ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರೌಪದಿಯ ಶ್ರೀಮುಡಿ

Last Updated 22 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಬಹುಕಾಲ ನಾಪತ್ತೆಯಾಗಿದ್ದ ಬಾಲ್ಯದ ಗೌರವಾನ್ವಿತ ಪ್ರೈಮರಿ ಶಾಲಾ ಮಾಸ್ತರು ಮದುವೆ ಮನೆಯಲ್ಲಿ ಎದುರು ಬಂದಂತೆ, ಆ ಹಳೆಯ ಪುಸ್ತಕ ತಟ್ಟನೆ ನನ್ನ ಕಣ್ಸೆಳೆಯಿತು.

ಮಾಸಿದ ಹಳದಿ ಬಣ್ಣದ ರಕ್ಷಾಕವಚ. ಈಗಿನ ಡಿ.ಟಿ.ಪಿ.ಗಿಂತ ಚೆಲುವಾದ ಮೊಳೆ ಜೋಡಿಸುವ ಕಾಲದ ಕಲಾತ್ಮಕ ಮುದ್ರಣ. ಚಿತ್ರ ಮತ್ತು ಭಾವಚಿತ್ರಗಳ ಭಾರವಿಲ್ಲದ ನಿರಾಡಂಬರ ರೂಪ. ಮೈಸೂರಿನ ವೆಸ್ಲಿ ಪ್ರೆಸ್‌ನ ಹ್ಯೂ ವಾರನ್ ಮುದ್ರಿಸಿದ್ದ ಪುಸ್ತಕ. ದಾನಿಗಳೊಬ್ಬರು ನಮ್ಮ ಹಳ್ಳಿಯ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದ್ದ ಹಳೆಯ ಪುಸ್ತಕದ ರಾಶಿಯಲ್ಲಿ ಇದು ತೂರಿಕೊಂಡಿತ್ತು. ಆಪ್ತತೆಯಿಂದ ಎತ್ತಿಕೊಂಡೆ.

ಇನ್ನೂರು ಪುಟಗಳ ಪ್ರತಿ ಅಕ್ಷರಗಳೂ ಅರಿವಿನ ಬೆಳಕಿಂಡಿಯಂತಿದ್ದವು. ಹಳೆಯ ಅಮೂಲ್ಯ ಪುಸ್ತಕಗಳು ನಿಧಿಯಂತೆ. ಅವನ್ನು ಜತನವಾಗಿ ಕಾಪಾಡಬೇಕು. ಕಾದಿರಿಸಿದರೆ ಮುಂದಿನ ತಲೆಮಾರು ಓದಲು ಅನುಕೂಲ. ಎಷ್ಟು ಜನ ಓದಿದರೂ ಅಲ್ಲಿನ ಅರಿವು ಕರಗುವುದಿಲ್ಲ. ಓದದಿದ್ದರೆ ಪುಸ್ತಕವೇನೂ ಬೇಸರಪಟ್ಟು ಕೊಳ್ಳುವುದಿಲ್ಲ. ಇನ್ನಾರಿಗಾಗಿಯೋ ಯಾವುದೋ ಪುಟದ ಯಾವುದೋ ಸಾಲು ಕಾದಿರುತ್ತದೆ. ಬೇರೆ ಬೇರೆ ಮನಸ್ಸಿಗೆ, ಬೇರೆ ಬೇರೆ ಕಾಲಘಟ್ಟದಲ್ಲಿ, ಬೇರೆ ಬೇರೆ ಅರ್ಥ ಬಿಟ್ಟುಕೊಟ್ಟು ಈ ಅರಿವು ಅಮರತ್ವ ಪಡೆಯುತ್ತದೆ. ಅದನ್ನು ಧೂಳು ಕೊಡವಿ ಕಣ್ಣಿಗೊತ್ತಿ ಕೊಂಡೆ.

ಇದು ಮೈಸೂರು ವಿಶ್ವವಿದ್ಯಾನಿಲಯವು ಅರವತ್ತು ವರ್ಷದ ಹಿಂದೆ ಪ್ರಕಟಿಸಿರುವ ಪ್ರಬುದ್ಧ ಕರ್ಣಾಟಕ. ಆಗ ಈ ಸಾಹಿತ್ಯಕ ಪತ್ರಿಕೆಯು ಚೈತ್ರ, ಆಷಾಡ, ಅಶ್ವಯುಜ ಮತ್ತು ಪುಷ್ಯ ಮಾಸಗಳಲ್ಲಿ ಆಯಾ ತಿಂಗಳ ಹುಣ್ಣಿಮೆಯಲ್ಲಿ ವರ್ಷಕ್ಕೆ ನಾಲ್ಕು ಸಂಚಿಕೆಗಳು ಪ್ರಕಟವಾಗುತ್ತಿತ್ತು. ವಾರ್ಷಿಕ ಚಂದಾ ಅಂಚೆ ವೆಚ್ಚವೂ ಸೇರಿ ಮೂರು ರೂಪಾಯಿ ಎಂಟಾಣೆ. ಆದರೆ ಒಳಗಿರುವ ಬರಹಗಳು ಸಾಹಿತ್ಯದ ವಿದ್ಯಾರ್ಥಿಗಳಿಗಂತೂ ಶಾಶ್ವತ ಹಣತೆಗಳು. ಕುವೆಂಪು, ಬೇಂದ್ರೆ, ಜಿ.ಎಸ್. ಶಿವರುದ್ರಪ್ಪ, ತೀ.ನಂ.ಶ್ರೀ, ಕೆ.ಎಸ್. ನರಸಿಂಹಸ್ವಾಮಿ, ಡಿ.ಎಲ್. ನರಸಿಂಹಾಚಾರ್, ದೇಜಗೌ, ಅನಂತ ನಾರಾಯಣ, ಎಸ್.ವಿ. ಪರಮೇಶ್ವರಭಟ್ಟ, ಆನಂದ, ತ.ಸು. ಶಾಮರಾಯ,
ಡಾ. ಕೆ.ಕೃಷ್ಣಮೂರ್ತಿ  ಈ ಪ್ರತಿಷ್ಠಿತ ಲೇಖಕ ವಿದ್ವಾಂಸರ ಬರಹಗಳೆಲ್ಲ ಒಂದೇ ಸಂಚಿಕೆಯಲ್ಲಿ! ೧೯೫೪ರ ವಿಜಯ ಸಂವತ್ಸರದಲ್ಲಿ ಹೊರಬಂದ ಪುಷ್ಯ ಸಂಚಿಕೆ. ಸಾದರ ಸ್ವೀಕಾರಗೊಂಡ ಆಗಿನ ಕೃತಿಗಳು ಯಾವಿರಬಹುದು ಎಂದು ಕುತೂಹಲದಿಂದ ಪುಟ ತಿರುಗಿಸಿ ನೋಡಿದರೆ, ಜಿ.ಪಿ.ರಾಜರತ್ನಂ ಅವರ ಶ್ರೀ ಬಾಹುಬಲೀ ವಿಜಯಂ- ನಾಟಕ, ಕವನ ಸಂಕಲನಗಳಾದ ಕೋ. ಚೆನ್ನಬಸಪ್ಪ ಅವರ ಪ್ರಾಣಪಕ್ಷಿ-, ಗೋಪಾಲಕೃಷ್ಣ ಅಡಿಗರ ಚಂಡೆ ಮದ್ದಳೆ- , ಬಿ.ಸಿ. ರಾಮಚಂದ್ರ ಶರ್ಮರ ಏಳು ಸುತ್ತಿನ ಕೋಟೆ ಮತ್ತು ಹವ್ಯಕ ವಿದ್ವಾಂಸರೊಬ್ಬರು ಬರೆದ ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ... ಈ ಎಲ್ಲಾ ಪುಸ್ತಕಗಳ ಮುಖಬೆಲೆ ಒಂದು ರೂಪಾಯಿಗಿಂತ ಹೆಚ್ಚಿಲ್ಲ.

ಈ ಸಂಚಿಕೆಯ ಆಭರಣವೆಂದರೆ ಕುವೆಂಪು ಅವರ ಬಹುಚರ್ಚಿತವಾದ ಮತ್ತು ಲೋಕಮಾನ್ಯವಾದ ವಿಮರ್ಶಾ ಲೇಖನ ದ್ರೌಪದಿಯ ಶ್ರೀಮುಡಿ. ಅದು ಹೆಂಗಸಿನ ಬರಿಯ ತಲೆಗೂದಲಿನ ಸಾಧಾರಣ ಕತೆಯಲ್ಲ. ಇಡೀ ಮಹಾಭಾರತದ ಕತೆಗೆ ತಿರುವು ಕೊಟ್ಟು ದುರ್ಯೋಧನ-ದುಶ್ಶಾಸನರ ಕ್ರೂರ ನಡವಳಿಕೆ, ದ್ರೌಪದಿಯ ಅಸಹಾಯಕ ಪ್ರಾರ್ಥನೆ, ಭೀಷ್ಮರ ವ್ಯರ್ಥ ಹಿತಬೋಧೆ, ಭೀಮನ ಗರ್ಭಾಗ್ನಿಯ ಉತ್ಕಟ ಕೋಪ, ಯುಧಿಷ್ಠಿರನ ಅಸಹನೀಯ ಸಹನೆ, ದ್ರೌಪದಿ ವಸ್ತ್ರಾಪಹರಣ, ಆಕೆಯ ಕೃಷ್ಣ ಭಕ್ತಿ, ಸೀರೆ ಅಕ್ಷಯವಾಗುವುದು, ಭೀಮನ ಶಪಥ, ಯುದ್ಧದಲ್ಲಿ ಭುಗಿಲ್ ಎನ್ನುವ ಅವನ ರೌದ್ರ ರೂಪ, ಅಂತೂ ಅಮಾನುಷವಾದ ರಕ್ತ ಶೃಂಗಾರದ ವರ್ಣನೆಯೊಂದಿಗೆ ಬಿಚ್ಚಿದ ಮುಡಿ ಕಟ್ಟುವುದರೊಂದಿಗೆ ಅಂತ್ಯಗೊಳ್ಳುತ್ತದೆ. ಈ ಬೀಭತ್ಸ ಚಿತ್ರಣವನ್ನು ಪಂಪ ಮತ್ತು ಕುಮಾರವ್ಯಾಸರು ಹೇಗೆ ನಿರ್ವಹಿಸಿದ್ದಾರೆ? ಈ ಮುಖ್ಯ ಪ್ರಶ್ನೆಯನ್ನು ಕುವೆಂಪು ಎತ್ತಿಕೊಂಡು ಇಬ್ಬರನ್ನೂ ತೂಗಿ ನೋಡುತ್ತಾರೆ. ಇಬ್ಬರು ಪ್ರಾಚೀನ ಮಹಾಕವಿಗಳನ್ನು, ಆಧುನಿಕ ಮಹಾಕವಿಯೊಬ್ಬ ತೌಲನಾತ್ಮಕವಾಗಿ ವಿಶ್ಲೇಷಿಸಿರುವ ಈ ಬರಹ ಕವಿಯೊಬ್ಬ ವಿಮರ್ಶಕನೂ ಆಗಿರಬಲ್ಲ ಎಂಬುದಕ್ಕೆ ಸಾಕ್ಷಿ.

ಕುವೆಂಪು ಹೀಗೆ ಆರಂಭಿಸುತ್ತಾರೆ: ಕನ್ನಡ ಸಾಹಿತ್ಯರಂಗದಲ್ಲಿ ದ್ರೌಪದಿಯ ಶ್ರೀಮುಡಿಗೆ ಕೈಯಿಟ್ಟ ನಾಲ್ವರು ಸಮರ್ಥರಲ್ಲಿ ಇಬ್ಬರು ಮಹಾಕಲಿಗಳು, ಇನ್ನಿಬ್ಬರು ಮಹಾಕವಿಗಳು. ಮಹಾಕಲಿಗಳೆಂದರೆ ಭೀಮ, ದುಶ್ಶಾಸನ. ಮಹಾಕವಿಗಳೆಂದರೆ ಪಂಪ, ನಾರಣಪ್ಪ. ಒಬ್ಬ ಮುಡಿ ಬಿಚ್ಚಿದ ಕಲಿ, ಇನ್ನೊಬ್ಬ ಮುಡಿ ಕಟ್ಟಿದ ಕಲಿ. ಪಂಪ ದ್ರೌಪದಿಯ ಮುಡಿ ಬಿಚ್ಚಿದ ಸಂದರ್ಭವನ್ನು ಸಂಕ್ಷೇಪವಾಗಿ ವರ್ಣಿಸಿ ಮುಂದಿನ ರುದ್ರಭಯಂಕರ ಸನ್ನಿವೇಶಕ್ಕೆ ಧಾವಿಸಿದ್ದಾನೆ. ನಾರಣಪ್ಪ ಸುಮಾರು ಐವತ್ತು ಷಟ್ಪದಿಗಳಲ್ಲಿ ವಿಸ್ತಾರವಾಗಿ ಹೇಳುವುದನ್ನು, ಪಂಪ ಹತ್ತು-ಹನ್ನೆರಡು ಗದ್ಯದ ಮತ್ತು ನಾಲ್ಕೇ ನಾಲ್ಕು ಪದ್ಯದ ಪಂಕ್ತಿಗಳಲ್ಲಿ ವರ್ಣಿಸಿ ಪೂರೈಸುತ್ತಾನೆ. ಆದರೆ ಭೀಮನ ರೌದ್ರಸ್ಥಿತಿಯನ್ನು ಚಿತ್ರಿಸುವಾಗ ಪಂಪನ ಪ್ರತಿಭಾಗ್ನಿ ತೆಕ್ಕನೆ ಕಾಳಿಂಗನಂತೆ ಹೆಡೆ ಎತ್ತಿ ಭಯಂಕರವಾಗುವುದನ್ನು ಕಾಣುತ್ತೇವೆ. ಪಂಪನದು ಸಂಗ್ರಹಶೀಲೆಯಾದ ಸಂಸ್ಕೃತ ಕಲೆ. ನಾರಣಪ್ಪನದು ಗ್ರಾಮೀಣ ದೈತ್ಯಕಲೆ. ಪಂಪಭಾರತದ ನವುರುನಯಗಳು ಗದುಗಿನ ಭಾರತದಲ್ಲಿಲ್ಲ. ಪಂಪನಿಗಿದು ಲೌಕಿಕಕಾವ್ಯ. ನಾರಣಪ್ಪನಿಗೆ ತನ್ನ ಕೃತಿ ಲೌಕಿಕ, ಆಗಮಿಕ, ವ್ಯಾವಹಾರಿಕ, ಪಾರಮಾರ್ಥಿಕ ಎಲ್ಲವನ್ನು ಒಳಗೊಂಡ ಅಖಂಡ ಕೃತಿ. ಅವನಿಗೆ ಕಾವ್ಯರಸಾ ಸ್ವಾದನೆ ಮಾತ್ರವಲ್ಲ, ದೈವೋಪಾಸನೆಯೂ ಅವಿಭಕ್ತ ಉದ್ದೇಶ. ಅವನು ದ್ರೌಪದಿಯ ಸಿರಿಮುಡಿ ಎಂಬ ವಿಶೇಷಣದಿಂದ ಕರೆಯುವುದಕ್ಕೆ ಬದಲಾಗಿ ಶ್ರೀಮುಡಿ ಎಂಬ ವಿಶೇಷಣವನ್ನೊಡ್ಡಿ ಧ್ವನಿಯಿಂದ ಅದನ್ನು ಪವಿತ್ರತರವನ್ನಾಗಿ ಮಾಡಿದ್ದಾನೆ. 

ನಾರಣಪ್ಪ ಪದಲೋಲುಪ. ಕುವೆಂಪು ಅದನ್ನು ಸೋದಾಹರಣವಾಗಿ ವಿವರಿಸುತ್ತಾರೆ. ದುರ್ಯೋಧನನ ಆಜ್ಞೆಯಂತೆ ದ್ರೌಪದಿಯನ್ನು ಕರೆತರಲು ಬರುವ ಪ್ರಾತಿಕಾಮಿ ಸಂಕಟದಿಂದ ತೊದಲುತ್ತಾ ಹೇಳುತ್ತಾನೆ: ತಾಯೆ ಬಿನ್ನಹ: ಇಂದು ನಿಮ್ಮಯ ರಾಯ ಸೋತನು ಜೂಜಿನಲಿ; ಕುರುರಾಯ ಗೆಲಿದನು ಕೋಶವಂ ಕರಿತುರಗರಥಸಹಿತ. ದ್ರೌಪದಿ ಕೇಳುತ್ತಾಳೆ: ಮುನ್ನೇನನ್ ಒಡ್ಡಿಯೆ ಸೋತನ್ ಎನ್ನನು? ತನ್ನನ್ನು ತಾನು ಸೋತವನಿಗೆ ನನ್ನನ್ನು ಒತ್ತೆ ಇಡುವ ಹಕ್ಕಿಲ್ಲವೆಂಬ ತರ್ಕ ರಕ್ಷಿಸೀತು ಎಂದು ಆಸೆಪಡುತ್ತಾಳೆ. ದುರುದುಂಬಿ ದುಶ್ಶಾಸನ ಬಂದು ಧೂರ್ತ ಮಾತುಗಳನ್ನಾಡಿದಾಗ ಪುಷ್ಪವತಿಯಾನ್, ಎನಗೆ ರಾಜ ಸಭಾಪ್ರವೇಶವು ಅನುಚಿತವಲೇ ಹೇಳು ಎಂದು ಬೇಡುತ್ತಾಳೆ. ನೀಂ ಪುಷ್ಪವತಿಯಾಗು; ಅಲ್ಲಿ ಫಲವತಿಯಾಗು ನಡೆ ಕುರುರಾಜಭವನದಲಿ ಎಂದು ಕಿರಾತರೂ ನಾಚುವಂತೆ ನುಡಿದು ಕೃಷ್ಣೆಯ ಮುಡಿಯ ಕೃಷ್ಣೋರಗಕ್ಕೆ ಕೈ ತುಡುಕುತ್ತಾನೆ. ಇಲ್ಲಿ ನಾರಣಪ್ಪ ಧ್ವನಿಪೂರ್ಣವಾಗಿ ತನ್ನ ಮಹಾಷಟ್ಪದಿಯ ಮೂಲಕ ಝೇಂಕರಿಸುತ್ತಾನೆ. ಎಸ್.ವಿ. ರಂಗಣ್ಣನವರ ಮಾತುಗಳನ್ನು ಕುವೆಂಪು ಉಲ್ಲೇಖಿಸುತ್ತಾರೆ: ನಾರಣಪ್ಪನಲ್ಲಿ ಪದಾಧಿಕ್ಯವನ್ನು ಆರೋಪಿಸುವಾಗ ನಾವು ಎಚ್ಚರದಿಂದಿರಬೇಕು. ಸೂಕ್ಷ್ಮಗ್ರಾಹಿಗಳಾಗಿರಬೇಕು. ವಾಚಾಳಿಯಂತೆ ಕಾಣಿಸಿಕೊಂಡರೂ ಅವನು ವಾಗ್ಮಿ. ಸಂಧ್ಯಾಸಮಯದಲ್ಲಿ ಪಶ್ಚಿಮದಿಕ್ಕಿನಲ್ಲಿ ಬಣ್ಣಗಳ ಹರವು ವಿಪರೀತ; ಸಾಗರದಲ್ಲಿ ನೀಲವರ್ಣದ ನೀರಿನ ರಾಶಿ ವಿಪರೀತ; ಹಾಗೆ ನಾರಣಪ್ಪನಲ್ಲಿ ವಚನವೈಭವ ವಿಪರೀತ.

ಭೀಮ ದುಶ್ಶಾಸನರ ಯುದ್ಧ ಸನ್ನಿವೇಶ ಕರ್ಣಪರ್ವದ ಒಂದು ಶಿಖರಘಟ್ಟ. ಮುಡಿಕಟ್ಟಿದ ಈ ಭಯಂಕರ ಸನ್ನಿವೇಶವನ್ನು ನಮ್ಮ ಮಹಾಕವಿಗಳಿಬ್ಬರೂ ಅದ್ಭುತವಾಗಿಯೆ ವರ್ಣಿಸಿದ್ದಾರೆ. ನಾರಣಪ್ಪ ಗ್ರಾಮೀಣ ಸಹಜವಾದ ವಿಸ್ತಾರ ವಿವರ ರೀತಿಯಲ್ಲಿ; ಆದರೆ ಪಂಪ ಮಹಾಕವಿಕೌಶಲ ಸಹಜವಾದ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ಚತುರ ರೀತಿಯಲ್ಲಿ. ನಾರಣಪ್ಪನ ರಾಕ್ಷಸ ಪ್ರತಿಭೆ ಭೀಮನೊಡನೆ ಪ್ರತಿಸ್ಪರ್ಧಿಸುವಂತಿದೆ. ನಿನ್ನ ಬಯಕೆ ಪೂರೈಸಿತೇ ನೋಡು ಎಂದು ಭೀಮ ದ್ರೌಪದಿಗೆ ಕೇಳುತ್ತಾನೆ- ದುಶ್ಶಾಸನನ ಮಹಾಹೆಣವನ್ನು ತೋರಿಸುತ್ತಾ. ಅದಕ್ಕವಳು ಆರಿವನು? ಎನ್ನುತ್ತಾಳೆ. ನೀ ಕೊಟ್ಟ ಭಾಷೆಯ ಕಾರಣಿಕ -ಇದು ಭೀಮನ ಉತ್ತರ. ಎಂಥ ಧ್ವನಿಪೂರ್ಣ ಉತ್ತರ! ಖಳರೊಳಗಿದಾವನು? ಎಂಬ ಮರುಪ್ರಶ್ನೆಗೆ ಭೀಮ ವೀರ ದುಶ್ಶಾಸನ ಕಣಾ ಎನ್ನುತ್ತಾನೆ. ಆ ಪಂಚವಲ್ಲಭೆ ಹೆಣದ ಮಸ್ತಕಕ್ಕೆ ಒದೆಯುತ್ತಾಳೆ. ಕರುಳ ಮುಡಿಸಿ, ರುಧಿರಸ್ನಾನ ಮಾಡಿಸಿ, ಕೆನ್ನೀರಲ್ಲಿ ವೇಣಿಯನ್ನು ನಾದಿ, ದಂತಶ್ರೇಣಿಯಲಿ ಬಾಚಿ, ಬೈತಲೆ ತೆಗೆದು ಬಿಚ್ಚಿದ ಮುಡಿ ಕಟ್ಟುವುದರೊದಿಗೆ ಸೇಡಿನ ಕಥನ ಮುಕ್ತಾಯವಾಗುತ್ತದೆ. ಅದು ಈಗ ಶ್ರೀಮುಡಿಯಲ್ಲ. ಮುನಿಜನರ ಮಂತ್ರಪುಷ್ಕಲ ಪುಣ್ಯಜಲಾಭಿಷೇಚನದಿಂದ ಶ್ರೀಯುತವಾಗಿದ್ದುದು ಇದೀಗ ನೀಚನ ನೆತ್ತರು ನೆಣ ಕರುಳು ಮಾಂಸಾದಿ ಭಯಂಕರ ಅಸಹ್ಯತೆಯಿಂದ ಲಿಪ್ತವಾಗಿ ಅಶ್ರೀಯುತವಾಗಿದೆ.

ಪಂಪ ಇದೇ ಭಯಂಕರ ಚಿತ್ರವನ್ನು ಇದಕ್ಕಿಂತಲೂ ಹೆಚ್ಚು ಕಲಾಭಿರುಚಿಗೆ ಸಮ್ಮತವಾಗುವಂತೆ ವರ್ಣಿಸಿರುವುದನ್ನು ಕಾಣುತ್ತೇವೆ. ಕರುಳ್ಗಳೆ ಪೊಸೆವಾಸಿಗಮಾಗೆ ಕೃಷ್ಣೆಯಂ ಮುಡಿಯಿಸಿದಂ ಎಂಬ ಒಂದೇ ಮಾತು ಇಡೀ ಸನ್ನಿವೇಶವನ್ನು ಕಟ್ಟಿಕೊಡುತ್ತದೆ. ಕಟ್ಟಿದ ಶ್ರೀಮುಡಿಗೆ ಚೂಡಾಮಣಿಯಿಡುವಂತೆ, ಅದರ ಅಸಮಾನ್ಯತೆ, ಅತಿಶಯತೆ ಮಿಡಿಯುವಂತೆ ಮಹಾಸ್ರಗ್ಧರೆಯ ಮಹಾರುದ್ರವೀಣೆಯ ಭವ್ಯಧ್ವನಿಯೊಂದನ್ನು ಪಂಪ ಮೀಂಟಿದ್ದಾನೆ ಎನ್ನುತ್ತಾರೆ ಕುವೆಂಪು. ಮಿತಭಾಷಿ ಪಂಪನನ್ನೂ, ವಾಚಾಳಿ ನಾರಣಪ್ಪನನ್ನೂ ನಮ್ಮ ರಸಋಷಿ ಸಮಸಮ ತೂಗಿದ್ದಾರೆ.
*
ಪ್ರಬುದ್ಧ ಕರ್ಣಾಟಕದ ಈ ಸಂಚಿಕೆ ಅರವತ್ತು ವರ್ಷದ ಹಿಂದಿನ ಕನ್ನಡ ಸಾಹಿತ್ಯ ಜಗತ್ತಿಗೆ ಇಣುಕುವಂತೆ ಮಾಡಿತು. ಆ ಜಗತ್ತು ನಮ್ಮನ್ನು ಚಕಿತಗೊಳಿಸುತ್ತದೆ. ಪಂಪ ಬಳಸಿದ ಕನ್ನಡವನ್ನು ಕುಮಾರವ್ಯಾಸ ಬಳಸುವುದಿಲ್ಲ. ಕುಮಾರವ್ಯಾಸನ ಕನ್ನಡದಿಂದ ಕುವೆಂಪು ದೂರ. ಕುವೆಂಪು ಮತ್ತು ಸಮಕಾಲೀನರ ಕೆಲವು ಪದಪ್ರಯೋಗಗಳು, ನುಡಿಗಟ್ಟುಗಳು ಇಂದು ಕಾಣುತ್ತಿಲ್ಲ. ಈ ಮೂವರು ಬಳಸಿದ್ದು ಕನ್ನಡವೇ.

ಭಾಷೆ ಎಂಬ ನದಿ ವಿವಿಧ ಕಾಲಮಾನವೆಂಬ ನೆಲದ ಮೇಲೆ ಹರಿಯುತ್ತಾ ಬದಲಾಗುವ ಬಗೆ ಸೋಜಿಗ. ಮತ್ತೊಂದು ಸೋಜಿಗವೆಂದರೆ ಇಡೀ ಸಂಚಿಕೆಯಲ್ಲಿ ಒಬ್ಬರೇ ಒಬ್ಬ ಲೇಖಕಿ ಇಲ್ಲ. ಬರೆಯುವವರು ಇರಲಿಲ್ಲವೋ, ಇದ್ದರೂ ಅವರು ಪ್ರಬುದ್ಧ ಕರ್ಣಾಟಕಕ್ಕೆ ಬರೆಯುತ್ತಿರಲಿಲ್ಲವೋ ಕಾಣೆ. ಆಗಿನ ಸಾಮಾಜಿಕ ವಾಸ್ತವಗಳು ಏನೇ ಇರಲಿ, ಮಹಾಕಾವ್ಯಗಳನ್ನು ಪ್ರೀತಿಸುವವರಿಗೆ ಇಂಥ ಸಂಚಿಕೆಗಳು ಸಂಗ್ರಹಯೋಗ್ಯ. ಹೊಸಗನ್ನಡವನ್ನೇ ಓದಲಿಚ್ಫಿಸದ ಇಂದಿನ ತರುಣರಿಗೆ ಇದೆಲ್ಲ ವ್ಯರ್ಥಾಲಾಪ ಅನ್ನಿಸಬಹುದು. ಆದರೆ ಮಹಾಕಾವ್ಯಗಳಿಗೆ ಸಾವಿಲ್ಲ. ಅವು ಎಲ್ಲ ಕಾಲಕ್ಕೂ ಹೊಸ ಪರಿವೇಷ ತೊಟ್ಟು, ಹೊಸ ಅರ್ಥ ಕೊಟ್ಟು ನಮ್ಮೊಂದಿಗೆ ಮುನ್ನಡೆಯುತ್ತವೆ.
ನಾನು ಹುಟ್ಟುವ ಮುನ್ನವೇ ಪ್ರಕಟಗೊಂಡಿರುವ ಈ ಪ್ರಬುದ್ಧ ಕರ್ಣಾಟಕದ ಸಂಚಿಕೆಯನ್ನು ಕಂಡಾಗ ಆ ಕಾಲದಲ್ಲಿ ಆಹಾ ಎಂಥ ಮುದವಿತ್ತು ಎಂದು ಬಾಯಿ ಚಪ್ಪರಿಸುವಂತಾಗುತ್ತದೆ. ಹೌದೆ? ನಿಜವೆ? ಮುದವಿತ್ತೆ? ಹಳೆಯದೆಲ್ಲ ಸೊಗಸಾದದ್ದು ಎಂಬ ಕ್ಲೀಷೆಯೂ ಇರಬಹುದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT