ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಿನ್ನ ಛಾಯೆಗಳಲ್ಲಿ ಸೀಳಿದ ಸಂಕೀರ್ಣತೆಗಳ ಕಥನ

ಮಹಿಳೆಯರನ್ನು ನೈಪಾಲ್ ನಡೆಸಿಕೊಂಡ ರೀತಿ, ಅವರು ಪೋಷಿಸಿಕೊಂಡು ಬಂದ ಪ್ರತಿಷ್ಠೆಗೆ ತದ್ವಿರುದ್ಧವಾದುದು
Last Updated 22 ಆಗಸ್ಟ್ 2018, 3:46 IST
ಅಕ್ಷರ ಗಾತ್ರ

ನೊಬೆಲ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ವಿ.ಎಸ್. ನೈಪಾಲ್ ಅವರು ಇತ್ತೀಚೆಗೆ ತೀರಿಕೊಂಡಾಗ ಲೇಖಕ ಸಲ್ಮಾನ್ ರಷ್ದಿ ತಮ್ಮ ಟ್ವಿಟರ್‍ ಖಾತೆಯಲ್ಲಿ ಬರೆದ ಮಾತುಗಳಿವು: ‘ರಾಜಕೀಯ, ಸಾಹಿತ್ಯ ಕುರಿತಂತೆ ನಮ್ಮ ಇಡೀ ಬದುಕಲ್ಲಿ ನಾವು ಪರಸ್ಪರ ಭಿನ್ನಾಬಿಪ್ರಾಯಗಳಲ್ಲೇ ಕಳೆದೆವು. ನನ್ನ ಪ್ರೀತಿಯ ಹಳೆಯ ಸೋದರನನ್ನು ಕಳೆದುಕೊಂಡಂತಹ ದುಃಖದ ಭಾವ ನನ್ನನ್ನು ಆವರಿಸಿಕೊಂಡಿದೆ’.

ನೈಪಾಲ್ ಬದುಕಿನ ವೈರುಧ್ಯಗಳು ಹಾಗೂ ಸಂಕೀರ್ಣತೆಗಳಿಗೆ ದ್ಯೋತಕ ಈ ಮಾತುಗಳು. ಬದುಕನ್ನು ಬರೀ ಕಪ್ಪು, ಬಿಳುಪು ಛಾಯೆಗಳಲ್ಲಿ ಗ್ರಹಿಸಲು ಹಾತೊರೆಯುತ್ತಿರುವಂತಹ ಕಾಲಮಾನ ಇದು. ಇಂತಹ ಸಂದರ್ಭದಲ್ಲಿ ನೈಪಾಲ್ ಅವರ ಸಂಕೀರ್ಣತೆಗಳನ್ನು ಅದರ ವಿವಿಧ ಛಾಯೆಗಳಲ್ಲಿ ನೀಡುವುದು ವಿವೇಕಯುತವಾದದ್ದು ಎಂಬುದನ್ನು ಈ ಮಾತುಗಳು ನೆನಪಿಸುತ್ತವೆ.

1999ರಲ್ಲಿ ನೀರದ್ ಸಿ ಚೌಧರಿ ನಿಧನರಾದಾಗ, ನೈಪಾಲ್ ಬರೆದ ಪ್ರಬಂಧ ಆರಂಭವಾಗುವುದು ಹೀಗೆ: ನೀರದ್ ಚೌಧರಿ ದೊಡ್ಡ ಮೂರ್ಖ. ಆತ ಒಂದು ಒಳ್ಳೆಯ ಹಾಗೂ ಅನಿರೀಕ್ಷಿತ ಪುಸ್ತಕ ‘ದಿ ಆಟೊಬಯಾಗ್ರಫಿ ಆಫ್ ಎನ್ ಅನ್‍ನೋನ್ ಇಂಡಿಯನ್’ ಪುಸ್ತಕ ಬರೆದರು. ಆ ನಂತರ ವಿದೂಷಕತನಕ್ಕಿಳಿದರು…’ ಇಲ್ಲಿ ವ್ಯಕ್ತವಾದ ಭಾವನೆಯನ್ನು ನೈಪಾಲ್ ಬದುಕಿಗೂ ಅನ್ವಯಿಸಬಹುದು. ಮೆಚ್ಚುಗೆ ಹಾಗೂ ಟೀಕೆಗಳನ್ನು ಸಮಪ್ರಮಾಣದಲ್ಲಿ ಪಡೆದ ವಿಶಿಷ್ಟ ಸಾಹಿತಿ ನೈಪಾಲ್. ಜನಾಂಗೀಯವಾದ, ಸ್ತ್ರೀ ದ್ವೇಷ ಹಾಗೂ ಇಸ್ಲಾಮ್‍ಭೀತಿವಾದವನ್ನು ತಮ್ಮೊಳಗೆ ಅಂತರ್ಗತ ವಾಗಿಸಿಕೊಂಡವರು ಎಂಬಂಥ ಆರೋಪಕ್ಕೊಳಗಾದವರು ಅವರು. ಇದರಿಂದ ಎಡ್ವರ್ಡ್ ಸಯೀದ್, ಸಲ್ಮಾನ್ ರಷ್ದಿ , ಡೆರೆಕ್ ವಾಲ್ಕಾಟ್ ಹಾಗೂ ಪಾಲ್ ಥೆರಾಕ್ಸ್ ರಂತಹ ಸಮಕಾಲೀನ ಬರಹಗಾರರ ಜೊತೆ ತೀವ್ರ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದವರು ಅವರು. ಆದರೆ, ಇಂಗ್ಲಿಷ್ ಭಾಷೆಯನ್ನು ಕಲಾತ್ಮಕವಾಗಿ ಕುಸುರಿಕಸುಬುದಾರಿಕೆಯಲ್ಲಿ ಬಳಸುವ ಲೇಖಕ ಎಂಬುದನ್ನು ಅವರ ಟೀಕಾಕಾರರೂ ಒಪ್ಪುತ್ತಿದ್ದರು. ಅವರ ವಾಕ್ಯಗಳು ಚಾಕುವಿನಂತೆ ಹರಿತವಾದವು, ಸರಳ ಶೈಲಿಯ ಸುಭಗತೆಯನ್ನೂ ಸೂಸುವಂತಹವು ಎಂದು ವಿಮರ್ಶಕರು ಕೊಂಡಾಡಿದ್ದಾರೆ. ಹೀಗಾಗಿಯೇ ವಿಮರ್ಶಕ ಟೆರ್‍ರಿ ಈಗಲ್ಟನ್‌ ದೂರಿರುವುದು ಹೀಗೆ: ‘ಮಹತ್ವದ ಕಲೆಗಾರಿಕೆ, ಭಯಾನಕ ರಾಜಕಾರಣ’.

ನೊಬೆಲ್ ‍ಪುರಸ್ಕಾರ ಸ್ವೀಕರಿಸಿದ ಸಂದರ್ಭದಲ್ಲಿ ನೈಪಾಲ್ ಆಡಿದ ಮಾತುಗಳಿವು: ‘ನನ್ನ ಹಿನ್ನೆಲೆ, ಏಕಕಾಲಕ್ಕೇ ಸರಳವಾದದ್ದು ಹಾಗೆಯೇ ತೀವ್ರರೀತಿಯಲ್ಲಿ ಗೊಂದಲಕಾರಿಯಾದದ್ದು’. ಸರಳ ವಾಕ್ಯಗಳಲ್ಲಿ ಸಂಕೀರ್ಣವಾದ ಆಧುನಿಕ ವಿಷಯಗಳ ಒಳಹೊಕ್ಕು ನೋಡಬಲ್ಲವರಾಗಿದ್ದರು ಅವರು. ಉಗ್ರವಾದ, ಜಾಗತಿಕ ವಲಸೆ, ರಾಜಕೀಯ ಹಾಗೂ ಧಾರ್ಮಿಕ ಅಸ್ಮಿತೆ, ಜನಾಂಗೀಯ ಭೇದ, ಆಫ್ರಿಕಾದ ಅಂತಃಸ್ಫೋಟ, ಏಷ್ಯಾ ಪುನರುತ್ಥಾನ, ಹಳೆಯ ಯುರೋಪಿಯನ್ ಸಮಾಜದ ಪುನರ್‌ರಚನೆ ಈ ಎಲ್ಲವೂ ಅವರ ಕೃತಿಗಳಲ್ಲಿ ಲೇಖಕನ ಕಣ್ಣಿನಿಂದ ಪರಿಶೀಲನೆಗೆ ಒಳಪಡುವಂತಹವಾಗಿದ್ದವು. ವಿಮರ್ಶಕ ವಾಲ್ಟರ್ ಬೆಂಜಮಿನ್ ಹೇಳುವ ಮಾತುಗಳಿವು: ‘ಪ್ರಾಯಶಃ ನಾಗರಿಕತೆಯ ದಾಖಲೀಕರಣ, ಏಕಕಾಲದಲ್ಲೇ ಅನಾಗರಿಕತೆಯ ದಾಖಲೆಯೂ ಆಗಿರದೇ ಇರುವುದಕ್ಕೆ ಸಾಧ್ಯವಿಲ್ಲ’. ಈ ಮಾತು, ನೈಪಾಲ್‌ರ ಬದುಕು – ಕೃತಿಗಳ ಚರಮಗೀತೆಯ ನುಡಿಗಳಂತೆಯೂ ಧ್ವನಿಸುತ್ತದೆ. ಹೊರ ಜಗತ್ತಿಗೆ ನೈಪಾಲ್ ಅವರು ನಾಗರಿಕತೆಯ ಸಂಕೇತ. ಆಕ್ಸ್‌ಫರ್ಡ್ ಪದವೀಧರ. ಪ್ರಶಸ್ತಿ ಪಡೆದ ಕೃತಿಗಳ ಲೇಖಕ. ಆದರೆ ತಮ್ಮ ಬದುಕಿನಲ್ಲಿ ಬಂದ ಮಹಿಳೆಯರನ್ನು ಅವರು ನಡೆಸಿಕೊಂಡ ಬಗೆ ಮಾತ್ರ ಅವರುಪೋಷಿಸಿಕೊಂಡು ಬಂದ ಈ ಪ್ರತಿಷ್ಠೆಗೆ ತದ್ವಿರುದ್ಧವಾದದ್ದು. ನೈಪಾಲ್‌ರ ಜೀವನಚರಿತ್ರೆ, ‘ದಿ ವರ್ಲ್ಡ್ ಈಸ್ ವಾಟ್‌ ಇಟ್‌ ಈಸ್’ ಪುಸ್ತಕದಲ್ಲಿ ಲೇಖಕ ಪ್ಯಾಟ್ರಿಕ್ ಫ್ರೆಂಚ್‌ ಅವರು ನೈಪಾಲ್‌ರ ವೈಯಕ್ತಿಕ ಬದುಕಿನ ವಿವರಗಳನ್ನು ಪದರಪದರವಾಗಿ ಕಟ್ಟಿಕೊಡುತ್ತಾರೆ. ಇದಕ್ಕಾಗಿ ಅವರು ನೈಪಾಲ್‌ ಕುಟುಂಬಕ್ಕೆ ಸಂಬಂಧಿಸಿದ 50,000 ಪುಟಗಳಷ್ಟು ದಾಖಲೆಗಳನ್ನು ಪರಾಮರ್ಶೆ ಮಾಡಿದ್ದಾರೆ. ಜೊತೆಗೆ ನೈಪಾಲ್‌ ಜೊತೆ ಅನಿರ್ಬಂಧಿತ ಸಂದರ್ಶನ ನಡೆಸಿದ್ದಾರೆ.

ಸಾಹಿತ್ಯಕ ವಲಯದಲ್ಲಿ ನೈಪಾಲ್ ಏರಿದ ಎತ್ತರ ದೊಡ್ಡದು. ಆದರೆ ಅವರ ಮೊದಲ ಪತ್ನಿಯ ಜೊತೆಗೆ ಅವರ ಯಾತನಾಮಯ ಸಂಬಂಧ, ದೀರ್ಘಕಾಲದ ಪ್ರೇಯಸಿಯ ಮೇಲೆ ಹಿಂಸಾತ್ಮಕ ದೌರ್ಜನ್ಯ ಘಟನೆಗಳು ಆಘಾತಕಾರಿಯಾದವು. ಕಲೆ- ಸಾಹಿತ್ಯ ಲೋಕದ ಪರಿಹಾರ ಕಾಣದ ಸಮಸ್ಯೆಯ ಉದಾಹರಣೆಗಳಾಗಿ ಇಂತಹವನ್ನು ನೋಡಬೇಕೇ ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕುತ್ತದೆ. 1950ರ ದಶಕದ ಆರಂಭದಲ್ಲಿ ಆಕ್ಸ್‌ಫರ್ಡ್‌ನಲ್ಲಿ ಅಧ್ಯಯನಕ್ಕಾಗಿ ಇಂಗ್ಲೆಂಡ್‍ಗೆ ನೈಪಾಲ್ ಸ್ಥಳಾಂತರಗೊಂಡಾಗ ಅವರಿಗೆ ಯಾರೂ ಸ್ನೇಹಿತರೇ ಇರಲಿಲ್ಲ. ಅಲ್ಲಿನ ಸಂಸ್ಕೃತಿ ಪರಕೀಯವಾಗಿತ್ತು. ಜೊತೆಗೆ ಜನಾಂಗೀಯವಾದದಿಂದಾಗಿ ಇನ್ನಷ್ಟು ಅನಾಥ‍‍ಪ್ರಜ್ಞೆಯಿಂದ ನರಳುವ ಸ್ಥಿತಿ ಅವರದಾಗಿತ್ತು. ಇಂಗ್ಲಿಷ್ ಮಹಿಳೆ ಪೆಟ್ರೀಷಿಯಾ ಹೇಲ್ (ಪ್ಯಾಟ್) ಜೊತೆಗಿನ ಸ್ನೇಹ ಅವರನ್ನು ಆಗ ಕಾಪಾಡಿತು. ಪ್ಯಾಟ್‌ಗೆ ಅವರು ಎಷ್ಟೊಂದು ಅಂಟಿಕೊಂಡಿದ್ದರು ಎಂಬುದನ್ನು ಅವರ ಈ ಪತ್ರದ ವಾಕ್ಯಗಳು ಧ್ವನಿಸುತ್ತವೆ: ‘ಒಮ್ಮೆ ನೀನು ನನ್ನನ್ನು ಕಾಪಾಡಿದೆ. ಅದರಿಂದಾಗಿಯೇ ನಾನು ಇಂದಿಗೂ ಮುನ್ನುಗ್ಗುತ್ತಿದ್ದೇನೆ. ನಿನ್ನನ್ನು ಪ್ರೀತಿಸುತ್ತೇನೆ. ನೀನು ನನಗೆ ಬೇಕು. ದಯವಿಟ್ಟು ನಿರಾಶೆ ಮಾಡಬೇಡ. ನನ್ನ ಕೆಲವು ತಪ್ಪುಗಳನ್ನು ಮನ್ನಿಸು. ಹೃದಯಾಳದಲ್ಲಿ ನಾನು ಒಳ್ಳೆಯ ಮನುಷ್ಯ’. ಆ ಸ್ನೇಹ ಪ್ರೀತಿಗೆ ತಿರುಗಿ 1955ರಲ್ಲಿ ವಿವಾಹವಾದರು. ಆಗಿನಿಂದ ಅವರ ಅನಿವಾರ್ಯವಾದ ಸಾಹಿತ್ಯಕ ಸಹಾಯಕಿ, ಸೇವಕಿ, ಅಡುಗೆಯಾಕೆ ಹಾಗೂ ಆತನ ಕಿರಿಕಿರಿಗಳಿಗೆ ತನ್ನನ್ನು ಬಲಿಪಶುವಾಗಿಸಿಕೊಳ್ಳುವ ಸಾಧನವಾಗಿಬಿಟ್ಟರು ಪ್ಯಾಟ್.

ನೈಪಾಲ್ ಕೀರ್ತಿ ಹೆಚ್ಚಾಗುತ್ತಿದ್ದಂತೆಯೇ ಆತ ಸುಲಭವಾಗಿ ಕೋಪಗೊಳ್ಳುವಪ್ರವೃತ್ತಿ ಹೆಚ್ಚಾಗತೊಡಗಿತು. ಮೀನುಅತಿಯಾಗಿ ಬೆಂದುಹೋದರೆ ನೈಪಾಲ್‍ ರಿಂದ ಬೈಗುಳ ತಿನ್ನಬೇಕಾಗುತ್ತಿತ್ತು ಪ್ಯಾಟ್. ಅದಕ್ಕೆ ಆಕೆ ತನ್ನನ್ನೇ ತಾನು ಬೈದುಕೊಳ್ಳುತ್ತಿದ್ದಳು. ದಂಪತಿಗೆ ಮಕ್ಳಳು ಬೇಕಿತ್ತು. ಆದರೆ ಪ್ಯಾಟ್‍ಗೆ ಮಕ್ಕಳಾಗಲಿಲ್ಲ. ಸಾಧ್ಯವಿರಬಹುದಾದ ಪರಿಹಾರವನ್ನೂ ಅವರು ಅರಸಲಿಲ್ಲ. ವೇಶ್ಯೆಯರ ಸಹವಾಸಕ್ಕೂ ನೈಪಾಲ್ ಬಿದ್ದಿದ್ದರು. ಅದೂ ಸಮಾಧಾನ ತರುವಂತಹದ್ದಾಗಿರಲಿಲ್ಲ. ದಾಂಪತ್ಯದ ಈ ವಿಷಮ ವರ್ಷಗಳಲ್ಲೇ ಅವರು ಬರೆದ ಕೃತಿಗಳು ಪ್ರಸಿದ್ಧಿ ತಂದುಕೊಟ್ಟವು.

ದಕ್ಷಿಣ ಅಮೆರಿಕದ ಅರ್ಜೆಂಟೀನಾದ ಬ್ಯೂನೊಸ್ ಏರಿಸ್‌ನಲ್ಲಿ ಭೇಟಿಯಾದ ಆಂಗ್ಲೊ – ಅರ್ಜೆಂಟೀನ್ ಮಹಿಳೆ ಮಾರ್ಗರೆಟ್‌ ಗುಡಿಂಗ್ ಅವರೊಂದಿಗಿನ ಪ್ರೇಮ ಸಂಬಂಧ ಶುರುವಾದದ್ದು 1972ರಲ್ಲಿ. 1955ರಿಂದ 41 ವರ್ಷಗಳವರೆಗೆ ಪ್ಯಾಟ್ ಜೊತೆಗಿನ ವೈವಾಹಿಕ ಬಂಧನದ ಜೊತೆಗೇ ಮಾರ್ಗರೆಟ್ ಮಾರ್ಗರೆಟ್ ಜೊತೆಗಿನ ಸಂಬಂಧದಿಂದಾಗಿ ತ್ರಿಕೋನ ಪ್ರೇಮದ ವರ್ತುಲದಲ್ಲಿ ಸುಮಾರು 25 ವರ್ಷಗಳು ಕಳೆದವರು ಅವರು. ಪತ್ನಿ ಪೆಟ್ರೀಷಿಯಾರನ್ನು ಮಾನಸಿಕವಾಗಿ ಹಿಂಸಿಸುವ ಚಾಳಿ ನೈಪಾಲ್‍ ಅವರಿಗಿತ್ತು. ಆದರೆ, ಪ್ರೇಯಸಿ ಮಾರ್ಗರೆಟ್ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದುದನ್ನು ಹೇಳಿಕೊಂಡಿದ್ದಾರೆ. 1974ರಲ್ಲಿ ನೈಪಾಲ್‍ ರನ್ನು ಭೇಟಿಯಾಗಲು ಲಂಡನ್‌ಗೆ ಬಂದ ಮಾಗರೆಟ್ ಬಗ್ಗೆ ನೈಪಾಲ್ ಸಂಶಯ ತಾಳುತ್ತಾರೆ. ಅರ್ಜೆಂಟೀನಾದ ಪ್ರಮುಖ ಬ್ಯಾಂಕಿಂಗ್ ಕುಟುಂಬದ ವ್ಯಕ್ತಿಯ ಪತ್ರ ನೈಪಾಲ್‍ ಕೈಗೆ ಸಿಗುತ್ತದೆ. ಬ್ಯಾಂಕರ್ ಜೊತೆಗೆ ಮಾರ್ಗರೆಟ್ ಯುರೋಪ್‍ಗೆ ಬಂದಿದ್ದಾಳೆ ಎಂಬುದನ್ನು ತಿಳಿದ ನೈಪಾಲ್‍ ಆಕ್ರೋಶ ಭುಗಿಲೇಳುತ್ತದೆ. ‘ಆ ನಂತರ ಎರಡು ದಿನಗಳ ಕಾಲ ಆಕೆಯ ಜೊತೆ ಹಿಂಸಾತ್ಮಕವಾಗಿ ವರ್ತಿಸಿದೆ. ನನ್ನ ಕೈಗಳು ನೋಯಲು ಶುರುವಾಗಿತ್ತು. ಆಕೆ ಅದನ್ನೇನೂ ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ.ಆಕೆಯೆಡೆಗಿನ ನನ್ನ ಪ್ರೀತಿಯ ಉನ್ಮಾದ ಎಂದೇ ಆಕೆ ಭಾವಿಸಿದ್ದಳು. ಆಕೆಯ ಮುಖ ಕೆಟ್ಟದಾಗಿತ್ತು. ಆಕೆ ನಿಜಕ್ಕೂ ಆ ಮುಖ ಹೊತ್ತು ಹೊರಗೆ ಕಾಣಿಸಿಕೊಳ್ಳುವುದು ಕಷ್ಟವಾಗಿತ್ತು. ನನ್ನ ಕೈ ಸಹ ಊದಿಕೊಂಡಿತ್ತು. ನಾನು ತೀವ್ರ ಅಸಹಾಯಕನಾಗಿದ್ದೆ. ಪ್ರೀತಿಯ ತೀವ್ರತೆಯಲ್ಲಿ ವಿಚಿತ್ರ ವರ್ತನೆ ತೋರುವ ಜನರ ಬಗ್ಗೆ ನನಗೆ ಅಪಾರ ಸಹಾನುಭುತಿಯಿದೆ’ ಎಂದು ನೈಪಾಲ್ ಹೇಳಿಕೊಂಡಿರುವುದು ಪ್ಯಾಟ್ರಿಕ್ ಫ್ರೆಂಚ್‍ ಅವರು ಬರೆದ ನೈಪಾಲ್ ಜೀವನ ಚರಿತ್ರೆಯಲ್ಲಿ ದಾಖಲಾಗಿದೆ.

ಪೆಟ್ರೀಷಿಯಾ ನೈಪಾಲ್‍ ಅವರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆಗ, 1994ರಲ್ಲಿ ‘ದಿ ನ್ಯೂಯಾರ್ಕರ್’ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ತಾನು ವೇಶ್ಯೆಯರ ಬಳಿ ಹೋಗುವ ವಿಚಾರ ಹೇಳಿಕೊಂಡಿದ್ದರು. ಜೊತೆಗೆ, ತನ್ನ ಪ್ರೇಯಸಿ ಮಾರ್ಗರೆಟ್ ಜೊತೆಯಷ್ಟೇ ಲೈಂಗಿಕ ಸುಖ ಕಂಡುಕೊಳ್ಳುವುದು ಸಾಧ್ಯ ಎಂದೂ ಹೇಳಿಕೊಂಡಿದ್ದರು. ಆ ಸಂದರ್ಶನ ಓದಿದ ಪೆಟ್ರೀಷಿಯಾ ಭಾವನಾತ್ಮಕವಾಗಿ ಕುಸಿದುಹೋಗಿದ್ದರು. ನಿದ್ದೆಮಾತ್ರೆಗಳಂತಹ ಉಪಶಮನಕಾರಕಗಳ ಮೊರೆ ಹೋಗಿದ್ದರು. ಆ ನಂತರ ಎರಡು ವರ್ಷಗಳಲ್ಲೇ ಅವರು ತೀರಿಕೊಂಡರು. ಆಕೆಯ ಪ್ರೀತಿಯ ಕೌಶಲಗಳ ಬಗ್ಗೆಯೂ ಜಬರ್‍ದಸ್ತ್ ಮಾಡುವ ನೈಪಾಲ್ ಹೇಳುತ್ತಿದ್ದ ಮಾತುಗಳಿವು: ‘ನೀನು ಲೇಖಕನ ಪತ್ನಿಯ ರೀತಿ ವರ್ತಿಸುವುದಿಲ್ಲ. ಗುಮಾಸ್ತನ ಪತ್ನಿ ಒಂದಿಷ್ಟು ಮೇಲುಸ್ತರಕ್ಕೆ ಹೋದ ರೀತಿ ಆಡುತ್ತೀ…’ ತನ್ನ ಕೆಲಸಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣದಿಂದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವುದನ್ನೂ ನೈಪಾಲ್ ಇಷ್ಟ ಪಡುತ್ತಿರಲಿಲ್ಲ. ‘ಆಕೆ ನೋವನುಭವಿಸಿದಳು. ನಾನೇ ಆಕೆಯನ್ನು ಕೊಂದೆ ಎಂದು ಹೇಳಬಹುದು. ನನಗೂ ಹಾಗೇ ಅನಿಸುತ್ತದೆ’ ಎಂದು ಜೀವನಚರಿತ್ರಕಾರನ ಜೊತೆ ನೈಪಾಲ್ ನಿವೇದಿಸಿಕೊಂಡಿದ್ದಾರೆ. ಈ ಲೇಖಕನ ಬದುಕಿನಲ್ಲಿ ಪ್ಯಾಟ್ ಉಪಸ್ಥಿತಿ ಹಾಗೂ ಆಕೆಯ ಶ್ರಮ ಅವರ ಬರವಣಿಗೆಯ ಅಂತರ್ಗತ ಭಾಗವಾಗಿದ್ದುದನ್ನು ಫ್ರೆಂಚ್ ಗುರುತಿಸುತ್ತಾರೆ. ಇತರ ದೊಡ್ಡ ದುರಂತಮಯ ಸಾಹಿತ್ಯಕ ಸಂಗಾತಿಗಳಾದ ಸೋನಿಯಾ ಟಾಲ್‍ಸ್ಟಾಯ್, ಜೇನ್ ಕಾರ್ಲೈಲ್ ಹಾಗೂ ಲಿಯೊನಾರ್ಡ್ ವುಲ್ಫ್ ಅವರೊಂದಿಗೆ ಪೆಟ್ರೀಷಿಯಾ ಅವರ ಹೋಲಿಕೆ ಮಾಡುತ್ತಾರೆ ಫ್ರೆಂಚ್.

ಪತ್ನಿಯ ಸಾವಿನ ಎರಡು ತಿಂಗಳ ನಂತರ, ಮಾರ್ಗರೆಟ್ ಜೊತೆಗಿನ ಪ್ರೇಮಸಂಬಂಧವನ್ನೂ ಕೊನೆಗೊಳಿಸಿಕೊಳ್ಳುತ್ತಾರೆ ನೈಪಾಲ್‌. ಮಾರ್ಗರೆಟ್‌ ಅನ್ನು ವಿವಾಹವಾಗದ್ದರ ಬಗ್ಗೆ ಅವರು ಹೇಳಿದ ಮಾತುಗಳಿವು: ‘ಈ ಎಲ್ಲಾ ವಿಚಾರಗಳಲ್ಲಿ ಮಾರ್ಗರೆಟ್‍ಳನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಯಿತು ಎಂದು ಭಾವಿಸುತ್ತೇನೆ. ಹೀಗೆಂದು ನಾನು ತೀವ್ರವಾಗಿ ಭಾವಿಸುತ್ತೇನೆ. ಆದರೆ ನಾನೇನೂ ಮಾಡುವಂತಿರಲಿಲ್ಲ…ನಾನು ಮಾರ್ಗರೆಟ್ ಮಧ್ಯವಯಸ್ಕಳಾಗುವವರೆಗೂ, ವೃದ್ಧೆಯಾಗುವವರೆಗೂ ಆಕೆಯ ಜೊತೆಗೇ ಇದ್ದೆ’. ನೈಪಾಲ್‌ ಅವರು ಪ್ಯಾಟ್‌ಳನ್ನು ತೊರೆಯಲಿಲ್ಲ. ಆಕೆ ಸಹ ಅವರನ್ನು ತೊರೆಯಲಿಲ್ಲ. ಇಬ್ಬರು ಮಹಿಳೆಯರ ಜೊತೆಗೆ ತನ್ನ ಬದುಕು ಹಂಚಿಕೊಂಡರು. ‘ಮನೆಯಲ್ಲಿ ಅಮ್ಮನಂತಹವಳು, ದಕ್ಷಿಣ ಅಮೆರಿದಕದಲ್ಲೊಬ್ಬಳು ವೇಶ್ಯೆ’ ಎಂದು ಫ್ರೆಂಚ್‌ ಕಟುಮಾತುಗಳಲ್ಲಿ ಈ ಸಂಬಂಧ ಬಣ್ಣಿಸುತ್ತಾರೆ. ಪತ್ನಿಯ ಅಂತ್ಯಸಂಸ್ಕಾರ ಮಾಡಿದ ಆರು ದಿನಗಳೊಳಗೇ ‌ತನ್ನ ಮನೆಗೆ ಹೊಸ ಮಹಿಳೆಗೆ ನೈಪಾಲ್ ಪ್ರವೇಶ ನೀಡಿದ್ದರು. ಪಾಕಿಸ್ತಾನದಲ್ಲಿ ಭೇಟಿಯಾ‌ಗಿದ್ದ ಪತ್ರಕರ್ತೆ ಹಾಗೂ ತನಗಿಂತ 24 ವರ್ಷ ಕಿರಿಯಳಾದ ನಾದಿರಾ ಜೊತೆ ವಿವಾಹಮಾಡಿಕೊಳ್ಳುತ್ತಾರೆ. ಈ ಸಂಬಂಧ ಆ ಕಾಲದಲ್ಲಿ ದೊಡ್ಡ ಗುಸುಗುಸುವಿಗೆ ಕಾರಣವಾಗಿತ್ತು. ಅದೂ ಇಸ್ಲಾಂ ಕುರಿತಾಗಿ ನೈಪಾಲ್ ವಿಚಾರಧಾರೆ, ಈ ಗುಸುಗುಸುಗಳಿಗೆ ಪುಷ್ಟಿ ನೀಡಿತ್ತು.

ಲೇಖಕಿಯರ ಬಗೆಗಿನ ಅವರ ಧೋರಣೆ ಬಗ್ಗೆಯೂ ಹೆಚ್ಚೇನೂ ಅಚ್ಚರಿ ಪಡಬೇಕಿಲ್ಲ. ಮಹಿಳಾ ಸಾಹಿತಿಗಳ ಪೈಕಿ ತನ್ನ ಸಮಾನರು ಯಾರೂ ಇಲ್ಲ ಎಂದು ನೈಪಾಲ್ ಹೇಳಿದ್ದು ದೊಡ್ಡ ವಿವಾದವಾಗಿತ್ತು. ‘ಮಹಿಳೆಯರ ಬರಹಗಳು ಬೋರಿಂಗ್‌. ಸೃಜನಾತ್ಮಕತೆಯ ಕೊರತೆಯಿಂದ ಬಳಲುತ್ತವೆ’ ಎಂದಿದ್ದರು. ಜೇನ್ ಆಸ್ಟಿನ್ ಅಂತಹ ಲೇಖಕಿಯನ್ನೂ ಅವರು ತಳ್ಳಿಹಾಕಿದ್ದರು. ಭಾರತೀಯ ಲೇಖಕಿಯರೂ ಅವರ ಆಕ್ರೋಶದ ಬಿಸಿ ಅನುಭವಿಸಿದ್ದಾರೆ. ಲಿಂಗತ್ವ ದಮನ ಹಾಗೂ ಭಾರತೀಯ ಸಾಹಿತ್ಯದ ಮೇಲೆ ಇಂಗ್ಲಿಷ್ ಭಾಷೆಯ ಹಾನಿಕಾರಕ ಪ್ರಭಾವವನ್ನು ಶಶಿ ದೇಶಪಾಂಡೆ ಹಾಗೂ ನಯನ ತಾರಾ ಸೆಹಗಲ್ ದೆಹಲಿಯಲ್ಲಿ ನಡೆದ ಸಭೆಯೊಂದರಲ್ಲಿ ವಿವರಿಸಲು ತೊಡಗಿದಂತೆಯೇ ನೈಪಾಲ್ ಗುಡುಗಿದ್ದರು: ‘ನಾನಿನ್ನು ಬದುಕುವುದೇ ಸ್ವಲ್ಪ ಕಾಲ. ಈ ಹಳಸಲು ಅಸೃಜನಾತ್ಮಕ ವಿಚಾರ ಕೇಳುತ್ತಾ ಕೂರಲಾಗುವುದಿಲ್ಲ. ವಸಾಹತುಶಾಹಿಯ ದಮನ, ಲಿಂಗತ್ವ ದಮನ.. ಈ ದಮನ ಎಂಬ ಪದವೇ ನನ್ನಲ್ಲಿ ಸುಸ್ತು ಹುಟ್ಟಿಸುತ್ತದೆ’ ಎಂದಿದ್ದರು. ‘ವಿಮೋಚನೆಯ ಕಿಡಿಯಿಂದ ಮುಕ್ತವಾಗಿದ್ದೇನೆ ನಾನು’ ಎಂದು ನೈಪಾಲ್ ಒಮ್ಮೆ ಬರೆದುಕೊಂಡಿದ್ದರು. ಆದರೆ ದಮನಿತರ ಕಥೆಗಳ ಕಣಜವೇ ಅವರ ಸೃಜನಾತ್ಮಕ ಪ್ರತಿಭೆಯ ಕಸುಬುಗಾರಿಕೆಯಲ್ಲಿ ಉತ್ಕೃಷ್ಟ ಸಾಹಿತ್ಯವಾಗಿ ಮೂಡಿತ್ತು ಎಂಬುದು ಮತ್ತೊಂದು ವಿರೋಧಾಭಾಸದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT