ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವ ದೇಶದಲ್ಲಿ ಯುದ್ಧಸಿದ್ಧತೆಯೇ ಸವಾಲು

ಸೇನಾನಿಯ ಸ್ವಗತ
Last Updated 25 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಹೌದು. ಭಾವಲೋಕದಲ್ಲಿ ಬಾಲ್ಯಲೋಕದ ವಿಸ್ತಾರವೇ ದೊಡ್ಡದು. ಎಲ್ಲರ ಪಾಲಿಗೂ ಬಾಲ್ಯ ಎನ್ನುವುದು ಖುಷಿಯ ನೆನಪು. ನನ್ನ ಬಾಲ್ಯದಲ್ಲಿ ಸಮೃದ್ಧಿ ಇತ್ತು. ಅರಸು ಮನೆತನದ ಮಕ್ಕಳು ಎಂಬ ಕಾರಣಕ್ಕೆ ಹೆಚ್ಚಿನ ಸ್ಥಾನಮಾನ ಇತ್ತು. ಅಜ್ಜ ಗಾಂಧೀಜಿ ಪ್ರಭಾವದಿಂದ ಸಸ್ಯಾಹಾರಿ.ಅಜ್ಜಿ ಮುದ್ದಿನಿಂದ ಸಾಕಿದ್ದರು. ‘ಅಜ್ಜಿ ಸಾಕಿದ ಮಗು ಬೊಜ್ಜಕ್ಕೂ ಬಾರನು’ ಎಂಬ ಮಾತಿದೆ. ನಾನೋ ಏಳು ತಿಂಗಳಿಗೇ ಹುಟ್ಟಿದವನಾದ್ದರಿಂದ ಆಗಾಗ ಕಾಯಿಲೆ ಬೀಳುತ್ತಿದ್ದೆ. ಆದ್ದರಿಂದ ಪೌಷ್ಟಿಕ ಆಹಾರ ಸಿಕ್ಕಲಿ ಎಂಬ ಕಾರಣಕ್ಕೆ ನನಗೆ ಸಂಬಂಧಿಕರ ಮನೆಯಲ್ಲಿ ಮಾಂಸಾಹಾರ ಕೊಡುತ್ತಿದ್ದರು.

ಬಾಲ್ಯದಲ್ಲಿ ಸ್ಟ್ಯಾಂಪ್ ಕಲೆಕ್ಷನ್ ಎಂದರೆ ಇಷ್ಟ. ಕಾಲದಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಸ್ಟ್ಯಾಂಪ್ ಗಳು ಇದ್ದುವು. ದುರದೃಷ್ಟ ಎಂದರೆ ನಾನು ಅಂತಿಮ ವರ್ಷದ ಪದವಿ ಓದುತ್ತಿರುವಾಗ ಸಾಗರದ ಓರ್ವ ಸ್ನೇಹಿತಅವುಗಳೆಲ್ಲವನ್ನೂ ಕದ್ದೊಯ್ದ.ಈಗಲೂ ನನಗೆ ಬೇಸರವಾಗುತ್ತದೆ. ಇಷ್ಟಪಡುವುದಕ್ಕೆ ಸ್ಟಾಂಪೇ ಆಗಬೇಕೆಂದಿಲ್ಲ. ನಾನು ಬದುಕನ್ನೇ ತುಂಬ ಇಷ್ಟಪಡುವ ಮನುಷ್ಯ. ಅಡುಗೆಯನ್ನೂ ಬಹಳ ಮುತುವರ್ಜಿಯಿಂದ ಮಾಡುತ್ತೇನೆ. ಸಮಾನ ಮನಸ್ಕರೊಂದಿಗೆ ಬರೋಬ್ಬರಿ ಹರಟೆ ಹೊಡೆಯುತ್ತೇನೆ. ಬೋರ್‌ ಆಗುವುದು ಎಂಬ ಪದವೇ ನನ್ನ ಬಳಿ ಇಲ್ಲ.

ಸೇನೆಯಲ್ಲಿಯೂ ನನಗೆ ಉತ್ತಮ ಸ್ನೇಹಿತರು ಲಭಿಸಿದ್ದರು. ನಾವು ಸ್ನೇಹಿತರೆಲ್ಲ ಸೇರಿ ಯುದ್ಧ ಘೋಷಣೆ ಸನ್ನಿಹಿತಾಗುವುದನ್ನೇ ಕಾಯುತ್ತಿದ್ದವು. ಸೆಪ್ಟೆಂಬರ್ 1971ರಲ್ಲಿ ಯುದ್ಧ ಸಿದ್ಧತೆಗೆ ತೊಡಗಿಕೊಂಡೆವು. ಎಲ್ಲಾ ಟ್ರೂಪ್ ಗಳು ಪೂರ್ವ ನಿಗದಿತ ಸ್ಥಳದಂತೆ ಅಮೃತಸರ ಗಡಿಯಲ್ಲಿ ಜಮಾವಣೆಯಾಗತೊಡಗಿದೆವು. ಭಾರತದ ಭೂಭಾಗದ ಒಂದಿಂಚನ್ನೂ ಬಿಟ್ಟು ಕೊಡಬಾರದೆನ್ನುವ ಬದ್ಧತೆಯೊಂದಿಗೆ ಮೂರು ವಿಭಾಗಗಳಿರುವ 15 ಇನ್ಫೆಂಟರಿ ವಿಭಾಗ ಕಾರ್ಯಸನ್ನದ್ಧವಾಗಿತ್ತು. ಬಾಂಗ್ಲಾ ದೇಶದಲ್ಲಿ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಬಿಸಿ ಏರಿಸಿಕೊಳ್ಳುತ್ತಿತ್ತು. ಮುಕ್ತಿಬಾಹಿನಿ ತುಂಬಾ ಚಟುವಟಿಕೆಯಿಂದ ಕೂಡಿತ್ತು.

ರಾಜಕೀಯ ವಾತಾವರಣವೂ ಅಷ್ಟೇನೂ ಹಿತಕರವಾಗಿರದಿದ್ದ ಕಾಲ. ಇಂದಿರಾ ಗಾಂಧಿ ಇಡೀ ದೇಶವನ್ನು ಬಾಂಧವ್ಯ ವೃದ್ಧಿಗಾಗಿ ಸುತ್ತುತ್ತಿದ್ದರು. ಅಮೆರಿಕಾ ಭಾರತದ ಬಗ್ಗೆ ಋಣಾತ್ಮಕ ಅಭಿಪ್ರಾಯವನ್ನೇ ಬೆಳೆಸಿಕೊಂಡಿತ್ತು. ಇಂದಿರಾಗಾಂಧಿ ಚಾಣಾಕ್ಷತೆಯಿಂದ ಪರಿಸ್ಥಿತಿ ನಿಭಾಯಿಸಲು ಹೆಣಗುತ್ತಿದ್ದರು. ಅತ್ತ ಪಶ್ಚಿಮ ಭಾಗದಲ್ಲಿ ಪಾಕ್-ಭಾರತ ಸೈನ್ಯಗಳು ಮುಖಾಮುಖಿಯಾಗಿದ್ದು, ಯಾವುದೇ ಕ್ಷಣದಲ್ಲಿ ಯುದ್ಧಾರಂಭದ ಕ್ಷಣಗಣನೆಯಲ್ಲಿದ್ದುವು. ನಾವೂ ಯುದ್ಧ ಸಾಮಗ್ರಿಗಳನ್ನು ಸಾಗಿಸುವುದು, ಬಂಕರ್ ಹಾಕುವುದು, ಮದ್ದು ಗುಂಡುಗಳನ್ನು ಅಣಿಗೊಳಿಸುವುದು...ಹೀಗೆ ಎಲ್ಲಾ ರೀತಿಯ ಯುದ್ಧ ಸಿದ್ಧತೆಯಲ್ಲಿದ್ದೆವು.

ಆದರೆ ಈ ಸಿದ್ಧತೆಯಲ್ಲಿದ್ದರೂ ಆ ಹಳ್ಳಿಯ ನಾಗರಿಕರನ್ನು ತೆರವುಗೊಳಿಸಿರಲಿಲ್ಲ. ನಾಗರಿಕರ ನಡುವೆಯೇ ಯುದ್ಧ ತಯಾರಿ ಎಂಬುದು ಬಹು ದೊಡ್ಡ ಸವಾಲು. ಅವರ ನಡುವೆಯೇ ಬಂಕರ್ ಗಳನ್ನು ಹಾಕುವುದು, ಮೈನ್ಸ್‌‌ಗಳನ್ನು ಅಳವಡಿಸುವುದು ದೊಡ್ಡ ಸವಾಲಿನ ಕೆಲಸವೇ ಆಗಿತ್ತು. ಮೈನ್ಸ್ ನಲ್ಲೂ ಬೇರೆ ಬೇರೆ ವಿಧಗಳಿದ್ದುವು. ಅವುಗಳನ್ನು ಒಂದಿಂಚು ಕೆಳಗೆ ಹೂತಿಡಬೇಕು. ಅದರ ಮೇಲೆ ಕಾಲಿಟ್ಟರೆ ಅದು ಸ್ಪೋಟಗೊಳ್ಳುತಿತ್ತು. ಬೇರೆ ಬೇರೆ ವಿಧಗಳ ಮೈನ್ ಗಳಿದ್ದುವು ಎಂದೆನಲ್ಲ, ಅದರದರ ಶಕ್ತಿಗನುಸಾರವಾಗಿ ಆಗುವ ಸ್ಪೋಟದಿಂದ ಕಾಲು-ದೇಹಕ್ಕೆ ಗಾಯವಾಗುವ, ಜೀವಕ್ಕೇ ಎರವಾಗುವ ಮೈನ್ ಗಳಿದ್ದುವು. ಟ್ಯಾಂಕರ್ ಗಳನ್ನೇ ನಾಶ ಗೊಳಿಸುವ ಮೈನ್ ಗಳು ಇರುತ್ತಿದ್ದುವು. ಇದರ ಸಂಪೂರ್ಣ ದಾಖಲೆ ನಮ್ಮಲ್ಲಿರಬೇಕಾಗಿತ್ತು. ಯುದ್ಧ ಮುಗಿದ ಮೇಲೆ ಅದನ್ನು ತೆಗೆಯ ಬೇಕಿತ್ತು. ಇಲ್ಲವಾದರೆ ಹಳ್ಳಿಯಿಂದ ಬಂದವರೂ ಇದಕ್ಕೆ ಬಲಿಯಾಗುವ ಅಪಾಯವಿತ್ತು!.

ನಮ್ಮದು ಪ್ರಜಾಪ್ರಭುತ್ವ ಪದ್ಧತಿಯಾದ ಕಾರಣ ಹಳ್ಳಿಗಳ ಜನರನ್ನು ಸ್ಥಳಾಂತರಿಸಲು ಆಗುತ್ತಿರಲಿಲ್ಲ. ಪಾಕ್‍ನಂತಹ ಸೈನ್ಯಾಡಳಿತದ ದೇಶಗಳು ಜನರನ್ನು ಸ್ಥಳಾಂತರಿಸುವ ಅಧೀಕಾರ ಹೊಂದಿದ್ದುವು ಮತ್ತು ಅವರಿಗೆ ಯುದ್ಧ ಸನ್ನದ್ಧತೆಗೆ ಈ ಅಡಚಣೆ ಇರುತ್ತಿರಲಿಲ್ಲ.

ಒಂದು ಘಟನೆ ಈಗಲೂ ನೆನಪಾಗುತ್ತದೆ. ಒಮ್ಮೆ ಮೈನ್‍ಹಾಕಿ ಎಲ್ಲರೂ ನಿರಾಳರಾಗಿರುವ ಹೊತ್ತಿನಲ್ಲಿ ಒಮ್ಮೆ ಜೋರಾದ ಶಬ್ದ ಕೇಳಿತು. ನಾಯಿಯೊಂದು ತಂತಿಯನ್ನು ಮೆಟ್ಟಿದ ಪರಿಣಾಮವಾಗಿ ಮೈನ್ ಸ್ಪೋಟಗೊಂಡಿತ್ತು!. ಅದನ್ನೂ ಲೆಕ್ಕ ವಿಡಬೇಕು. ಸೈನಿಕರ ಜವಾಬ್ದಾರಿಯ ಪುಟ್ಟ ಪರಿಚಯ ಹೇಳಲು ಈ ಘಟನೆ ದಾಖಲಿಸುತ್ತಿದ್ದೇನೆ. ಅಮೃತ ಸರದಲ್ಲಿ ಹದ್ದುಗಳು ವಿಪರೀತ ಇರುತ್ತಿದ್ದುವು. ಹೀಗೆ ಮೈನ್‍ನಲ್ಲಿ ಸತ್ತ ನಾಯಿಯನ್ನು ಹೊತ್ತೊಯ್ಯಲು ಮತ್ತೆ ಅವುಗಳ ಆಕ್ರಮಣ!!ಜಾಗ ಮತ್ತೆ ಮೈನ್ ಸ್ಪೋಟ.

ಇದೆಲ್ಲವೂ ಕ್ಷುಲ್ಲಕ ಎಂದು ಬಿಡುವ ಹಾಗಿಲ್ಲ. ಇಂತಹ ಘಟನೆಗಳು ಗೂಢಚಾರರ ಮೂಲಕ ಶತ್ರು ದೇಶಕ್ಕೂ ತಿಳಿಯುತ್ತದೆ. ಆಗ ಅಲ್ಲಿನ ಮಾಧ್ಯಮಗಳು, ರೇಡಿಯೋಗಳು ಭಾರತದ ಮೈನ್‍ಗಳು ನಾಯಿಯನ್ನು ಕೊಲ್ಲಲು ಮಾತ್ರ ಶಕ್ತ, ನಮ್ಮನ್ನೇನು ಮಾಡಿಯಾವು ಎಂಬಂತೆ ಅಣಕಿಸುತ್ತಲೂ ಇದ್ದುವು!.

ಹೀಗೇ ಮುಂದುವರಿದಿತ್ತು ತಯಾರಿ. ಹಗಲು ರಾತ್ರಿಯ ಭೇದವೇ ಇಲ್ಲದೇ ನಾವು ಅಣಿಯಾಗುತ್ತಿದ್ದೆವು. ಇದೇ ಸಮಯದಲ್ಲಿ ಪೂರ್ವ ಪಾಕಿಸ್ಥಾನದಲ್ಲಿ ಯುದ್ಧ ಘೋಷಣೆ ಆಗಿ ಯುದ್ಧಾರಂಭವಾಯ್ತು. ಒಂಭತ್ತು ಬೆಟಾಲಿಯನ್‍ಗಳಲ್ಲಿ ನಾವು ಸದಾ ಯಾವುದೆ ಬೆಟಾಲಿಯನ್‍ಗಳು ತೊಂದರೆಯಲ್ಲಿದ್ದರೆ ಸಹಾಯ ಮಾಡಲು ಕಾದಿಟ್ಟ ಬೆಟಾಲಿಯನ್ ಆಗಿತ್ತು-ಹೀಗಾಗಿ ನಮಗೆ ಜವಾಬ್ದಾರಿ ಹೆಚ್ಚು. ಎಲ್ಲಿ ಏನೇ ಆದರೂ ಮೊದಲು ನಾವಲ್ಲಿರಬೇಕಾಗಿತ್ತು. ಆಗ ಯುಎಸ್ 7ನೇ ತುಕಡಿ ಪಾಕಿಸ್ಥಾನಕ್ಕೆ ಬೆಂಬಲವಾಗಿ ಬಂಗಾಳ ಕೊಲ್ಲಿಯಲ್ಲಿ ಬೀಡು ಬಿಟ್ಟಾಗಿತ್ತು. ಆದರೆ ನಮ್ಮ ಸೈನ್ಯ ಪೂರ್ವ ಪಾಕಿಸ್ಥಾನವನ್ನು ಹೊಕ್ಕಿತ್ತು. ಪಾಕಿಸ್ಥಾನಕ್ಕೆ ಬೆಂಬಲವಾಗಿದ್ದ ಅಮೆರಿಕಾದವರು ಬಂದು ತಮ್ಮ ವಾಸ್ತವ್ಯವನ್ನು ಗಟ್ಟಿಗೊಳಿಸುವ ಮೊದಲೇ ಯುದ್ಧ ಮುಗಿಸ ಬೇಕಾಗಿತ್ತು. ಆಗ ಇಂದಿರಾಗಾಂಧಿಯವರ ಪ್ರಯತ್ನದ ಫಲವಾಗಿ ರಶ್ಯ ಭಾರತವನ್ನು ಬೆಂಬಲಿಸುತ್ತಿತ್ತು.

ಮುಂದಿನ ವಾರ: ಯುದ್ಧದ ಕಿಡಿ ಹತ್ತಿಸಿದ ಸೂಪರ್‌ ಸೋನಿಕ್‌ ಫೈಟರ್‌

ನಿರೂಪಣೆ: ಅರೆಹೊಳೆ ಸದಾಶಿವರಾವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT