ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ತಿ ಪರದೆ ಬಳಕೆ, ಪೋಪ್-ಅಪ್ ಕ್ಯಾಮೆರಾ

ವಿವೊ ನೆಕ್ಸ್
Last Updated 5 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಸ್ಮಾ ರ್ಟ್‌ಫೋನ್‌ಗಳಲ್ಲಿ ಎಷ್ಟು ಸಂಶೋಧನೆ, ಆವಿಷ್ಕಾರ, ಸುಧಾರಣೆಗಳಾಗಿವೆಯೆಂದರೆ ಇನ್ನು ಏನೂ ಸಾಧ್ಯವೇ ಇಲ್ಲವೇನೋ ಎಂಬ ಭಾವನೆ ಬರುವಂತಾಗಿದೆ. ಹಾಗೇನಿಲ್ಲ. ಇದೋ ಬಂದಿದೆ - ಹೊರಬರುವ ಕ್ಯಾಮೆರಾ, ಪರದೆಯಲ್ಲೇ ಬೆರಳಚ್ಚು ಸ್ಕ್ಯಾನರ್ ಇರುವ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಂದಿದೆ. ಇದನ್ನು ತಯಾರಿಸಿದವರು ವಿವೊ ಕಂಪನಿಯವರು. ಕೆಲವು ಕಂಪನಿಗಳು ಕೆಲವು ಸ್ಥಾನಗಳಲ್ಲಿ ತಮ್ಮನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ. ವಿವೊ ಕಂಪನಿ 20 ರಿಂದ 30 ಸಾವಿರ ಬೆಲೆಯ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಸ್ವಲ್ಪ ದುಬಾರಿ ಫೋನ್‌ಗಳನ್ನೂ ತಯಾರಿಸುತ್ತಿದ್ದಾರೆ. ಅಂತಹ ಒಂದು ವಿಶೇಷ ಫೋನ್ ವಿವೊ ನೆಕ್ಸ್ (Vivo Nex) ನಮ್ಮ ಈ ವಾರದ ಗ್ಯಾಜೆಟ್.

ವಿವೊ ಫೋನ್‌ಗಳು ರಚನೆ ಮತ್ತು ವಿನ್ಯಾಸದಲ್ಲಿ ನಿಜಕ್ಕೂ ಉತ್ತಮವಾಗಿವೆ. ವಿವೊ ನೆಕ್ಸ್ ಇದರಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದೆ. ಇಡಿಯ ಪರದೆಯನ್ನು ಬಳಸಿಕೊಳ್ಳಲಾಗಿದೆ. ಪರದೆಯ ಕಚ್ಚು (screen notch) ಇಲ್ಲ. ಇದಕ್ಕೆ ಕಾರಣ ಸ್ಪೀಕರ್ ಇಲ್ಲದಿರುವುದು ಹಾಗೂ ಸ್ವಂತೀ ಕ್ಯಾಮೆರಾವನ್ನು ಪೋಪ್-ಅಪ್ ಕ್ಯಾಮೆರಾವನ್ನಾಗಿಸಲಾಗಿದೆ. ಅಂದರೆ ಸ್ವಂತೀ ತೆಗೆಯುವಾಗ ಫೋನಿನ ಮೇಲ್ಭಾಗದಿಂದ ಕ್ಯಾಮೆರಾ ಹೊರಕ್ಕೆ ಬರುತ್ತದೆ. ಬೇರೆ ಸಮಯದಲ್ಲಿ ಅದು ಫೋನಿನ ದೇಹದ ಒಳಗೆ ಹೋಗಿರುತ್ತದೆ. ಆಮೆ ತನ್ನ ತಲೆ ಕಾಲುಗಳನ್ನು ಬೇಕಾದಾಗ ಹೊರಹಾಕಿ, ಬೇಡವಾದಾಗ ಒಳಕ್ಕೆ ಎಳೆದುಕೊಳ್ಳುವುದನ್ನು ಇದು ನೆನಪಿಸಬಹುದು. ಈ ಫೋನಿನ ಪರದೆ ಮತ್ತು ದೇಹದ ಅನುಪಾತ 91.24%. ಬಹುಶಃ ಸದ್ಯ ಮಾರುಕಟ್ಟೆಯಲ್ಲಿ ಬೇರೆ ಯಾವುದೇ ಫೋನ್ ಇಷ್ಟು ಉತ್ತಮ ಅನುಪಾತ ನೀಡುತ್ತಿಲ್ಲ. ಮಾತನಾಡುವಾಗ ಕಿವಿಗೆ ಧ್ವನಿಯನ್ನು ಊಡಿಸುವ ಸ್ಪೀಕರ್ ಇದರಲ್ಲಿಲ್ಲ. ಅದರ ಬದಲಿಗೆ ಫೋನಿನ ಪರದೆ ಕಂಪಿಸಿ ಧ್ವನಿಯನ್ನುಂಟುಮಾಡುತ್ತದೆ. ಇದರಿಂದಾಗಿ ಧ್ವನಿಯ ಗುಣಮಟ್ಟ ಸ್ವಲ್ಪ ಕಡಿಮೆಯಾದಂತೆ ಅನ್ನಿಸಬಹುದು. ಬಹುಶಃ ವಿವೊದವರು ಈ ವಿಭಾಗದ ಕಡೆ ಇನ್ನು ಸ್ವಲ್ಪ ಜಾಸ್ತಿ ಗಮನ ಹರಿಸಿದ್ದರೆ ಉತ್ತಮವಿತ್ತು. ಆದರೆ ಫೋನಿನ ಕೆಳಭಾಗದಲ್ಲಿರುವ ಹಾಡು, ಸಂಗೀತ ಆಲಿಸಲು ಬಳಸುವ ಸ್ಪೀಕರ್ ಚೆನ್ನಾಗಿದೆ. ಆದರೂ ಮೋನೋ ಸ್ಪೀಕರ್ ಎಂಬ ಕೊರತೆಯಿದೆ.

ಈ ಫೋನಿನ ಪರದೆಯಲ್ಲೇ ಬೆರಳಚ್ಚು ಸ್ಕ್ಯಾನರ್ ಇದೆ. ಅದು ಮುಂಭಾಗದಲ್ಲಿ ಕೆಳಭಾಗದಲ್ಲಿದೆ. ಇದರ ಸಂವೇದನೆ ಸ್ವಲ್ಪ ನಿಧಾನವಿದೆ. ಅಂದರೆ ಇತರೆ ಫೋನ್‌ಗಳಲ್ಲಿರುವ ಬೆರಳಚ್ಚು ಸ್ಕ್ಯಾನರ್‌ಗಳಿಗೆ ಹೋಲಿಸಿದರೆ ಇದು ಸ್ವಲ್ಪ ನಿಧಾನವಾಗಿ ಸ್ಪಂದಿಸುತ್ತದೆ. ಮುಖವನ್ನು ಗುರುತುಹಿಡಿಯುವ ಸೌಲಭ್ಯವಿಲ್ಲ. ಫೋನಿನ ಎಡಭಾಗದಲ್ಲಿ ಒಂದು ವಿಶೇಷ ಬಟನ್ ಇದೆ. ಅದನ್ನು ವಿವೊದವರು ಜೋವಿ (Jovi) ಎಂದು ಕರೆದಿದ್ದಾರೆ. ಅದು ಗೂಗಲ್‌ ಅಸಿಸ್ಟೆಂಟ್ ಮತ್ತು ಕ್ಯಾಮೆರಾ ಬಳಸುತ್ತಿದ್ದಾಗ ಗೂಗಲ್‌ ಲೆನ್ಸ್‌ಗಳನ್ನು ಪ್ರಾರಂಭಿಸುತ್ತದೆ.

ಫೋನಿನ ಕೆಳಭಾಗದಲ್ಲಿ ಸಿಮ್ ಹಾಕುವ ಟ್ರೇ ಮತ್ತು ಯುಎಸ್‌ಬಿ-ಸಿ ಕಿಂಡಿಗಳಿವೆ. ಮೇಲ್ಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿಯಿದೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಹಿಂಭಾಗ ನಯವಾಗಿದೆ ಮತ್ತು ವಿಶೇಷ ವಿನ್ಯಾಸವನ್ನು ಹೊಂದಿದೆ. ಕೈಯಿಂದ ಜಾರಿ ಬೀಳಬಾರದು ಎಂದು ಅವರೇ ಒಂದು ಹೆಚ್ಚಿಗೆ ಕವಚ ನೀಡಿದ್ದಾರೆ.

ವಿವೊ ನೆಕ್ಸ್‌ನಲ್ಲಿರುವುದು ಮೇಲ್ದರ್ಜೆಯ ಪ್ರೊಸೆಸರ್‌. ಇದರ ಅಂಟುಟು ಬೆಂಚ್‌ಮಾರ್ಕ್‌ 2,69,761 ಇದೆ. ಅಂದರೆ ಇದು ಅತಿ ವೇಗದ ಫೋನ್ ಎನ್ನಬಹುದು. ತುಂಬ ಪ್ರೊಸೆಸರ್‌ ಶಕ್ತಿಯನ್ನು ಬೇಡುವ ಆಟಗಳನ್ನು ಆಡುವುದು ಇದರಲ್ಲಿ ಉತ್ತಮ ಅನುಭವ ಎನ್ನಬಹುದು. ಪೂರ್ತಿ ದೇಹದ ಪರದೆ, ಉತ್ತಮ ಆಡಿಯೊ, ವಿಶೇಷ ಗೇಮ್ ಮೋಡ್ ಎಲ್ಲ ಸೇರಿ, ನೀವು ಆಟಪ್ರಿಯರಾದರೆ ಖಂಡಿತ ಈ ಫೋನ್ ಕೊಳ್ಳುವುದನ್ನು ನಾನು ಸಲಹೆ ಮಾಡುತ್ತೇನೆ. ಎಲ್ಲ ನಮೂನೆಯ ವಿಡಿಯೊಗಳನ್ನು ಪ್ಲೇ ಮಾಡಬಹುದು. 4k ವಿಡಿಯೊ ಕೂಡ ಪ್ಲೇ ಆಗುತ್ತದೆ.

ಈ ಫೋನಿನ ಕ್ಯಾಮೆರಾಗಳು ಚೆನ್ನಾಗಿವೆ. 12 ಮತ್ತು 5 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮೆರಾಗಳ ಫಲಿತಾಂಶ ಚೆನ್ನಾಗಿದೆ. ವಿಡಿಯೊಗಳು ಚೆನ್ನಾಗಿ ಬರುತ್ತವೆ. ಒಪ್ಟಿಕಲ್ ಸ್ಟೆಬಿಲೈಸೇಶನ್ ಇದೆ. 4k ವಿಡಿಯೊ ಕೂಡ ಚಿತ್ರೀಕರಿಸಬಹುದು. ಸ್ವಂತೀಗೆಂದೇ ವಿಶೇಷ ಪೋಪ್-ಅಪ್ ಕ್ಯಾಮೆರಾ ಇದೆ. ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೋ ಮೂಡಿಬರುತ್ತದೆ. ಈ ಫೋನಿನ ಆಡಿಯೊ ಇಂಜಿನ್ ಚೆನ್ನಾಗಿದೆ. ಇಯರ್‌ಬಡ್ ನೀಡಿದ್ದಾರೆ. ಜೊತೆಗೆ ಎರಡು ಅಧಿಕ ಕುಶನ್ ನೀಡಿದ್ದಾರೆ. ಆದರೆ ಈ ಇಯರ್‌ಬಡ್ ನನಗೆ ತೃಪ್ತಿ ನೀಡಲಿಲ್ಲ. ನನ್ನಲ್ಲಿರುವ ಉತ್ತಮ ಇಯರ್‌ಫೋನ್ (ಬೋಸ್) ಜೋಡಿಸಿದಾಗ ಅತ್ಯುತ್ತಮವಾದ ಸಂಗೀತದ ಅನುಭವವಾಯಿತು.

ಇದರಲ್ಲಿ 4000mAh ಶಕ್ತಿಯ ಬ್ಯಾಟರಿಯಿದೆ. ಅದರಿಂದಾಗಿ ಫೋನ್ ಸ್ವಲ್ಪ ತೂಕದ್ದಾಗಿಯೂ ಇದೆ. ಬ್ಯಾಟರಿ ಬಾಳಿಕೆ ಚೆನ್ನಾಗಿದೆ. ವೇಗವಾಗಿ ಚಾರ್ಜ್ ಆಗುವ ಸೌಕರ್ಯವಿದೆ. ಸುಮಾರು 100 ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಕನ್ನಡದ ತೋರುವಿಕೆ, ಯೂಸರ್ ಇಂಟರ್‌ಫೇಸ್ ಎಲ್ಲ ಇವೆ.

ಬೆಲೆಯನ್ನು ಸುಮಾರು 4-5 ಸಾವಿರ ಕಡಿಮೆ ಮಾಡಿದ್ದರೆ ಇದು ಒನ್‌ಪ್ಲಸ್‌ಕ್ಕೆ ನೇರ ಪ್ರತಿಸ್ಪರ್ಧಿಯಾಗುತ್ತಿತ್ತು. ₹45 ಸಾವಿರ ಕೊಡಲು ನೀವು ತಯಾರಿದ್ದರೆ ಇದು ಉತ್ತಮ ಫೋನ್ ಎನ್ನುವುದರಲ್ಲಿ ಅನುಮಾನವಿಲ್ಲ.

ವಾರದ ಆ್ಯಪ್‌ (app)
ಗಣಿತ ಕನ್ನಡ (Kannada Learn Maths Mathematics Kids ಗಣಿತ ಕನ್ನಡ)

ಗೂಗಲ್‌ ಪ್ಲೇ ಸ್ಟೋರಿನಲ್ಲಿ ಕನ್ನಡದ ಕಿರುತಂತ್ರಾಂಶಗಳೂ (ಆ್ಯಪ್‌) ಇವೆ. ಅಂತಹ ಕೆಲವು ಕಿರುತಂತ್ರಾಂಶಗಳ ಕೊಂಡಿಗಳನ್ನು ಈ ಅಂಕಣದಲ್ಲಿ ನೀಡಲಾಗಿದೆ. ಈ ಸಲ ಅಂತಹ ಇನ್ನೊಂದು ಕಿರುತಂತ್ರಾಂಶದ ಕಡೆ ಗಮನ ಹರಿಸೋಣ. ಇದು ಚಿಕ್ಕ ಮಕ್ಕಳಿಗೆ ಕನ್ನಡದಲ್ಲೇ ಅಂಕಗಣಿತದ ಮೂಲಭೂತ ಕಾರ್ಯಾಚರಣೆಗಳನ್ನು ಕಲಿಸುತ್ತದೆ. ಇದರಲ್ಲಿ ಕನ್ನಡ ಅಂಕೆಗಳಲ್ಲೇ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರಗಳಿವೆ. ಈ ಕಿರುತಂತ್ರಾಂಶ ಬೇಕಿದ್ದರೆ ನೀವು ಪ್ಲೇ ಸ್ಟೋರಿನಲ್ಲಿ ‘Kannada Learn Maths Mathematics Kids ಗಣಿತ ಕನ್ನಡ’ ಎಂದು ಹುಡುಕಬೇಕು ಅಥವಾ http://bit.ly/gadgetloka345 ಜಾಲತಾಣಕ್ಕೆ ಭೇಟಿ ನೀಡಬೇಕು. ಇದರಲ್ಲಿ ಪರೀಕ್ಷೆಯೂ ಇದೆ.

ಗ್ಯಾಜೆಟ್ ಪದ
Pixel = ದೃಶ್ಯಬಿಂದು

ಗಣಕ, ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಅಥವಾ ಸ್ಮಾರ್ಟ್‌ಫೋನಿನ ಪರದೆಯ ಮೇಲೆ ಚಿತ್ರಗಳನ್ನು ಮೂಡಿಸಲು ಬಳಕೆಯಾಗುವ ಒಂದು ಚುಕ್ಕೆ. ಇಂತಹ ಹಲವು ದೃಶ್ಯಬಿಂದುಗಳು ಸೇರಿ ಚಿತ್ರವಾಗುತ್ತದೆ. ಪರದೆಯ ರೆಸ್ಯೂಲೂಶನ್ ಅನ್ನು ಪಿಕ್ಸೆಲ್‌ನಲ್ಲಿ ಅಳೆಯಲಾಗುತ್ತದೆ. ಉದಾಹರಣೆಗೆ 720 x 1280, 1080 x 1920, 1080 x 2316, ಇತ್ಯಾದಿ. ಈ ರೆಸ್ಯೂಲೂಶನ್‌ ಜಾಸ್ತಿ ಇದ್ದಷ್ಟೂ ಉತ್ತಮ ಚಿತ್ರ ಮೂಡಿಬರುತ್ತದೆ.

ಗ್ಯಾಜೆಟ್ ಸುದ್ದಿ
₹ 45 ಲಕ್ಷ ಬೆಲೆಯ ಹೆಡ್‌ಫೋನ್

ಸೆನ್‌ಹೈಸರ್ ಕಂಪನಿ ಜಗತ್ತಿನಲ್ಲೇ ಅತಿ ದುಬಾರಿ ಹೆಡ್‌ಸೆಟ್ ತಯಾರಿಸಿದೆ. ಇದರ ಬೆಲೆ ಬರೋಬ್ಬರಿ ₹45 ಲಕ್ಷ. ಇದು ಕೇವಲ ಹೆಡ್‌ಸೆಟ್ ಅಲ್ಲ. ಇದರ ಜೊತೆ ಅಂಪ್ಲಿಫೈಯರ್ ಕೂಡ ಇದೆ. ಈ ಆಂಪ್ಲಿಫೈಯರ್ ಕೂಡ ವಿಶೇಷವಾದುದು. ಇದರಲ್ಲಿ ಬಳಕೆಯಾಗಿರುವುದು ನಿರ್ವಾತ ಕೊಳವೆಗಳು (vacuum tubes). ಹೆಡ್‌ಸೆಟ್‌ನ ಎಡ ಬಲ ಸ್ಪೀಕರುಗಳ ಒಳಗೆ ಪ್ರತ್ಯೇಕ ಅಂಪ್ಲಿಫೈಯರ್‌ಗಳಿವೆ. ಈ ಹೆಡ್‌ಸೆಟ್‌ನ ವ್ಯತ್ಯಯ (Total Harmonic Distortion = THD) ಕೇವಲ 0.01% ಇದೆ.

ಗ್ಯಾಜೆಟ್ ಸಲಹೆ

ದೇವೇಂದ್ರರ ಪ್ರಶ್ನೆ: ಸುಮಾರು ₹15,000 ಕ್ಕೆ ಒಂದು ಉತ್ತಮ ಫೋನ್ ಸೂಚಿಸಿ.
ಉ: ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1. 6+64 ಗಿಗಾಬೈಟ್ ಮೆಮೊರಿ, 16+5, 16 ಮೆಗಾಪಿಕ್ಸೆಲ್ ಕ್ಯಾಮೆರಾ, 5000 mAh ಬ್ಯಾಟರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT