ಕಳೆದ ಏಪ್ರಿಲ್ ತಿಂಗಳಲ್ಲಿ ಅಂಬೇಡ್ಕರ್ ಅವರ ನೂರಿಪ್ಪತ್ತೈದನೆಯ ಜನ್ಮದಿನಾಚರಣೆಯ ಆಸುಪಾಸಿನಲ್ಲಿ ಬಿ.ಎಂ.ಗಿರಿರಾಜ್ ಅವರ ‘ಸತ್ಯಶೋಧಕ’ ಎಂಬ ವಿಡಿಯೊಮಾಲಿಕೆಯ ಹೊಸ ಕಂತು ‘ಯೂಟ್ಯೂಬ್’ನಲ್ಲಿ ಪ್ರಕಟವಾಯಿತು. ‘ಸತ್ಯಶೋಧಕ’ ಎನ್ನುವುದು ಗಿರಿರಾಜ್ ಮತ್ತು ಗೆಳೆಯರು ಮಾಡಿಕೊಂಡಿರುವ ‘ಕಲಾಮಾಧ್ಯಮ್’ ಆಗಾಗ್ಗೆ ಬಿತ್ತರಿಸುವ ವಿಡಿಯೊಮಾಲಿಕೆ.

ಅದರಲ್ಲಿ ಗಿರಿರಾಜ್, ಅಂಬೇಡ್ಕರ್ ಅವರ ಸಾಧನೆಯನ್ನು ಮಂಡಿಸಿದ ರೀತಿ ಅಂಬೇಡ್ಕರ್ ಬಗ್ಗೆ ನಾವು ನಿತ್ಯ ಕೇಳುವ ಮಾತುಗಳಿಗಿಂತ ಭಿನ್ನವಾಗಿತ್ತು. ಗಿರಿರಾಜ್ ಒತ್ತಿಹೇಳಿದ ಅಂಬೇಡ್ಕರ್ ಕೊಡುಗೆಗಳು ಇವು: ಉದ್ಯೋಗದಲ್ಲಿರುವವರು ಒಂಬತ್ತರಿಂದ ಐದರವರೆಗೆ ಕೆಲಸ ಮಾಡುವುದರ ಬಗೆಗಿನ ಪ್ರಸ್ತಾಪವನ್ನು ಮೊದಲು ಇಂಡಿಯಾದಲ್ಲಿ ಮಂಡಿಸಿದವರು ಅಂಬೇಡ್ಕರ್; ಬ್ರಿಟಿಷ್ ಆಡಳಿತದ ಕಾಲದಲ್ಲಿ ಉದ್ಯೋಗಸ್ಥರು ಹನ್ನೆರಡು ಗಂಟೆ ಕೆಲಸ ಮಾಡಬೇಕಾಗಿತ್ತು.

ಇವತ್ತು ಉದ್ಯೋಗಸ್ಥರು ಅನುಭವಿಸುತ್ತಿರುವ ಪ್ರಾವಿಡೆಂಟ್ ಫಂಡ್, ಡಿ.ಎ., ಹೆರಿಗೆರಜೆ, ಆಸ್ತಿಹಕ್ಕುಗಳು ಇವೆಲ್ಲ ಇಲ್ಲಿ ಬಂದದ್ದು ಬಾಬಾಸಾಹೇಬರ ಪ್ರಯತ್ನದಿಂದ. ಹಿರಾಕುಡ್, ಭಾಕ್ರಾನಂಗಲ್ ಥರದ ಅಣೆಕಟ್ಟೆಗಳು ಅಂಬೇಡ್ಕರ್ ದೂರದೃಷ್ಟಿಯಿಂದ ನಿರ್ಮಾಣಗೊಂಡವು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುರುವಾಗಲು ಅಂಬೇಡ್ಕರ್ ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಬರೆದ ‘ಪ್ರಾಬ್ಲಂ ಆಫ್ ಇಂಡಿಯನ್ ರುಪೀ’ ಎಂಬ ಸಂಶೋಧನಾ ಪ್ರಬಂಧದ ಪ್ರೇರಣೆ ಕಾರಣ.

ಅಮರ್ತ್ಯಸೇನ್‌ಗೆ ನೊಬೆಲ್ ಬಂದಾಗ ಅವರು ಹೇಳಿದ ಮಾತು: ‘ನಾನು ಹೊಸತೇನನ್ನೂ ಮಾಡಿಲ್ಲ; ಬಾಬಾಸಾಹೇಬರ ಆರ್ಥಿಕ ಸಿದ್ಧಾಂತಗಳನ್ನು ವಿಸ್ತರಿಸಿದ್ದೇನೆ, ಅಷ್ಟೆ.’ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ ತನ್ನ 250 ವರ್ಷಗಳ ಚರಿತ್ರೆಯಲ್ಲಿ ‘ಶ್ರೇಷ್ಠ ವಿದ್ಯಾರ್ಥಿ ಯಾರು?’ ಎಂದು ಹುಡುಕಿದಾಗ ಅವರಿಗೆ ಕಂಡದ್ದು ಅಂಬೇಡ್ಕರ್…

ಹೀಗೆ ಗಿರಿರಾಜ್ ಮಂಡನೆ ಮುಂದುವರಿಯುತ್ತದೆ. ಒಂದು ವರ್ಗಕ್ಕೆ ಸೀಮಿತವಾಗಿರುವ ಅಂಬೇಡ್ಕರ್ ಅವರನ್ನು ಎಲ್ಲರ ಅಂಬೇಡ್ಕರನ್ನಾಗಿಸುವ ಗಿರಿರಾಜ್ ಪ್ರಯತ್ನ ಕುತೂಹಲಕರವಾಗಿತ್ತು. ಪರಿಚಿತ ವಲಯಗಳಾಚೆಗೆ ಅಂಬೇಡ್ಕರ್ ಅವರನ್ನು ಹಬ್ಬಿಸಲೆತ್ನಿಸುತ್ತಿರುವ ಹೊಸ ತಲೆಮಾರಿನ ರಂಗಭೂಮಿ-ಸಿನಿಮಾ ನಿರ್ದೇಶಕ ಗಿರಿರಾಜ್, ಇದಾದ ಮೇಲೆ ಎರಡು ಪ್ರಯೋಗಗಳನ್ನು ಮಾಡಿದ್ದಾರೆ. ಒಂದು, ಕರ್ನಾಟಕದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಅಂಬೇಡ್ಕರ್ ಅವರ ನೂರಿಪ್ಪತ್ತೈದನೆಯ ಜನ್ಮದಿನದ ವರ್ಷಾಚರಣೆಗಾಗಿ ಮಾಡಿರುವ ‘ಭಾರತ ಭಾಗ್ಯವಿಧಾತ’ ಲೈಟ್ ಅಂಡ್ ಸೌಂಡ್ ಪ್ರದರ್ಶನ.

ಎರಡು, ಅವರು ಈಚೆಗೆ ಮಾಡಿರುವ ‘ಅಮರಾವತಿ’ ಸಿನಿಮಾದಲ್ಲಿ ಅಂಬೇಡ್ಕರ್ ಸ್ಪಿರಿಟ್ ದಲಿತರಂತೆಯೇ ಹೊಸ ತಲೆಮಾರಿನ ಹುಡುಗರ ಕಾಳಜಿಗಳಲ್ಲೂ ಬೆರೆಯುವ ರೀತಿ. ಬಾಬಾಸಾಹೇಬರ ಸ್ಫೂರ್ತಿ ಹಲವು ವಲಯಗಳಿಗೆ ಹಬ್ಬುತ್ತಿರುವ ರೀತಿಯನ್ನು ‘ಅಮರಾವತಿ’ ತೋರಿಸುತ್ತಿದೆ.

ಅಂಬೇಡ್ಕರ್ ಎಲ್ಲೆಲ್ಲಿ, ಹೇಗೆ ಬೆಳೆಯುತ್ತಾರೆಂಬುದು ಕುತೂಹಲಕರ. ಇದನ್ನು ಬರೆಯುವಾಗ ಹಿಂದೊಮ್ಮೆ ಪತ್ರಿಕೆಯೊಂದರಲ್ಲಿ ಓದಿದ ಈ ಶತಮಾನದ ಚಾರಿತ್ರಿಕ ಬೆಳವಣಿಗೆಯೊಂದು ನೆನಪಾಯಿತು: ಪ್ಯಾರಿಸ್ಸಿನ ಲೈಬ್ರರಿಯೊಂದರಲ್ಲಿ ಓದುತ್ತಾ ಕೂತಿದ್ದ ಟೈಬರ್‌ಗೆ ಇದ್ದಕ್ಕಿದ್ದಂತೆ ಅಂಬೇಡ್ಕರ್ ಕುರಿತ ಪುಸ್ತಕವೊಂದು ಸಿಕ್ಕಿತು. ಆವರೆಗೆ ಅವನು ಅಂಬೇಡ್ಕರ್ ಹೆಸರು ಕೇಳಿರಲಿಲ್ಲ. ಅಂಬೇಡ್ಕರ್ ಹೋರಾಟವನ್ನು ಓದತೊಡಗಿದ ಅವನಿಗೆ ಅಂಬೇಡ್ಕರ್ ಕನ್ನಡಿಯಲ್ಲಿ ಹಂಗೆರಿಯಲ್ಲಿ ಬದುಕುವ ರೋಮಾ ಅಥವಾ ರೋಮಾನಿ ಜಿಪ್ಸಿಗಳ ಅಸ್ಪೃಶ್ಯತೆಗೆ ಪರಿಹಾರ ಕಾಣತೊಡಗಿತು.

ಈ ಜಿಪ್ಸಿಗಳು ಅಲೆಮಾರಿಗಳಲ್ಲ; ನೆಲೆ ನಿಂತವರು. ಯುರೋಪಿನ ಅಸ್ಪೃಶ್ಯರಂತೆ ಬದುಕುತ್ತಾ, ಊರ ಹೊರಗಿದ್ದವರು. ಶೇಕಡ ಏಳರಷ್ಟಿರುವ ರೋಮಾಗಳು ಬಿಳಿಯ ಯುರೋಪಿಯನ್ನರ ಸಮುದಾಯಕ್ಕೆ ಅಸ್ಪೃಶ್ಯರು. ಅವರ ದುಡಿಮೆಗೆ ಯಾವ ಭದ್ರತೆಯೂ ಇರಲಿಲ್ಲ. ಈ ರೋಮಾಗಳ ಮೂಲ ಸ್ಥಾನ ಇಂಡಿಯಾದ ರಾಜಸ್ತಾನ, ಪಂಜಾಬ್ ಎಂದು ಅಧ್ಯಯನಗಳು ಹೇಳುತ್ತವೆ. ಅವರ ಭಾಷೆಯ ಕೆಲವು ಕ್ರಮಗಳೂ ಇಂಡಿಯಾ ಮೂಲವನ್ನೇ ಸೂಚಿಸುತ್ತವೆ.

ಅವತ್ತು ಪ್ಯಾರಿಸ್ಸಿನಲ್ಲಿ ಅಂಬೇಡ್ಕರ್ ಬಗ್ಗೆ ಓದಿದ ಟೈಬರ್, ತನ್ನ ಜಿಪ್ಸಿ ಗೆಳೆಯ ಜೇನಸ್ ಒರೋಸ್‌ಗೆ ಅಂಬೇಡ್ಕರ್ ಬಗ್ಗೆ ಹೇಳತೊಡಗಿದ.

ನಿಜವಾದ ಗೆಳೆತನವೆಂದರೆ ದೊಡ್ಡ ಉದ್ದೇಶಕ್ಕಾಗಿ ಒಟ್ಟಾಗುವುದು ಎಂಬುದು ಈ ಗೆಳೆತನ ನೋಡಿದರೆ ಮತ್ತೊಮ್ಮೆ ಖಾತ್ರಿಯಾಗತೊಡಗುತ್ತದೆ. ಈ ಇಬ್ಬರೂ ಸೇರಿ ‘ಜೈಭೀಮ್ ನೆಟ್‌ವರ್ಕ್’ ಸ್ಥಾಪಿಸಿದರು. ರೋಮಾ ಜನಾಂಗದ ಬಿಡುಗಡೆಗಾಗಿ ಹೋರಾಡಿ ಯಶಸ್ವಿಯಾದರು.

2005 ಹಾಗೂ 2007ರಲ್ಲಿ ಈ ಇಬ್ಬರೂ ಮಹಾರಾಷ್ಟ್ರಕ್ಕೆ ಭೇಟಿ ಕೊಟ್ಟು ಅಲ್ಲಿ ಅಂಬೇಡ್ಕರ್‌ವಾದಿ ಚಿಂತಕರನ್ನು, ನವಾಯಾನ ಬುದ್ಧಿಸ್ಟರನ್ನು ಭೇಟಿಯಾದರು. ನಂತರ ಹಂಗೆರಿಯಲ್ಲಿ ರೋಮಾಗಳ ಬೌದ್ಧ ಧರ್ಮ ಸ್ವೀಕಾರವೂ ನಡೆಯಿತು. ಅಲ್ಲಿ ಈ ಮತಾಂತರದ ವಿರುದ್ಧ ಚೀರುವ ಮೂಲಭೂತವಾದಿಗಳಿರಲಿಲ್ಲ; ಇದ್ದರೂ ರೋಮಾಗಳು ಅವರಿಗೆ ಕ್ಯಾರೇ ಎನ್ನುತ್ತಿರಲಿಲ್ಲ! ಅಂಬೇಡ್ಕರ್ ಹೆಸರಿನಲ್ಲಿ ಹೈಸ್ಕೂಲ್ ಸ್ಥಾಪಿಸಿದ್ದು ರೋಮಾ ಸಮುದಾಯದ ವಿಮೋಚನೆಯ ಮುಖ್ಯ ಘಟ್ಟವಾಗಿತ್ತು.

2010ರ ಹಂಗೆರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಾಲ್ಕು ಜನ ರೊಮಾನಿಗಳು ಗೆದ್ದು, ನ್ಯಾಷನಲ್ ಅಸೆಂಬ್ಲಿಯನ್ನು ಪ್ರವೇಶಿಸಿದರು. ಇವತ್ತು ಹಂಗೆರಿಯ ಒಟ್ಟು ಜನಸಂಖ್ಯೆಯಲ್ಲಿ ಶೇಕಡ ಐದರಿಂದ ಹತ್ತರಷ್ಟು ಮಂದಿ ರೊಮಾನಿಗಳಿದ್ದಾರೆ.

ಇವತ್ತಿಗೂ ಅಸ್ಪೃಶ್ಯರನ್ನು ನಿಕೃಷ್ಟವಾಗಿ ನೋಡುವ ಇಂಡಿಯಾವನ್ನು ಪ್ರತಿನಿಧಿಸುತ್ತಾ, 2016ರ ಇಂಟರ್‌ನ್ಯಾಷನಲ್ ರೋಮಾ ಕಾನ್ಫರೆನ್ಸ್‌ನಲ್ಲಿ ಮಾತಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ‘ರೋಮಾ ಸಮುದಾಯದವರು ಇಂಡಿಯಾದ ಮಕ್ಕಳು’ ಎಂದು ಹೇಳಿದರು. ಆದರೆ ಸುಷ್ಮಾ ಬಾಯಿಂದ ಇಂಡಿಯಾದ ಅಸ್ಪೃಶ್ಯರು ಇಂಥ ಎದೆತುಂಬಿದ ಮಾತುಗಳನ್ನು ಇನ್ನೂ ಕೇಳಿದಂತಿಲ್ಲ. ಅಂಬೇಡ್ಕರ್ ಅವರನ್ನು ಹಂಗೆರಿಯ ರೋಮಾಗಳು ಹುಡುಕಿಕೊಂಡ ಕತೆಯನ್ನೂ ಅವರು ಕೇಳಿರಲಿಕ್ಕಿಲ್ಲ.

ಅದೇನೇ ಇರಲಿ, ಹೀಗೆ ಇಂಡಿಯಾದಲ್ಲಿ ಹಾಗೂ ಇಂಡಿಯಾದ ಆಚೆಗೆ, ಅದರಲ್ಲೂ ದಲಿತ ಜಗತ್ತಿನಾಚೆಗೆ ಜಗತ್ತಿನ ಶೋಷಿತ ಸಮುದಾಯ ಹೊಸ ರೀತಿಯಲ್ಲಿ ಅಂಬೇಡ್ಕರ್ ಅವರನ್ನು ಹುಡುಕಿಕೊಳ್ಳುವ ಬಗೆಯನ್ನು ನಮ್ಮ ದಲಿತ ಚಳವಳಿಗಳು ಅಧ್ಯಯನ ಮಾಡಬೇಕು. ಗಿರಿರಾಜ್ ಅವರ ‘ಜಟ್ಟ’ ಸಿನಿಮಾದಲ್ಲಿ ಅಂಬೇಡ್ಕರ್ ಚಿಂತನೆಯಿಂದ ಪ್ರೇರಣೆ ಪಡೆದ ಸಾಗರಿಕಾ ಎಂಬ ಸ್ತ್ರೀವಾದಿ ಹುಡುಗಿಯೊಬ್ಬಳಿದ್ದಾಳೆ. ಅವಳು ಸಭೆಯೊಂದರಲ್ಲಿ ‘ಎಲ್ಲ ಧರ್ಮಗಳನ್ನೂ ಸುಟ್ಟುಹಾಕಿ’ ಎನ್ನುತ್ತಾಳೆ; ಸಭೆ ರದ್ದಾಗುತ್ತದೆ.

ಹಾದಿಯಲ್ಲಿ ಅಪಘಾತಕ್ಕೆ ತುತ್ತಾದ ಆಕೆ ಫಾರೆಸ್ಟ್ ಗಾರ್ಡ್ ಜಟ್ಟನ ಬಂದಿಯಾಗುತ್ತಾಳೆ. ಹೆಂಡತಿಯನ್ನು ಕಳೆದುಕೊಂಡಿದ್ದ ಜಟ್ಟ ಈ ಹುಡುಗಿಯ ಕಾಲಿಗೆ ಚೈನ್ ಹಾಕಿ ಮನೆಯಲ್ಲಿ ಇರಿಸುತ್ತಾನೆ. ಚೈನಿನಿಂದ ತಪ್ಪಿಸಿಕೊಳ್ಳಲೆತ್ನಿಸುತ್ತಾ, ಆಕೆ ಸ್ತ್ರೀ ಅಧೀನದ ಬಗ್ಗೆ ಅನೇಕ ಪ್ರಶ್ನೆಗಳನ್ನೆತ್ತುತ್ತಾಳೆ. ಈ ಸಿನಿಮಾದಲ್ಲಿರುವ ಫಾರೆಸ್ಟ್ ಅಫೀಸರ್ ‘ಅಂಬೇಡ್ಕರ್ ನನ್ನ ದೇವರು; ಸಂವಿಧಾನವೇ ಗೀತೆ ಎಂದು ನಂಬಿದವನು ನಾನು’ ಎನ್ನುತ್ತಾನೆ. ಅವನ ಕಚೇರಿಯ ಫೋಟೊದಲ್ಲಿರುವ ಅಂಬೇಡ್ಕರ್, ಅವನು ಸಮಾನತೆಯನ್ನು ವಿಶ್ಲೇಷಿಸುವ ರೀತಿಯಲ್ಲೂ ಇದ್ದಾರೆ.

ಗಿರಿರಾಜ್ ಅವರ ‘ಅಮರಾವತಿ’ಯಲ್ಲಿ ಅಂಬೇಡ್ಕರ್ ದೊಡ್ಡಮಟ್ಟದಲ್ಲಿ ಬರುತ್ತಾರೆ. ಕನ್ನಡ ಸಿನಿಮಾ ಅಥವಾ ಇಂಡಿಯಾದ ಸಿನಿಮಾ ಈವರೆಗೆ ಕೈಹಾಕದ ಬೃಹತ್ ಸಮಸ್ಯೆಯನ್ನು ‘ಅಮರಾವತಿ’ ಕೈಗೆತ್ತಿಕೊಂಡಿದೆ. ತಮ್ಮ ಕನಿಷ್ಠ ಬೇಡಿಕೆಗಳನ್ನು ಈಡೇರಿಸದಿದ್ದರೆ ಇಡೀ ಬೆಂಗಳೂರನ್ನು ಕಸದ ತೊಟ್ಟಿಯನ್ನಾಗಿ ಮಾಡುತ್ತೇವೆ ಎಂದು ಪೌರಕಾರ್ಮಿಕರು ಸವಾಲೆಸೆಯುತ್ತಾರೆ; ಅವರ ದುಮ್ಮಾನವನ್ನು ಮಂಡಿಸಲು ಹೊಸ ತಲೆಮಾರಿನ ಪತ್ರಿಕೋದ್ಯಮದ ಹುಡುಗ, ಹುಡುಗಿಯರಿಬ್ಬರು ಸಿದ್ಧವಾಗಿದ್ದಾರೆ.

ಚಳವಳಿಗಳನ್ನು ಹತ್ತಿರದಿಂದ ನೋಡಿರುವ ನಟ ಅಚ್ಯುತ್ ಕುಮಾರ್ ಅವರ ವಾಸ್ತವಿಕ ನಟನೆಯ ಬಲವೂ ಇರುವ ಈ ಸಿನಿಮಾ ಜಾತೀಯ ಇಂಡಿಯಾದ ಮುಖಕ್ಕೆ ತೀಕ್ಷ್ಣ ಪ್ರಶ್ನೆಗಳನ್ನು ಎಸೆಯುತ್ತದೆ. ಅಂಬೇಡ್ಕರ್ ನೋಟವನ್ನು ಬಳಸಿ ಸಿನಿಮಾ ಮಾಡಬಲ್ಲ ಹೊಸ ನಿರ್ದೇಶಕನೊಬ್ಬ ಕರ್ನಾಟಕದಲ್ಲಿ ಮೂಡಿರುವುದು ಕರ್ನಾಟಕ ಅಂಬೇಡ್ಕರ್ ವಾದವನ್ನು ಮತ್ತೊಂದು ದಿಕ್ಕಿನಲ್ಲಿ ಬೆಳೆಸುತ್ತಿರುವ ರೀತಿಗೆ ಸಾಕ್ಷಿಯಂತಿದೆ. ‘ಅಮರಾವತಿ’ಯ ನಂತರ ಗಿರಿರಾಜ್ ರೂಪಿಸಿದ ‘ಭಾರತ ಭಾಗ್ಯವಿಧಾತ’ ಅಂಬೇಡ್ಕರ್ ಅವರ ಜನಪ್ರಿಯ ಹಾಗೂ ಪೋಸ್ಟ್ ಮಾಡರ್ನ್ ಕಥನವನ್ನು ದಲಿತೇತರ ಲೋಕಕ್ಕೆ ಕೊಂಚ ಗಟ್ಟಿ ದನಿಯಲ್ಲಿ ಹೇಳಲೆತ್ನಿಸಿದೆ.

ಇದೆಲ್ಲದರ ನಡುವೆ, ಗಿರಿರಾಜ್ ಅವರ ‘ಜಟ್ಟ’ ಹಾಗೂ ‘ಅಮರಾವತಿ’ ಸಿನಿಮಾಗಳೆರಡೂ ಕೊನೆಗೆ ಹಿಂಸೆಯನ್ನೇ ಅನಿವಾರ್ಯವಾದ ಮಾರ್ಗ ಎಂದು ತೋರಿಸುತ್ತಿರುವುದನ್ನು ಗಮನಿಸಬೇಕು. ಪರಿಣಾಮಕಾರಿ ಅಂತ್ಯವನ್ನೇ ಗುರಿಯಾಗಿಟ್ಟುಕೊಂಡ ಈ ತಿರುವುಗಳಿಗೆ ಈ ಸಿನಿಮಾಗಳೊಳಗೇ ಜಸ್ಟಿಫಿಕೇಶನ್ ಇರಬಹುದು. ಪ್ರಬಲರು ಯಾವ ಅಸ್ತ್ರಗಳನ್ನಾದರೂ ಬಳಸಬಹುದಾದ ಇಂಡಿಯಾದಲ್ಲಿ ಶೋಷಿತರ ಸಮಸ್ಯೆಗಳ ಪರಿಹಾರಕ್ಕೆ ಅಂಬೇಡ್ಕರ್ ವಾದದ ಜೊತೆಗೆ ಇನ್ನಷ್ಟು ಅಸ್ತ್ರಗಳೂ ಬೇಕು ಎಂಬ ಸಿಟ್ಟಿನಲ್ಲಿ ಗಿರಿರಾಜ್ ಸಿನಿಮಾಗಳು ಸ್ಫೋಟಗೊಂಡಿರಬಹುದು.

ಆದರೆ ಮಹಾರಾಷ್ಟ್ರದ ಮಹಾಡ್ ಎಂಬ ಊರಿನಲ್ಲಿ ಸಿಹಿನೀರು ಕೆರೆಯ ನೀರನ್ನು ಕುಡಿದದ್ದಕ್ಕೆ ದಲಿತರ ಮೇಲೆ ಸವರ್ಣೀಯರು ಹಲ್ಲೆ ಮಾಡಿದಾಗ, ದಲಿತರು ಹಿಂಸೆಗಿಳಿಯದಂತೆ ಅಂಬೇಡ್ಕರ್ ತಡೆದದ್ದು ಯಾಕೆ ಎಂಬ ಬಗ್ಗೆ ಈ ಬಗೆಯ ಸಿನಿಮಾ ಮಾಡುವವರು ಆಳವಾಗಿ ಯೋಚಿಸಬೇಕು. ಸೇನೆ ಸೇರಲು ತಕ್ಕವರಾಗಿದ್ದ, ದೃಢಕಾಯರಾದ ಮಹರ್ ತರುಣರು ಅವತ್ತು ತಮ್ಮ ಲಾಠಿ ಬೀಸಿದ್ದರೆ, ಸವರ್ಣೀಯರ ತಲೆಗಳೂ ಉರುಳುತ್ತಿದ್ದವು. ಆದರೆ ಅದರಿಂದ ದಲಿತ ಚಳವಳಿಗೆ ಹಿನ್ನಡೆಯಾಗುತ್ತದೆಂಬ ಮುನ್ನೋಟ ಅಂಬೇಡ್ಕರ್ ಅವರಿಗಿತ್ತು; ಹಿಂಸೆಯ ಅಸ್ತ್ರಗಳನ್ನು ಪಡೆಯುವುದು ದಲಿತರಿಗಿಂತ ಸವರ್ಣೀಯರಿಗೆ ಸುಲಭ ಎಂಬುದೂ ಅವರಿಗೆ ಗೊತ್ತಿತ್ತು.

ಗಿರಿರಾಜ್ ಸಿನಿಮಾದಲ್ಲಿ ಸ್ತ್ರೀವಾದಿಯೊಬ್ಬಳು ತನ್ನ ಭಾಷಣಕ್ಕೆ ಅಡ್ಡಿಯಾದ ಪ್ರಿನ್ಸಿಪಾಲರಿಗೆ ಸಂವಿಧಾನದ ಪುಸ್ತಕದಿಂದ ಹೊಡೆಯುವುದು ಪರಿಣಾಮಕಾರಿ ಸಿನಿಮೀಯ ಘಟನೆಯಾಗಿರಬಹುದು; ಆದರೆ ಸಂವಿಧಾನದ ಆಳವಾದ ತಿಳಿವಳಿಕೆಯನ್ನು ದಲಿತರಿಗೆ, ಮಹಿಳೆಯರಿಗೆ ನೀಡಿ, ಸಾವಿರಾರು ವರ್ಷಗಳ ಮನುಸ್ಮೃತಿಯ ಬಾಲ ಹಾಗೂ ಅಂಗಾಗಗಳನ್ನು ಕತ್ತರಿಸುವುದು ದಲಿತರಿಗೂ ಸ್ತ್ರೀಯರಿಗೂ ನಿರ್ಣಾಯಕ ಬಿಡುಗಡೆ ತರಬಲ್ಲದು ಎಂಬುದನ್ನು ಸಿಟ್ಟಿನ ನಿರ್ದೇಶಕರು ಅರಿಯಬೇಕಾಗುತ್ತದೆ.

ಅಂಬೇಡ್ಕರ್ ತಾತ್ವಿಕ ಭಿತ್ತಿಯನ್ನು ಬಳಸುವ ಸಿನಿಮಾವೊಂದು ಅಂಬೇಡ್ಕರ್ ಹುಡುಕದ ಪರಿಹಾರವನ್ನು ಹುಡುಕಲೆತ್ನಿಸಬಹುದು; ಆದರೆ ಹಾಗೆ ಮಾಡುವಾಗ ಅವರು ಸಿನಿಮಾದ ರೋಚಕ ಅಥವಾ ಪರಿಣಾಮಕಾರಿ ಮುಕ್ತಾಯ ಮುಂತಾದ ಸರಳ ಸವಾಲುಗಳನ್ನು ಮೀರಿ ಧ್ಯಾನಿಸಿ ನೋಡಬೇಕಾಗುತ್ತದೆ. ಅದರಲ್ಲೂ ಗನ್ ಹಿಡಿಯದೆ ಪೆನ್ ಹಿಡಿದ ಅಂಬೇಡ್ಕರ್ ಅವರಂತೆ, ಗಿರಿರಾಜ್ ಕೂಡ ಗನ್ ಹಿಡಿಯದೆ ಸಮಸ್ಯೆಗಳನ್ನು ಶೋಧಿಸಲು ಕ್ಯಾಮೆರಾ ಹಿಡಿದಿದ್ದಾರೆ. ತಾವು ಹಿಡಿಯದ ಶಸ್ತ್ರಗಳನ್ನು ಜನರ ಕೈಗೆ ಕೊಡುವ ಮುನ್ನ ಯಾವುದೇ ನಾಯಕನಾಗಲೀ, ಕತೆಗಾರನಾಗಲೀ, ನಿರ್ದೇಶಕನಾಗಲೀ ಆಳವಾಗಿ ಆತ್ಮಪರೀಕ್ಷೆ ಮಾಡಿಕೊಳ್ಳುತ್ತಿರಬೇಕಾಗುತ್ತದೆ.

ಕೊನೆ ಟಿಪ್ಪಣಿ: ಎಲ್ಲರ ಅಂಬೇಡ್ಕರ್

‘ಇದೇನು! ‘ಭಾರತ ಭಾಗ್ಯವಿಧಾತ’ದಲ್ಲಿ ಇಷ್ಟೊಂದು ಅಬ್ಬರದಲ್ಲಿ ಅಂಬೇಡ್ಕರ್ ಅವರನ್ನು ಮಂಡಿಸುತ್ತೀರಲ್ಲ?’ ಎಂದು ಗಿರಿರಾಜ್ ಅವರನ್ನು ಕೇಳಿದೆ. ‘ನನ್ನ ತಂಡದಲ್ಲಿ ಎಲ್ಲ ಜಾತಿಯ ಜನರೂ ಕೆಲಸ ಮಾಡುತ್ತಾರೆ. ಅವರೆಲ್ಲರ ನಡುವೆ ಅಂಬೇಡ್ಕರ್ ನಿಧಾನವಾಗಿ ಹಬ್ಬುವುದು ಹೀಗೆಯೇ. ಇದು ಕೂಡ ಮುಖ್ಯವಲ್ಲವೇ?’ ಎಂದರು ಗಿರಿರಾಜ್. ಅಂಬೇಡ್ಕರ್ ಚಿಂತನೆಯನ್ನು ಸವಕಲು ಮಾತಿನಲ್ಲಿ ಮಂಡಿಸುವವರು ಅಂಬೇಡ್ಕರ್ ಮಹತ್ವವನ್ನು ಕಡಿಮೆಯಾಗಿಸುತ್ತಿರುತ್ತಾರೆ.

ದಲಿತ ಮೂಲಭೂತವಾದ ಕೂಡ ಅಂಬೇಡ್ಕರ್ ವಿಚಾರಗಳನ್ನೂ, ಅವುಗಳ ಪರಿಣಾಮವನ್ನೂ ಮಂಕಾಗಿಸುತ್ತಿರುತ್ತದೆ. ಅಂಬೇಡ್ಕರ್ ವಾದಕ್ಕೆ ಹೊಸ ವ್ಯಾಖ್ಯಾನಗಳು ಬರುವುದು ಎಲ್ಲ ದಿಕ್ಕುಗಳ ಚಿಂತನೆ ಹಾಗೂ ಎಲ್ಲ ಜಾತಿ, ವರ್ಗಗಳ ಜನರ ಕ್ರಿಯೆಗಳಿಂದ. ತಮಗಿಂತ ಮೊದಲೇ ದಲಿತಪರ ಕಾಳಜಿಗಳನ್ನು ಬಿತ್ತಿದ ಮಂಗಳೂರಿನ ಕುದ್ಮಲ್ ರಂಗರಾವ್ ಬಗ್ಗೆ ಗಾಂಧಿ, ಅಂಬೇಡ್ಕರ್ ಇಬ್ಬರಿಗೂ ಕೃತಜ್ಞತೆಯಿದ್ದರೆ ಅಚ್ಚರಿಯಲ್ಲ. ಅಂಬೇಡ್ಕರ್ ಚಿಂತನೆಗಳು ದಲಿತ ವಲಯಗಳ ಮೂಲಕವಷ್ಟೇ ಹಬ್ಬದೆ, ಬೇರೆಬೇರೆ ವಲಯಗಳ ಮೂಲಕವೂ ಹಬ್ಬುತ್ತಿರಬೇಕಾಗುತ್ತದೆ. ಈ ಬಗ್ಗೆ ಅಂಬೇಡ್ಕರ್ ವಾದಿಗಳು ಮುಕ್ತವಾಗಿ ಯೋಚಿಸಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.