ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ

Last Updated 21 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ತಾಯಿ ಮಗನನ್ನು ಒಂದು ರೀತಿಯಲ್ಲಿ ಎಳೆದುಕೊಂಡೇ ನನ್ನ ಕೊಠಡಿ­­ಯೊಳಗೆ ಬಂದರು. ಆ ಹುಡುಗ ತಾಯಿಗಿಂತ ಎತ್ತರವಿದ್ದ. ಅವನನ್ನು ನೋಡಿ­ದರೆ ಕಾಲೇಜಿನಲ್ಲಿ ಓದುತ್ತಿರ­ಬಹುದು ಎನ್ನುವಂತಿದ್ದ. ಅವನ ಮುಖದ ಮೇಲಿನ ಬೇಜಾರು ಒಡೆದು ಕಾಣುತ್ತಿತ್ತು.  ತಾಯಿ ಒಳಗೆ ಬಂದು ನನ್ನ ಮೇಜಿನ ಮುಂದೆ ಕುಳಿತೊಡನೆ ಹೇಳಿದರು, ‘ಸರ್, ಈ ನನ್ನ ಮಗ ಪೂರ್ತಿ ನಿಷ್ಪ್ರಯೋಜಕ­ನಾಗಿದ್ದಾನೆ.

ಅವ­ನನ್ನು ಏನಾದರೂ ಮಾಡಿ ಪಾಸಾ­ಗುವಂತೆ ಮಾಡಿ’, ‘ಆಯ್ತಮ್ಮ, ಆದರೆ ನಿಮ್ಮ ಮಗ ಯಾವ ತರಗತಿಗೆ ಸೇರಲು ಬಂದಿದ್ದಾನೆ?’ ಎಂದು ಕೇಳಿದೆ. ಆಕೆ, ‘ಸರ್, ಈತ ಆರನೇ ತರಗತಿ ಪಾಸಾಗಲು ಒದ್ದಾಡಿದ್ದಾನೆ. ಈಗ ಏಳನೇ ಕ್ಲಾಸಿಗೆ ಬಂದಿದ್ದಾನೆ’ ಎಂದಾಗ ನನಗೆ ಆಶ್ಚರ್ಯ. ‘ನಿನ್ನ ವಯ­ಸ್ಸೆಷ್ಟು?’ ಎಂದು ಹುಡುಗ­ನನ್ನು ಕೇಳಿದೆ. ಆತ ನಿಜವಾಗಿಯೂ ಸಣ್ಣ ವಯಸ್ಸಿ­ನವನೇ.

ಆದರೆ, ಅವನ ದೈಹಿಕ ಬೆಳವಣಿಗೆ ಆತನನ್ನು ತರುಣನಂತೆ ತೋರುವಂತೆ ಮಾಡಿತ್ತು. ಮತ್ತೆ ತಾಯಿ ಹೇಳಿದರು, ‘ಸರ್, ಈತನಷ್ಟು ದಡ್ಡ ನಮ್ಮ ಮನೆ­ತನದಲ್ಲೇ ಯಾರೂ ಇರ­ಲಿಲ್ಲ. ಇವನ ತಲೆಗೆ ಗಣಿತ ಹತ್ತುವುದೇ ಸಾಧ್ಯವಿಲ್ಲ’. ಅವರೇ ಮಗನ ಬಗ್ಗೆ ಸರ್ಟಿಫಿಕೇಟು ಕೊಟ್ಟುಬಿಟ್ಟರು! ನನಗೋ ಇದುವರೆಗೆ ಒಬ್ಬ ದಡ್ಡ ವಿದ್ಯಾರ್ಥಿಯೂ ಸಿಕ್ಕಿಲ್ಲ. ಪ್ರತಿಯೊಂದು ಮಗು ಭಗವಂತನ ಕಾಣಿಕೆ. ಅದು ಅಪ್ರಯೋಜಕ ಹೇಗಾ­ದೀತು? ಆ ಮಗುವಿಗೆ ನಾವು ಅಪೇಕ್ಷಿ­ಸುವ ವಿಷಯದಲ್ಲಿ ಆಸಕ್ತಿ ಇರಲಿಕ್ಕಿಲ್ಲ, ಅವನ ಆಸಕ್ತಿಯ ವಿಷಯ ನಮಗೆ ಅಮುಖ್ಯವಾಗಿದೆ. ಅವನಿಗೆ ಪ್ರೀತಿಯಾ­ಗಿರುವ ವಿಷಯವನ್ನು ಕಂಡು­ಕೊಂಡು ಅದನ್ನೇ ಬೆಳೆಯಲು ಸಹಾಯ­ಮಾಡಿ­ದರೆ ಬಹುದೊಡ್ಡ ಸಾಧನೆ ಮಾಡಿಯೇ ತೀರುತ್ತಾನೆಂಬುದು ನನ್ನ ಧೃಡ ನಂಬಿಕೆ. ಹುಡುಗನನ್ನು ಶಾಲೆಗೆ ಸೇರಿಸಿ ತಾಯಿ­ಯನ್ನು ಮನೆಗೆ ಕಳುಹಿಸಿದೆ.

ಒಂದು ವಾರದ ನಂತರ ಕೆಲವು ಶಿಕ್ಷಕರು ಬಂದು ಈ ಹೊಸ ಹುಡುಗ ದಿವ್ಯೇಂದ್ರನ ಬಗ್ಗೆ ದೂರಿದರು. ಆತ ನಿಜವಾಗಿಯೂ ದಡ್ಡ, ಹೇಳಿದ್ದು ಅರ್ಥವೇ ಆಗುವುದಿಲ್ಲ ಎಂದೆಲ್ಲ ಹೇಳಿ­ದರು. ಅವರನ್ನು ಸಮಾ­ಧಾನ ಮಾಡಿ ಕಳುಹಿಸಿ ದಿವ್ಯೇಂದ್ರನ ಜೊತೆಗೆ ಒಂದು ವಾರ ಸತತ ದಿನಕ್ಕೆ ಎರಡು ಗಂಟೆಗಳಂತೆ ಕಳೆದೆ.

ನೀನು ದಡ್ಡನಲ್ಲ ಎಂದು ಹೇಳುತ್ತ ಅವನಲ್ಲಿದ್ದ ಒಳ್ಳೆಯ ಗುಣಗಳನ್ನು ಒಂದೊಂದಾಗಿ ಹೇಳುತ್ತ ಬಂದೆ. ನಾಲ್ಕೈದು ದಿನಗಳ ನಂತರ ಹುಡುಗ ತನ್ನ ಮೊದಲಿನ ಗೋಳಿನ ಮುಖವನ್ನು ಕಳೆದುಕೊಂಡು ಗೆಲುವಾಗಿ ಕಂಡ. ಶಾಲೆಯ ಪ್ರಾಂಶು­ಪಾಲರೇ ತನ್ನನ್ನು ಹೊಗಳಿದ್ದು ಸ್ವಲ್ಪ ಆತ್ಮವಿಶ್ವಾಸ ತಂದಿರಬೇಕು. ನಂತರ ಆರನೇ ಹಾಗೂ ಐದನೇ ತರಗತಿಯ ಗಣಿತ ಶಿಕ್ಷಕರನ್ನು ಕರೆದು ಇವನಿಗೆ ತರ­ಗತಿಯ ವಿಷಯ­ದಲ್ಲಿದ್ದ ಅಡಚಣೆ­ಗಳನ್ನು ನಿವಾರಿಸಲು ಹೇಳಿದೆ. ಒಂದು ತಿಂಗ­ಳಲ್ಲಿ ಆತ ಐದನೇ ಹಾಗೂ ಆರನೇ ತರಗತಿಯ ಎಲ್ಲ ಸಮಸ್ಯೆ­ಗಳನ್ನು ಸಲೀಸಾಗಿ ಬಿಡಿಸಿದ. ಆಮೇಲೆ ಏಳನೇ ತರಗತಿಯ ಪಠ್ಯವನ್ನು ಸ್ವಲ್ಪ ನಿಧಾನವಾಗಿ ಮಾಡಲು ಶಿಕ್ಷಕರೊಬ್ಬರಿಗೆ ಕೇಳಿಕೊಂಡೆ.

ಡಿಸೆಂಬರ್ ಬರುವ ಹೊತ್ತಿಗೆ ಮೊದಲು ದೂರಿದ್ದ ಶಿಕ್ಷಕರೇ ಬಂದು ಅವನ ಬಗ್ಗೆ ಹೊಗಳಿದರು. ದಿವ್ಯೇಂದ್ರ ವಾರ್ಷಿಕ ಪರೀಕ್ಷೆಯಲ್ಲಿ ಎಪ್ಪತ್ತೇಳು ಪ್ರತಿಶತ ಮಾರ್ಕು ತೆಗೆದಿದ್ದ. ಅವನ ತಾಯಿ ಆಶ್ಚರ್ಯಾಘಾತದಿಂದ ಗಳಗಳನೇ ಅತ್ತುಬಿಟ್ಟರು. ದಿವ್ಯೇಂದ್ರ ಹತ್ತನೇ ತರಗತಿಯನ್ನು ‘ಎ’ ಗ್ರೇಡ್‌­ನೊಂದಿಗೆ ಪಾಸಾಗಿ, ಈಗ ಆತ ಚಾರ್ಟರ್ಡ್‌ ಆಕೌಂಟೆಂಟ್ ಆಗಿ ಪರದೇಶದಲ್ಲಿ ಬಹಳ ಹೆಸರು ಮಾಡಿದ್ದಾನೆ.
ನಮ್ಮ ವ್ಯವಸ್ಥೆಯಲ್ಲಿ ಅದೆಷ್ಟು ದಿವ್ಯೇಂದ್ರರುಗಳು ದಡ್ಡರೆನ್ನಿಸಿಕೊಂಡು ಮರೆ­ಯಾಗಿದ್ದಾರೋ? ಯಾಕೆ ಹುಡು­ಗರು ನಪಾಸಾಗುತ್ತಾರೆ?

ಶಾಲೆಯ ಪರೀಕ್ಷೆ­ಗಳಲ್ಲಿ ಪಾಸಾಗದ ಅನೇಕರು ಜೀವನದಲ್ಲಿ ಬಹುದೊಡ್ಡ ಸಾಧನೆ ಮಾಡಿಲ್ಲವೇ? ಹಾಗಾದರೆ ನಮ್ಮ ಪರೀಕ್ಷೆಗಳ, ಮೌಲ್ಯಮಾಪನದಲ್ಲೇ ದೋಷವಿದೆಯೆ? ಈ ಮೌಲ್ಯಮಾಪನ ಕೇವಲ ನೆನಪಿನಲ್ಲಿ ತುರುಕಿಕೊಂಡು ವಾಂತಿ­ಮಾಡಬಲ್ಲ ಪ್ರಮಾಣ­ವನ್ನು ಮಾತ್ರ ಪರೀಕ್ಷಿಸುತ್ತದೆಯೇ ವಿನಾ ಜೀವನಕ್ಕೆ ಅವಶ್ಯವಾದ ಜ್ಞಾನದ ಮೌಲ್ಯಮಾಪನ ಮಾಡುವುದಿಲ್ಲ. ಇನ್ನೊಂದು ವಿಷಯವೆಂದರೆ, ನನ್ನ ಪ್ರಕಾರ ವಿದ್ಯಾರ್ಥಿಗಳು ನಪಾಸಾ­ಗುವುದಿಲ್ಲ, ಶಿಕ್ಷಕರು ನಪಾಸಾಗುತ್ತಾರೆ.

ನಾವು ಕಲಿಸಿದ್ದು ಮಕ್ಕಳಿಗೆ ತಿಳಿಯದೇ ಹೋದರೆ, ಅವರಿಗೆ ತಿಳಿಯುವಂತೆ ನಾವು ಕಲಿಸ­ಬೇಕಲ್ಲವೇ? ‘ಇಡೀ ವರ್ಷ ಕಲಿಸಿದರೂ ವಿದ್ಯಾರ್ಥಿಗೆ ತಿಳಿಯಲಿಲ್ಲ’ ಎಂದು ಯಾರಾ­ದರೂ ಶಿಕ್ಷಕರು ದೂರಿದರೆ, ‘ಇಡೀ ವರ್ಷ ಪೂರ್ತಿ ತಿಳಿಯ­ಲಾರದಂತೆ ಅದು ಹೇಗೆ ಕಲಿಸಿ­ದಿರಿ?’ ಎಂದು ವಿದ್ಯಾರ್ಥಿ ಕೇಳಬಹು­ದಲ್ಲವೇ?  ಶಿಕ್ಷಕರಿಗೆ ಒಂದೇ ಆಯ್ಕೆ. ನಾವು ಪಾಠ ಮಾಡುವುದೇ ಮಕ್ಕಳಿಗೆ ತಿಳಿಯಲೆಂದು.

ಅದು ಸಾಧ್ಯವಾಗದಿದ್ದರೆ ನಮ್ಮ ಕೆಲಸದಲ್ಲಿ ನಾವು ಅನುತ್ತೀರ್ಣ­ರಾದಂತೆ. ಒಂದೇ ವಿಧಾನದಿಂದ ಎಲ್ಲ­ರಿಗೂ ಅರ್ಥವಾದೀತು ಎಂದು ತಿಳಿಯುವಂತಿಲ್ಲ. ನಾಲ್ಕಾರು ವಿಧಾನ­ಗಳನ್ನು ಬಳಸಿದರೆ ಯಾವುದೋ ಒಂದು ವಿಧಾನ ಮಗುವನ್ನು ತಲುಪುತ್ತದೆ, ಕಲಿಕೆ ಸಾಧ್ಯವಾಗುತ್ತದೆ, ಆಗ ನಾವು ಯಶಸ್ವಿಯಾಗುತ್ತೇವೆ. ಅದಕ್ಕೇ ಶಿಕ್ಷಕ ಕೇಂದ್ರಿತವಾದ ಶಿಕ್ಷಣದ ಬದಲಾಗಿ ವಿದ್ಯಾರ್ಥಿ ಕೇಂದ್ರಿತವಾದ ಶಿಕ್ಷಣವನ್ನು ಪ್ರಪಂಚ ಬೇಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT