ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ತಂತ್ರಜ್ಞಾನಕ್ಕೊಂದು ಗಾಂಧೀ ಪ್ರಣಾಳಿಕೆ

Last Updated 25 ಸೆಪ್ಟೆಂಬರ್ 2018, 4:17 IST
ಅಕ್ಷರ ಗಾತ್ರ

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಕ್ಕೆ ಗಾಂಧೀಜಿ ಹೇಗೆ ಪ್ರತಿಕ್ರಿಯಿಸುತ್ತಿದ್ದರು? ಈ ಪ್ರಶ್ನೆಗೊಂದು ಉತ್ತರ ಕಂಡುಕೊಳ್ಳಲುು ಆರು ವರ್ಷಗಳ ಹಿಂದೆಯೇ ಸುಧೀಂದ್ರ ಕುಲಕರ್ಣಿ ಪ್ರಯತ್ನಿಸಿದ್ದರು. ‘ಚರಕದ ಸಂಗೀತ: ಇಂರ್ಟನೆಟ್ ಯುಗಕ್ಕೊಂದು ಗಾಂಧೀ ಪ್ರಣಾಳಿಕೆ’ ಎಂಬ ಅವರ ಪುಸ್ತಕ ಹೊಸ ತಂತ್ರಜ್ಞಾನಕ್ಕೆ ಗಾಂಧೀಜಿಯ ಪ್ರತಿಕ್ರಿಯೆ ಏನಿರುತ್ತಿತ್ತು ಎಂದು ವಿವರಿಸುತ್ತದೆ. ಗಾಂಧೀಜಿಯನ್ನು ತಂತ್ರಜ್ಞಾನ ವಿರೋಧಿ ಮತ್ತು ಯಂತ್ರ ವಿರೋಧಿ ಎಂದು ಚಿತ್ರಿಸುವ ಸಿದ್ಧ ಮಾದರಿಗಳನ್ನು ಈ ಪುಸ್ತಕ ಪ್ರಶ್ನಿಸುತ್ತದೆ. ಹಾಗೆಯೇ ಹೊಸ ತಂತ್ರಜ್ಞಾನವನ್ನು ಗಾಂಧೀ ಚಿಂತನೆಯ ಬೆಳಕಿನಲ್ಲಿ ಇದು ಕಟ್ಟಿಕೊಡುತ್ತದೆ.

ಈ ಪುಸ್ತಕ ಪ್ರಕಟವಾದದ್ದು 2012ರಲ್ಲಿ ಅಂದರೆ ಸರಿಯಾಗಿ ಆರು ವರ್ಷಗಳ ಹಿಂದೆ. ಸುಧೀಂದ್ರ ಕುಲಕರ್ಣಿಯವರು ಚರ್ಚೆಗೆ ಎತ್ತಿಕೊಂಡದ್ದು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಸಕಾರಾತ್ಮಕ ಸಾಧ್ಯತೆಗಳನ್ನು. ಈ ದೃಷ್ಟಿಯಲ್ಲಿ ನೋಡಿದರೆಡಿಜಿಟಲ್ ತಂತ್ರಜ್ಞಾನ ರೂಢಿಸಿದ ಹೊಸ ಗ್ರಹಿಕೆಗಳು ಮತ್ತುಹೊಸ ಬಗೆಯ ಸಹಕಾರದಸಾಧ್ಯತೆಗಳು ಗಾಂಧೀಜಿಯ ಚಿಂತನೆಗೆಪೂರಕ ಎನ್ನಬಹುದು. ಆದರೆ ಅದೂ ಒಂದು ಬೃಹತ್ ಕೈಗಾರಿಕೆಯಾಗಿ ಮಾರ್ಪಟ್ಟಾಗ ಗಾಂಧೀಜಿ ಹೇಗೆ ಪ್ರತಿಕ್ರಿಯಿಸಬಹುದಿತ್ತು?

ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕೆ ಗಾಂಧೀಜಿಯ ಚಿಂತನಾ ವಿಧಾನವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅವರು ಸ್ಥಾಯಿಯಾಗಿ ವಿರೋಧಿಸುತ್ತಾ ಬಂದದ್ದು ಹಿಂಸೆಯನ್ನು ಅಥವಾ ಸ್ಥಾಯಿಯಾಗಿ ಪ್ರತಿಪಾದಿಸುತ್ತಾ ಬಂದದ್ದು ಅಹಿಂಸೆಯನ್ನು ಮಾತ್ರ. ಪರಿಣಾಮವಾಗಿಗಾಂಧೀಜಿಯ ಗ್ರಹಿಕೆಯ ವಿಧಾನವೇ ಅಹಿಂಸಾಧಾರಿತ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅವರು ಗ್ರಹಿಸುತ್ತಿದ್ದದ್ದೂಈ ಪರಿಭಾಷೆಯಲ್ಲಿಯೇ. ಕೈಗಾರಿಕಾ ಕ್ರಾಂತಿ ಸೃಷ್ಟಿಸಿದ ಕೇಂದ್ರೀಕೃತ ಉತ್ಪಾದನಾ ಘಟಕಗಳು ಗಾಂಧೀಜಿಯನ್ನು ಅಸ್ವಸ್ಥಗೊಳಿಸಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಇವು ಕಾರ್ಲ್ ಮಾರ್ಕ್ಸ್‌ನನ್ನೂ ಅಸ್ವಸ್ಥಗೊಳಿಸಿದ್ದವು. ಈ ಕಾರ್ಖಾನೆಗಳಲ್ಲಿ ದುಡಿಯುವರು ಏನನ್ನು ಉತ್ಪಾದಿಸುತ್ತೇವೆ ಎಂದು ಅರಿಯದ ಮಟ್ಟಿಗೆ ಯಂತ್ರವೊಂದರ ಬಿಡಿಭಾಗದಂತೆ ಆಗಿಬಿಡುವ ಪ್ರಕ್ರಿಯೆಯೊಂದನ್ನು ಕಾರ್ಲ್ ಮಾರ್ಕ್ಸ್‌ನಂತೆಯೇ ಗಾಂಧೀಜಿ ಕೂಡಾ ವಿರೋಧಿಸುತ್ತಿದ್ದರು. ದುಡಿಯುವವರನ್ನೇ ಕಾರ್ಖಾನೆಯ ಮಾಲೀಕರನ್ನಾಗಿ ಮಾಡುವ ಬಗ್ಗೆ ಮಾರ್ಕ್ಸ್ ಯೋಚಿಸಿದರೆ ಗಾಂಧೀಜಿ ಕಾರ್ಖಾನೆಗಳನ್ನೇ ಅಪ್ರಸ್ತುತವಾಗಿಸುವ ಬಗ್ಗೆ ಆಲೋಚಿಸಿದರು.

ಕಾರ್ಖಾನೆಗಳನ್ನು ಅಪ್ರಸ್ತುತವಾಗಿಸುವುದು ಎಂದರೆ ಕೇಂದ್ರೀಕೃತ ಉತ್ಪಾದನಾ ವಿಧಾನಗಳನ್ನು ನಿರಾಕರಿಸುವುದು. ಸ್ವಾಯತ್ತವಾಗಿರುವ ತಮ್ಮ ಅಗತ್ಯಗಳನ್ನು ತಮ್ಮಲ್ಲಿರುವ ಸಣ್ಣ ಉತ್ಪಾದನಾ ವಿಧಾನಗಳಿಂದಲೇ ಪೂರೈಸಿಕೊಳ್ಳಬಲ್ಲ ಸಮುದಾಯಗಳ ಪರಿಕಲ್ಪನೆಯನ್ನು ಗಾಂಧೀಜಿ ಮುಂದಿಟ್ಟರು. ಈ ವಿಕೇಂದ್ರೀಕೃತ ಮಾದರಿಯನ್ನು ಡಿಜಿಟಲ್ ತಂತ್ರಜ್ಞಾನ ಕಾರ್ಯರೂಪಕ್ಕೆ ತಂದಿದೆ ಎಂಬ ವಾದವನ್ನು ಬಹಳಷ್ಟು ಮಂದಿ ಮಂಡಿಸುತ್ತಾರೆ. ಇದರಲ್ಲಿ ಬಹಳ ಮುಖ್ಯವಾದ ಹೆಸರು ಮಹೀಂದ್ರಾ ಬಳಗದ ಮುಖ್ಯಸ್ಥ ಆನಂದ್ ಮಹೀಂದ್ರ ಮೂರು ವರ್ಷಗಳ ಹಿಂದೆ ಔದ್ಯಮಿಕ ಸಮಾವೇಶವೊಂದರಲ್ಲಿ ಮಾತನಾಡಿದ ಅವರುಸ್ವತಂತ್ರ ಪುಟ್ಟ ಘಟಕಗಳು (Diminution), ವಿಕೇಂದ್ರೀಕರಣ (Decentralization) ಮತ್ತು ಪ್ರಜಾಪ್ರಭುತ್ವೀಕರಣಗಳನ್ನು (Democratization) ಹೇಗೆ ಡಿಜಿಟಲ್ ತಂತ್ರಜ್ಞಾನ ಸಾಧ್ಯವಾಗಿಸಿದೆ ಎಂದು ಹೇಳಿದ್ದರು.

ಅವರ ಪ್ರಕಾರ 32 ರೋಗ ನಿದಾನ ಮಾದರಿಗಳನ್ನು ಆರೋಗ್ಯ ಕಾರ್ಯಕರ್ತರ ಮಟ್ಟಕ್ಕೆ ತಲುಪಿಸಿರುವ ‘ಸ್ವಾಸ್ಥ್ಯ ಸ್ಲೇಟ್’ ಎಂಬ ಆ್ಯಪ್ಸ್ವತಂತ್ರ ಪುಟ್ಟ ಘಟಕದಉದಾಹರಣೆಯಾದರೆ ಆಧಾರ್ ಎಂಬ ವಿಶಿಷ್ಟ ಗುರುತು ಸಂಖ್ಯೆ ವಿಕೇಂದ್ರೀಕರಣದ ಮಾದರಿ. ಒಂದೇ ಒಂದು ಹೊಟೇಲಿನ ಮಾಲೀಕತ್ವವೇ ಇಲ್ಲದೆ ಪ್ರವಾಸಿಗಳಿಗೆ ವಸತಿ ವ್ಯವಸ್ಥೆ ಮಾಡಿಕೊಡುವ ಆಪ್‌ಗಳು, ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೆ ಸಹಕರಿಸುವ ಆಪ್‌ಗಳೆಲ್ಲವೂ ಪ್ರಜಾಪ್ರಭುತ್ವೀಕರಣಕ್ಕೆ ಉದಾಹರಣೆ.

ಆನಂದ್ ಮಹೀಂದ್ರ ಅವರ ಈ ಮಾತುಗಳಲ್ಲಿ ಆಶ್ಚರ್ಯ ಪಡುವಂಥದ್ದೇನೂ ಇಲ್ಲ. ಅವರು ನೀಡಿರುವ ಉದಾಹರಣೆಗಳು ಮತ್ತು ಅವಕ್ಕೆ ಅವರು ಆರೋಪಿಸುತ್ತಿರುವ ಮೌಲ್ಯಗಳೆಲ್ಲವೂ ನಿಜ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಡಿಜಿಟಲ್ ತಂತ್ರಜ್ಞಾನವೆಂದರೆ ಇಷ್ಟು ಮಾತ್ರವೇ? ಡಿಜಿಟಲ್ ತಂತ್ರಜ್ಞಾನ ಗಾಂಧೀಜಿ ಬೃಹತ್ ಕೈಗಾರಿಕೆಗಳ ಸಂದರ್ಭದಲ್ಲಿ ಕಾಣುತ್ತಿದ್ದ ಹಿಂಸೆಯಿಂದ ಮುಕ್ತವೇ? ಈ ತಂತ್ರಜ್ಞಾನ ನಿಜಕ್ಕೂ ಸಣ್ಣದರಲ್ಲಿ ಸೌಂದರ್ಯವನ್ನು ಕಾಣುವುದಕ್ಕೆ ಸಹಕರಿಸುತ್ತಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಿದರೆ ನಮಗೆ ಕಾಣುವ ಚಿತ್ರಣವೇ ಬೇರೆ.

ಡಿಜಿಟಲ್ ತಂತ್ರಜ್ಞಾನ ಅದರಷ್ಟಕ್ಕೇ ಅದು ಹಿಂಸಾತ್ಮಕವಲ್ಲ. ಕೈಗಾರಿಕಾ ಕ್ರಾಂತಿಯ ಭಾಗವಾಗಿ ನಡೆದ ಯಾವ ಆವಿಷ್ಕಾರಗಳೂ ಅವುಗಳಷ್ಟಕ್ಕೇ ಹಿಂಸಾತ್ಮಕವಾಗಿರಲಿಲ್ಲ. ಅವುಗಳನ್ನು ಉತ್ಪಾದನೆಗೆ ಬಳಸಿಕೊಂಡ ಬಗೆಯಲ್ಲಿ ಹಿಂಸೆ ಅಡಗಿದೆ. ಗಾಂಧೀಜಿ ಬಹಳ ಇಷ್ಟಪಟ್ಟ ಸಿಂಗರ್ ಹೊಲಿಗೆ ಯಂತ್ರಕ್ಕೆ ಇಂದಿನ ‘ಕೃತಕ ಬುದ್ಧಿಮತ್ತೆ’ಯನ್ನು ಹೋಲಿಸಲು ಸಾಧ್ಯವಿಲ್ಲ. ಆಧಾರ್‌ನ ಮೂಲಕ ಲಕ್ಷಾಂತರ ಮಂದಿ ಬಡವರಿಗೆ ಕಲ್ಯಾಣ ಯೋಜನೆಗಳನ್ನು ತಲುಪಿಸಲು ಸಾಧ್ಯವಾಯಿತು ಎಂದು ಹೇಳುವಾಗಲೇ ಗಾಂಧೀಜಿ ಉತ್ಕಟವಾಗಿ ಪ್ರತಿಪಾದಿಸುತ್ತಿದ್ದ ವ್ಯಕ್ತಿ ಸ್ವಾತಂತ್ರ್ಯವನ್ನು ಅದು ಸಂಪೂರ್ಣವಾಗಿ ಕಿತ್ತುಕೊಳ್ಳುವ ಮಾರ್ಗವೂ ಆಗಿದೆ ಎಂಬುದನ್ನು ಗಮನಿಸಬೇಕು.

ವಿಕೇಂದ್ರೀಕೃತವಾಗಿಯೂ ಕೇಂದ್ರೀಕರಣದ ಅನುಕೂಲಗಳನ್ನು ಒದಗಿಸುವುದು ಡಿಜಿಟಲ್ ತಂತ್ರಜ್ಞಾನ ಒದಗಿಸಿದ ಬಹುದೊಡ್ಡ ಸಾಧ್ಯತೆ. ಸಾಮಾನ್ಯರ ಗಮನ ಅದರ ವಿಕೇಂದ್ರೀಕರಣ ಸಾಮರ್ಥ್ಯದ ಮೇಲೆ ಇರುವಾಗಲೇ ಪ್ರಭುತ್ವ ಮತ್ತು ದೊಡ್ಡ ವಾಣಿಜ್ಯ ಸಂಸ್ಥೆಗಳು ಅದರ ಕೇಂದ್ರೀಕರಣದ ಅನುಕೂಲಗಳ ಮೇಲೆ ಕಣ್ಣಿಟ್ಟಿರುತ್ತಾರೆ. ಅವರಿಗೆ ಇಷ್ಟವಾಗಿರುವ ಕೇಂದ್ರೀಕರಣ ಯಾವುದೆಂದರೆ ಜನರ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುವ ಕೇಂದ್ರೀಕರಣ. ಒಂದು ದತ್ತ ಸಂಚಯದಲ್ಲಿ ಎಲ್ಲರ ಬೆರಳಚ್ಚು ಗುರುತಗಳಿದ್ದರೆ ಅಪರಾಧಿಯನ್ನು ತಕ್ಷಣ ಬಂಧಿಸಬಹುದು ಎಂಬುದು ನಿಜ. ಆದರೆ ಇದರ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕನನ್ನೂ ‘ಸಂಭಾವ್ಯ ಅಪರಾಧಿ’ಯನ್ನಾಗಿ ನೋಡಬೇಕಾಗುತ್ತದೆ ಎಂಬುದೂ ನಿಜವಲ್ಲವೇ?

ಇದೇ ಸಂದರ್ಭದಲ್ಲಿ ಮತ್ತೊಂದು ವಿಚಾರವನ್ನೂ ಇಲ್ಲಿ ಗಮನಿಸಬೇಕಾಗುತ್ತದೆ. ಪೌರರ ಮಾಹಿತಿಯನ್ನು ಹೀಗೆ ಕೇಂದ್ರೀಕೃತ ದತ್ತಸಂಚಯದಲ್ಲಿ ಇರಿಸುವ ನಿರ್ಧಾರ ಕೈಗೊಳ್ಳುವ ಪ್ರಭುತ್ವವು ಅದನ್ನು ಕಾರ್ಯರೂಪಗೊಳಿಸುವ ಮೂಲಕ ಸಾಧಿಸುವುದು ಏಕಮುಖಿಯಾದ ಪಾರದರ್ಶಕತೆಯನ್ನೇ ಹೊರತು ಗಾಂಧೀಜಿ ಪರಿಭಾವಿಸಿದ ಸಣ್ಣ ಸಮುದಾಯಗಳ ಮಟ್ಟದಲ್ಲಿ ಇರುತ್ತಿದ್ದ ಬಗೆಯ ಪರಸ್ಪರ ನಂಬಿಕೆ ಮತ್ತು ಪಾರದರ್ಶಕತೆಗಳನ್ನಲ್ಲ. ಅರ್ಥಾತ್ ಗಾಂಧೀಜಿ ಅನುಮಾನಿಸುತ್ತಿದ್ದ ಕೇಂದ್ರೀಕರಣದ ಹಿಂಸೆ ಇಲ್ಲಿ ಮತ್ತೆ ಕಾಣಿಸಿಕೊಳ್ಳುತ್ತದೆ ಎಂದರ್ಥ.

ಇದು ಕೇವಲ ಪ್ರಭುತ್ವ ಮತ್ತು ಪೌರನ ನಡುವಣ ಸಂಬಂಧಕ್ಕೆ ಮಾತ್ರ ಸೀಮಿತವಾದ ವಿಚಾರವೇನೂ ಅಲ್ಲ. ಇಡೀ ಜಗತ್ತನ್ನು ಹಳ್ಳಿಯಾಗಿಸಿಬಿಟ್ಟಿರುವ ಅದ್ಭುತ ತಂತ್ರಜ್ಞಾನದ ಮಾಲೀಕತ್ವದ ವಿಚಾರಕ್ಕೆ ಬಂದರೂ ಅಷ್ಟೇ. ಗಾಂಧೀಜಿ ಸಂಪತ್ತಿನ ಶೇಖರಣೆಯನ್ನಾಗಲೀ ಅದರ ಖಾಸಗಿ ಆಸ್ತಿಯನ್ನಾಗಲೀ ವಿರೋಧಿಸಿರಲಿಲ್ಲ ಎಂಬುದು ನಿಜ. ಆದರೆ ಅವರ ದೃಷ್ಟಿಯಲ್ಲಿ ಖಾಸಗಿ ಆಸ್ತಿ ಎಂಬುದು ಅವರವರಿಗೆ ಅವರವರ ಅಗತ್ಯಕ್ಕೆ ಬೇಕಿರುವಷ್ಟು ಎಂಬ ತತ್ವಕ್ಕೆ ಅನುಗುಣವಾಗಿತ್ತು. ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ನಡೆದಿರುವ ಸಂಪತ್ತಿನ ಶೇಖರಣೆ ಎಂಥದ್ದು ಎಂಬುದಕ್ಕೆ ನಮ್ಮ ಕಣ್ಣೆದುರೇ ಉದಾಹರಣೆಗಳಿವೆ. ಗೂಗಲ್, ಫೇಸ್‌ಬುಕ್ ಮತ್ತು ಅಮೆಜಾನ್‌ನಂಥ ಕಂಪೆನಿಗಳು ಹಲವು ಸರ್ಕಾರಗಳು ಹೊಂದಿರುವಷ್ಟು ಸಂಪತ್ತನ್ನು ಹೊಂದಿವೆ. ಹತ್ತಾರು ಆಯುಧ ಕಂಪೆನಿಗಳು ಸಂಗ್ರಹಿಸದಷ್ಟು ಮೌಲ್ಯದ ಸಂಪತ್ತನ್ನು ಸಂಗ್ರಹಿಸಿವೆ. ಅಂದರೆ ಸಂಪತ್ತಿನ ಪ್ರಜಾಪ್ರಭುತ್ವೀಕರಣವನ್ನೂ ಈ ತಂತ್ರಜ್ಞಾನ ಸಾಧಿಸಲಿಲ್ಲ ಎಂದರ್ಥವಲ್ಲವೇ?

ವಿಕೇಂದ್ರೀಕರಣ, ಸಹಕಾರ ತತ್ವ ಸಾಕಾರಕ್ಕೆ ಬೇಕಿರುವ ಎಲ್ಲವನ್ನೂ ತನ್ನೊಳಗೆ ಇಟ್ಟುಕೊಂಡೂ ಅದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಚಲಿಸುತ್ತಿರುವ ಡಿಜಿಟಲ್ ತಂತ್ರಜ್ಞಾನಕ್ಕೊಂದು ಗಾಂಧೀ ಪ್ರಣಾಳಿಕೆಯ ಅಗತ್ಯವಿದೆ. ಅದನ್ನು ರೂಪಿಸುವುದು ಹೇಗೆ ಮತ್ತು ಯಾರು ಎಂಬುದಿಲ್ಲಿ ಪ್ರಶ್ನೆ. ಆರು ವರ್ಷಗಳ ಹಿಂದೆ ಸುಧೀಂದ್ರ ಕುಲಕರ್ಣಿಯವರು ಗಾಂಧೀ ಚಿಂತನೆಯ ಬೆಳಕಿನಲ್ಲಿ ಆಧುನಿಕ ತಂತ್ರಜ್ಞಾನವನ್ನು ಕಾಣಲು ಹೊರಟಾಗ ಇವೆಲ್ಲವೂ ಇರಲಿಲ್ಲ ಎಂದಲ್ಲ. ಅವರು ಈ ತಂತ್ರಜ್ಞಾನದ ಸಾಧ್ಯತೆಯೊಳಗೇ ಪರಿಹಾರಗಳನ್ನೂ ಕಾಣುತ್ತಿದ್ದರು. ಇದೇ ಹೊತ್ತಿನಲ್ಲಿ ತಂತ್ರಜ್ಞಾನ ದೈತ್ಯರೂ ತಮ್ಮ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸುವುದಕ್ಕೂ ತಾಂತ್ರಿಕ ಪರಿಹಾರಗಳನ್ನೇ ಹುಡುಕುತ್ತಿದ್ದರು ಎಂಬ ಅಂಶವನ್ನು ನಾವು ಗಮನಿಸಬೇಕು.

ತಾಂತ್ರಿಕ ಜ್ಞಾನವನ್ನು ಸಮುದಾಯಗಳಿಂದ ಸೃಷ್ಟಿಸಿ ಅವುಗಳ ಮಾಲೀಕತ್ವದಲ್ಲೇ ಇಡುವ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಮಾದರಿಯನ್ನೇ ಸೂಕ್ಷ್ಮವಾಗಿ ಗಮನಿಸಿದರೆ ಇದು ಅರ್ಥವಾಗುತ್ತದೆ. ಲೀನಕ್ಸ್‌ನಂಥ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಕ್ಕಿಂತ ಹೆಚ್ಚು ಜನಪ್ರಿಯವಾಗಿರುವುದು ಮೈಕ್ರೋಸಾಫ್ಟ್‌ನ ವಿಂಡೋಸ್. ಲೀನಕ್ಸ್ ಉಚಿತವಾಗಿ ದೊರೆಯುತ್ತಿತ್ತು. ಈಗಲೂ ದೊರೆಯುತ್ತದೆ. ವಿಂಡೋಸ್ ಯಾವತ್ತೂ ಉಚಿತವಾಗಿರಲಿಲ್ಲ. ಆದರೆ ಅದರ ಅನಧಿಕೃತ ನಕಲುಗಳು ಉಚಿತವಾಗಿ ದೊರೆಯುತ್ತಿದ್ದವು. ಇದನ್ನು ಬಳಸುವುದು ಅನೈತಿಕ ಎಂದು ಗೊತ್ತಿದ್ದೂ ಜನರು ಅವುಗಳನ್ನು ಬಳಸಿದರು. ಎಷ್ಟರಮಟ್ಟಿಗೆ ಎಂದರೆ ಈಗ ಅವರೇ ದುಡ್ಡು ಕೊಟ್ಟು ಖರೀದಿಸುವಷ್ಟರ ಮಟ್ಟಿಗೆ ಅದು ಅಗತ್ಯವಾಗಿ ಹೋಗಿದೆ.

ಮಾರುಕಟ್ಟೆ ಶಕ್ತಿಗಳು ಕೆಲಸ ಮಾಡುವುದೇ ಹೀಗೆ. ಅವು ಪರ್ಯಾಯಗಳನ್ನು ದುರ್ಬಲಗೊಳಿಸುತ್ತಾ ಹೋಗುತ್ತವೆ. ಅದಕ್ಕೆ ಅವು ಬಳಸುವುದು ವ್ಯಕ್ತಿಯ ಲೋಭವನ್ನು. ಆರಂಭದಲ್ಲಿ ವ್ಯಕ್ತಿಯ ಲೋಭ ಗೆಲುವು ಸಾಧಿಸಿತು. ಒಂದು ಹಂತದ ನಂತರ ವಾಣಿಜ್ಯ ಸಂಸ್ಥೆಯ ಲೋಭ ಗೆಲುವು ಸಾಧಿಸಲು ತೊಡಗಿತು. ಲೋಭಿಯಾದ ವ್ಯಕ್ತಿ ಈಗ ನಷ್ಟ ಅನುಭವಿಸಿಯೂ ಅದೇ ಸುಖ ಪಡೆಯಲು ಇಚ್ಛಿಸುತ್ತಿದ್ದಾನೆಯೇ ಹೊರತು ತನಗೆ ನಷ್ಟವಾಗದ ಪರ್ಯಾಯದತ್ತ ನೋಡುತ್ತಿಲ್ಲ.

ಗಾಂಧೀಜಿ ಪ್ರತಿಪಾದಿಸಿದ ವೈಯಕ್ತಿಕ ಮಟ್ಟದ ನೈತಿಕತೆ ಮುಖ್ಯವಾಗುವುದೇ ಈ ಸಂದರ್ಭದಲ್ಲಿ. ಡಿಜಿಟಲ್ ತಂತ್ರಜ್ಞಾನಕ್ಕೆ ನಿಜಕ್ಕೂ ಒಂದು ಗಾಂಧೀ ಪ್ರಣಾಳಿಕೆ ಇದ್ದಿದ್ದರೆ ಈ ಲೋಭದ ಸುಳಿಯಲ್ಲಿ ಸಿಲುಕುವ ಸಾಧ್ಯತೆಯೇ ಉದ್ಭವಿಸುತ್ತಿರಲಿಲ್ಲ. ಡಿಜಿಟಲ್ ಯುಗಕ್ಕೊಂದು ಗಾಂಧೀ ಪ್ರಣಾಳಿಕೆಯ ಅಗತ್ಯ ಈಗಲೂ ಇದೆ. ಗಾಂಧೀ ಚಿಂತನೆಯಂತೆ ನಿರಂತರ ಚಲನಶೀಲವಾಗಿರುವ ಪ್ರಣಾಳಿಕೆಯೊಂದರ ರಚನೆಗೆ ನಾವು ಮುಂದಾಗಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT