ಪಂಥ ಕಟ್ಟುವುದು ನಮ್ಮ ಇತಿಹಾಸದಲ್ಲೇ ಇದೆ. ಪಗಡೆಯಾಟದಲ್ಲಿ ಪಾಂಡವರು ದ್ರೌಪದಿಯನ್ನೇ ಪಣಕ್ಕಿಟ್ಟು ಆಡಿದ್ದನ್ನು ಕೇಳಿದ್ದೇವೆ. ಮೊದಲೆಲ್ಲಾ ಹಳ್ಳಿಗಳಲ್ಲಿ ಜಾತ್ರೆಗಳು ನಡೆದಾಗ ಟಗರಿನ ಕಾದಾಟ, ಗೂಳಿಪಂದ್ಯ, ಕೋಳಿಅಂಕ, ಕುಸ್ತಿ ಮೊದಲಾದ ಬಲಪ್ರದರ್ಶನದ ಆಟಗಳಲ್ಲಿ ಜೂಜು ಆಡುವುದು ಇತ್ತು. ಗ್ರಾಮೀಣ ಕ್ರೀಡೆಗಳಲ್ಲಿ ಕೂಡ ಇಡೀ ಹಳ್ಳಿಯ ಜನರೇ ಬಾಜಿ ಕಟ್ಟುವುದು ಮಾಮೂಲಾಗಿತ್ತು.

ಯುಗಾದಿಯ ವರ್ಷದ ತೊಡಕಿನ ಸಂದರ್ಭದಲ್ಲಿ ಕಾಸಿನಾಟ, ಇಸ್ಪೀಟಾಟ ಆಡುವ ಪರಿಪಾಠ ಬೆಳೆಯಿತು. ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಅರಳೆ ಧಾರಣೆ ಪ್ರಕಟವಾಗುತ್ತಿದ್ದಾಗ, ಮಾರುಕಟ್ಟೆಯ ವಹಿವಾಟು ಶುರುವಾದಾಗ ಧಾರಣೆ ಎಷ್ಟಿತ್ತು, ಮುಗಿದಾಗ ಎಷ್ಟಿತ್ತು ಎಂಬುದನ್ನು ಮೊದಲೇ ಊಹಿಸಿ ಹಣ ಕಟ್ಟುವವರು ಕಾಣಿಸಿಕೊಂಡರು.

ಬಾಂಬೆ ಮೂಲದ ರತನ್ ಕತ್ರಿ ಎಂಬುವನು ಮಟ್ಕಾ ಪ್ರಾರಂಭಿಸಿದ. ಮೊಬೈಲ್, ಪೇಜರ್ ಯಾವುದೂ ಇಲ್ಲದ ಕಾಲವದು. ನೂರು ಕಿ.ಮೀ. ದೂರದ ಊರಿಗೆ ಒಂದು ಟ್ರಂಕಾಲ್ ಮಾಡಬೇಕಾದರೆ ಸಾಮಾನ್ಯವಾಗಿ ಅರ್ಧ ಗಂಟೆ ಕಾಯಬೇಕಾಗಿದ್ದ ದಿನಗಳವು.

‘ಎಕ್ಸ್‌ಪ್ರೆಸ್ ಟ್ರಂಕಾಲ್’ ಮಾಡಲು ಕೂಡ ಹತ್ತು ನಿಮಿಷ ಬೇಕಾಗುತ್ತಿತ್ತು. ಅಂಥ ಪರಿಸ್ಥಿತಿಯಲ್ಲೂ ರತನ್ ಕತ್ರಿ ಮಾಡುತ್ತಿದ್ದ ಮಟ್ಕಾದ ಡ್ರಾಗಳು ಬೆಂಗಳೂರಿನಲ್ಲಿ ಬಲು ಬೇಗ ಸದ್ದು ಮಾಡುತ್ತಿದ್ದವು. ಅವನು ‘ಓಪನಿಂಗ್ ನಂಬರ್’ ತೆಗೆಯುವ ಮೊದಲು ಒಂದಿಷ್ಟು ವ್ಯವಹಾರ ಮುಗಿದಿರುತ್ತಿತ್ತು.

‘ಕ್ಲೋಸಿಂಗ್ ನಂಬರ್’ ತೆಗೆಯುವ ಹೊತ್ತಿಗೆ ಅದು ತಾರಕಕ್ಕೆ ಹೋಗಿರುತ್ತಿತ್ತು. ಆ ನಂಬರ್ ಯಾವುದೆಂಬುದನ್ನು ಜನ ತಿಳಿಯಲು ಅರ್ಧ ಗಂಟೆಯೇನೂ ಕಾಯಬೇಕಾಗಿರಲಿಲ್ಲ. ಅವನು ‘ಡ್ರಾ’ ಮಾಡಿದ ಎರಡೇ ನಿಮಿಷದಲ್ಲಿ ಪ್ರಮುಖ ನಗರಗಳಿಗೆ ಟ್ರಂಕಾಲ್ ಮೂಲಕ ವಿಷಯ ರವಾನೆಯಾಗುತ್ತಿತ್ತು. ಇಂದಿರಾಗಾಂಧಿಯವರು ಪ್ರಧಾನಿಯಾಗುತ್ತಿದ್ದಾಗ ಅವನು ಸುದ್ದಿಯಲ್ಲಿದ್ದ.

ಬಾಂಬೆ ಭೂಗತಲೋಕವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಅವನು ಆಗಲೇ ಕೋಟ್ಯಂತರ ರೂಪಾಯಿ ಮಟ್ಕಾ ವ್ಯವಹಾರ ನಡೆಸುತ್ತಿದ್ದ. ಪ್ರಧಾನಮಂತ್ರಿ, ರತನ್ ಕತ್ರಿ ಇಬ್ಬರೂ ಒಟ್ಟಿಗೆ ಟ್ರಂಕಾಲ್‌ಗೆ ಯತ್ನಿಸಿದರೆ, ದೂರಸಂಪರ್ಕ ಇಲಾಖೆಯವರು ಮೊದಲು ಮಟ್ಕಾ ರಾಜ ಕತ್ರಿಗೇ ಕನೆಕ್ಷನ್ ಕೊಟ್ಟು, ಪ್ರಧಾನಿಯನ್ನು ಕಾಯಿಸುತ್ತಾರೆ ಎಂದು ಆಗ ಜನ ತಮಾಷೆ ಮಾಡುತ್ತಿದ್ದರು. ಅಷ್ಟರ ಮಟ್ಟಿಗೆ ರತನ್ ದಂಧೆಕೋರನಾಗಿ ಜನಪ್ರಿಯನಾಗಿದ್ದ.

ಇನ್ನು ಕುದುರೆ ರೇಸ್ ವಿಚಾರ. ಮೊದಲು ಮೋಜಿಗೆ ಎಂದು ಶುರುವಾದ ಇದು ಆಮೇಲೆ ವ್ಯವಸ್ಥಿತ ಬೆಟಿಂಗ್‌ಗೆ ರಹದಾರಿಯಾಯಿತು. ವಿದೇಶಗಳಿಂದ ಟ್ರೇನರ್‌ಗಳು, ಜಾಕಿಗಳು ಬಂದರು. ಅದುವರೆಗೆ ನಡೆಯುತ್ತಿದ್ದ ಎಲ್ಲಾ ದಂಧೆಗಳನ್ನೂ ಮೀರಿಸುವಷ್ಟು ಜನರನ್ನು ಕುದುರೆ ರೇಸ್ ಆಕರ್ಷಿಸಿತು. ಇಲ್ಲಿ ಹಣದ ಹೊಳೆ ಹರಿಯುತ್ತದೆಂಬುದು ಸ್ಪಷ್ಟವಾದದ್ದೇ ನಿಧಾನವಾಗಿ ಭೂಗತಲೋಕದವರು ಪ್ರವೇಶಿಸಿದರು.

ಅಧಿಕೃತ ಬುಕ್ಕಿಗಳಿಗಿಂತ ಹೆಚ್ಚು ಪಟ್ಟು ಬೆಟಿಂಗ್ ವ್ಯವಹಾರವನ್ನು ಅವರು ನಡೆಸತೊಡಗಿದರು. ಕಳ್ಳಬುಕ್ಕಿಗಳು ಯಾವಾಗ ಶುರುವಾದರೋ, ಪಾತಕಲೋಕದ ಡಾನ್‌ಗಳು ನೇರವಾಗಿ ಕುದುರೆ ಲಾಯಗಳಿಗೇ ಇಳಿದರು. ಗೆಲ್ಲುವ ಕುದುರೆಯನ್ನು ಅಂದಾಜು ಮಾಡಿ, ಅದರ ಮೇಲೆ ಜನ ಕಟ್ಟುವ ಹಣವನ್ನು ‘ಬಾವ್’ ಎಂದು ಕರೆಯುತ್ತಾರೆ. ಅಂದರೆ, ಅದರ ಮೌಲ್ಯವನ್ನು ಈ ಶಬ್ದ ಪ್ರತಿಪಾದಿಸುತ್ತದೆ. ಒಂದು ರೂಪಾಯಿ ಕಟ್ಟಿ, ಗೆದ್ದರೆ 50 ಪೈಸೆ ಲಾಭವೆಂಬುದು ಕಳ್ಳಬುಕ್ಕಿಗಳ ಲೆಕ್ಕಾಚಾರ.

ಒಟ್ಟಾರೆ ಕೋಟ್ಯಂತರ ರೂಪಾಯಿ ಹಣದ ಕಳ್ಳದಂಧೆ ಇದು. ನಿರ್ದಿಷ್ಟ ಕುದುರೆಯ ಮೇಲೆ ಹೆಚ್ಚು ಹಣವನ್ನು ಜನ ಹೂಡಿರುತ್ತಾರೆ ಎಂದಿಟ್ಟುಕೊಳ್ಳೋಣ. ಆ ಕುದುರೆ ಸೋತರೆ ಬುಕ್ಕಿಗಳಿಗೆ ಲಾಭ ಜಾಸ್ತಿ. ಅದಕ್ಕೇ ಜಾಕಿಗಳನ್ನು ಕೊಂಡುಕೊಳ್ಳುವುದು, ಟ್ರೇನರ್‌ಗಳನ್ನು ಹೆದರಿಸುವುದು, ಫೌಲ್ ಮಾಡುವಂತೆ ಪ್ರೇರೇಪಿಸುವುದು ಮೊದಲಾದ ಒತ್ತಡಗಳನ್ನು ಭೂಗತಲೋಕದವರು ತಂದರು.

ಕ್ರೀಡಾಮನೋಭಾವ ಇರುವ ಜಾಕಿಗಳ ಮನೆಗೆ ನುಗ್ಗಿ ಅವರ ಹೆಂಡತಿ-ಮಕ್ಕಳನ್ನು ಬಂಧಿಸಿಟ್ಟು ಬೆದರಿಸಿ, ವ್ಯವಹಾರ ನಡೆಸುವ ಮಟ್ಟಕ್ಕೂ ಹೋದರು. ಜಾಕಿಗಳು ಗೆಲ್ಲುವ ಕುದುರೆಯ ಜೀನನ್ನು ಬಲವಂತವಾಗಿ ಎಳೆದಾಗ ಅದರ ಬಾಯಿ ಹರಿದುಹೋದದ್ದನ್ನು ಕೂಡ ನಾನು ಕಂಡಿದ್ದೇನೆ. ಇದನ್ನು ನೋಡಿ ಜನ ರೊಚ್ಚಿಗೆದ್ದು ಟರ್ಫ್‌ಕ್ಲಬ್‌ಗಳ ಗಾಜನ್ನು ಪುಡಿ ಮಾಡಿ ಪ್ರತಿಭಟನೆ ನಡೆಸಿರುವ ಉದಾಹರಣೆಗಳೂ ಉಂಟು.

ಏನೇ ಆದರೂ ಕುದುರೆ ಬಾಜಿಯ ಜನಪ್ರಿಯತೆ ಮಾತ್ರ ಕಡಿಮೆಯಾಗಲೇ ಇಲ್ಲ. ಇನ್ನೊಂದು ಕಡೆ ಇಸ್ಪೀಟ್ ಕ್ಲಬ್‌ಗಳು, ಸ್ಕಿಲ್ ಗೇಮ್ ಅಡ್ಡಾಗಳು ತಲೆಎತ್ತಿದವು. ಇವುಗಳ ಹಾವಳಿ ತಪ್ಪಿಸುವಂತೆ ಕೆಲವರು ಕೋರ್ಟಿನ ಕಟೆಕಟೆ ಹತ್ತಿದ್ದೂ ಆಯಿತು. ನ್ಯಾಯಾಲಯದಲ್ಲಿ ವಾದ ಮಾಡುವ ಪ್ರಭೃತಿಗಳು ಕೂಡ ‘ಸ್ಕಿಲ್’ ನೆಚ್ಚಿಕೊಂಡ ಆಟಗಳು ಜಾಣ್ಮೆಯನ್ನು ಅವಲಂಬಿಸಿರುತ್ತವೆ. ಹಾಗಾಗಿ ಅವು ಕೇವಲ ಅದೃಷ್ಟದ ಆಟಗಳಲ್ಲ ಎಂದು ಪ್ರತಿಪಾದಿಸಿದರು.

ಉದಾಹರಣೆಗೆ ಇಸ್ಪೀಟ್‌ನಲ್ಲಿ ‘ರಮ್ಮಿ ಅಂಡ್ ಶೋ’ ಸ್ಕಿಲ್ ಗೇಮ್ ಎಂಬುದು ಅವರ ವಾದ. ನ್ಯಾಯಾಲಯಗಳು ಇಂಥ ವಾದವನ್ನು ಒಪ್ಪಿಕೊಂಡವು. ವಿದ್ಯಾರ್ಥಿಗಳು, ಯುವ ಜನಾಂಗ ಹಣ ಕಟ್ಟುವ ಚಾಳಿಗೆ ವ್ಯಾಪಕವಾಗಿ ಬೀಳಲು ಇದು ಕಾರಣವಾಯಿತು.

ಅಲ್ಲಿ ಸೇರುತ್ತಿದ್ದ ಯುವಕರು ಭಾರತ-ಪಾಕಿಸ್ತಾನ ತಂಡಗಳ ನಡುವೆ ಹಾಕಿ ಪಂದ್ಯಗಳು ನಡೆದಾಗ, ಪ್ರತಿಷ್ಠಿತ ಫುಟ್‌ಬಾಲ್ ಪಂದ್ಯಗಳು ನಡೆದಾಗ ಬಾಕಿ ಕಟ್ಟತೊಡಗಿದರು. ಏಕದಿನದ ಕ್ರಿಕೆಟ್ ಪಂದ್ಯಗಳು ಬಂದಮೇಲೆ ಟೀವಿಯಲ್ಲಿ ಪ್ರಸಾರ ಕೂಡ ಶುರುವಾಯಿತು. ಆಟದ ಅಷ್ಟೂ ರೋಚಕತೆಯನ್ನು ನೋಡುವ ಈ ಭಾಗ್ಯವೇ ಬೆಟಿಂಗ್ ದಂಧೆಯ ಮೂಲ.

ಈಗ ಟಾಸ್‌ನಿಂದ ಮೊದಲುಗೊಂಡು ಪಂದ್ಯದ ಪ್ರತಿ ಎಸೆತದ ಮೇಲೂ ಬಾಜಿ ಕಟ್ಟುವವರಿದ್ದಾರೆ. ಆಟಗಾರರು ಕೂಡ ಇದರಲ್ಲಿ ಶಾಮೀಲಾಗಿ ಹಣದ ಆಮಿಷದಿಂದ ರನ್‌ಔಟ್ ಆಗುವ ಅಥವಾ ವಿಕೆಟ್ ಒಪ್ಪಿಸುವ ಅಥವಾ ವೈಡ್, ನೋಬಾಲ್‌ಗಳನ್ನು ಹಾಕುವ ‘ಸ್ಪಾಟ್ ಫಿಕ್ಸಿಂಗ್’ ಜಮಾನವಿದು. ಪಾಕಿಸ್ತಾನದ ಸಲ್ಮಾನ್ ಬಟ್ ಹಾಗೂ ಮೊಹಮ್ಮದ್ ಅಮೀರ್‌ಗೆ ಆಗಿರುವ ಶಿಕ್ಷೆಯ ಉದಾಹರಣೆ ನಮ್ಮ ಮುಂದಿದೆ.

ಪಾಕಿಸ್ತಾನ-ಭಾರತದ ನಡುವೆ ಕ್ರಿಕೆಟ್ ಪಂದ್ಯಗಳು ನಡೆದಾಗ ವ್ಯಾಪಾರಿಗಳು ಬಸ್ಸು, ಜಮೀನುಗಳನ್ನು ಬೆಟಿಂಗ್ ಕಟ್ಟಿ ಸೋತಿರುವ ಉದಾಹರಣೆಗಳನ್ನು ಮೆಲುಕುಹಾಕುತ್ತಿದ್ದ ನಮಗೆ ಈಗ ಐಪಿಎಲ್ ರೂಪದಲ್ಲಿ ಶುದ್ಧ ದಂಧೆಕೋರ ಸ್ವರೂಪದ ಆಟದ ದರ್ಶನವಾಗುತ್ತಿದೆ. ಯಾವ ದೇಶಗಳ ನಡುವೆ ಕ್ರಿಕೆಟ್ ನಡೆದರೂ ಈಗ ಬೆಂಗಳೂರು, ಮೈಸೂರಿನಂಥ ನಗರಗಳಲ್ಲಿ ಬೆಟಿಂಗ್ ದಂಧೆಗಳು ನಡೆಯುತ್ತಿವೆ. ಟಿವಿ, ಫೋನು, ಮೊಬೈಲ್‌ಗಳು, ಇಂಟರ್ನೆಟ್ ಹಾಗೂ ನಂಬಿಕೆ- ಇವಿಷ್ಟಿದ್ದರೆ ಸಾಕು, ಬೆಟಿಂಗ್ ದಂಧೆಯನ್ನು ಅವ್ಯಾಹತವಾಗಿ ನಡೆಸಲು.

ಬೆಟಿಂಗ್ ದಂಧೆಯನ್ನು ಮಟ್ಟಹಾಕಲು ಸಾಕಷ್ಟು ರೇಡುಗಳನ್ನು ನಾವೆಲ್ಲಾ ಮಾಡಿದೆವು. ಹಾಗಾಗಿ ದಂಧೆಕೋರರು ನಗರದ ಹೊರವಲಯದ ಫಾರ್ಮ್‌ಹೌಸ್‌ಗಳಿಗೆ ಸ್ಥಳಾಂತರಗೊಂಡರು. ಅಂಥ ಜಾಗಗಳನ್ನೂ ನಾವು ಪತ್ತೆಮಾಡಿದ ಮೇಲೆ ಕಾರುಗಳಲ್ಲಿ ಓಡಾಡಿಕೊಂಡೇ ಬೆಟಿಂಗ್ ಅವ್ಯವಹಾರ ನಡೆಸತೊಡಗಿದರು. ಪಂದ್ಯ ಪ್ರಾರಂಭವಾದಾಗ ಶುರುವಾಗುವ ಕಾರಿನ ಓಡಾಟ ಪಂದ್ಯ ಮುಗಿಯುವವರೆಗೆ ಮುಂದುವರಿಯುತ್ತಿತ್ತು. ಕೊನೆಗೆ ಆ ಕಾರು ನಗರವನ್ನೇ ಬಿಟ್ಟು ಹೊರಗೆ ಹೋಗಿಬಿಡುತ್ತಿತ್ತು.

ಬೆಟಿಂಗ್ ಕಟ್ಟುವ ಚಾಳಿ ಇರುವವರು ಬದುಕಿನ ಪ್ರತಿಯೊಂದನ್ನೂ ಅದಕ್ಕೆ ತಳುಕು ಹಾಕಲು ಶುರುಮಾಡುತ್ತಾರೆ. ಚುನಾವಣೆಯಲ್ಲಿ ಗೆಲ್ಲೋರು ಯಾರು- ಯಾರ್ಯಾರಿಗೆ ಎಷ್ಟೆಷ್ಟು ಸ್ಥಾನ, ಬಜೆಟ್‌ನಲ್ಲಿ ಬೆಲೆ ಏರಿಕೆಯಾಗುವ ವಸ್ತುಗಳೇನು-ಇಳಿಕೆಯಾಗುವುದು ಯಾವುವು, ಸಂಬಂಧಿಕರಿಗೆ ಹುಟ್ಟುವ ಮಗು ಹೆಣ್ಣೋ ಗಂಡೋ ಹೀಗೆ ಬೆಟಿಂಗ್ ಕಟ್ಟಲು ಅವರಿಗೆ ಅಡಿಗಡಿಗೆ ನೆಪಗಳು ಸಿಗುತ್ತಾ ಹೋಗುತ್ತವೆ.

ಲಾಟರಿ ಕೂಡ ಮನುಷ್ಯನ ಬಾಜಿ ಕಟ್ಟುವ ಸ್ವಭಾವದ ಫಲಿತವೇ ಹೌದು. ಖಾಸಗಿ ಲಾಟರಿ ಕಂಪೆನಿಗಳ ಯಶಸ್ಸಿನಿಂದ ಪ್ರೇರಣೆಗೊಂಡು ಸರ್ಕಾರಗಳೂ ಮೊದಲು ತಿಂಗಳಿಗೊಂಡು ಡ್ರಾ ಪ್ರಾರಂಭಿಸಿದವು. ಆಮೇಲೆ ಅದು ಹದಿನೈದು ದಿನಕ್ಕೊಮ್ಮೆ, ವಾರಕ್ಕೊಮ್ಮೆ, ದಿನಕ್ಕೊಮ್ಮೆ, ಗಂಟೆಗೊಮ್ಮೆ ಎಂದು ಬದಲಾಯಿತು.

ಪ್ಲೇವಿನ್ ತರಹದ ಆನ್‌ಲೈನ್ ಲಾಟರಿ ಕೂಡ ಅವುಗಳ ವಿಸ್ತೃತ ರೂಪವೇ. ಈಶಾನ್ಯ ರಾಜ್ಯಗಳಿಗೆ ಲಾಟರಿಯೇ ದೊಡ್ಡ ಆದಾಯ ಮೂಲವಾಯಿತು. ಅಲ್ಲಿನ ಲಾಟರಿ ದಲ್ಲಾಳಿಯನ್ನು ನೋಡಲು ಇಲ್ಲಿಂದ ಯಾರಾದರೂ ಹೋದರೆ, ಅವನ ಸಕಲ ವ್ಯವಹಾರವನ್ನೂ ನೋಡಿಕೊಳ್ಳಲು ಒಬ್ಬ ಮಂತ್ರಿ ಇರುತ್ತಿದ್ದನಂತೆ. ಮಧ್ಯಾಹ್ನದ ಬಿಸಿಯೂಟಕ್ಕೆ ಆನ್‌ಲೈನ್ ಗೇಮ್ ಹಣ ಕೊಡುವುದಾಗಿ ಸಮಾಜಸೇವೆಯ ಸೋಗನ್ನೂ ದಂಧೆಗೆ ತೊಡಿಸಿದ್ದೂ ಆಯಿತು.

ನಾನು ಸಿಸಿಬಿಯಲ್ಲಿ ಇದ್ದಾಗ ಡಿಸಿಪಿ ರವಿಕಾಂತೇಗೌಡರ ಪ್ರೋತ್ಸಾಹದಿಂದ ಚಾಮರಾಜಪೇಟೆಯಲ್ಲಿ ಒಮ್ಮೆ ಬೆಟಿಂಗ್ ದಂಧೆಯನ್ನು ಭೇದಿಸಿದ್ದೆವು. ಸ್ಥಳೀಯ ಶಾಸಕನ ಕುಮ್ಮಕ್ಕು ಇದ್ದರೂ ಆ ದಂಧೆಯನ್ನು ನಾವು ಮಟ್ಟಹಾಕಿದ್ದೆವು. ಆನಂತರ ಅಂತಹ ಅನೇಕ ರೇಡುಗಳು ನಡೆದು, ಸಾಕಷ್ಟು ಬೆಟಿಂಗ್ ದಂಧೆಕೋರರನ್ನು ಬಂಧಿಸಲಾಯಿತು.

ಈಗ ಕಾಲ ಇನ್ನಷ್ಟು ಬದಲಾಗಿದೆ. ಬೆಟಿಂಗ್ ವ್ಯವಸ್ಥಿತವಾಗಿಯೇ ನಡೆಯಬೇಕೆಂದೇನೂ ಇಲ್ಲ. ಮನೆಯಲ್ಲಿ ಟಿವಿ ಎದುರು ಕೂತ ಮಗ, ತೆಂಡೂಲ್ಕರ್ ಈ ಮ್ಯಾಚ್‌ನಲ್ಲಿ ಸೆಂಚೂರಿ ಹೊಡೀತಾನೆ; ಎಷ್ಟಿರಲಿ ಎಂದು ಪ್ರಶ್ನಿಸುತ್ತಾನೆ. ಇಂಥ ಪ್ರಶ್ನೆಯಲ್ಲೇ ಬೆಟಿಂಗ್ ಮೋಹ ಅಡಗಿದೆ. ಮತ್ತೊಂದು ವಿಶ್ವಕಪ್ ಕ್ರಿಕೆಟ್ ಶುರುವಾಗಿರುವುದರಿಂದ ಮೊಬೈಲ್‌ಗಳ ನಡುವೆ ರವಾನೆಯಾಗುವ ಮೆಸೇಜುಗಳು, ಕರೆಗಳಲ್ಲಿ ಅದೆಷ್ಟು ಹಣದ ವ್ಯವಹಾರ ನಡೆಯುವುದೋ ಏನೋ?

ಮುಂದಿನ ವಾರ: ನಾನು ಕಂಡ ಸೀಡಿ ಪೈರಸಿಯ ಲೋಕ
ಶಿವರಾಂ ಅವರ ಮೊಬೈಲ್ ನಂಬರ್ 94483 13066

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.