ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಕಳಿಸದಿರಲಿ ಇಂಥ ಅವಘಡಗಳು

Last Updated 16 ಜೂನ್ 2018, 9:37 IST
ಅಕ್ಷರ ಗಾತ್ರ

ಉಂಡಬತ್ತಿ ಕೆರೆಯ ಹೆಸರನ್ನು 2010ರ ಡಿಸೆಂಬರ್ 14ನೇ ತಾರೀಖಿನವರೆಗೆ ಬಹು ಜನರು ಕೇಳಿರಲಾರರು. ಆದರೆ ಆ ದಿನ ನಡೆದ ಭಾರಿ ದುರಂತದಲ್ಲಿ ಬೀಗರ ಔತಣದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ತಮ್ಮ ಊರುಗಳಿಗೆ ಮರಳುತ್ತಿದ್ದ 31 ಜನರನ್ನು ಏಕಕಾಲಕ್ಕೆ ಬಲಿ ತೆಗೆದುಕೊಂಡ ಈ ಕೆರೆ ಇದ್ದಕ್ಕಿದ್ದ ಹಾಗೆ ಮಾಧ್ಯಮಗಳ ಮೂಲಕ ರಾಜ್ಯ, ರಾಷ್ಟ್ರದ ಗಮನವನ್ನು ತನ್ನತ್ತ ಸೆಳೆದುಕೊಂಡಿತು. ಈ ಘಟನೆ ಮಾನವ ಬದುಕನ್ನು ಸುತ್ತುವರೆದಿರುವ ಅನಿಶ್ಚಿತತೆ ಹಾಗೂ ಅಭದ್ರತೆಗಳ ಬಗ್ಗೆ ಮತ್ತೊಮ್ಮೆ ನಮ್ಮ ಕಣ್ಣನ್ನು ತೆರೆಸಿದ್ದೇ ಅಲ್ಲದೆ, ನಮ್ಮ ಈ ಹೆಮ್ಮೆಯ ಪ್ರಜಾಸತ್ತೆಯಲ್ಲಿ ಪ್ರಜೆಗಳು ಎಂಥ ಅಸಹಾಯಕ ಪರಿಸ್ಧಿತಿಯಲ್ಲಿದ್ದಾರೆ ಎಂಬುದಕ್ಕೂ ಸಾಕ್ಷಿಯಾಯಿತು.

ಆ ದಿನ ನಡೆದದ್ದಾದರೂ ಏನು? ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳುಕುಪ್ಪೆ ಗ್ರಾಮದಲ್ಲಿ ಡಿಸೆಂಬರ್ 12ರಂದು ನಡೆದ ವಿವಾಹ ಸಮಾರಂಭದ ಮುಂದುವರೆದ ಭಾಗವಾಗಿ, ಎರಡು ದಿನಗಳ ನಂತರ ವರನ ಊರಾದ ನಂಜನಗೂಡಿನಲ್ಲಿ ಏರ್ಪಡಿಸಲಾಗಿದ್ದ ಬೀಗರ ಔತಣಕೂಟದಲ್ಲಿ ಪಾಲ್ಗೊಂಡ ವಧುವಿನ ಕುಟುಂಬ ಹಾಗೂ ಬಂಧುಗಳು ಮೂರು ವಾಹನಗಳಲ್ಲಿ ವಾಪಸಾಗುತ್ತಿದ್ದರು. ವಧು - ವರರಿದ್ದ ಕಾರು, 8 ಜನ ಪುರುಷರಿದ್ದ ಗೂಡ್ಸ್ ಆಟೋ ಹಾಗೂ 40 ಜನರಿದ್ದ ಮ್ಯಾಕ್ಸಿಕ್ಯಾಬು ಒಟ್ಟೊಟ್ಟಿಗೆ ಚಲಿಸುತ್ತಿದ್ದು ಸಂಜೆ 5.30 ಗಂಟೆಯ ಸಮಯದಲ್ಲಿ ಮೈಸೂರು ನಗರದಿಂದ ಸುಮಾರು 12 ಕಿಲೊಮೀಟರ್ ದೂರದಲ್ಲಿರುವ ಉಂಡಬತ್ತಿ ಕೆರೆಯ ಪ್ರದೇಶಕ್ಕೆ ಬಂದಾಗ ಇನ್ನೆರಡು ವಾಹನಗಳ ಪ್ರಯಾಣಿಕರು ನೋಡನೋಡುತ್ತಿದ್ದ ಹಾಗೆಯೇ ಮ್ಯಾಕ್ಸಿಕ್ಯಾಬು ಕೆರೆಗೆ ಉರುಳಿತು.

ಕಣ್ಣು ಮುಚ್ಚಿ ಕಣ್ಣು ತೆರೆಯುವುದರಲ್ಲಿ ನಡೆದು ಹೋದ ಈ ಅಪಘಾತದಲ್ಲಿ 26 ಮಹಿಳೆಯರು, 4 ಮಕ್ಕಳು ಹಾಗೂ ಒಬ್ಬ ಪುರುಷ ಜಲ ಸಮಾಧಿಯಾದರು. ಅಪಘಾತ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಪ್ರಾರಂಭವಾಗಿ ಮೃತರ ಸಂಸ್ಕಾರ ನಡೆಯುವವರೆಗೂ ಪುಂಖಾನುಪುಂಖವಾಗಿ ಹರಿದು ಬಂದವು ರಾಜಕಾರಣಿಗಳ ಹೇಳಿಕೆಗಳು, ಘೋಷಣೆಗಳು, ಪರಸ್ಪರ ದೋಷಾರೋಪಣೆಗಳು ಹಾಗೂ ಸಂತಾಪ ಸೂಚನೆಗಳು. ಇಷ್ಟೇ ಅಲ್ಲದೆ, ತಮ್ಮವರನ್ನು ಕಳೆದುಕೊಂಡು ಬದುಕೆಲ್ಲಾ ಬರಿದಾಗಿಸಿಕೊಂಡಿದ್ದ ಕುಟುಂಬಗಳಿಗೆ ಪಕ್ಷವಾರು ಪರಿಹಾರವನ್ನು ನೀಡುವ ಹೇಳಿಕೆಗಳು, ತಾಯಂದಿರನ್ನು ಕಳೆದುಕೊಂಡು ಅನಾಥ ಸ್ಧಿತಿಯಲ್ಲಿದ್ದ ಮಕ್ಕಳಿಗೆ ಉಚಿತ ಶಿಕ್ಷಣದಿಂದ ಹಿಡಿದು ಉದ್ಯೋಗದವರೆಗೆ ಭರವಸೆಗಳ ಮಹಾಪೂರ ಹಾಗೂ ಮತ್ತೆ ಮತ್ತೆ ನೊಂದ ಕುಟುಂಬಗಳಿಗೆ ಭೇಟಿ ನೀಡುವ ಆಶ್ವಾಸನೆಗಳು - ಇವುಗಳೆಲ್ಲಾ ನಮ್ಮ ಪ್ರಜಾಪ್ರತಿನಿಧಿಗಳಿಂದ ಬಂದ ಪ್ರತಿಕ್ರಿಯೆಗಳು.

ಆದರೆ ದಿನಗಳುರುಳಿದ ಹಾಗೆಲ್ಲಾ ಈ ಭೀಕರ ಅಪಘಾತ ಜನ ಮಾನಸದಿಂದ ಮರೆಯಾಗುತ್ತಾ ಹೋಯಿತು. ಪರಿಹಾರ ಸಮೇತ ಮತ್ತೆ ಬರುತ್ತೇವೆಂದು ಹೇಳಿ ಹೋದ ಬಹುತೇಕ ಅಧಿಕಾರಿಗಳು, ರಾಜಕೀಯ ನಾಯಕರು ಇದುವರೆಗೂ ಮರಳಿ ಬಂದಿಲ್ಲ. ಜಿಲ್ಲಾಡಳಿತದಿಂದ ದೊರೆತ ಪರಿಹಾರವನ್ನು ಹೊರತುಪಡಿಸಿ ಮತ್ತ್ಯಾವ ಬಗೆಯ ನೆರವೂ ಹರಿದು ಬರಲಿಲ್ಲ. ಇಷ್ಟು ಮಂದಿ ಅಮಾಯಕರನ್ನು ಬಲಿ ತೆಗೆದುಕೊಂಡು ಮೊದಲು ತಲೆ ಮರೆಸಿಕೊಂಡಿದ್ದು ನಂತರ ಗೋಚರಿಸಿಕೊಂಡ ಚಾಲಕನೂ ಜಾಮೀನಿನ ಮೇಲೆ ಹೊರಬಂದಿದ್ದೂ ಆಯಿತು.

ಅಪಘಾತ ಬಲಿ ತೆಗೆದುಕೊಂಡವರಲ್ಲಿ ಅತಿ ಹೆಚ್ಚು ಸಂಖ್ಯೆಯವರು (20) ವಾಸವಿದ್ದ ಅರಳುಕುಪ್ಪೆ, ತನ್ನ ಆರು ಸದಸ್ಯರನ್ನು ಕಳೆದುಕೊಂಡ ಕಟ್ಟೇರಿ ಹಾಗೂ ತಲಾ ಒಬ್ಬೊಬ್ಬ ಸದಸ್ಯರನ್ನು ಕಳೆದುಕೊಂಡ ಡಾಮರಹಳ್ಳಿ, ಎರಗನ ಹಳ್ಳಿ, ಬಳ್ಳೆಕೆರೆ, ಎಲೆಕೆರೆ, ಈರೀಮರಳ್ಳಿ ಗ್ರಾಮಗಳು ಇಂದು ಹೊರ ನೋಟಕ್ಕೆ ತಮ್ಮ ಸಹಜಸ್ಧಿತಿಗೆ ಮರಳಿದಂತೆ ಕಂಡು ಬರುತ್ತವೆ. ತಮ್ಮವರು ಬಾರದ ಲೋಕಕ್ಕೆ ಹೋಗಿದ್ದಾರೆ ಎನ್ನುವ ಕಠೋರ ಸತ್ಯವನ್ನು ಅರಗಿಸಿಕೊಂಡು ಸತ್ತವರ ಕುಟುಂಬಗಳು ಹೊಸ ಬದುಕಿಗೆ ಹೊಂದಾಣಿಕೆ ಮಾಡಿಕೊಳ್ಳಲು ದಿನ ನಿತ್ಯ ಶ್ರಮಿಸುತ್ತಿವೆ. ಆದರೆ ಈ ಭಯಾನಕ ದುರಂತ ಎತ್ತಿದ ಕೆಲ ಮೂಲಭೂತ ಪ್ರಶ್ನೆಗಳು ಮಾತ್ರ ಪ್ರಶ್ನೆಗಳಾಗಿಯೇ ಉಳಿದಿವೆ. ಮೊದಲಿಗೆ ಈ ಅಪಘಾತ ಸಂಭವಿಸಿದ್ದಾದರೂ ಹೇಗೆ ಎನ್ನುವ ಪ್ರಶ್ನೆಯನ್ನೇ ತೆಗೆದುಕೊಳ್ಳೋಣ.
ನಮ್ಮ ಸಮಾಜದಲ್ಲಿ ಅಸಹಜವೆನಿಸುವ ಘಟನೆಗಳು ಸಂಭವಿಸಿದಾಗ ಅವುಗಳನ್ನು ಹತ್ತು - ಹಲವಾರು ಕತೆಗಳು ಸುತ್ತುವರೆಯುತ್ತವೆ. ಮ್ಯಾಕ್ಸಿಕ್ಯಾಬಿನ ಚಾಲಕ ಅತಿ ವೇಗದಲ್ಲಿ ವಾಹನ ಚಾಲನೆ ಮಾಡುತ್ತಿದ್ದು ಆ ಘಳಿಗೆಯಲ್ಲಿ ನಿಯಂತ್ರಣವನ್ನು ಕಳೆದುಕೊಂಡ ಎಂಬ ವಾದದಿಂದ ಹಿಡಿದು, ಆತ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದು ತನ್ನ ಮೇಲಾಗಲಿ, ವಾಹನದ ಮೇಲಾಗಲಿ ನಿಯಂತ್ರಣವನ್ನು ಸಾಧಿಸಲು ಅಸಮರ್ಥನಾಗಿ ರಸ್ತೆಯಿಂದ ಕೆರೆಗೆ ವಾಹನವನ್ನು ನುಗ್ಗಿಸಿದ ಎನ್ನುವ ವಿವರಣೆಯವರೆಗೆ ತಮಗೆ ತೋಚಿದಂತೆ ಜನ ಈ ಘಟನೆಯನ್ನು ಅರ್ಥೈಸುತ್ತಿದ್ದಾರೆ.

ಇದು ಮಾನವನ ಅಜಾಗರೂಕತೆಯಿಂದ ಸೃಷ್ಟಿಯಾದ ಅಪಘಾತವೇ ಅಲ್ಲ. ತೀರಾ ಕಳಪೆ ಸ್ಥಿತಿಯಲ್ಲಿರುವ ರಸ್ತೆಯೇ ಇದಕ್ಕೆ ಕಾರಣ ಎಂದು ಬಿಂಬಿಸಿದವರೂ ಇದ್ದಾರೆ. ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ ಆಡಳಿತಾರೂಢ ಪಕ್ಷದ ಸದಸ್ಯರು ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ಸದಸ್ಯರ ನಡುವೆ ವಾಗ್ಯುದ್ಧ ಬೇರೆ ಏರ್ಪಟ್ಟು (ಈ ರಸ್ತೆ ದೇಶದ ಎರಡು ರಾಜ್ಯಗಳನ್ನು ಸೇರಿಸುವುದರಿಂದ ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿತವಾಗಿದೆ) ಅಪಘಾತದ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಹೊತ್ತುಕೊಳ್ಳಬೇಕೆ ಅಥವಾ ರಾಜ್ಯ ಸರ್ಕಾರ ಹೊತ್ತುಕೊಳ್ಳಬೇಕೆ ಎಂಬ ಮಟ್ಟಕ್ಕೂ ವಿವಾದ ಹೋಯಿತು.

ಇಂಥ ಸೂಕ್ಷ್ಮವಲ್ಲದ ಚರ್ಚೆಗಳಲ್ಲಿ ತೊಡಗಲು ಇದು ಸಮಯವೇ? ನಮ್ಮ - ನಮ್ಮ ಜವಾಬ್ದಾರಿಗಳನ್ನು ಅರಿಯಲು ಅಥವಾ ಹಂಚಿಕೊಳ್ಳಲು ಈ ಪ್ರಮಾಣದ ಸಾವು - ನೋವುಗಳು ಸಂಭವಿಸಬೇಕೆ? ರಸ್ತೆ ಬದಿಯಲ್ಲಿ ಕೆರೆಗಳು ಇದ್ದಾಗ ರಸ್ತೆಯ ಆ ಭಾಗಕ್ಕೆ ತಡೆ ಗೋಡೆಗಳನ್ನು ನಿರ್ಮಿಸಲು ವಾಹನಗಳು ರಸ್ತೆಯಿಂದ ಕೆರೆಗಳಲ್ಲಿ ಮುಳುಗಬೇಕೆ? ಅಸಹಾಯಕ ಜನರ ಬದುಕಿನೊಡನೆ ಚೆಲ್ಲಾಟವಾಡುವ ಅಧಿಕಾರಾರೂಢ ವ್ಯವಸ್ಧೆಗೆ ಜ್ಞಾನೋದಯವಾಗುವುದಾದರೂ ಎಂದು? ಇಷ್ಟು ದೊಡ್ಡ ದುರಂತ ಸಂಭವಿಸಿದ ಮೇಲೆ ಈಗ ಅಲ್ಲಲ್ಲಿ ಒಂದೊಂದು ಕಲ್ಲನ್ನು ನೆಡಲಾಗುತ್ತಿದೆ ನಿಜ. ಆದರೆ ಇಂಥ ಮೇಲು ಮೇಲಿನ ಕ್ರಮಗಳಿಂದ ಅನಾಹುತಗಳನ್ನು ತಪ್ಪಿಸಬಹುದು ಎಂಬ ಭ್ರಮೆಯಲ್ಲಿ ನಮ್ಮನ್ನು ಸಿಲುಕಿಸಬಹುದು ಎಂದು ಸಂಬಂಧಪಟ್ಟವರು ತಿಳಿದಿದ್ದರೆ ಅದನ್ನು ಖಂಡಿತವಾಗಿಯೂ ಖಂಡಿಸಲೇ ಬೇಕು. ಈ ಪ್ರಕರಣದ ದುರಂತವೆಂದರೆ ಅಪಘಾತಗಳ ಕಾರಣಗಳನ್ನು ಕಂಡು ಹಿಡಿಯಲು ಇಷ್ಟೊಂದು ವೈಜ್ಞಾನಿಕ ವಿಧಾನಗಳಿದ್ದಾಗ್ಯೂ ಇದುವರೆಗೂ ಈ ಅಪಘಾತ ಸಂಭವಿಸಲು ನಿಶ್ಚಿತ ಕಾರಣವೇನು ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲವೆನ್ನುವುದು.

ಈ ಅಪಘಾತವನ್ನು ಸುತ್ತುವರೆದ ಮತ್ತೊಂದು ಪ್ರಶ್ನೆಯೆಂದರೆ 40 ಜನರನ್ನು ತನ್ನೊಳಗೆ ಸೇರಿಸಿಕೊಂಡಿದ್ದ ಮ್ಯಾಕ್ಸಿಕ್ಯಾಬಿಗೆ ಎಷ್ಟು ಜನ ಪ್ರಯಾಣಿಕರನ್ನು ಕರೆದೊಯ್ಯಲು ಅಧಿಕೃತ ಪರವಾನಗಿ ಇತ್ತು ಎಂಬುದು. ಕೇವಲ 12 ಅಥವಾ 13 ಪ್ರಯಾಣಿಕರನ್ನು  ಕರೆದೊಯ್ಯಲು ಅನುಮತಿ ಪಡೆಯುವ ಈ ವಾಹನದಲ್ಲಿ ಹೆಚ್ಚುವರಿ ಆಸನಗಳನ್ನು ಜೋಡಿಸಿ, ಎರಡು ಪಟ್ಟು, ಮೂರುಪಟ್ಟು ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ರಾಜಾರೋಷವಾಗಿ ಸಂಚರಿಸುವ ಧೈರ್ಯ ಹೇಗೆ ತಾನೇ ಬರುತ್ತದೆ?
ಇಂಥ ಅನೇಕ ನಿಯಮೋಲ್ಲಂಘನೆಗಳು ದಿನನಿತ್ಯ ನಡೆಯುತ್ತಿದ್ದರೂ ಸಾರಿಗೆ ನಿಯಂತ್ರಣಾ ವ್ಯವಸ್ಧೆ ಏಕಿನ್ನೂ ಕ್ರಮ ಜರುಗಿಸಿಲ್ಲ? ಅಪಘಾತ ನಡೆದ ಸ್ಧಳ ಪರಿಶೀಲನೆಗೆ ಬಂದ ಅಧಿಕಾರಿಯೊಬ್ಬರು ‘ಅಷ್ಟೊಂದು ಸಂಖ್ಯೆಯಲ್ಲಿ ಈ ಹೆಂಗಸರೇಕೆ ಒಂದೇ ವಾಹನದಲ್ಲಿ ತುಂಬಿಕೊಂಡು ಊಟಕ್ಕೆ ಹೋಗಬೇಕಿತ್ತು?’ ಎನ್ನುತ್ತಿದ್ದರಂತೆ! ಇದೆಂಥಾ ವಿಪರ್ಯಾಸ? ಸಾವಿನ ಸಮಕ್ಷಮದಲ್ಲೂ ದರ್ಪವನ್ನು ಮೆರೆಸುವ ಇಂಥವರಿಗೆ ಏನು ಹೇಳೋಣ?

ಹೆಂಗಸರು ಎಂದಾಕ್ಷಣ ನೆನಪಿಗೆ ಬರುವುದು ಈ ಅಪಘಾತದಲ್ಲಿ ಮಡಿದವರಲ್ಲಿ ಬಹು ಮಂದಿ ಮಹಿಳೆಯರೇ ಎನ್ನುವ ವಿಷಯ. ಸಾವಿಗೆ ಲಿಂಗ ಭೇದವಿಲ್ಲವೆನ್ನುವುದು ನಿಜವಾದರೂ, ಕುಟುಂಬಕ್ಕೆ ಜೀವನಾಡಿಯಾಗಿದ್ದ ಮಡದಿ, ತಾಯಿ, ಅಜ್ಜಿ, ಅಕ್ಕ, ಚಿಕ್ಕವ್ವ, ದೊಡ್ಡವ್ವ ಅನಿರೀಕ್ಷಿತವಾಗಿ ನಿರ್ಗಮಿಸಿದಾಗ ಮನೆ ಮಂದಿಗೆ ಭವಿಷ್ಯವೇ ಬರಿದಾದಂತೆ ಭಾಸವಾಗುತ್ತದೆ. ಕಣ್ಣು ಮಂಜಾಗಿ ತನ್ನ ದಿನನಿತ್ಯದ ಕೈಂಕರ್ಯಗಳಿಗೆಲ್ಲಾ ಮಡದಿಯನ್ನೇ ಆಶ್ರಯಿಸಿದ್ದ ಹಿರಿಯ ಜೀವ ಇದೀಗ ಅನಾಥ ಪ್ರಜ್ಞೆಯಿಂದ ನರಳುತ್ತಿರುವುದು; ದೈಹಿಕ ನ್ಯೂನತೆಯಿಂದ ನರಳುತ್ತಿದ್ದ ತನಗೆ ಪ್ರಧಾನ ಆಸರೆಯಾಗಿ ನಿಂತಿದ್ದ ಅಜ್ಜಿಯನ್ನು ಕಳೆದುಕೊಂಡು ಶೂನ್ಯದತ್ತ ಮುಖ ಮಾಡಿರುವ ಬಾಲಕ; ದಿನವಿಡೀ ಮಕ್ಕಳ ಬೇಕು ಬೇಡಗಳಿಗೆ ಸ್ಪಂದಿಸುತ್ತಾ ಇಂದು ಕೇವಲ ಭಾವಚಿತ್ರವಾಗಿ ಬಿಟ್ಟಿರುವ ಅಮ್ಮ; ಮನೆಯೊಳಗೆ ಹಾಗೂ ಹೊರಗೆ ಅವಿರತವಾಗಿ ದುಡಿದು ಕುಟುಂಬಕ್ಕಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟಿದ್ದ ಮಡದಿಯ ನಿರ್ಗಮನ ಹಾಗೂ ಹೆಂಡತಿ ಮತ್ತು ಮಕ್ಕಳಿಬ್ಬರನ್ನೂ ಏಕಕಾಲಕ್ಕೆ ಕಳೆದುಕೊಂಡು ಹತಾಶರಾಗಿರುವ ಪತಿ - ಇವೇ ಇಂದು ಮನೆಗಳಲ್ಲಿ ಸಾಮಾನ್ಯವಾಗಿ ಕಾಣುವ ದೃಶ್ಯಗಳು. ‘ಹೆಂಗಸಿಲ್ಲದ ಮನೆ ಮನೆಯೇ ಅಲ್ಲ ಕಣವ್ವಾ?’ ಎಂದ ಹಿರಿಯ ಜೀವದ ಅಳಲು ಇನ್ನೂ ಹೃದಯವನ್ನು ಭೇದಿಸುತ್ತಿದೆ.
ಅಪಘಾತದಲ್ಲಿ ಮಡಿದ ಜೀವಗಳು ಹಿಂದಿರುಗಿ ಇನ್ನೆಂದಿಗೂ ಬರಲಾರವು. ಆದರೆ ಬದುಕುಳಿದಿರುವವರ ಭವಿಷ್ಯವನ್ನಾದರೂ ಹಸನು ಮಾಡಲು ನಾವು ಮಾಡಬಹುದಾದದ್ದು ಬಹಳಷ್ಟಿದೆ.
 
ಕೇವಲ ಪರಿಹಾರಗಳಿಂದ ಕುಸಿಯುತ್ತಿರುವ ಮನೆ - ಮನಗಳನ್ನು ಎತ್ತಿ ನಿಲ್ಲಿಸಲು ಸಾಧ್ಯವಿಲ್ಲವೆಂಬ ಸರಳ ಸತ್ಯವನ್ನು ಇಂದಿಗೂ ಅಧಿಕಾರಾರೂಢ ವ್ಯವಸ್ಧೆ ಮನಗಂಡಹಾಗೆ ಕಾಣುವುದಿಲ್ಲ? ‘ಸತ್ತರೆ ಒಂದು ಲಕ್ಷ, ಗಾಯಗಳಾದರೆ 50,000’- ಈ ಸೂತ್ರದ ಹಿಂದಿರುವ ಅಮಾನವೀಯತೆಯೇ ಜುಗುಪ್ಸೆಯನ್ನು ತರಿಸುತ್ತಿದೆ. ದುರಂತ ಸಂಭವಿಸಿದಾಗ ಸುಮ್ಮನಿದ್ದರೆ ಎಲ್ಲಿ ಕಟು ಟೀಕೆಗಳಿಗೆ ಒಳಗಾಗಬೇಕೋ ಎಂಬ ಭಯದಿಂದ ಪರಿಹಾರೋಪಾಯಗಳನ್ನು ಘೋಷಿಸಿದರೆ ಸಾಲದು.

ಅಧಿಕಾರಾರೂಢ ವ್ಯವಸ್ಧೆ ಮೊದಲಿಗೆ ಈ ಅಪಘಾತದಲ್ಲಿ ತಾಯಂದಿರನ್ನು ಕಳೆದುಕೊಂಡು ಶಾಲೆಗೆ ಹೋಗಲು ಕಷ್ಟ ಪಡುತ್ತಿರುವ ಮಕ್ಕಳಿಗೆ ಅವರವರ ವಯಸ್ಸು ಹಾಗೂ ವಿದ್ಯಾಮಟ್ಟಕ್ಕೆ ತಕ್ಕಂತೆ ವಸತಿ ನಿಲಯಗಳಲ್ಲಿ ವಾಸ ಸೌಲಭ್ಯ ಕಲ್ಪಿಸಿ, ಓದನ್ನು ಮುಂದುವರೆಸಲು ಅವಕಾಶ ನೀಡಲಿ ಹಾಗೂ ಪ್ರಾಪ್ತ ವಯಸ್ಕ ಮಕ್ಕಳಿಗೆ ಮುಂದೆ ಓದಲೋ ಅಥವಾ ಉದ್ಯೋಗವನ್ನು ಮಾಡಲೋ ಅನುವು ಮಾಡಿಕೊಡಲಿ. ಶವಗಳನ್ನು ಸಾಗಿಸುವಾಗಲೋ ಅಥವಾ ಕೆರೆಯಿಂದ ಹೊರತೆಗೆಯುವಾಗಲೋ ಕಾಣೆಯಾದಂಥ ಚಿನ್ನಾಭರಣಗಳನ್ನು ಅವುಗಳ ಮಾಲಿಕರಿಗೆ ಹಿಂದಿರುಗಿಸುವುದಕ್ಕೆ ಗಂಭೀರ ಪ್ರಯತ್ನಗಳು ನಡೆಯಲಿ ಎನ್ನುವುದು ಗ್ರಾಮಸ್ಧರ ಇಂಗಿತ.
ಇಂಥ ದುರಂತಗಳಿಗೆ ಕೇವಲ ಅಧಿಕಾರಾರೂಢ ವ್ಯವಸ್ಥೆಯನ್ನು ಹೊಣೆ ಮಾಡುವುದು ಕೂಡ ಸರಿಯಲ್ಲ. ಅಪಾಯಕ್ಕೂ - ಸುರಕ್ಷಿತ ಪರಿಸ್ಧಿತಿಗಳಿಗೂ ನಡುವೆ ಇರುವ ವ್ಯತ್ಯಾಸಗಳನ್ನು ನಾವೂ ತಿಳಿದುಕೊಳ್ಳಬೇಕು, ಇತರರಿಗೂ ತಿಳಿಸಬೇಕು. ಇಂಥ ಜಾಗೃತಿ ಮೂಡದಿದ್ದಲ್ಲಿ ಉಂಡಬತ್ತಿ ಕೆರೆಯಲ್ಲಿ ಸಂಭವಿಸಿದ ದುರಂತ ಮತ್ತೆ ಮತ್ತೆ ಮರುಕಳಿಸಬಹುದು. ಎಲ್ಲಿಯೂ ಹಾಗಾಗದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT