ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಂದೇ ಭಾಷೆ, ಧರ್ಮ ದೇಶವನ್ನು ಒಟ್ಟಾಗಿ ಇರಿಸದು

ಬಂಗಾಳಿಯ ಮೇಲೆ ಉರ್ದು ಹೇರಿಕೆಯೇ ಪಾಕಿಸ್ತಾನದ ವಿಭಜನೆಗೆ ಮುಖ್ಯ ಕಾರಣ
Last Updated 25 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಮೈಕ್ರೊಫಿಲ್ಮ್‌ನಲ್ಲಿರುವ ಹಳೆಯ ವಾರ್ತಾಪತ್ರಿಕೆಗಳನ್ನು ಓದುವುದರಿಂದ ದೊರೆಯುವ ಒಂದು ಆನಂದವೆಂದರೆ ಅನಿರೀಕ್ಷಿತವಾದ ಶೋಧಗಳು ಸಾಧ್ಯವಾಗುವುದು. 1947ರ ಆಗಸ್ಟ್- ಸೆಪ್ಟೆಂಬರ್‌ನಲ್ಲಿ ಗಾಂಧೀಜಿ ಅವರು ಕೋಲ್ಕತ್ತದಲ್ಲಿ ತಂಗಿದ್ದುದರ ಬಗೆಗಿನ ವರದಿಗಳನ್ನು ನೋಡುತ್ತಿದ್ದಾಗ ಅಪರಿಚಿತ ಭಾರತೀಯರೊಬ್ಬರು ಬರೆದ ವಿಶಿಷ್ಟ ಪತ್ರವೊಂದು ನನ್ನ ಕಣ್ಣಿಗೆ ಬಿತ್ತು. ಆ ವ್ಯಕ್ತಿ ಡಂಡಂನಲ್ಲಿ ನೆಲೆಸಿದ್ದ ಎಂ.ಎಸ್.‍ ಅಲಿ. 1947ರ ಆಗಸ್ಟ್‌ 12ರ ‘ದ ಸ್ಟೇಟ್ಸ್‌ಮನ್‍’ನಲ್ಲಿ ಪ್ರಕಟವಾಗಿದ್ದ ಆ ಪತ್ರ ಹೀಗಿತ್ತು:

‘ಮಾನ್ಯರೇ, ಪಾಕಿಸ್ತಾನವು ಐದು ಪ್ರಾಂತ್ಯಗಳನ್ನು ಹೊಂದಿರಲಿದೆ ಮತ್ತು ಈ ಒಂದೊಂದು ಪ್ರಾಂತ್ಯವೂ ತನಗೇ ವಿಶಿಷ್ಟವಾದ ಭಾಷೆಯನ್ನು ಹೊಂದಿದೆ. ಇವುಗಳಲ್ಲಿ ಬಂಗಾಳಿ ಅತ್ಯಂತ ಮುಂದುವರಿದ ಭಾಷೆ, ಇತರ ಭಾಷೆಗಳಿಗೆ ಹೋಲಿಸಿದರೆ ಅದರ ಪದಸಂಪತ್ತು ಶ್ರೀಮಂತವೂ ಹೆಚ್ಚು ಅನುಕೂಲಕರವೂ ಆಗಿದೆ.

‘ಉರ್ದು ಅತ್ಯಂತ ಮುಂದುವರಿದ ಮತ್ತು ಸಮೃದ್ಧ ಭಾಷೆ ಆಗಿದ್ದರೂ ಅದು ಭಾರತ ಅಥವಾ ಪಾಕಿಸ್ತಾನದ ಜನ ಬಳಕೆಯ ಭಾಷೆ ಅಲ್ಲ. ವಾಯವ್ಯ ಭಾರತದ ಸುಶಿಕ್ಷಿತ ಮುಸ್ಲಿಮರು ಮಾತ್ರ ಉರ್ದು ಬಳಸುತ್ತಾರೆ. ಹಾಗಾಗಿಯೇ ಈ ಭಾಷೆಯನ್ನು ಪಾಕಿಸ್ತಾನದ ಅಧಿಕೃತ ಭಾಷೆ ಮಾಡಬಾರದು. ಹಾಗೆಯೇ, ಪಾಕಿಸ್ತಾನದಪ್ರಾಂತ್ಯಗಳಲ್ಲಿ ಈ ಭಾಷೆಯನ್ನು ಕಲಿಕಾ ಮಾಧ್ಯಮವನ್ನಾಗಿಯೂ ಮಾಡಬಾರದು. ಭಾರತೀಯ ಅಥವಾ ಯುರೋಪ್‍ನ ಯಾವುದಾದರೊಂದು ಭಾಷೆಯನ್ನು ಪಾಕಿಸ್ತಾನದ ಪ್ರಾಂತ್ಯಗಳ ಮೇಲೆ ಹೇರಿದರೆ ಆ ಭಾಷೆ ಮಾತನಾಡುವ ಜನರ ಗುಂಪಿನ ಕೈ ಮೇಲಾಗುತ್ತದೆ. ಇದು ಪಾಕಿಸ್ತಾನದ ಸಮಗ್ರ ಪ್ರಗತಿಗೆ ಮಾರಕ.

‘ಪ್ರತಿ ಪ್ರಾಂತ್ಯದಲ್ಲಿಯೂ ವಿವಿಧ ಭಾಷೆಗಳಲ್ಲಿ ಪರಿಣತರಾದವರ ಒಂದು ಮಂಡಳಿ ಇರಬೇಕು ಮತ್ತು ಅಂತರ ಪ್ರಾಂತೀಯ ಪತ್ರವ್ಯವಹಾರ ಹಾಗೂ ಅಂತರಸಂಬಂಧಿ ವಿಚಾರಗಳ ಬಗ್ಗೆ ಈ ಮಂಡಳಿಯು ಗಮನಹರಿಸಬೇಕು ಎಂಬುದು ನನ್ನ ಸಲಹೆ. ಇದು ಭಾಷಾ ಸಮಸ್ಯೆಯನ್ನು ಬಗೆಹರಿಸುತ್ತದೆ. ಪ್ರಾಂತ್ಯಗಳ ಹಾಗೆಯೇ ಕೇಂದ್ರವೂ ತನ್ನದೇ ಆದ ಭಾಷಾ ಮಂಡಳಿಯನ್ನು ಹೊಂದಿರಬೇಕು; ಈ ಮೂಲಕ ಯಾವುದೇ ಭಾಷೆಯನ್ನು ತನ್ನದೇ ಭಾಷೆಯಾಗಿ ಅಳವಡಿಸಿಕೊಳ್ಳುವ ಸಾಮರ್ಥ್ಯ ಪಡೆಯಬೇಕು. ಕೇಂದ್ರಕ್ಕೆ ತನ್ನದೇ ಆದ ಅಧಿಕೃತ ಭಾಷೆಯೊಂದು ಬೇಕು ಎಂದಾದರೆ ಇಂಗ್ಲಿಷನ್ನೇ ಆ ಭಾಷೆಯಾಗಿ ಆಯ್ಕೆ ಮಾಡಬೇಕು ಎಂಬುದು ನನ್ನ ಸಲಹೆ’.

ಈ ಪತ್ರ ಬರೆದ ವ್ಯಕ್ತಿಯು ಬಂಗಾಳಿ ಮಾತನಾಡುವ ಮುಸ್ಲಿಂ. ತಾನಿರುವ ಪ್ರಾಂತ್ಯವು ಪಾಕಿಸ್ತಾನದ ಭಾಗವಾದ ಬಳಿಕ ಪ್ರಾಂತ್ಯದ ಪೂರ್ವ ಭಾಗದಲ್ಲಿ ನೆಲೆಸಲು ಬಹುಶಃ ಅವರು ಯೋಚಿಸಿರಬೇಕು. ಹಾಗಿದ್ದರೂ ಅವರ ಪತ್ರದಲ್ಲಿ ಪ್ರಾಂತೀಯ ಎಂದು ಹೇಳಬಹುದಾದ ಬಂಗಾಳಿ ಭಾವನಾತ್ಮಕತೆ ಕಾಣಿಸಲಿಲ್ಲ. ಇನ್ನೇನು ರಚನೆಯಾಗಲಿರುವ ಪಾಕಿಸ್ತಾನದ ಇತರ ಪ್ರಾಂತ್ಯಗಳೂ ತಮ್ಮದೇ ಆದ ಪ್ರಬಲ ಭಾಷೆಗಳನ್ನು ಹೊಂದಿವೆ, ಮತ್ತು ಯಾವ ಪ್ರಾಂತ್ಯದಲ್ಲಿಯೂ ಉರ್ದು ಪ್ರಮುಖ ಭಾಷೆ ಅಲ್ಲ ಎಂಬುದರ ಅರಿವು ಅಲಿ ಅವರಿಗೆ ಇತ್ತು. ಪಂಜಾಬ್‌ ಪ್ರದೇಶದ ಜನರು ಪಂಜಾಬಿ, ಸಿಂಧ್‌ ಪ್ರದೇಶದ ಜನರು ಸಿಂಧಿ, ವಾಯವ್ಯ ಗಡಿ ಪ್ರಾಂತ್ಯದ ಜನರು ಮುಖ್ಯವಾಗಿ ಪಶ್ತೂ ಮತ್ತು ಬಲೂಚಿಸ್ತಾನದ ಬಹುತೇಕ ಜನರು ಬಲೂಚ್‌ ಭಾಷೆಗಳನ್ನು ಮಾತನಾಡುವವರು. ಹಾಗಾಗಿಯೇ ಭಾಷೆಗಳಲ್ಲಿ ಒಂದೊಂದನ್ನೂ ಗೌರವಿಸಬೇಕು ಮತ್ತು ಅವುಗಳ ಸುಧಾರಣೆಗೆ ಶ್ರಮಿಸಬೇಕು ಎಂದು ಅಲಿ ಕೋರಿದ್ದರು. ಇದರ ಜತೆಗೆ, ಭವಿಷ್ಯದ ಪಾಕಿಸ್ತಾನದ ಬಹುಸಂಖ್ಯಾತರಿಗೆ ಸಂಪೂರ್ಣವಾಗಿ ವಿದೇಶೀಯವಾದ ಉರ್ದು ಭಾಷೆಯನ್ನು ಹೇರುವುದು ಸರಿಯಲ್ಲ ಎಂದೂ ಅವರು ಹೇಳಿದ್ದರು.

ಈ ಭಾವನೆಗಳು ಮೆಚ್ಚತಕ್ಕವು ಮತ್ತು ದೂರದೃಷ್ಟಿಯವೇ ಆಗಿದ್ದರೂ ಪಾಕಿಸ್ತಾನದ ಸ್ಥಾಪಕ ಮುಹಮ್ಮದ್‌ ಅಲಿ ಜಿನ್ನಾ ಇದನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ತಾವು ರೂಪಿಸುವ ದೇಶದಲ್ಲಿ ಒಂದೇ ಧರ್ಮ ಮತ್ತು ಒಂದೇ ಭಾಷೆ ಇರಬೇಕು ಎಂದು ಜಿನ್ನಾ ಅವರು ದೃಢವಾಗಿ ನಿರ್ಧರಿಸಿದ್ದರು. ಈ ವಿಚಾರದಲ್ಲಿ ಜಿನ್ನಾ ಅವರು ಪಶ್ಚಿಮದ ರಾಷ್ಟ್ರ ನಿರ್ಮಾಣ ಮಾದರಿಗಳಿಂದ ಗಾಢವಾಗಿ ಪ್ರಭಾವಕ್ಕೆ ಒಳಗಾಗಿದ್ದರು– ಅಲ್ಲಿ ಒಂದು ಪ್ರದೇಶದಲ್ಲಿ ವಾಸಿಸುವ ಜನರನ್ನು ಒಂದೇ ಧರ್ಮ ಮತ್ತು ಭಾಷೆಯ ವ್ಯಾಪ್ತಿಗೆ ಬಲವಂತವಾಗಿ ತಂದು ಒಗ್ಗಟ್ಟು ಮೂಡಿಸಲಾಗುತ್ತಿತ್ತು. ಆದರೆ, ಜಿನ್ನಾ ಅವರ ಸಮಕಾಲೀನ ಹಾಗೂ ಬಹುದೊಡ್ಡ ಪ್ರತಿಸ್ಪರ್ಧಿ ಗಾಂಧಿ ಅವರು ರಾಷ್ಟ್ರ ನಿರ್ಮಾಣದಲ್ಲಿ ವ್ಯತಿರಿಕ್ತವಾದ ದಾರಿಯನ್ನೇ ಆಯ್ಕೆ ಮಾಡಿಕೊಂಡರು. ಗಾಂಧೀಜಿಯ ರಾಷ್ಟ್ರದಲ್ಲಿ ವೈವಿಧ್ಯ ಮತ್ತು ಭಿನ್ನತೆಗಳಿಗೆ ಗೌರವವಿತ್ತು ಮತ್ತು ಒಂದೇ ಭಾಷೆ ಅಥವಾ ಧರ್ಮದ ಆಧಾರದಲ್ಲಿ ಪೌರತ್ವದ ಗುರುತಿಸುವಿಕೆಯನ್ನು ಅವರು ವಿರೋಧಿಸಿದ್ದರು.

ಪಾಕಿಸ್ತಾನ ರಚನೆಯಾಗಿ ಆರು ತಿಂಗಳ ಬಳಿಕ ದೇಶದ ಪೂರ್ವದ ಪ್ರದೇಶಕ್ಕೆ ಗವರ್ನರ್‌ ಜನರಲ್ ಜಿನ್ನಾ ಭೇಟಿಕೊಟ್ಟರು. 1948ರ ಮಾರ್ಚ್‌ 21ರಂದು ಢಾಕಾದಲ್ಲಿ ಅವರು ಮಾಡಿದ ಮಹತ್ವದ ಭಾಷಣದಲ್ಲಿ ಹೀಗೆಂದಿದ್ದರು: ‘ಈ ಪ್ರಾಂತ್ಯ ಮತ್ತು ದೇಶದ ಅಧಿಕೃತ ಭಾಷೆಯಾಗಿ ಬಂಗಾಳಿ ಅಥವಾ ಉರ್ದು ಇರಬೇಕೇ ಎಂಬ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಹೆಚ್ಚೇ ಅನಿಸುವಷ್ಟು ಉದ್ವೇಗಕ್ಕೆ ಕಾರಣವಾಗುತ್ತಿದೆ. ಈ ವಿಚಾರದಲ್ಲಿ, ಕೆಲವು ರಾಜಕೀಯ ಅವಕಾಶವಾದಿಗಳು ಢಾಕಾದಲ್ಲಿ ವಿದ್ಯಾರ್ಥಿಗಳನ್ನು ಬಳಸಿಕೊಂಡು ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಅಪಮಾನಕರ ಪ್ರಯತ್ನಗಳನ್ನು ಮಾಡಿದ್ದಾರೆ’.

‘ಪಾಕಿಸ್ತಾನ ಮತ್ತು ವಿಶೇಷವಾಗಿ ನಿಮ್ಮ ಪ್ರಾಂತ್ಯ ಈಗಲೂ ಎದುರಿಸುತ್ತಿರುವ ಅಪಾಯಗಳ ಬಗ್ಗೆ ಈ ಮೊದಲಿನಂತೆ, ಮತ್ತೊಮ್ಮೆ ಸ್ಪಷ್ಟವಾದ ಎಚ್ಚರಿಕೆ ಕೊಡಲು ಬಯಸುತ್ತೇನೆ. ಪಾಕಿಸ್ತಾನದ ರಚನೆಯನ್ನು ತಡೆಯಲು ಪ್ರಯತ್ನಿಸಿ ವಿಫಲರಾದವರು, ತಮ್ಮ ವೈಫಲ್ಯದಿಂದ ಹತಾಶರಾಗಿದ್ದಾರೆ. ಹಾಗಾಗಿಯೇ ಪಾಕಿಸ್ತಾನದ ಈ ಶತ್ರುಗಳು ದೇಶದಲ್ಲಿರುವ ಮುಸ್ಲಿಮರನ್ನು ವಿಭಜಿಸಿ ಇಲ್ಲಿ ಕೋಲಾಹಲ ಸೃಷ್ಟಿಸುವತ್ತ ಗಮನ ಹರಿಸಿದ್ದಾರೆ. ಪ್ರಾಂತೀಯತೆಯನ್ನು ಉತ್ತೇಜಿಸುವ ಮೂಲಕ ಈ ಪ್ರಯತ್ನಗಳು ರೂಪ ಪಡೆದುಕೊಂಡಿವೆ’ ಎಂದು ಜಿನ್ನಾ ಎಚ್ಚರಿಕೆ ಕೊಟ್ಟಿದ್ದರು.

ಭಾಷೆಯ ಬಗ್ಗೆ ತಮ್ಮ ಭಾವನೆಯನ್ನು ಜಿನ್ನಾ ಇನ್ನಷ್ಟು ವಿವರಿಸಿದ್ದರು: ‘ಈ ಪ್ರಾಂತ್ಯದ ಅಧಿಕೃತ ಭಾಷೆಯಾಗಿ ಬಂಗಾಳಿಯನ್ನು ಆಯ್ಕೆ ಮಾಡಬೇಕೇ ಎಂಬುದು ಇಲ್ಲಿನ ಚುನಾಯಿತ ಜನಪ್ರತಿನಿಧಿಗಳು ನಿರ್ಧರಿಸಬೇಕಾದ ವಿಚಾರ. ಸಕಾಲದಲ್ಲಿ ಈ ಪ್ರಾಂತ್ಯದ ನಿವಾಸಿಗಳ ಇಚ್ಛೆಗೆ ಅನುಗುಣವಾಗಿ ಈ ವಿಚಾರ ನಿರ್ಧಾರವಾಗಲಿದೆ ಎಂಬುದರಲ್ಲಿ ನನಗೆ ಯಾವುದೇ ಅನುಮಾನ ಇಲ್ಲ. ಬಂಗಾಳಿ ಭಾಷೆಗೆ ಸಂಬಂಧಿಸಿ ನಿಮ್ಮ ದೈನಂದಿನ ಜೀವನ ತೊಂದರೆಗೆ ಒಳಗಾಗಲಿದೆ ಎಂಬ ವದಂತಿಗಳಲ್ಲಿ ಯಾವುದೇ ಸತ್ಯ ಇಲ್ಲ ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ನಿಮಗೆ ಹೇಳಲು ಬಯಸುತ್ತೇನೆ. ನಿಮ್ಮ ಪ್ರಾಂತ್ಯದ ಭಾಷೆ ಯಾವುದಾಗಿರಬೇಕು ಎಂಬುದನ್ನು ನಿರ್ಧರಿಸುವುದು ನೀವೇ ಹೊರತು ಬೇರೆ ಯಾರೂ ಅಲ್ಲ’ ಎಂದು ಜಿನ್ನಾ ಹೇಳಿದ್ದರು.

ಗಾಢವಾದ ಪ್ರಾದೇಶಿಕ ಭಾವನೆಗಳಿಗೆ ಕೊಟ್ಟ ಸಮ್ಮತಿಯಂತೆ, ಬಂಗಾಳಿಗಳು ತಮ್ಮ ಭಾಷೆಯ ಬಗ್ಗೆ ಹೊಂದಿದ್ದ ಅಭಿಮಾನಕ್ಕೆ ಸೂಚಿಸಿದ ಮೆಚ್ಚುಗೆಯಂತೆ ಈ ಮಾತು ಕಾಣಿಸುತ್ತದೆ. ಹಾಗಿದ್ದರೂ ‘ಪಾಕಿಸ್ತಾನದ ಅಧಿಕೃತ ಭಾಷೆಯಾಗಿ ಉರ್ದುವನ್ನು ಆಯ್ಕೆ ಮಾಡಲಾಗುತ್ತದೆಯೇ ಹೊರತು ಬೇರೆ ಯಾವುದೇ ಭಾಷೆಯನ್ನಲ್ಲ. ಈ ವಿಚಾರದಲ್ಲಿ ನಿಮ್ಮನ್ನು ತಪ್ಪು ದಾರಿಗೆ ಎಳೆಯುವ ಯಾವುದೇ ವ್ಯಕ್ತಿ ಪಾಕಿಸ್ತಾನದ ಶತ್ರು. ಇಡೀ ದೇಶಕ್ಕೆ ಒಂದೇ ಭಾಷೆ ಇಲ್ಲದೇ ಹೋದರೆ ಒಂದು ದೇಶವಾಗಿ ಒಗ್ಗಟ್ಟಾಗಿ ಮುಂದಕ್ಕೆ ಸಾಗುವುದು ಸಾಧ್ಯವಾಗದು. ಬೇರೆ ದೇಶಗಳ ಇತಿಹಾಸವನ್ನು ನೋಡಿ. ಹಾಗಾಗಿ ಅಧಿಕೃತ ಭಾಷೆಯ ವಿಚಾರದಲ್ಲಿ ಹೇಳುವುದಾದರೆ, ಪಾಕಿಸ್ತಾನಕ್ಕೆ ಉರ್ದುವೇ ಅಧಿಕೃತ ಭಾಷೆ’ ಎಂದು ಜಿನ್ನಾ ಅಂದು ಹೇಳಿದ್ದರು.

ಹೀಗೆ, ಜಿನ್ನಾ ಅವರ ಪಾಕಿಸ್ತಾನದಲ್ಲಿ ಶಿಕ್ಷಣ, ಉದ್ಯೋಗಮತ್ತು ಸರ್ಕಾರಿ ಪತ್ರವ್ಯವಹಾರದಲ್ಲಿ ಬಂಗಾಳಿ ಮತ್ತು ಇಂತಹ ಇತರ ಭಾಷೆಗಳು ಉರ್ದುವಿನ ಅಡಿಯಾಳಾದವು. ಪಾಕಿಸ್ತಾನಕ್ಕೆ ಒಂದು ಅಧಿಕೃತ ಭಾಷೆ ಇರಬೇಕು ಎಂಬ ವಿಚಾರದಲ್ಲಿ ಜಿನ್ನಾ ಅವರು ಒಂದು ರೀತಿಯ ಭ್ರಮೆಯನ್ನು ಪ್ರದರ್ಶಿಸಿದ್ದರು. ಪೌರತ್ವಕ್ಕಾಗಿ ನಿರ್ದಿಷ್ಟ ಮಾನದಂಡವನ್ನು ಅಳವಡಿಸಿಕೊಳ್ಳದೇ ಇದ್ದರೆ ಹೊಸದಾಗಿ ರೂಪುಗೊಂಡ ತಮ್ಮ ದೇಶ ಛಿದ್ರವಾಗಬಹುದು ಎಂಬ ಅನುಮಾನ ಜಿನ್ನಾ ಅವರಿಗೆ ಇತ್ತು. ಪಾಕಿಸ್ತಾನವು ಮುಸ್ಲಿಂ ದೇಶವಾಗಿ ಮತ್ತು ಉರ್ದು ಭಾಷಿಕ ದೇಶವಾಗಿಯೇ ಗುರುತಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಜಿನ್ನಾ ಬಯಸಿದ್ದರು.

ಇನ್ನೊಂದೆಡೆ, ಗಾಂಧೀಜಿ ಮತ್ತು ಅವರನ್ನು ಅನುಸರಿಸಿದ ಜವಾಹರಲಾಲ್‌ ನೆಹರೂ ಅವರು ಪೌರತ್ವದ ಕಲ್ಪನೆಯ ವಿಚಾರದಲ್ಲಿ ಹೆಚ್ಚು ವಿಶಾಲವಾದ ನಿಲುವನ್ನು ಅಳವಡಿಸಿಕೊಂಡಿದ್ದರು. ಒಂದು ಧರ್ಮದ ಜತೆ ಗುರುತಿಸಿಕೊಳ್ಳುವುದು ಈ ದೇಶಕ್ಕೆ ಕಡ್ಡಾಯ ಆಗಿರಲಿಲ್ಲ; ಹಾಗೆಯೇ ಭಾರತದ ಹತ್ತಾರು ಭಾಷೆಗಳಲ್ಲಿ ಒಂದನ್ನು ಮೇಲ್ಮಟ್ಟದ ಸ್ಥಾನಕ್ಕೆ ಏರಿಸುವ ಅಗತ್ಯವೂ ಇರಲಿಲ್ಲ. ಭಾರತವು ಹಿಂದೂ ರಾಷ್ಟ್ರ ಆಗಲಿಲ್ಲ, ಹಿಂದಿಯನ್ನು ದೇಶದ ದಕ್ಷಿಣ ಹಾಗೂ ಈಶಾನ್ಯ ಭಾಗಗಳ ಮೇಲೆ ಹೇರುವ ಕೆಲಸವೂ ನಡೆಯಲಿಲ್ಲ. ಭಾರತಕ್ಕೆ ಅಧಿಕೃತ ಭಾಷೆ ಇಲ್ಲ; ಯಾವುದೇ ರಾಜ್ಯ ತನ್ನದೇ ಆದ ಭಾಷಿಕ ಪರಂಪರೆಯನ್ನು ಅಭಿವೃದ್ಧಿಪಡಿಸಲು ಸ್ವತಂತ್ರವಾಗಿದೆ.

ಬಂಗಾಳಿಯನ್ನು ಬಿಟ್ಟು ಉರ್ದು ಭಾಷೆಯನ್ನು ಅಧಿಕೃತ ಎಂದು ಘೋಷಿಸಿದ್ದೇ ಪೂರ್ವ ಪಾಕಿಸ್ತಾನದಲ್ಲಿ ಪ್ರತ್ಯೇಕತಾವಾದ ತೀವ್ರಗೊಳ್ಳಲು ಮುಖ್ಯ ಕಾರಣ ಎಂಬುದು ಎಲ್ಲರಿಗೂ ಗೊತ್ತಿದೆ. ಕ್ರಮೇಣ, ಈ ಪ್ರತ್ಯೇಕತಾಭಾವದಿಂದಾಗಿಯೇ ಬಾಂಗ್ಲಾ ದೇಶ ಎಂಬ ಹೊಸ ದೇಶ ಸೃಷ್ಟಿಯಾಯಿತು. ‘ಒಂದು ಅಧಿಕೃತ ಭಾಷೆ ಇಲ್ಲದೆ ಯಾವ ದೇಶವೂ ಒಗ್ಗಟ್ಟಾಗಿ ಉಳಿಯಲು ಸಾಧ್ಯವಿಲ್ಲ’ ಎಂದು ಜಿನ್ನಾ ಹೇಳಿದ್ದರು. ಆದರೆ, ವಾಸ್ತವದಲ್ಲಿ ಅದಕ್ಕೆ ತದ್ವಿರುದ್ಧವಾದುದೇ ಆಯಿತು. ಇಡೀ ದೇಶದ ಮೇಲೆ ಒಂದು ಭಾಷೆಯ ಹೇರಿಕೆಯಿಂದಾಗಿಯೇ ಪಾಕಿಸ್ತಾನವು ಒಂದಾಗಿ ಉಳಿಯಲು ಸಾಧ್ಯವಾಗಲಿಲ್ಲ, ಬದಲಿಗೆ ಅದು ಎರಡಾಗಿ ಇಬ್ಭಾಗವಾಯಿತು. ಜಿನ್ನಾ ಅವರು ಎಂ.ಎಸ್‌. ಅಲಿಯ ಪ್ರಕಟಿತ ಪತ್ರವನ್ನು ಓದಿದ್ದಿದ್ದರೆ, ಆ ಸಲಹೆಗಳಲ್ಲಿನ ವಿವೇಕವನ್ನು ಅರ್ಥ ಮಾಡಿಕೊಂಡಿದ್ದಿದ್ದರೆ ಬಾಂಗ್ಲಾದೇಶ ಸೃಷ್ಟಿಯಾಗುತ್ತಲೇ ಇರಲಿಲ್ಲವೇನೋ.

ಕೊನೆಯ ಒಂದು ಅಂಶವನ್ನು ಇಲ್ಲಿ ಪ್ರಸ್ತಾಪಿಸಬೇಕು. ಆರ್‌ಎಸ್‌ಎಸ್‌ ಪ್ರತಿಪಾದಿಸುವ ರಾಷ್ಟ್ರೀಯತೆಯು ಜಿನ್ನಾ ಪ್ರತಿಪಾದಿಸಿದ ರಾಷ್ಟ್ರೀಯತೆಯ ನೆರಳಚ್ಚು. ಅವರ ಪ್ರಕಾರ, ಸರಿಯಾದ ಭಾರತೀಯ ಹಿಂದೂ ಆಗಿರಬೇಕು ಮತ್ತು ಹಿಂದಿ ಮಾತನಾಡಲು ಗೊತ್ತಿರಬೇಕು. ಭಾರತದಲ್ಲಿರುವ ಎಲ್ಲ ಧರ್ಮಗಳಿಗಿಂತ ಹಿಂಧೂ ಧರ್ಮ ಶ್ರೇಷ್ಠ ಎಂದು ಆರ್‌ಎಸ್‌ಎಸ್‌ನ ಈಗಿನ ಮುಖ್ಯಸ್ಥರು ಹೇಳುತ್ತಾರೆ.

ಹಿಂದೂಗಳಲ್ಲದವರ ಮೇಲೆ ಹಿಂಸಾಚಾರ ಎಸಗುವ ಮೂಲಕ ಅವರ ಅನುಯಾಯಿಗಳು ಈ ಚಿಂತನೆಯನ್ನು ಬೀದಿಯಲ್ಲಿ ಜಾರಿಗೆ ತರುತ್ತಾರೆ. ಭಾರತದ ಇತರ ಭಾಷೆಗಳನ್ನು ಬದಿಗೊತ್ತಿ ಹಿಂದಿಯನ್ನು ಹೇರುವ ಕೆಲಸವನ್ನು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಗುಟ್ಟಾಗಿ ಮಾಡುತ್ತಿದೆ. ಅದೃಷ್ಟವಶಾತ್‌, ಎಂ.ಎಸ್‌. ಅಲಿ ಅವರು ಪಾಕಿಸ್ತಾನದ ಬಗ್ಗೆ ಯೋಚಿಸಿದಂತೆ ಈ ದೇಶದ ಬಗ್ಗೆ ಯೋಚಿಸುವ ಭಾರತೀಯರು ಬಹಳಷ್ಟು ಮಂದಿ ಇದ್ದಾರೆ. ಹಾಗಾಗಿಯೇ ಧರ್ಮ ಮತ್ತು ಭಾಷೆಯ ವಿಚಾರದಲ್ಲಿ ಬಹುಸಂಖ್ಯಾತವಾದಕ್ಕೆ ಮನ್ನಣೆ ದೊರೆಯುವುದು ಸಾಧ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT