿಘಂಟು~ (ಸು. 1300), ಲಕ್ಷಣ ಪಂಡಿತನ `ಅ~ ಕಾರಾದಿ ನಿಘಂಟು~ (1775) ಅಜ್ಞಾತ ಕಾಲ ಕರ್ತೃಗಳಾದ `ಧನ್ವಂತರಿ ನಿಘಂಟು~, `ಇಂದ್ರ ದೀಪಿಕಾ ನಿಘಂಟು~, `ಮದನಾರಿ ವೈದ್ಯ ನಿಘಂಟು~, `ಔಷಧೀಕೋಶ~ ಈ ನಿಘಂಟುಗಳು ಸಸ್ಯಗಳಿಗೆ ಗಿಡ ಮೂಲಿಕೆಗಳಿಗೆ ಸಂಬಂಧಿಸಿವೆ.
ಪ್ರಾಚೀನ ಕೋಶಕಾರರು ಶಬ್ದಕೋಶಗಳನ್ನು ರಚಿಸಿ ತಮ್ಮ ಕಾಲದ ಸಾಹಿತ್ಯಿಕ ಪ್ರಗತಿಗೆ ಕಾರಣರಾಗಿದ್ದಾರೆ. ಪರಂಪರೆಯ ಶಬ್ದ ಸಂಪತ್ತನ್ನು ಉಳಿಸಿ ಬೆಳೆಸಿ ಕನ್ನಡ ವಾಗ್ಭಾಂಡಾರದ ವಿಪುಲತೆಯನ್ನು ಹೆಚ್ಚಿಸಿದ್ದಾರೆ. ಪ್ರಾಚೀನ ಕೋಶಗಳು ಅಕ್ಷರಾನುಕ್ರಮಣಿಕೆಯಲ್ಲಿಲ್ಲದಿದ್ದರೂ ವಿಷಯಾನುಕ್ರಮಣಿಕೆಯಲ್ಲಿರುವುದು ಅವುಗಳ ವೈಶಿಷ್ಟ್ಯವಾಗಿದೆ. ಪ್ರಾಚೀನರು ಶಬ್ದಕೋಶಗಳನ್ನು ಹೆಚ್ಚಾಗಿ ಕವಿಗಳ ಉಪಯೋಗಕ್ಕೆ ಬರೆದಿರುವುದರಿಂದ ಅಕ್ಷರಾನುಕ್ರಮಣಿಕೆ ಅವರಿಗೆ ಮುಖ್ಯವಾಗಲಿಲ್ಲ.

ಕಾವ್ಯಾಧ್ಯಯನಕ್ಕೆ ಅವರು ಪ್ರಾಮುಖ್ಯತೆ ಕೊಟ್ಟಿದ್ದರು. ಆದ್ದರಿಂದ ಅವರಿಗೆ ನಾನಾರ್ಥವುಳ್ಳ ಒಂದು ಶಬ್ದ ಇಲ್ಲವೇ ಶಬ್ದ ಸಮುಚ್ಚಯವನ್ನು ಒಂದೇ ಕಡೆಯಲ್ಲಿ ಹೇಳುವ ಕ್ರಮ ಮುಖ್ಯವಾಗಿ ತೋರಿತು. ಇಂತಹ ಶಬ್ದಗಳನ್ನು ಮತ್ತು ಅವುಗಳ ಅರ್ಥ ವಿಶೇಷಗಳನ್ನು ಪೂರ್ತಿಯಾಗಿ ಕಂಠಪಾಠ ಮಾಡುವುದು ಅವರಿಗೆ ಮುಖ್ಯವಾಗಿತ್ತು.
ಪ್ರಾಚೀನ ನಿಘಂಟುಗಳು ಸಮ್ಮಿಶ್ರ ರೂಪವಾಗಿದ್ದು ಸಂಸ್ಕೃತ ಕನ್ನಡ ಎಂದಾಗಲಿ ತತ್ಸಮ-ತದ್ಭವ ಎಂದಾಗಲಿ ಭೇದ ಮಾಡದೆ ಶಬ್ದಕ್ಕೆ ಪ್ರತಿ ಶಬ್ದವೆಂಬಂತೆ ಪರ್ಯಾಯ ಪದ ರೂಪಗಳನ್ನು ಲಕ್ಷ್ಯವಾಗಿರಿಸಿಕೊಂಡಿರುವಂತೆ ತೋರುವುದರಿಂದ ಇವುಗಳಲ್ಲಿ ಆಧುನಿಕ ನಿಘಂಟುಗಳ ಹಾಗೆ ಒಂದು ಶಿಸ್ತು, ವ್ಯವಸ್ಥೆ ಇಲ್ಲದಿರಬಹುದು. ಆದರೆ ಈಗ ಬಳಕೆಯಲ್ಲಿ ತಪ್ಪಿರುವ, ನಷ್ಟ ಶಬ್ದಗಳು, ಅರ್ಥಾಂತರ ಹೊಂದಿರುವ ಶಬ್ದಗಳು, ಕ್ಲಿಷ್ಟ ಪದಗಳು ಇವಕ್ಕೆಲ್ಲ ಒಂದು ಮಿತ ಪ್ರಮಾಣದಲ್ಲಿಯಾದರೂ ಈ ನಿಘಂಟುಗಳಲ್ಲಿ ಅರ್ಥವನ್ನು ಕಂಡುಕೊಳ್ಳಬಹುದಾಗಿದೆ. ಅಲ್ಲದೆ ಒಂದು ಕಾಲಘಟ್ಟದ ಸಾಮಾಜಿಕ, ಸಾಂಸ್ಕೃತಿಕ ಮಹತ್ವದ ಶಬ್ದಗಳ ಒಂದು ನಿಧಿಯಾಗಿಯೂ ಅವು ಸಹಾಯಕ್ಕೆ ಬರುತ್ತವೆಯಲ್ಲದೆ ಆ ಕಾಲದ ಜನಜೀವನವನ್ನು ಪುನರ್ರಚಿಸುವಾಗ ಪ್ರಾಚೀನ ನಿಘಂಟುಗಳು ಪೂರಕವಾಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.