ಆಗ ತಾನೇ ನಮ್ಮ ಶಿಕ್ಷಕರ ತರಬೇತಿ ಕೇಂದ್ರ ಪ್ರಾರಂಭವಾಗಿತ್ತು. ಅದು ಕರ್ತವ್ಯನಿರತರಾದ ಶಿಕ್ಷಕರಿಗೆ ವ್ಯವಸ್ಥಿತ ತರಬೇತಿ ನೀಡುವ ಭಾರತದ ಮೊದಲನೆಯ ಹಾಗೂ ವಿಶಿಷ್ಟವಾದ ಕೇಂದ್ರವೆಂದು ಪ್ರಶಂಸೆ ಪಡೆದಿತ್ತು. ದೇಶದ ಬೇರೆ ಬೇರೆ ಭಾಗಗಳಿಂದ ಬಂದ ಶ್ರೇಷ್ಠಮಟ್ಟದ ಶಿಕ್ಷಕರು ತರಗತಿಗಳನ್ನು ನಡೆಸಲು ಸಿದ್ಧರಾಗಿದ್ದರು.

ತರಬೇತಿಗೆ ಬೇಕಾದ ಸಕಲ ಸಿದ್ಧತೆಗಳು ಮುಗಿದಿದ್ದವು. ಒಂದು ವರ್ಷದ ಕೋರ್ಸಿಗೆ ಅರ್ಜಿಗಳು ಬಂದಿದ್ದವು. ನಾವು ತೆಗೆದುಕೊಳ್ಳುವುದು ಕೇವಲ ನಲವತ್ತು ವಿದ್ಯಾರ್ಥಿಗಳನ್ನು ಮಾತ್ರ. ಬಂದ ನೂರಾರು ಅರ್ಜಿಗಳಲ್ಲಿ ನಲವತ್ತನ್ನು ಮಾತ್ರ ಆರಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವಿಷಯ ತಿಳಿಸಿ ಮುಂದಿನ ಹದಿನೈದು ದಿನಗಳಲ್ಲಿ ಅವರು ಬೆಂಗಳೂರಿಗೆ ಬಂದು ತರಗತಿಗೆ ಸೇರಿಕೊಳ್ಳಬೇಕೆಂದು ಪತ್ರ ಕಳುಹಿಸಲಾಗಿತ್ತು. ಆ ಸಮಯದಲ್ಲೇ ನನಗೆ ಕುಸುಮಾಳ ಪರಿಚಯವಾದದ್ದು.

ಅಂದು ನನ್ನ ಆಫೀಸಿಗೆ ಹಿರಿಯ ಮಹಿಳೆಯೊಂದಿಗೆ ಹುಡುಗಿಯೊಬ್ಬಳು ಬಂದಳು. ಆಕೆಗೆ ನನ್ನ ಕೊಠಡಿಯಲ್ಲಿ ಬಂದು ಮಾತನಾಡಲು ಹೆದರಿಕೆ. ನನ್ನ ಕಾರ್ಯದರ್ಶಿಯೊಡನೆಯೇ ಏನೇನೋ ಚೌಕಾಸಿ ಮಾಡುತ್ತಿದ್ದಳೆಂದು ತೋರುತ್ತದೆ. ಕೊನೆಗೆ ನನ್ನ ಕಾರ್ಯದರ್ಶಿ ಒಳಗೆ ಬಂದು, ‘ಸಾರ್ ಒಬ್ಬ ಹುಡುಗಿ ಬಂದಿದ್ದಾಳೆ. ಆಕೆಯ ಜೊತೆಗೆ ತಾಯಿಯೂ ಇದ್ದಾರೆ. ಹುಡುಗಿಗೆ ನಮ್ಮ ತರಬೇತಿಗಾಗಿ ಆಯ್ಕೆಯಾಗಿದೆ. ಆದರೆ ಅವರು ತುಂಬ ಬಡವರಂತೆ, ಹಣ ಕಟ್ಟಲು ಆಗುವುದಿಲ್ಲವಂತೆ. ಆದರೆ ಕೋರ್ಸಿಗೆ ಸೇರಲೇಬೇಕಂತೆ. ನಿಮ್ಮನ್ನು ನೋಡಲು ಭಯಪಡುತ್ತಿದ್ದಾರೆ’ ಎಂದಳು.

ನಾನು ಅವರನ್ನು ನನ್ನೆಡೆಗೆ ಕಳುಹಿಸಲು ಹೇಳಿದೆ. ಎರಡು ಕ್ಷಣಗಳಲ್ಲಿ ತಾಯಿ, ಮಗಳಿಬ್ಬರೂ ಒಳಗೆ ಬಂದರು. ಹುಡುಗಿಯ ಮುಖದ ಮೇಲೆ ಭಯ ಎದ್ದು ಕಾಣುತ್ತಿತ್ತು. ಹಣೆಯ ಮೇಲೆ ಬೆವರಿನ ಸಾಲು. ಕುರ್ಚಿಯ ಮೇಲೆ ಕುಳಿತುಕೊಳ್ಳಲೂ ಹೆದರಿಕೆ. ಪರವಾಗಿಲ್ಲ, ಕುಳಿತುಕೊಳ್ಳಮ್ಮ ಎಂದು ಕೂಡ್ರಿಸಿದೆ. ಆಕೆ ಒಂದೇ ಸಮನೆ ಅಳತೊಡಗಿದಳು. ಕ್ಷಣಕಾಲ ಸುಮ್ಮನಿದ್ದು ತನ್ನ ಕಷ್ಟ ಹೇಳಿಕೊಂಡಳು. ಆಕೆಯ ಹೆಸರು ಕುಸುಮಾ, ಬಾಗಲಕೋಟೆಯ ಹತ್ತಿರದ ಒಂದು ಹಳ್ಳಿಯವಳು. ಅವಳು ಹೇಳಿದ್ದಿಷ್ಟು. ಅವಳ ತಂದೆ ಒಕ್ಕಲುತನ ಮಾಡುತ್ತಾರೆ. ಅವರದೇ ಆದ ಜಮೀನಿಲ್ಲ. ಬೇರೆಯವರ ಹೊಲದಲ್ಲಿ ಕೂಲಿಯ ಕೆಲಸ.

ಮನೆಯಲ್ಲಿ ಅಣ್ಣನ ಬೆನ್ನಿಗೆ ಪೆಟ್ಟಾಗಿ ಹಾಸಿಗೆ ಹಿಡಿದು ಮಲಗಿದ್ದಾನೆ. ಇಳಿವಯಸ್ಸಿನ ತಂದೆಗೆ ದುಡಿಯದೇ ಬೇರೆ ಗತಿಯಿಲ್ಲ. ತಾಯಿ ಕೂಡ ಆಗಾಗ ಕೂಲಿಕೆಲಸಕ್ಕೆ ಹೋಗುತ್ತಾರೆ. ಕುಸುಮಾ ಬಾಗಲಕೋಟೆಯಲ್ಲಿದ್ದು ಶ್ರೀಮಂತರ ಮನೆಯ ಮಕ್ಕಳಿಗೆ ಪಾಠ ಹೇಳಿ ಸ್ವಲ್ಪ ಹಣಗಳಿಸಿ ಕಾಲೇಜಿಗೆ ಹೋಗಿ ಬಿ.ಎ. ಮುಗಿಸಿದ್ದಾಳೆ. ಈ ಕೋರ್ಸಿಗೆ ಸೇರಿದರೆ ಒಳ್ಳೆಯ ತರಬೇತಿಯೊಂದಿಗೆ ನೌಕರಿಯ ಖಾತರಿಯೂ ಇರುವುದರಿಂದ ಇದನ್ನು ಸೇರಬಯಸಿದ್ದಾಳೆ. ಆದರೆ, ತರಬೇತಿಯ ಹಾಗೂ ವಸತಿಯ ಖರ್ಚು ಆಕೆಗೆ ನಿಲುಕಲಾಗದ್ದು. ಅದಕ್ಕೇ ಈ ಹತಾಶೆಯ ನಡೆ.

ನನಗೂ ಏನು ಮಾಡಬೇಕೆಂಬುದು ಹೊಳೆಯಲಿಲ್ಲ. ಕುಸುಮಾಳಂಥ ಇನ್ನೂ ಮೂರು ನಾಲ್ಕು ಜನ ವಿದ್ಯಾರ್ಥಿಗಳಿರುವುದು ನನ್ನ ಗಮನಕ್ಕೆ ಬಂದಿತ್ತು. ಅವರೆಲ್ಲರಿಗೂ ಉಚಿತವಾಗಿ ಶಿಕ್ಷಣ ನೀಡುವಷ್ಟು ಶ್ರೀಮಂತ ಸಂಸ್ಥೆ ನಮ್ಮದಲ್ಲ. ಕುಸುಮಾಳಿಗೆ ಒಂದು ವಾರದ ನಂತರ ತಿಳಿಸುವುದಾಗಿ ಕಳುಹಿಸಿ ನಮ್ಮ ಆಫೀಸಿನ ಪಕ್ಕದಲ್ಲೇ ಇದ್ದ ಬ್ಯಾಂಕಿನ ಶಾಖೆಗೆ ಹೋದೆ. ಈ ವಿದ್ಯಾರ್ಥಿಗಳ ಕಷ್ಟವನ್ನು ಮ್ಯಾನೇಜರ್ ಅವರ ಹತ್ತಿರ ಹೇಳಿಕೊಂಡು ಏನಾದರೂ ಪರಿಹಾರ ದೊರೆತೀತೇ ಎಂದು ಕೇಳಿದೆ.

ಅವರು ಇಂತಹ ತರಬೇತಿಗೆ ಸಾಲ ನೀಡುವುದು ಕಷ್ಟವಾದರೂ ಮೇಲಿನವರಿಗೆ ಹೇಳಿ ಪ್ರಯತ್ನಿಸುತ್ತೇನೆ ಎಂದು ಆಶ್ವಾಸನೆ ನೀಡಿದರು. ನಾನೂ ಅವರೊಂದಿಗೆ ಡಿವಿಜನಲ್ ಮ್ಯಾನೇಜರ್ ಅವರನ್ನು ಕಂಡು ವಿವರಿಸಿದೆ. ಅವರು ಅದನ್ನು ಪರಿಶೀಲಿಸಿ ನಮ್ಮ ಸಂಸ್ಥೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಿಕ್ಷಣದ ವೆಚ್ಚವನ್ನು ಸಾಲವಾಗಿ ಕೊಡುವುದಾಗಿಯೂ ನಂತರ ಅವರು ಕೆಲಸಕ್ಕೆ ಸೇರಿದ ಮೇಲೆ ಪ್ರತಿ ತಿಂಗಳು ಸುಲಭದ ಕಂತುಗಳಲ್ಲಿ ಅದನ್ನು ತೀರಿಸಬಹುದೆಂದೂ ತಿಳಿಸಿ ಆಜ್ಞೆ ಹೊರಡಿಸಿದರು.

ಅದರಂತೆ ಕುಸುಮಾಳಿಗೂ, ಇನ್ನೂ ಮೂವರು ವಿದ್ಯಾರ್ಥಿಗಳಿಗೂ ಶಿಕ್ಷಣದ ಸಾಲ ದೊರಕಿ ತರಬೇತಿ ಮುಗಿಸಿದರು. ಅವರೆಲ್ಲರಿಗೂ ಕೈತುಂಬ ಸಂಬಳ ಬರುವುದರಿಂದ ಸಾಲ ತೀರಿಸುವುದು ಭಾರವಾಗಲೇ ಇಲ್ಲ. ಮನೆಯವರ ಮೇಲೆ ಭಾರಹಾಕದೇ ಸುಸೂತ್ರವಾಗಿ ತರಬೇತಿ ಪಡೆದದ್ದಕ್ಕಾಗಿ ಅವರು ಬ್ಯಾಂಕಿಗೆ ವಂದನೆ ಸಲ್ಲಿಸಿದರು. ಈಗ ಕುಸುಮಾ ಒಂದು ಅಂತರ್ರಾಷ್ಟ್ರೀಯ ಮಟ್ಟದ ಶಾಲೆಯ ಪ್ರಾಂಶುಪಾಲಳಾಗಿದ್ದಾಳೆ.

ನಮಗೆ ಯಾವ ಮೂಲದಿಂದ, ಯಾವಾಗ ಸಹಾಯ ದೊರೆತೀತು ಎಂಬುದನ್ನು ಹೇಳುವುದು ಕಷ್ಟ. ಆದರೆ ದೊರೆಯುವುದಿಲ್ಲ ಎಂದು ಕಣ್ಣುಮುಚ್ಚಿ ಕುಳಿತರೆ ಯಾವ ಸಹಾಯಹಸ್ತವೂ ಮುಂದೆ ಬರಲಾರದು. ಅವಕಾಶಗಳು ಸಾವಿರ ಇವೆ. ಆದರೆ, ಅವುಗಳನ್ನು ನಾವೇ ಹುಡುಕಿಕೊಂಡು ಹೋಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.