ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯ: ಬಿಡುಗಡೆಯ ಬಾಗಿಲು

Last Updated 16 ಜೂನ್ 2018, 9:11 IST
ಅಕ್ಷರ ಗಾತ್ರ

ಟಿಪ್ಪು ಸುಲ್ತಾನನ ಮಂತ್ರಿ ಒಮ್ಮೆ ಹೇಳುತ್ತಾನೆ, ‘‘ಕಾಣುವುದರ ಬಗ್ಗೆ ನನಗೆ ಭಯವಿಲ್ಲ, ಕಾಣದೇ ಇರುವುದರ ಬಗ್ಗೆ ನನಗೆ ಅಪಾರ ಭಯ’’ ಎಂದು. ಈ ಉದ್ಗಾರ ಅವನಿಂದ ಬಂದದ್ದು ಬ್ರಿಟೀಷರ ಒಟ್ಟೂ ಕಾರ್ಯತಂತ್ರವನ್ನು ಕುರಿತಂತೆ. ಮುಖ್ಯವಾಗಿ ಅವರ ಸಾಂಸ್ಕೃತಿಕ ರಾಜಕಾರಣವನ್ನು ಹೇಗೆ ಅರ್ಥ ಮಾಡಿಕೊಳ್ಳುವುದು, ಅದಕ್ಕೆ ಪ್ರತಿಕ್ರಿಯಿಸುವುದು ಹೇಗೆ, ಪ್ರತಿರೋಧದ ಮಾರ್ಗಗಳನ್ನು ರೂಪಿಸುವುದು ಹೇಗೆ ಎನ್ನುವ ಪ್ರಶ್ನೆಗಳನ್ನು ಈ ಹೇಳಿಕೆ ಧ್ವನಿಸುತ್ತಿರುವಂತೆ ಕಾಣಿಸುತ್ತದೆ.

ಕಾಣಬಲ್ಲ, ನಮ್ಮ ಅನುಭವಕ್ಕೂ ಬುದ್ಧಿಗೂ ದಕ್ಕಬಲ್ಲ ಸಂಗತಿಗಳನ್ನು ಮುಖಾಮುಖಿಯಾಗುವುದಕ್ಕೂ ಕಾಣದೆಯೇ ನಮ್ಮ ಮನೋವಿನ್ಯಾಸವನ್ನು ನಿಧಾನವಾಗಿ ಬದಲಿಸಬಲ್ಲ ಸಂಗತಿಗಳಿಗೂ ಇರುವ ವ್ಯತ್ಯಾಸವನ್ನು ಹೇಗೆ ಗುರುತಿಸುವುದು? ಜ್ವಾಲೆಯೇ ಇಲ್ಲದಂತೆ ಸುಡುವುದರ ಬಗ್ಗೆ ಆ ಮಂತ್ರಿ ಯೋಚಿಸುತ್ತಿದ್ದಾನೆ.

ಹೆಣ್ಣಿನ ಪಾಡು ಇನ್ನೂ ಅತ್ತತ್ತ. ಬೇಲಿಯೇ ಎದ್ದು ಮೇಯುತ್ತಿರುವಾಗಲೂ ಅವಳಿಗೆ ಕಲಿಸಿರುವ, ಕಲಿಸುತ್ತಲೇ ಇರುವ ಪಾಠ-ನೋಟ ಯಾವುದೆಂದರೆ, ‘ಮೇಯುವುದು ಬೇಲಿಯ ಹಕ್ಕು ಎಂದು’!. (ಅವಳ ಸುತ್ತ ಹಾಕಿರುವುದು ಬೇಲಿಯೇ ಅಲ್ಲ, ಅದು ಶ್ರೀರಕ್ಷೆ ಎನ್ನುವ ಪಾಠವನ್ನೂ ನೋಟವನ್ನೂ ಬೇಲಿ ಅವಳಿಗೆ ದಣಿವರಿಯದ ಶ್ರದ್ಧೆಯಲ್ಲಿ, ಸಮಾಜ, ಸಂಸಾರದ ಹಿತ, ಹೆಣ್ಣಿನ ಧರ್ಮ, ಕರ್ತವ್ಯ ಎನ್ನುವ ಮೌಲ್ಯದ ಹೆಸರಿನಲ್ಲಿಯೂ, ಏನೇ ಆದರೂ ಭೂಮಿ ಆಕಾಶಗಳು ಒಂದಾದರೂ ಹೆಣ್ಣು ಹೆಣ್ಣೇ ಎನ್ನುವ ನಿಧಾನ ವಿಷಪ್ರಾಶನದಲ್ಲೂ ಊಡಿಸುತ್ತಲೇ ಇರುತ್ತದೆ).

ಕಾಣುವ ಸಂಗತಿಗಳ ಬಗೆಗೇ ಹೆಣ್ಣಿನ ಹೋರಾಟ ಕಡು ಕಷ್ಟದ್ದಾಗಿರುವಾಗ ಕಾಣದೇ ಇರುವುದರ ಬಗ್ಗೆ ಅವಳ ಹೋರಾಟ ಇನ್ನೂ ದುರ್ಗಮ. ಪಿತೃಸಂಸ್ಕೃತಿಯ ಸಾಂಸ್ಕೃತಿಕ ರಾಜಕಾರಣವಂತೂ ಶತಮಾನಗಳಿಂದ ಪಳಗಿ ಪಳಗಿ ತನ್ನ ಹತಾರಗಳನ್ನು ಹರಿತಗೊಳಿಸಿಕೊಂಡು ಬಿಟ್ಟಿದೆ. ಹೆಣ್ಣಿನ ಯಾವ ಪ್ರಯತ್ನವನ್ನೂ ದುರ್ಬಲಗೊಳಿಸುವ ಅದರ ಶಕ್ತಿ ಉಹಾತೀತ.
ಉದಾಹರಣೆಗೆ ಹೆಣ್ಣಿನ ಕಾವ್ಯ ಮತ್ತು ಭಾಷೆಯನ್ನು ಕುರಿತ ಹೆಣ್ಣಿನ ದೃಷ್ಟಿಕೋನಗಳನ್ನೇ ಅದು ಹೇಗೆ, ಅದೆಂಥ ಹುನ್ನಾರದಲ್ಲಿ ನಿಭಾಯಿಸುತ್ತದೆ ಎನ್ನುವುದನ್ನು ನೋಡೋಣ.

ಹೆಣ್ಣಿನ ಕಾವ್ಯವನ್ನು ವಿಭಿನ್ನವೆಂದು, ವಿಶಿಷ್ಟವೆಂದು ನೋಡಬೇಕು ಎಂದು ಹೇಳುತ್ತಿರುವಾಗ, ಅವರು ಥಟ್ ಎಂದು ಒಂದು ಪ್ರಶ್ನೆ ಎಸೆಯುತ್ತಾರೆ. ‘ಕಾವ್ಯ ಒಂದೇ ಅಲ್ಲವೆ? ಅದು ಹೆಣ್ಣಿನದು, ಗಂಡಿನದು ಎಂದು ನೋಡುವುದರ ಮೂಲಕ ನಾವು ಅನಗತ್ಯವಾದ ವರ್ಗೀಕರಣಕ್ಕೆ ಅವಕಾಶ ಮಾಡಿಕೊಡುತ್ತಿರುತ್ತೇವೆ ಅಲ್ಲವೆ’ ಎಂದು. ಸ್ತ್ರೀವಾದಿಗಳು ಹೇಳುತ್ತಿರುವುದು, ಉದ್ದೇಶಿಸಿರುವುದು ಅದನ್ನೇ. ಆದರೆ ಅದಕ್ಕಿಂತ ಮುಂಚೆ ಹಾಯಬೇಕಾದ ದಾರಿಯೋ ತೊಡಕೋ ಪೂರ್ವಗ್ರಹವೋ ಇದೆಯಲ್ಲ... ಆ ತೊಡಕುಗಳು ಮುಖ್ಯವಾಗಿ ಎರಡು. ಮೊದಲನೆಯದು, ಹೆಣ್ಣಿನ ಅನುಭವ ಲೋಕವನ್ನೇ ಎರಡನೆಯ ದರ್ಜೆಯದು ಎಂದು, ಸೀಮಿತ ಮತ್ತು ಕ್ಷುದ್ರ ಎಂದು ಹೇಳುವ ಮೂಲಕವೇ ಅವಳ ಕಾವ್ಯಕ್ಕೂ ಅವಳ ಅನುಭವ ಲೋಕಕ್ಕೂ ಆಗುತ್ತಿರುವ ಅನ್ಯಾಯ.

ಇತ್ತೀಚೆಗೆ ತುಸು ಕಡಿಮೆಯಾಗಿದೆಯಾದರೂ ಒಂದು ಕಾಲದಲ್ಲಿ ಹೆಣ್ಣಿನ ಬರವಣಿಗೆಯನ್ನೇ ‘ಅಡುಗೆ ಮನೆ ಸಾಹಿತ್ಯ’ ಎಂದು ನೋಡುತ್ತಿದ್ದ ದೃಷ್ಟಿಕೋನ ಸಂಪೂರ್ಣವಾಗಿ ಹೋಗಿದೆಯೆಂದು ಹೇಳಲು ಸಾಧ್ಯವಿಲ್ಲ. ಜಾಗತೀಕರಣದ ಬಗ್ಗೆ ಚರ್ಚಿಸುವ ಬರವಣಿಗೆ ಮೊದಲ ದರ್ಜೆಯದು, ಅಧಿಕೃತವಾದದ್ದು, ಸಾಹಿತ್ಯದ ವಸ್ತುವಾಗಬಲ್ಲದು, ಘನವಾದದ್ದು. ಹೆಣ್ಣು ಹಿತಕವರೆಯನ್ನು ಒಂದು ರೂಪಕವಾಗಿಟ್ಟುಕೊಂಡು, ಅದು ಹೆಣ್ಣಿನ ಗುಣ ವಿಶೇಷಣಗಳನ್ನು ಅದ್ಭುತವಾಗಿ ಹೇಳಿದರೆ, ಅದು ಯಃಕಶ್ಚಿತ್ ಯಾಕಾಗಬೇಕು? ಗಂಡಿನ ಹೊರಲೋಕದಷ್ಟೇ ಹೆಣ್ಣಿನ ಒಳಲೋಕವೂ ಅಧಿಕೃತ, ಮುಖ್ಯ, ಸಮಾನ ಮತ್ತು ಅನನ್ಯ ಅಲ್ಲವೆ?

ಎರಡನೆಯದು, ಹೆಣ್ಣಿನ ಕಾವ್ಯವನ್ನು ಅರ್ಥೈಸಿಕೊಳ್ಳುವಲ್ಲಿ ಇರುವ ತೊಡಕು. ಗಂಡು ಮತ್ತು ಹೆಣ್ಣು ಇಬ್ಬರ ವ್ಯಕ್ತಿತ್ವ, ಅನುಭವಗಳನ್ನು ಒಳಗೊಳ್ಳುವ ಪರಿ ಬೇರೆಯಾದಂತೆಯೇ ಅದನ್ನು ಅಭಿವ್ಯಕ್ತಿಸುವಲ್ಲಿಯೂ ಅನನ್ಯತೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಹೆಣ್ಣಿನ ಕಾವ್ಯವನ್ನು ‘ಗಂಡು ನೋಟ’ದಿಂದಲೇ ಗ್ರಹಿಸಲಾಗುತ್ತದೆ. ಎಂದರೆ, ಹೆಣ್ಣನ್ನು ಗಂಡು ನೋಡಲು ಬಯಸುವ ನೆಲೆಯಿಂದಲೇ ಅವಳ ಕಾವ್ಯವನ್ನೂ ಅವಳ ಭಾಷೆಯನ್ನೂ ಚರ್ಚಿಸುವುದು.

ಇಂಥ ದೃಷ್ಟಿಕೋನ ಬದಲಾಗದ ಹೊರತು ಅವಳ ಕಾವ್ಯದ ‘ಸರಿಯಾದ’ ಓದೂ ಸಾಧ್ಯವಾಗುವುದಿಲ್ಲ. ಕಾವ್ಯವೂ ಸೇರಿದಂತೆ ಎಲ್ಲ ಕಲೆಗಳನ್ನೂ ‘ಮಾನವಾನುಭವಗಳು’ ಎನ್ನುವ ಸಾಧಾರಣೀಕೃತ ನೆಲೆಯಲ್ಲಿ ನೋಡಲಾಗುತ್ತದೆ. ಆದರೆ, ಮಾನವಾನುಭವ ಎನ್ನುವುದು ನೂರಕ್ಕೆ ತೊಂಬತ್ತರಷ್ಟು ಸಂದರ್ಭಗಳಲ್ಲಿ ‘ಪುರುಷಾನುಭವ’ ಮಾತ್ರವಾಗಿರುತ್ತದೆ. ಈ ಮಿತಿಯನ್ನು ದಾಟಿದವರು ಮಾತ್ರ ನಿಜವಾದ ಅರ್ಥದಲ್ಲಿ ಯುಗ ಪ್ರವರ್ತಕ ಲೇಖಕ/ಲೇಖಕಿಯರಾಗಿರುತ್ತಾರೆ.

ಎಂದರೆ, ಗಂಡು – ಹೆಣ್ಣು ಇಬ್ಬರ ಕಾವ್ಯವನ್ನೂ ‘ಕಾವ್ಯ’ ಎನ್ನುವ ನೆಲೆಗಟ್ಟಿನಲ್ಲಿ ಚರ್ಚಿಸುವುದಕ್ಕಿಂತ ಮುಂಚೆ ಇಬ್ಬರ ಅನುಭವಗಳೂ, ಅಭಿವ್ಯಕ್ತಿಗಳೂ ಅನನ್ಯ ಮತ್ತು ಸಮಾನ ಎನ್ನುವ ಸಮಾನಪಾತಳಿಯೊಂದು ನಿರ್ಮಿತವಾಗಬೇಕು. ಸ್ತ್ರೀವಾದಿ ಮೀಮಾಂಸೆಯ ಪ್ರಯತ್ನವಿರುವುದು ಈ ಸಮಾನ ಪಾತಳಿಯ ರಚನೆಯಲ್ಲಿ. ಹೀಗಾಗಿ ಹೆಣ್ಣಿನ ಕಾವ್ಯ ಮತ್ತು ಭಾಷೆಯನ್ನು ಕುರಿತ ಯಾವ ಚಿಂತನೆಯೂ ವರ್ಗೀಕರಣದ ಪ್ರಯತ್ನವಲ್ಲ, ಅಖಂಡ ಕಾವ್ಯ ಮೀಮಾಂಸೆಯೊಂದನ್ನು ಕಟ್ಟುವುದರ ಮೊದಲ ಘಟ್ಟ.

ಈ ಅಂಕಣದಲ್ಲಿ ಈ ಎರಡೂ ನೆಲೆಗಳನ್ನು ಗುರುತಿಸುವ ಪ್ರಯತ್ನ ಮತ್ತು ಹಂಬಲವಿದೆ. ಗಂಡು ನೋಟದ ಏಕಗವಾಕ್ಷಿ, ಮಾನವಾನುಭವದ ಸಾಧಾರಣೀಕರಣ– ಈ ಎರಡರ ಆಚೆಗೆ ಹೆಣ್ಣಿನ ನಿಜಗಳನ್ನು ಕಂಡವರನ್ನು ಉದ್ದಕ್ಕೂ ನೋಡಲಾಗಿದೆ. ಅವರಲ್ಲಿ ಲೇಖಕಿ ಲೇಖಕರಿಬ್ಬರೂ ಇದ್ದಾರೆ. ಕಾಣಲಾಗದವರ ಕೆಲವು ಪಾತ್ರಗಳನ್ನೂ ಚರ್ಚಿಸಿರುವುದು ಇದೇ ಕಾರಣಕ್ಕೆ. ಗಂಡು ನೋಟದ ಕಣ್ಣ ಪಟ್ಟಿಯಿಂದ ಬಿಡುಗಡೆ ಪಡೆಯುವುದರ ಕಷ್ಟವನ್ನು ಮಾತ್ರವಲ್ಲ, ಕಣ್ಣು ಪಟ್ಟಿಯ ಬಗೆಗಿನ ನಂಬಿಕೆಯನ್ನೂ ಜೊತೆಗೇ ಇಟ್ಟದ್ದು ಸ್ತ್ರೀವಾದಿ ಮೀಮಾಂಸೆಯ ಅಗತ್ಯ ಮತ್ತು ಪ್ರಸ್ತುತತೆಯನ್ನು ಮನದಟ್ಟು ಮಾಡಿಕೊಳ್ಳಲು.

****
ಲಲಿತಾ ಸಿದ್ಧಬಸವಯ್ಯ ಸಮಕಾಲೀನ ಕನ್ನಡದ ಬಹುಮುಖ್ಯ ಲೇಖಕಿಯರಲ್ಲೊಬ್ಬರು. ಕನ್ನಡ ಕಾವ್ಯದ ಮತ್ತು ಮಹಿಳಾಕಾವ್ಯದ ಹೊಸ ಆಯಾಮವೊಂದನ್ನು ಕಟ್ಟುತ್ತಿರುವವರು. ಹೆಣ್ಣಿನ ಕಾವ್ಯದ ವಸ್ತು ಮತ್ತು ಶೈಲಿಯನ್ನು ತಮ್ಮ ಹೊಸ ಭಾಷೆಯಲ್ಲಿ ಅಪೂರ್ವವಾಗಿ ನಿರೂಪಿಸುತ್ತಿರುವವರು ಲಲಿತಾ. ತಾನು ಬಳಸುತ್ತಿರುವ ಹೆಣ್ಣಿಗೇ ವಿಶಿಷ್ಟವಾದ ರೂಪಕಗಳನ್ನು ಕನ್ನಡ ಕಾವ್ಯ ಪರಂಪರೆಗೆ ಸೇರಿಸುತ್ತಾ ಅದರ  ಜೀವಂತಿಕೆ ಮತ್ತು ಸಮೃದ್ಧತೆಯನ್ನು ಹೆಚ್ಚಿಸುತ್ತಿರುವ ಲಲಿತಾ ನಿಸ್ಸಂದೇಹವಾಗಿ ಕನ್ನಡ ಕಾವ್ಯ ಪರಂಪರೆಯ ಮುಖ್ಯ ಧ್ವನಿ.

ಬಸವಣ್ಣನ ‘ಕೂಸುಳ್ಳ ಸೂಳೆ’ ವಚನಕ್ಕೆ ಉತ್ತರವೋ ಎಂಬಂತೆ ರಚಿಸಿರುವ ಈ ಕವಿತೆಯನ್ನು ನೋಡಬಹುದು. ಯಾವ ವಚನದಲ್ಲಿ ಬಸವಣ್ಣನಿಗೆ ಸೂಳೆ ‘ಧನದಾಸೆಗೆ’ ಮರುಳಾಗಿರುವಂತೆ ಕಾಣಿಸುತ್ತಾಳೆಯೋ ಕೂಸನ್ನೂ ಧನದಾಸೆಯನ್ನೂ ಬದಗನನ್ನೂ ಏಕಕಾಲದಲ್ಲಿ ನಿಭಾಯಿಸಲು ಬಯಸುವ ದುರಾಸೆಯ ಹೆಣ್ಣಾಗಿ ಕಾಣುತ್ತಾಳೋ ಅದೇ ಹೆಣ್ಣು ಅವಳೇ ಮಾತನಾಡಿದರೆ ಹೇಗಿರಬಹುದು?
ಬಸವಣ್ಣನ ಗ್ರಹಿಕೆಯ ಹೆಣ್ಣಿಗಿಂತ ಸಂಪೂರ್ಣ ವಿರುದ್ಧ ದಿಕ್ಕಿನಿಂದ ಇವಳ ಚಿತ್ರ ಕಾಣಿಸುತ್ತದೆ.

ಇತ್ತತ್ತ ಜರುಗಬ್ಯಾಡ, ಮಗು ಮಲಗೈತೆ
ಅತ್ತೂ ಅತ್ತೂ ಈಗಿನ್ನ ಹಂಗೆ ಕಣ್ಣು ಮುಚ್ಚೈತೆ
ತೋ, ಬಿಡು ಎದೆ, ನಂದಿನ್ನಾ ಕುಡಿಯೋ ಮಗು
ಕಿರುಚಬ್ಯಾಡ, ಬೇಕಾದ್ರಿರು ಬ್ಯಾಡದಿದ್ರೆ ಎದ್ದೋಗು
ಇದೇ ನಿನ್ನ ವೃತ್ತಿಯಾದ ಮೇಲೆ, ನನಗೆ ಅವಕಾಶ ಕೊಡದಿದ್ದರೆ ನೀನು ಉಪವಾಸ ಬೀಳುತ್ತಿ ಎಂದು ಅವನು ಹೆದರಿಸಿದರೆ ‘ಹೊಸದಲ್ಲ ಹೋಗು ಕಂಡಿದೀನಿ ಹುಟ್ಟಿದಾಗಿಂದ’ ಎನ್ನುವ ಉತ್ತರ ಈಕೆಯದು. ಇಪ್ಪತ್ತು ರೂಪಾಯಿ ಕೊಡುತ್ತೇನೆ ಎಂದರೆ ಇವಳು ಹೇಳುತ್ತಾಳೆ,
‘ನಿನ್ನಿಪ್ಪತ್ತು ರೂಪಾಯ್ಗೆ ಹಾಲಿನ ಪುಡಿ ಅರ್ಧ ಡಬ್ಬ ಬರಲ್ಲ ನನ್ನ ಮಗೀಗೆ’.

ಮತ್ತದೇ ಅಹಂಕಾರದಲ್ಲಿ ಅವನು ‘ಒಂದಿನದ ಕೂಲಿ ದುಡ್ಡು ಇದು ನಿನಗೆ’ ಎಂದರೆ, ‘ತೊತ್ತರಿಕೆ ಹೋಗಲಿ ಬಿಡು ಇವತ್ತು ಕಾಸೇನು ಬ್ಯಾಡ’ ಎಂದವಳು–

ಹಾಗಂತ ಅಗಲಗಲ ಬರಬ್ಯಾಡ
ವೊಟ್ಟೆ ಪಾಡು ನಂದೂ ಮಗಿಂದೂ ನಡೀಬೇಕಲ್ಲವಾ
ಯಾಕ್ ಸುಮ್ನಾದೆ, ಪುಗಸಟ್ಟೆಗೆ ಮನಸ್ಸೊಪ್ಪುತ್ತಿಲ್ಲವಾ,
ನಿಯತ್ತುಗಾರ, ಓಗ್ಲಿ ಮುಂದಿನ್ಸಾರಿ ಮಗೀಗೊಂದು ಬೊಂಬೆ ತಗಂಬಾ.
ಈ ಕವಿತೆ ಹೆಣ್ಣಿನ ಭಾಷೆ, ಕಾವ್ಯ, ಅವಳ ವ್ಯಕ್ತಿತ್ವದ ಅನನ್ಯತೆ ಎಲ್ಲದಕ್ಕೂ ಪ್ರತಿನಿಧಿಯಂತಿದೆ.

ಯಾವ ಇಕ್ಕಟ್ಟಿನಲ್ಲಿ ಆ ಹೆಣ್ಣು ತನ್ನ ದೇಹವನ್ನು ಮಾರಿಕೊಳ್ಳುತ್ತಿದ್ದಾಳೆ ಎನ್ನುವುದನ್ನು ತುಸು ವಾಚ್ಯವೆನಿಸುವ, ಸರಳ ಧಾಟಿಯಲ್ಲೇ ಈ ಕವಿತೆ ಮಂಡಿಸುತ್ತಿದೆ. ಆದರೆ, ಆ ಸರಳ ನಿರೂಪಣೆಯ ಹೆಣ್ಣಿನ ಸ್ಥಿತಿಯನ್ನು ಪರಿಣಾಮಕಾರಿಯಾಗಿಯೂ ಓದುಗರಿಗೆ ತಲುಪಿಸುತ್ತಿದೆ. ತಾಯಿಯೇ ಒಂದು ಆದಿಮ ರೂಪಕ ಎನ್ನುವುದಾದರೆ ಈ ಕವಿತೆಯ ತಾಯಿ ಅದರ ಸಾಕಾರ ರೂಪದಂತಿದ್ದಾಳೆ. ಹೆಣ್ಣಿನ ಅನನ್ಯತೆಯ ಅದೆಷ್ಟು ಮುಖಗಳು ಇಲ್ಲಿವೆ.

ತನ್ನ ಮಗುವಿನ ಬಗ್ಗೆ ಅವಳಿಗಿರುವ ನಿತಾಂತವಾದ ವಾತ್ಸಲ್ಯ ಹಾಗೂ ಕಾಳಜಿ ‘ಇತ್ತಿತ್ತ ಬರಬೇಡ’ ಎನ್ನುವ ಮಾತುಗಳಲ್ಲಿ ವ್ಯಕ್ತವಾದರೆ, ಅವಳ ಆತ್ಮಘನತೆ, ಉಪವಾಸ ಇರುವುದು ತನಗೆ ಹುಟ್ಟಿನಿಂದ ಅಭ್ಯಾಸವಾಗಿದೆ ಎನ್ನುವ ಮಾತುಗಳಲ್ಲಿ ಕಾಣಿಸುತ್ತದೆ. ಹೋಗಲಿ ಇವತ್ತು ಕಾಸೇನೂ ಬೇಡ ಎನ್ನುವುದರಲ್ಲಿ ತಾಯ್ತನಕ್ಕೆ ಅತ್ಯಂತ ಸಹಜವಾದ ಜೀವ ಕಾರುಣ್ಯವೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಅವಳಲ್ಲಿ ತನ್ನ ಈ ಸ್ಥಿತಿಯ ಬಗ್ಗೆ ಆತ್ಮ ಮರುಕವಾಗಲೀ, ತನ್ನನ್ನು ಈ ಸ್ಥಿತಿಗೆ ತಂದವರ ಬಗ್ಗೆಯೋ ವ್ಯವಸ್ಥೆಯ ಬಗ್ಗೆಯೋ ಕಹಿಯೋ ದ್ವೇಷವೋ ಯಾವುದೂ ಇಲ್ಲ.

ಯಾವುದೇ ಪರಿಸ್ಥಿತಿಯನ್ನು ಎದುರಿಸಬಲ್ಲ ಹೆಣ್ಣಿನ ಮನಸ್ಥಿತಿ, ಶಕ್ತಿಯನ್ನು ಈ ಕವಿತೆ ಹೇಳುತ್ತಿದೆ. ಈ ಕವಿತೆಯ ಇರಿಯುವ ಕೂರಂಬಿನಂತ ಭಾಷೆಯೇ ಈ ಕವಿತೆಯನ್ನು ವಾಚ್ಯಾರ್ಥ ಮಾತ್ರದ ನೆಲೆಯಿಂದ ಮೇಲೆತ್ತುವಲ್ಲಿ ಯಶಸ್ವಿಯಾಗಿದೆ. ದಿನ ನಿತ್ಯದ ಎಗ್ಗಿಲ್ಲದ ಭಾಷೆಯಲ್ಲಿ ಈ ಹೆಣ್ಣಿನ ಚಿತ್ರವೊಂದು ಓದುಗರ ಮನಸ್ಸಿನಲ್ಲಿ ರೇಖಾಚಿತ್ರದಂತೆ ಕಾಣಿಸಿಕೊಳ್ಳತೊಡಗುತ್ತದೆ.

ಸಮುದಾಯದ ಸಂರಚನೆಯ ಬಗ್ಗೆ, ಅದರಲ್ಲಾಗಬೇಕಾದ ಪಲ್ಲಟಗಳ ಬಗ್ಗೆ ದೇಹಾತ್ಮಗಳಿಂದ ಹೋರಾಟ ನಡೆಸಿದ ಬಸವಣ್ಣನಲ್ಲಿಯೂ ಕೆಲವೊಮ್ಮೆ ಈ ಬಗೆಯ ಪುರುಷ ವಿಕಾರ ಕಾಣಿಸಿಕೊಳ್ಳುತ್ತದೆ ಎನ್ನುವುದು ಗಂಡು ಮತ್ತು ಹೆಣ್ಣು ಇಬ್ಬರೂ ದಾಟಿಕೊಳ್ಳಬೇಕಾದ ಕಂದಕ ಎಷ್ಟು ಆಳವಾದದ್ದು ಎನ್ನುವುದನ್ನು ಹೇಳುತ್ತದೆ. ಕೂಸುಳ್ಳ ಸೂಳೆಯದು ಧನದಾಸೆಯಲ್ಲ, ಹೆಣ್ಣಿನ ಬದುಕುವ ದುರ್ದಮ್ಯ ಒತ್ತಡದಲ್ಲಿ ಎದುರಾಗಿರುವ ದುರಂತ ಸನ್ನಿವೇಶ ಎನ್ನುವುದನ್ನು ಸಾದರ ಪಡಿಸುವ ಈ ಕವಿತೆ, ಬಸವಣ್ಣನಿಗೆ ಕೊಟ್ಟ ಉತ್ತರವಲ್ಲ, ತನ್ನನ್ನು ತಾನೇ ಅರಿಯುವ ಪ್ರಯತ್ನ.

ಮುದ್ದು ಪಳನಿ 17ನೇ ಶತಮಾನದ ಒಬ್ಬ ಅದ್ಭುತ ಕವಯಿತ್ರಿ. ತಂಜಾವೂರಿನ ರಾಜಾ ಪ್ರತಾಪಸಿಂಹನ ಆಸ್ಥಾನದಲ್ಲಿ ದೇವದಾಸಿಯಾಗಿದ್ದವಳು. ಅವಳು ಬರೆದ ಕವಿತೆಗಳನ್ನು ಹತ್ತೊಂಬತ್ತನೇ ಶತಮಾನದಲ್ಲಿ ಸಂಗ್ರಹಿಸಿ ಪ್ರಕಟಿಸಲಾಯಿತು. ವಿಪರ್ಯಾಸವೆಂಬಂತೆ, ಆಧುನಿಕತೆಯ ಹರಿಕಾರರೆನ್ನುವಂತೆ ಸ್ವಯಂ ಬಿರುದು ಕೊಟ್ಟುಕೊಂಡ ಆಗಿನ ಬ್ರಿಟಿಷ ಸರ್ಕಾರ ಈ ಸಂಕಲನವನ್ನು ಮುಟ್ಟುಗೋಲು ಹಾಕಿಕೊಂಡಿತು.

ಪ್ರತಿಗಳನ್ನು ಸಾರ್ವಜನಿಕವಾಗಿ ಸುಡಲಾಯಿತು. ಅವಳ ಕಾವ್ಯ ಅಶ್ಲೀಲವಾಗಿದೆ ಎನ್ನುವುದು ಸರ್ಕಾರ ಕೊಟ್ಟ ಕಾರಣ (ಕಲ್ಕತ್ತಾ ವಿಶ್ವವಿದ್ಯಾಲಯದಲ್ಲೂ ಒಮ್ಮೆ ಕಾಳಿದಾಸನ ‘ಮೇಘದೂತ’ ನಾಟಕವನ್ನು ಅಶ್ಲೀಲ ಎನ್ನುವ ಕಾರಣಕ್ಕೆ ಬ್ರಿಟೀಷರೇ ಹೆಚ್ಚಾಗಿದ್ದ ಪಠ್ಯಪುಸ್ತಕ ಮಂಡಳಿ ತಿರಸ್ಕರಿಸಿ ಷೇಕ್ಸ್‌ಪಿಯರನ ನಾಟಕವನ್ನು ಆರಿಸಿತ್ತು!). ಈ ಇಡೀ ಪ್ರಸಂಗ ಬ್ರಿಟೀಷ್ ವ್ಯವಸ್ಥೆಯ ಒಡೆದು ಆಳುವ ಹುನ್ನಾರವನ್ನು ಹೇಳುತ್ತಲೇ ಹೆಣ್ಣಿನ ಅಭಿವ್ಯಕ್ತಿಯನ್ನೇ ನಿಯಂತ್ರಿಸುವ ಪಿತೃಸಂಸ್ಕೃತಿಯ ವಿಶ್ವಾತ್ಮಕ ಅಧಿಕಾರ ಕೇಂದ್ರವನ್ನೂ ಸಂಕೇತಿಸುತ್ತದೆ.

ಗಂಡು ಹೆಣ್ಣಿನ ಸಂಬಂಧದ ತೀವ್ರತೆಯನ್ನು ಅಷ್ಟೇ ತೀವ್ರವಾದ ಕಾವ್ಯದಲ್ಲಿ ಹಿಡಿದಿಟ್ಟವಳು ಮುದ್ದು ಪಳನಿ. ಕಾವ್ಯವೆನ್ನುವುದು ಹೆಣ್ಣಿನ ಮಟ್ಟಿಗೆ ಅಡಗುತಾಣ ಎಂದೆನಷ್ಟೆ. ಅದಮ್ಯ ದೇಹ ವಾಂಛೆಗಳನ್ನು, ಜೀವಕಾಮದ ಪುಳಕಗಳನ್ನು ನಿರ್ಭಿಡೆಯಿಂದ ಪ್ರಕಟಪಡಿಸಿದವಳು ಈಕೆ. ಇವಳ ಕೆಲವು ಕವಿತೆಗಳನ್ನು ನೋಡೋಣ. ‘ರಾಧಿಕಾ ಸಾಂತ್ವನಂ’ ಅವಳ ಸಂಕಲನದ ಹೆಸರು. ಇದೊಂದು ವಿಶಿಷ್ಟ ಪ್ರಯೋಗಾತ್ಮಕ ಕೃತಿ.

ರಾಧೆಯ ಬಗ್ಗೆ ಕೃಷ್ಣ ಹೇಳುವ ಧಾಟಿಯಲ್ಲಿ ಇಲ್ಲಿನ ಕವಿತೆಗಳಿವೆ. ಹೆಣ್ಣು ತನ್ನ ನಲ್ಲನ ಜೊತೆ ಅದೆಷ್ಟು ಆಪ್ತವಾಗಿ, ಮುಕ್ತವಾಗಿ ಇರಬಲ್ಲಳು ಎನ್ನುವುದನ್ನು ಹೇಳುವ ಈ ಕವಿತೆಗಳು, ಅದನ್ನು ಕೃಷ್ಣನೇ ಹೇಳುವ ತಂತ್ರದಲ್ಲಿ ಕಾಣಿಸಿಕೊಳ್ಳುವುದೂ ಮುಖ್ಯ. ಹೆಣ್ಣಿನ ಈ ಭಾವಾಭಿವ್ಯಕ್ತಿಯನ್ನು ಗಂಡು ಒಪ್ಪಲಿ ಎನ್ನುವ ಆಶಯವೂ ಈ ಕವಿತೆಗಳ ಹಿಂದಿದೆ. ಅಥವಾ ಗಂಡಿನ ಬಾಯಲ್ಲಿ ಬಂದವು ಎನ್ನುವ ತಂತ್ರವನ್ನು ಮುದ್ದು ಪಳನಿ ರಕ್ಷಣಾತ್ಮಕವಾಗಿಯೂ ಬಳಸಿರಬಹುದು!

ಚುಂಬಿಸಬೇಡ ನನ್ನನ್ನು ಎಂದರೆ
ಗಟ್ಟಿ ಹಿಡಿದು ಗಲ್ಲಗಳನ್ನು
ನನ್ನ ತುಟಿಗಳಿಗೆ ಆಕೆಯದನ್ನು ಒತ್ತುತ್ತಾಳೆ ಗಾಢವಾಗಿ

ಮುಟ್ಟ ಬೇಡ ನನ್ನನ್ನು ಎಂದು ಹೇಳುತ್ತಿದ್ದರೆ.
ತನ್ನ ದೃಢಸ್ತನಗಳಿಂದ ನನ್ನನ್ನು ಇರಿಯುತ್ತಾ
ನನ್ನನ್ನು ತಬ್ಬುತ್ತಾಳೆ

ಸಮೀಪಿಸಬೇಡ ನನ್ನನ್ನು
ಅದು ಘನತೆಯಲ್ಲ ಎಂದರೆ ಸಾಕು
ಜೋರಾಗಿ ಕೂಗುತ್ತಾಳೆ

ಹೆಣ್ಣಿನ ಕಾವ್ಯವನ್ನು ಸ್ತ್ರೀವಿಶಿಷ್ಟರಚನೆಗಳೆಂದು ನೋಡುತ್ತಲೇ ಅದನ್ನು ಅವಳ ‘ರಚನೆ’ಯ ಪ್ರಯತ್ನಗಳಾಗಿಯೂ ನೋಡಬೇಕೆಂದು ಸ್ತ್ರೀವಾದಿಗಳು ಒತ್ತಾಯಿಸುವುದಕ್ಕೆ ಈ ಬಗೆಯ ಕಾವ್ಯದಲ್ಲಿ ಒತ್ತಾಸೆ ಸಿಗುತ್ತದೆ. ಕಾವ್ಯವಲ್ಲದೆ ತನ್ನ ದಿನನಿತ್ಯದ ದೈನಿಕದಲ್ಲಿ ಹೆಣ್ಣು ಇಂಥ ಭಾವಗಳನ್ನು ವ್ಯಕ್ತಪಡಿಸಲು ಸಾಧ್ಯವಿದೆಯೆ? ಇನ್ನೂ ಮೂಲಭೂತವಾದ ಪ್ರಶ್ನೆಯೊಂದನ್ನು ಹಾಕಿಕೊಳ್ಳೋಣ. ದೇಹವೆನ್ನುವುದು ಮಾಯೆಯಾಗಿಯೋ ದೌರ್ಬಲ್ಯವಾಗಿಯೋ ಆದಿಮ ಪ್ರಾಕೃತಿಕತೆಯಲ್ಲೋ ಗಂಡಿಗೆ ಬೇರೆ, ಹೆಣ್ಣಿಗೆ ಬೇರೆಯೆ? ದೇಹಸಂಭ್ರಮದ ಉತ್ಕಟ ಗಳಿಗೆಗಳನ್ನು ಹೆಣ್ಣು ವ್ಯಕ್ತಪಡಿಸಲು ಇರುವ ನೂರು ಸಾಮಾಜಿಕ ನಿರ್ಬಂಧಗಳನ್ನು ಮೀರಲು ಹೆಣ್ಣಿಗೆ ಕಲೆಯೇ ಅಂತಿಮವಾದ ಮತ್ತು ಮೂಲವಾದ ಕ್ಷೇತ್ರ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಇದನ್ನೇ ಜನಪದ ಕವಯಿತ್ರಿಯೊಬ್ಬಳು ಹೇಳುವ ಪರಿ ನೋಡಿ:
ಉಪ್ಪಿಲ್ದ ಊಟವ ಒಪ್ಪೊತ್ತಿಗುಣಲಾರೆ
ಒಪ್ಪದ ಸೀರಿ ಉಡಲಾರೆ ಭಾವಯ್ಯ
ತಪ್ಪಿಲ್ದೆ ಪಾದು ಹಿಡಿಲಾರೆ

ಆಧುನಿಕ ಕನ್ನಡ ಮಹಿಳಾ ಕಾವ್ಯದ ಉದ್ಘಾಟಕಿ ಎನ್ನಬಹುದಾದ ಎನ್.ವಿ. ಭಾಗ್ಯಲಕ್ಷ್ಮಿಯವರ ‘ಪ್ರತಿ–ಕ್ರಿಯೆ’ ಕವನದ ಕೆಲವು ಸಾಲುಗಳು:

ಹುಡುಗಿ ಕಾಮದ ಬಗ್ಗೆ ಪದ್ಯ ಬರೆದರೆ
ಮುದುಕರಿಗೆಲ್ಲ ಚಳಿ ಹೊತ್ತಿಸಿದ ಬೆಂಕಿ
ತೀರದ ಬಯಕೆಗಳ ಕೊಳ್ಳಿ...
.......
ಹುಡುಗಿಯೊಬ್ಬಳು ಕಾಮದ ಬಗ್ಗೆ ಪದ್ಯ ಬರೆದರೆ
ಮುದುಕಿಯರು ಕೆಂಡ ಉಗುಳುತ್ತಾರೆ
ಮುಚ್ಚಿಟ್ಟದ್ದು ತೆರೆದು
ಬಟಾ ಬಯಲು ಮಾಡಿ
ಹೆಣ್ಣಿನ ಸ್ಥಾನ ಮಾನ
ಹಾ!

ಸಂಸ್ಕೃತಿ ಕಳೆವಳಲ್ಲಾ
ಎಂದು ಹಲುಬಿ
ಹುಡುಗಿಯರೇ ಹೀಗಾದರೆ
ಹುಡುಗರದೇನು
ಎಂದು ವೇದಾಂತದುಸಿರು
ಬಿಡುತ್ತಾರೆ
ಹುಡುಗಿ,
ಕಾಮದ ಬಗ್ಗೆ ಪದ್ಯ ಬರೆಯುತ್ತಾಳೆ
ಹೆಣ್ಣು ಒಳಗೂ ಹೊರಗೂ ಎದುರಿಸುವ ತಲ್ಲಣಗಳಿಗೆ ಕಾವ್ಯದಲ್ಲಿ ಮದ್ದು ಹುಡುಕುತ್ತಾಳೆ. ಇದು ತನ್ನನ್ನು ತಾನು ಅರಿಯುವ ಪರಿ, ಲೋಕಕ್ಕೆ ತನ್ನನ್ನು ಪ್ರಸ್ತುತಪಡಿಸುವ ಪರಿ ಎರಡೂ ಹೌದು.

ಹೆಣ್ಣನ್ನು ಹೀಗೆ ಅವಳ ತವಕ ತಲ್ಲಣದಲ್ಲಿ ತಿಳಿಯುವ ಸಂವೇದನೆ ಬೆಳೆದಾದ ಮೇಲೆ, ಗಂಡು ಹೆಣ್ಣಿನ ವರ್ಗೀಕರಣದ ಹಂಗಿಲ್ಲದ ಕಾವ್ಯಮೀಮಾಂಸೆ ತಾನೇ ತಾನಾಗಿ ವಿಕಾಸಗೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT