ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗುವಿನ ಹೊನಲು ಹರಿಸಿದ ‘ಜಿಯೊ’

ಉತ್ಕೃಷ್ಟ ಮಿಥ್ಯಾ ವಿಶ್ವವಿದ್ಯಾಲಯ: ಉನ್ನತಾಧಿಕಾರ ತಜ್ಞರ ಸಮಿತಿಗೆ ವಂದನೆ, ಅಭಿನಂದನೆ
Last Updated 19 ಜುಲೈ 2018, 19:51 IST
ಅಕ್ಷರ ಗಾತ್ರ

ನಿರಂಕುಶಾಧಿಪತ್ಯದಲ್ಲಿ ಜೀವಿಸುವ ಜನರ ನೆನಪಿನ ಶಕ್ತಿಯು ಮರೆವಿನ ವಿರುದ್ಧ ನಡೆಸುವ ಸಂಘರ್ಷದ ಮಹತ್ವದ ಬಗ್ಗೆ ಲೇಖಕ ಮಿಲನ್‍ ಕುಂದೇರ ಒಮ್ಮೆ ಮಾತನಾಡಿದ್ದರು. ಪ್ರಜಾಪ್ರಭುತ್ವದಲ್ಲಿ (ಮೇಲ್ನೋಟಕ್ಕೆ ಹಾಗೆ ಕಾಣಿಸುವ) ಬದುಕುವ ಜನರಿಗೆ ಅಧಿಕಾರದ ವಿರುದ್ಧದ ವಿಡಂಬನೆ ಅಷ್ಟೇ ಮುಖ್ಯವಾದದ್ದು. ರಾಹುಲ್‍ ಗಾಂಧಿ ಅವರು ರಾಜಕೀಯ ಪ್ರವೇಶಿಸಿದಾಗಿನಿಂದಲೇ ಅವರು ಲೇವಡಿ ಮತ್ತು ತಮಾಷೆಯ ಕೇಂದ್ರ ಬಿಂದುವಾಗಿದ್ದರು. ತೀರಾ ಇತ್ತೀಚೆಗೆ, ನರೇಂದ್ರ ಮೋದಿ ಅವರನ್ನು ಖಾಸಗಿಯಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಲೇವಡಿ ಮಾಡಲಾಗುತ್ತಿದೆ. ತಮ್ಮನ್ನು ಪ್ರಥಮ ಪುರುಷದಲ್ಲಿ ಸಂಬೋಧಿಸಿಕೊಳ್ಳುವುದು, ಬರಾಕ್‍ ಒಬಾಮ ಭಾರತಕ್ಕೆ ಭೇಟಿ ನೀಡಿದ್ದಾಗ ತಮ್ಮ ಹೆಸರಿನ ಕುಸುರಿ ಇದ್ದ ಕೋಟು ಧರಿಸಿದ್ದು, ವಿದೇಶಿ ನಾಯಕರನ್ನು (ಹೆಣ್ಣು ಗಂಡೆಂಬ ಭೇದವಿಲ್ಲದೆ) ಅಪ್ಪಿಕೊಳ್ಳುವುದು, ಭಾಷಣದಲ್ಲಿನ ಎಡವಟ್ಟುಗಳೆಲ್ಲವೂ ಅಪಾರ ಪ್ರಮಾಣದಲ್ಲಿ ದೃಶ್ಯ ಮತ್ತು ಮಾತಿನ ಲೇವಡಿಗೆ ತುತ್ತಾಗುತ್ತಿವೆ.

ಇಂದು ಭಾರತದಲ್ಲಿ ಪ್ರಭಾವಿಗಳಾಗಿರುವವರು ರಾಜಕಾರಣಿಗಳು ಮಾತ್ರವಲ್ಲ. ನಮ್ಮ ಗಣರಾಜ್ಯದ ಬದುಕಿನ ಗತಿ ನಿರ್ಧರಿಸುವಲ್ಲಿ ಕೋಟ್ಯಧಿಪತಿಗಳು ಕೂಡ ಅಷ್ಟೇ ಪ್ರಭಾವಿಗಳಾಗಿದ್ದಾರೆ; ಅವರು ರಾಜಕಾರಣಿಗಳಿಗೆ ಹಣ ಸರಬರಾಜು ಮಾಡುತ್ತಾರೆ ಮತ್ತು ಆಡಳಿತ (ದುರಾಡಳಿತ) ಪ್ರಕ್ರಿಯೆಗೆ ದಿಕ್ಕು ತೋರುತ್ತಾರೆ (ದಿಕ್ಕು ತಪ್ಪಿಸುತ್ತಾರೆ). ದೊಡ್ಡ ವ್ಯಾಪಾರಿಗಳು ಮತ್ತು ಆಗರ್ಭ ಶ್ರೀಮಂತರು ನಮ್ಮ ಗಣರಾಜ್ಯದ ಆರಂಭದ ದಿನಗಳಲ್ಲಿ ಪರದೆಯ ಹಿಂದಿನಿಂದ ತಮ್ಮ ಪ್ರಭಾವ ಬೀರುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅವರು ಬಯಲಿಗೆ ಬಂದಿದ್ದಾರೆ, ತಮ್ಮ ಸಂಪತ್ತನ್ನು ಪ್ರದರ್ಶಿಸುತ್ತಿದ್ದಾರೆ ಮತ್ತು ಮುಖ್ಯಮಂತ್ರಿಗಳು ಹಾಗೂ ಪ್ರಧಾನಿಗಳಿಗೆ ತಾವು ಹತ್ತಿರ ಎಂಬುದನ್ನು ತೋರಿಸಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ನಮ್ಮ ರಾಜಕಾರಣಿಗಳ ಹಾಗೆ ಇವರು ಕೂಡ ಲೇವಡಿಗೆ ಒಳಗಾಗುತ್ತಿದ್ದಾರೆ.

ಬಹುಶಃ, ಹೀಗೆ ವಿಡಂಬನೆಗೆ ಒಳಗಾದ ಭಾರತದ ಮೊದಲ ಉದ್ಯಮಿ ವಿಜಯ ಮಲ್ಯ ಇರಬಹುದು. ಅವರ ಐಷಾರಾಮಿ ಜೀವನಶೈಲಿ, ಅಷ್ಟೊಂದು ಗೌರವಾನ್ವಿತವಲ್ಲದ ವಿಶ್ವವಿದ್ಯಾಲಯವೊಂದು ಪಾಂಡಿತ್ಯವಲ್ಲದ ಬೇರೆ ಕ್ಷೇತ್ರಗಳಿಗೆ ಕೊಟ್ಟ ಕೊಡುಗೆಗಾಗಿ ಅವರಿಗೆ ನೀಡಿದ ಗೌರವಡಾಕ್ಟರೇಟ್‍ನಿಂದಾಗಿ ತಮ್ಮನ್ನು ಡಾ. ಮಲ್ಯ ಎಂದೇ ಕರೆಯಬೇಕು ಎಂದು ಅವರುಸುದ್ದಿ ವಾಹಿನಿಗಳ ನಿರೂಪಕರನ್ನು ಒತ್ತಾಯಿಸುತ್ತಿದ್ದುದು ಲೇವಡಿಗೆ ಕಾರಣವಾಗಿತ್ತು. ಅವರ ಐಷಾರಾಮಿ ವಿಮಾನಯಾನ ಸಂಸ್ಥೆ ಕುಸಿದು ಬಿದ್ದಾಗ ಮತ್ತು ವಿಮಾನಯಾನ ಸಂಸ್ಥೆಯ ಸಿಬ್ಬಂದಿಯು ಸಂಬಳ ಇಲ್ಲದೆ ಮಾನಸಿಕ ತುಮುಲಕ್ಕೆ ಒಳಗಾದ ಮತ್ತು ಕೆಲವರು ಜೀವವನ್ನೇ ತೆಗೆದುಕೊಂಡ ಸಂದರ್ಭದಲ್ಲಿಯೂ ದುಬಾರಿ ಔತಣಕೂಟಗಳನ್ನು ಏರ್ಪಡಿಸತೊಡಗಿದಾಗ ಡಾ. ಮಲ್ಯ ಅವರ ಬಗೆಗಿನ ಜೋಕುಗಳ ಪ್ರಮಾಣ ಗಣನೀಯವಾಗಿ ಏರಿತು.

ವಿಜಯ ಮಲ್ಯ ಅವರು ಈಗ ತಮ್ಮ ದೇಶ ಮತ್ತು ಕಾನೂನಿನ ವ್ಯಾಪ್ತಿಯಿಂದ ಹಾರಿ ಹೋಗಿದ್ದಾರೆ. ಈ ಎಲ್ಲ ಅಪಹಾಸ್ಯಕ್ಕೆ ಅವರು ಅರ್ಹರೇ ಆಗಿದ್ದಾರೆ. ಆದರೆ, ಭಾರತದಲ್ಲಿಯೇ ನೆಲೆಸಿರುವ ಮತ್ತು ಇಲ್ಲಿನ ಅತ್ಯಂತ ಲಾಭದಾಯಕ ಕಂಪನಿಗಳನ್ನು ನಡೆಸುತ್ತಿರುವ ದಂಪತಿಯು ವಿಡಂಬನೆಯ ಕೇಂದ್ರವಾಗಿರುವುದು ಈ ಲೇಖಕನಿಗೆ ಹೆಚ್ಚು ಆಸಕ್ತಿ ಕೆರಳಿಸುವ ವಿಚಾರ. ಮಲ್ಯ ಅವರಂತೆಯೇ ಈ ದಂಪತಿ ಕೂಡ ತಾವು ಎಷ್ಟು ಶ್ರೀಮಂತರು ಮತ್ತು ಪ್ರಸಿದ್ಧರು ಎಂಬುದನ್ನು ಜಗತ್ತಿಗೆ ಮತ್ತೆ ಮತ್ತೆ ಹೇಳಲು ಬಯಸುತ್ತಿದ್ದಾರೆ. ಮಲ್ಯ ಅವರಿಗೆ ಹೋಲಿಸಿದರೆ ಇವರ ಸಂಪತ್ತು ಹಲವು ಪಟ್ಟು ಹೆಚ್ಚು. ಹಾಗಾಗಿ ಹತ್ತು ಹಲವು ವಿಧಗಳಲ್ಲಿ ಮತ್ತು ದುಬಾರಿ ರೀತಿಗಳಲ್ಲಿ ಇವರು ಬಡಾಯಿ ಕೊಚ್ಚಿಕೊಳ್ಳಬಹುದು.

ಆಗರ್ಭ ಶ್ರೀಮಂತರ ಇತಿಹಾಸ ದಾಖಲಿಸುವುದು ನನ್ನ ವೃತ್ತಿ ಅಲ್ಲ. ಆದರೆ, ಮುಕೇಶ್‍ ಮತ್ತು ನೀತಾ ಅಂಬಾನಿ ಅವರು ತಮಗೆ ಮತ್ತು ತಮ್ಮ ಮೂವರು ಮಕ್ಕಳಿಗಾಗಿ 27ಮಹಡಿಯ ಮನೆ ಕಟ್ಟಿಕೊಂಡಾಗ ಅವರ ಬಗೆಗಿನ ಲೇವಡಿಗಳು ಆರಂಭಗೊಂಡವು ಎಂದು ನನ್ನ ಭಾವನೆ. ನಿತ್ಯ ಬಳಕೆಗೆ ಐವರು ಭಾರತೀಯರಿಗೆ 27 ಮಹಡಿಗಳ ಮನೆ ಬೇಕಾಗಿತ್ತು. ಅದರಲ್ಲಿ ನಾಲ್ಕು ಮಹಡಿಗಳು ಅವರ ಕಾರುಗಳಿಗೆ, ಒಂದೆರಡು ಮಹಡಿಗಳು ಹೋಮ್‍ ಥಿಯೇಟರ್‌ಗೆ, ಮತ್ತೆ ಒಂದೆರಡು ಮಹಡಿಗಳು ಸಿಬ್ಬಂದಿಗೆ ಬೇಕು. ಉಳಿದ 19 ಮಹಡಿಗಳು ಈ ಐವರ ಬಟ್ಟೆ, ಆಭರಣ, ಪೀಠೋಪಕರಣ ಮತ್ತು ಪುಸ್ತಕಗಳಿಗೆ (ಅವರಲ್ಲಿ ಪುಸ್ತಕಗಳಿವೆ ಮತ್ತು ಅವರು ಓದುತ್ತಾರೆ ಎಂದು ಭಾವಿಸಿದರೆ) ಮೀಸಲು.

ಮನೆಯ ಹೆಸರಿನಿಂದಲೇ ಲೇವಡಿ ಆರಂಭವಾಗಿದೆ (ಅಂಟೀಲಿಯಾ ಎಂಬುದು ಮನೆ ಹೆಸರು. ಮದರ್ ಆಫ್‍ ಆಲ್‍ ಆ್ಯಂಟ್‍ಹಿಲ್ಸ್– ಎಲ್ಲ ಹುತ್ತಗಳ ಮಾತೆ ಎಂಬುದು ಒಂದು ಜೋಕ್‍) ಮತ್ತು ಇನ್ನಷ್ಟು ತಮಾಷೆಯಾಗಿ ಮುಂದುವರಿಯುತ್ತಿದೆ. ಆದರೆ ಲೇವಡಿಗೆ ಒಳಗಾದವರು ಇದರಿಂದ ಹಿಮ್ಮೆಟ್ಟಿಲ್ಲ. ಭಾರತದಲ್ಲಿ ಅತಿಹೆಚ್ಚು ಜನರು ತಮ್ಮ ಬಗ್ಗೆ ಮಾತನಾಡಬೇಕು ಎಂಬ ಈ ದಂಪತಿಯ ಬಯಕೆ ಯಾವ ರೀತಿಯಲ್ಲಿಯೂ ಕಮ್ಮಿಯಾಗಿಲ್ಲ. ದಿನಪತ್ರಿಕೆಗಳು ಮತ್ತು ನಿಯತಕಾಲಿಕಗಳು ಇವರ ಸಂಪತ್ತು ಕಂಡು ವಿಸ್ಮಿತಗೊಂಡು (ಬಹುಶಃ ಅವರ ಜಾಹೀರಾತು ನೀಡುವ ಶಕ್ತಿಯಿಂದಾಗಿ) ಅವರ ಬಗ್ಗೆ ಪುಟಗಟ್ಟಲೆ ವ್ಯಕ್ತಿಚಿತ್ರಗಳನ್ನು, ಅಗ್ರಲೇಖನಗಳನ್ನು ಬರೆದಿವೆ.

ಕಳೆದ ಕೆಲವು ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮವು ಸಂವಹನದ ಪ್ರಮುಖ ಮಾರ್ಗವಾಗಿ ರೂಪುಗೊಂಡಿದೆ. ಇದನ್ನು ಬಳಸುವವರು ಜಾಹೀರಾತಿನ ಮೇಲೆ ಅವಲಂಬಿತರಾಗಿಲ್ಲ. ಅಂಬಾನಿ ಕುಟುಂಬದ ಕುಡಿಯೊಬ್ಬರು ಮಾಡಿದ ಭಾಷಣದ ವಿಡಿಯೊ ಇತ್ತೀಚೆಗೆ ವಾಟ್ಸ್ ಆ್ಯಪ್‍ನಲ್ಲಿ ಹರಿದಾಡಿತು. ಈ ಭಾಷಣ ಅತ್ಯಂತ ಕೆಟ್ಟದಾಗಿದ್ದರೂ ತಾಯಿ ಮಾತ್ರ ವಾಗ್ಝರಿಗೆ ವಿಸ್ಮಯಗೊಂಡು ಹಲವು ಬಾರಿ ಎದ್ದು ನಿಂತು ಚಪ್ಪಾಳೆಯ ಅಭಿನಂದನೆ ಅರ್ಪಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಅಮಿತಾಭ್‍ ಬಚ್ಚನ್‍ ಸನಿಹದಲ್ಲಿಯೇ ಕುಳಿತಿದ್ದರು. ಅತ್ಯಂತ ಸಂಯಮದಿಂದ ಅವರು ಇದ್ದರು. ಅವರ ಮುಖದಲ್ಲಿ ಜುಗುಪ್ಸೆ, ಬಳಲಿಕೆ ಎದ್ದು ಕಾಣುತ್ತಿತ್ತು. ಅಂಬಾನಿ ಕುಡಿ ಬಳಸಿದ ಪದಗಳು ಸವಕಲು ಎಂದು ಹೇಳುವುದು ಪ್ರಸಿದ್ಧ ಕವಿಯ ಮಗನಾಗಿರುವ ಬಚ್ಚನ್‍ಗೆ ಕಷ್ಟವಲ್ಲ. ಅವರು ಸ್ವತಃ ಪ್ರಸಿದ್ಧ ವಾಗ್ಮಿ. ಹಾಗಾಗಿ ಭಾಷಣ ಕೂಡ ಸವಕಲಿಗಿಂತ ಕಡೆ ಎಂದು ಅರಿವಾಗುವುದು ಕಷ್ಟವಲ್ಲ.

ಭಾರತದ ಉದ್ಯಮ ರಂಗದ ಮೊದಲ ಕುಟುಂಬಕ್ಕೆ ಅಸಮಾಧಾನವಾಗಿದೆ ಎಂಬುದನ್ನು ತಿಳಿಸಿದ ಕೂಡಲೇ ಈ ಪ್ರಹಸನದ ಬಗ್ಗೆ ಬರೆದ ಸುದ್ದಿಗಳನ್ನು ಹಿಂದಕ್ಕೆ ಪಡೆಯಲಾಯಿತು. ಆದರೆ ಅದರ ಝಲಕುಗಳು ಸಾಮಾಜಿಕ ಜಾಲತಾಣದಲ್ಲಿ ಈಗಲೂ ಹರಿದಾಡುತ್ತಿವೆ. ಅಂಬಾನಿ ಕುಟುಂಬದಲ್ಲಿನ ಮದುವೆಯ ಅಸಹ್ಯಕಾರಕ ಆಹ್ವಾನಪತ್ರಿಕೆ ಇನ್ನಷ್ಟು ತಮಾಷೆಗೆ ಕಾರಣವಾಗಿದೆ. ಆದರೆ, ಕಾಲ್ಪನಿಕ ಸಂಸ್ಥೆಯೊಂದಕ್ಕೆ ಭಾರತ ಸರ್ಕಾರವು ‘ಉತ್ಕೃಷ್ಟ ಸಂಸ್ಥೆ’ ಎಂಬ ಮನ್ನಣೆ ನೀಡುವುದರೊಂದಿಗೆ ಈ ಹಿಂದಿನದೆಲ್ಲಾ ಬರೇ ಟ್ರೇಲರ್ ಎಂಬುದು ಎಲ್ಲರಿಗೂ ಮನದಟ್ಟಾಯಿತು. ಕಾಗದದಲ್ಲಿಯೂ ಅಸ್ತಿತ್ವದಲ್ಲಿಲ್ಲದ ಜಾಗತಿಕ ಮಟ್ಟದ ವಿಶ್ವವಿದ್ಯಾಲಯಕ್ಕೆ ಜಿಯೊ ಇನ್‍ಸ್ಟಿಟ್ಯೂಟ್‍ ಎಂಬ ಸ್ಫೂರ್ತಿದಾಯಕ ಹೆಸರು ಇರಿಸಲಾಗಿದೆ.

ಸರ್ಕಾರವು ಜಿಯೊ ಪಕ್ಷಪಾತಿಯಾಗಿರುವುದು ಮೊದಲ ಬಾರಿಗೆ ಗೊತ್ತಾದಾಗ ನನ್ನಂತಹ ಹಲವು ಚಿಂತಕರು ಆಕ್ರೋಶಗೊಂಡಿದ್ದೆವು. ನಾವು ಸಿಟ್ಟಿನಲ್ಲಿ ಟ್ವೀಟ್‍ಗಳನ್ನು ಮಾಡಿದೆವು ಮತ್ತು ಮಾಹಿತಿಯುಕ್ತ ಲೇಖನಗಳನ್ನು ಬರೆದೆವು. ಈಗ ಇರುವ ವಿಶ್ವವಿದ್ಯಾಲಯಗಳಿಗೆ ‘ಉತ್ಕೃಷ್ಟ ಸಂಸ್ಥೆ’ ಮನ್ನಣೆ ನೀಡುವುದಿದ್ದರೆ ಅದಕ್ಕೆ ಅಶೋಕಾ ಮತ್ತು ಎಪಿಯುಗಳು ಅರ್ಹ ಎಂದು ಪ್ರತಿಪಾದಿಸಿದೆವು. ‘ಹೊಸ ಸಂಸ್ಥೆ’ ಎಂದು ಹೇಳಲಾಗುತ್ತಿರುವ ವಿಭಾಗದಲ್ಲಿ ನೀಡುವ ಮನ್ನಣೆಗೆ ಕೆಆರ್‌ಇಎ ವಿಶ್ವವಿದ್ಯಾಲಯವೇ ಹೆಚ್ಚು ಸೂಕ್ತ (ರಘುರಾಮ್‍ ರಾಜನ್‍, ಕಿರಣ್‍ ಮಜುಂದಾರ್ ಶಾ ಮತ್ತು ಆನಂದ್‍ ಮಹೀಂದ್ರಾ ಮುಂತಾದವರ ಪ್ರಾಯೋಜಕತ್ವದ ಸಂಸ್ಥೆ) ಎಂದು ಹೇಳಿದೆವು.

ನಮ್ಮ ಪ್ರಯತ್ನಗಳು ಒಳ್ಳೆಯ ಉದ್ದೇಶದ್ದೇ ಆಗಿದ್ದವು. ಹಾಗಿದ್ದರೂ, ‘ಉತ್ಕೃಷ್ಟ’ ಮನ್ನಣೆಯ ಸರ್ಕಾರದ ಘೋಷಣೆ ಹೊರಬಿದ್ದ ಕೆಲವೇ ತಾಸುಗಳಲ್ಲಿ ಹೊಸತೊಂದು ಟ್ವಿಟರ್ ಖಾತೆಯ ಮೂಲಕ ಹೆಚ್ಚು ಸೃಜನಶೀಲವಾದ ಪ್ರತಿಕ್ರಿಯೆ ನಮ್ಮ ಪ್ರಯತ್ನವನ್ನು ಹಿಂದಿಕ್ಕಿತು. ಈ ಟ್ವಿಟರ್ ಖಾತೆಯ ಹೆಸರು ‘ಜಿಯೊ ಇನ್‍ಸ್ಟಿಟ್ಯೂಟ್‍’. ಮುಂದೊಂದು ದಿನ ಸ್ಥಾಪನೆಯಾಗಬಹುದು ಎಂದು ಭಾವಿಸಲಾಗಿರುವ ವಿಶ್ವವಿದ್ಯಾಲಯದ ಜತೆಗೆ ಈ ಟ್ವಿಟರ್ ಖಾತೆಗೆ ಯಾವ ಸಂಬಂಧವೂ ಇಲ್ಲ. ವಿಡಂಬನಕಾರರ ಗುಂಪೊಂದು ಆರಂಭಿಸಿರುವ ಈ ಟ್ವಿಟರ್ ಖಾತೆಯ ಉದ್ದೇಶ ಭಾರತದ ಪ್ರತಿಷ್ಠಿತ ಪ್ರಭಾವಿ ದಂಪತಿಯ ಹೊಸ ಯೋಜನೆಯನ್ನು ಲೇವಡಿ ಮಾಡುವುದು.

‘ಜಿಯೊ ಇನ್‍ಸ್ಟಿಟ್ಯೂಟ್‍’ನ ಮೊದಲ ಟ್ವೀಟ್‍ ನೋಡಿದ ನಾನು ಅದನ್ನು ‘ಫಾಲೊ’ ಮಾಡಲು ಆರಂಭಿಸಿದೆ. ಪ್ರಧಾನಿ ಮತ್ತು ‘ಕಾಲ್ಪನಿಕ ವಿಶ್ವವಿದ್ಯಾಲಯ’ದ ಪ್ರವರ್ತಕರ ನಡುವೆ ಇದೆ ಎಂದು ಭಾವಿಸಲಾದ ನಿಕಟತೆಯ ಕುರಿತು ಪ್ರಕಟವಾಗಿರುವ ಕೆಲವು ಟ್ವೀಟ್‍ಗಳು ಅಮೋಘವಾಗಿವೆ. ಒಂದು ಟ್ವೀಟ್‍ನಲ್ಲಿ ನರೇಂದ್ರ ಮೋದಿ ಮತ್ತು ಮುಕೇಶ್‍ ಅಂಬಾನಿ ಅವರು ವಿಶ್ವವಿದ್ಯಾಲಯ ಘಟಿಕೋತ್ಸವ ದಿರಿಸಿನಲ್ಲಿ ಇರುವ ಚಿತ್ರ ಇದೆ. ‘ಸಮಗ್ರ ರಾಜಕೀಯ ಶಾಸ್ತ್ರ’ದಲ್ಲಿ ಪದವಿ ನೀಡಲಾಗುವುದು ಎಂಬುದು ಎರಡನೇ ಟ್ವೀಟ್‍. ಇತರ ಕೆಲವು ಟ್ವೀಟ್‍ಗಳು ವಿನೋದಮಯವಾಗಿವೆ- ‘ನಮ್ಮಲ್ಲಿ ಒಂದು ಝೀರೊ ಪಿಎಚ್‍.ಡಿ ಕೋರ್ಸ್‌ ಇದೆ. ಯಾವುದರಲ್ಲಿಯೂ ಪಿಎಚ್‍.ಡಿ ಮಾಡಲು ಬಯಸದವರು ಈ ವಿಷಯದಲ್ಲಿ ಮಾಡಬಹುದು.
ಪಿಎಚ್‍.ಡಿ ಪ್ರಬಂಧವನ್ನು ವಾಟ್ಸ್ ಆ್ಯಪ್‍ನಲ್ಲಿ ಬರೆಯಬಹುದು’, ‘ಜಿಯೊ ಇನ್‍ಸ್ಟಿಟ್ಯೂಟ್‍ನ ಹೆಮ್ಮೆ ಏನೆಂದರೆ ಇದು ನಿಮಗೆ ಗೂಗಲ್‍ನಲ್ಲಿಯೂ ಕಾಣ ಸಿಗದು’, ‘ನಮ್ಮ ಕ್ಯಾಂಪಸ್‍ ಯಾವುದೇ ರೀತಿಯ ತಾರತಮ್ಯದಿಂದ ಮುಕ್ತವಾಗಿದೆ ಯಾಕೆಂದರೆ ನಮಗೆ ಕ್ಯಾಂಪಸ್ಸೇ ಇಲ್ಲ’.

ಈ ಟ್ವೀಟ್‍ ಖಾತೆಯ ‘ಫಾಲೋವರ್‌ಗಳ ಸಂಖ್ಯೆ ವಾರದೊಳಗೆ 20 ಸಾವಿರಕ್ಕೆ ಏರಿದೆ. ಈ ಕಠೋರ ಸಂಭ್ರಮಕ್ಕೆ ಭಾರತದ ಇತರ ಕೆಲವು ಗುಂಪುಗಳೂ ಸೇರ್ಪಡೆಯಾಗಿವೆ. ಹೊಸ ವಿಶ್ವವಿದ್ಯಾಲಯದ ಬಗೆಗಿನ ವಾಟ್ಸ್ ಆ್ಯಪ್‍ ಸಂದೇಶವೊಂದು ವ್ಯಾಪಕವಾಗಿ ಹರಿದಾಡುತ್ತಿದೆ. ‘ಹೊಸ ವಿಶ್ವವಿದ್ಯಾಲಯವು ಜಿಯೊಪಾಲಿಟಿಕ್ಸ್, ಜಿಯೊಗ್ರಫಿ, ಜಿಯೊಮೆಟ್ರಿ, ಜಿಯೊಲಜಿ, ಜಿಯೊರ್ನಲಿಸಂ, ಜಿಂಗೊಯಿಸಂ (ಅತಿರೇಕದ ರಾಷ್ಟ್ರಭಕ್ತಿ) ಕೋರ್ಸ್‌ಗಳನ್ನು ಆರಂಭಿಸಲಿದೆ’ ಎಂದು ಈ ಸಂದೇಶ ಹೇಳುತ್ತದೆ. ವಿವಾದದ ಬಗೆಗಿನ ಗಂಭೀರ ಚರ್ಚೆಯ ವಿಡಿಯೊವನ್ನು ಯುಟ್ಯೂಬ್‍ನಲ್ಲಿ ನಾನು ನೋಡಿದೆ. ಅದರ ಜತೆಗೆ ಹತ್ತಾರು ಪ್ರತಿಕ್ರಿಯೆಗಳು (ಕಮೆಂಟ್ಸ್) ಇದ್ದವು. ಶಿಕ್ಷಣ ಕ್ಷೇತ್ರದಲ್ಲಿ ಏನನ್ನಾದರೂ ಮಾಡಿದ ಅನುಭವವೇ ಇಲ್ಲದ ಉದ್ಯಮ ಸಂಸ್ಥೆಯೊಂದರ ಪರವಾಗಿಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ನಿಂತಿರುವುದು ಕೆಲವರಿಗೆ ಸಿಟ್ಟು ತರಿಸಿದರೆ ಕೆಲವರಿಗೆ ನೋವು ತಂದಿದೆ. ಕೆಲವರು ವಿಡಂಬನೆಯ ಮೊರೆ ಹೋಗಿದ್ದಾರೆ. ಕೆಲವು ಮಾದರಿಗಳು ಹೀಗಿವೆ:

‘ಜಿಯೊ ಇನ್‍ಸ್ಟಿಟ್ಯೂಟ್‍ನ ಪ್ರತಿ ವಿದ್ಯಾರ್ಥಿಯೂ ಪರೀಕ್ಷೆಗೆ ಮೊದಲೇ ಫಲಿತಾಂಶ ಪಡೆಯಬಹುದು ಎಂದು ನಾನು ಭಾವಿಸಿದ್ದೇನೆ’

‘ಮುಂದೆ, ಮೋದಿ ಅವರು ಮಾತ್ರ ಕಲಿತಿರುವ ‘ಸಮಗ್ರ ರಾಜಕೀಯ ಶಾಸ್ತ್ರ’ವಷ್ಟೇ ಉತ್ಕೃಷ್ಟ ಪದವಿ ಕೋರ್ಸ್ ಎಂಬ ಮನ್ನಣೆ ಪಡೆಯಬಹುದು’.

‘ನನ್ನ ಮಗುವಿಗೆ ಉತ್ಕೃಷ್ಟ ವಿದ್ಯಾರ್ಥಿ ಎಂಬ ಮನ್ನಣೆ ಬೇಕು. ವಿ.ಸೂ. ನನ್ನ ಮಗು ಇನ್ನೂ ಹುಟ್ಟಿಲ್ಲ, ಆದರೆ ಒಂದುದಿನ ಮಗು ಹುಟ್ಟಿಯೇ ಹುಟ್ಟುತ್ತದೆ ಮತ್ತು ಆ ಮಗು ಅತ್ಯುತ್ತಮವೇ ಆಗಿರುತ್ತದೆ’.

‘ಭಾರತ-ಪಾಕಿಸ್ತಾನ ನಡುವೆ 2028ರಲ್ಲಿ ನಡೆಯಲಿರುವ ಗಡಿ ಸಂಘರ್ಷದಲ್ಲಿ ವೀರಾವೇಶದಿಂದ ಹೋರಾಡಲಿರುವ ಅಂಬಾನಿಗೆ ಶೌರ್ಯ ಚಕ್ರ ಪ್ರಶಸ್ತಿ ನೀಡಿ ಮುಂದಿನ ವರ್ಷ ಗೌರವಿಸಲಾಗುವುದು’.

ಸ್ಕ್ರಾಲ್‍ ಡಾಟ್‍ ಇನ್‍ ವೆಬ್‍ಸೈಟ್‍ನಲ್ಲಿ ಕಂಡ ಟಿಪ್ಪಣಿ ಹೀಗಿತ್ತು: ‘2050ರ ಉದ್ಯಮ ನಾಯಕತ್ವ ಸಾಮರ್ಥ್ಯ ಎಂಬುದನ್ನೂ ಸರ್ಕಾರ ಗುರುತಿಸಲು ಆರಂಭಿಸಬೇಕು. ಅದಕ್ಕಾಗಿ ತಜ್ಞರ ಸಮಿತಿಯನ್ನು ರಚಿಸಬೇಕು… ಸಹಜವಾಗಿಯೇ ಅದು ಇನ್ನ‍ಷ್ಟೇ ಹುಟ್ಟಬೇಕಿರುವ ರಿಲಯನ್ಸ್ ಕುಟುಂಬದ ಮರಿ ಮೊಮ್ಮಗನಿಗೇ ಸಿಗುತ್ತದೆ’.

ಮಿಥ್ಯಾ ವಿಶ್ವವಿದ್ಯಾಲಯಕ್ಕೆ ನೀಡಲಾಗಿರುವ ಸರ್ಕಾರಿ ಪ್ರಮಾಣಪತ್ರಕ್ಕೆ ಶೈಕ್ಷಣಿಕ ನೆಲೆಯಲ್ಲಿ ನೋಡಿದರೆ ಯಾವ ಬೆಲೆಯೂ ಇಲ್ಲ. ಈ ನಿರ್ಧಾರ ಕೈಗೊಂಡ ‘ಉನ್ನತಾಧಿಕಾರ ತಜ್ಞರ ಸಮಿತಿ’ಯು ತೀವ್ರ ಟೀಕೆಗೆ ಒಳಗಾಗಿದೆ. ಟೀಕೆಯನ್ನು ಹಾಗೆಯೇ ಮುಂದುವರಿಸುತ್ತಾ, ನಮ್ಮ ದೇಶದಲ್ಲಿ ಇಷ್ಟೊಂದು ಸಮೃದ್ಧ ನಗು ಉಕ್ಕಲು ಅಪಾರ ಕೊಡುಗೆ ಕೊಟ್ಟ ಸಮಿತಿಗೆ ಕೃತಜ್ಞತೆ ಅರ್ಪಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT