ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿ ಮೇಲೆ ಶೌಚ; ಸ್ಟೇಷನ್‌ ಮಾಸ್ಟರ್‌ ಪೀಕಲಾಟ

Last Updated 14 ಜುಲೈ 2018, 20:06 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸರ್‌, ರೈಲು ನಿಲ್ದಾಣದ ಪಕ್ಕದಲ್ಲಿಯೇ ಹಳಿಗಳ ಮೇಲೆ ಜನ ಶೌಚ ಮಾಡುತ್ತಾರೆ. ಇದನ್ನು ತಪ್ಪಿಸಿ’ ಎಂದು ಕಲಬುರ್ಗಿ ಸ್ಟೇಷನ್‌ ಮಾಸ್ಟರ್‌ ಸಣ್ಣ ದನಿಯಲ್ಲಿ ‘ದಿಶಾ’ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೇಡಿಕೆ ಮಂಡಿಸಿದಾಗ ಸಂಸದ ಮಲ್ಲಿಕಾರ್ಜುನ ಖರ್ಗೆ ಗಲಿಬಿಲಿಗೊಂಡರು.

‘ಅಲ್ಲಿ ಸಮುದಾಯ ಶೌಚಾಲಯ ಇದೆ. ನಿರ್ವಹಣೆ ಇಲ್ಲ’ ಎಂದು ಜಿಲ್ಲಾಧಿಕಾರಿ ದನಿಗೂಡಿಸಿದರು. ‘ನೋಡಪ್ಪಾ, ಅವರಿಗೆ ಶೌಚಾಲಯ, ನೀರು, ಸ್ವಚ್ಛತೆಯ ವ್ಯವಸ್ಥೆ ಮಾಡಬೇಕಲ್ಲ’ ಎಂದು ಖರ್ಗೆ ಅವರು ವೇದಿಕೆಯಲ್ಲಿದ್ದ ಮೇಯರ್‌ಗೆ ಸೂಚಿಸಿದಾಗ,‌ ಪಾಲಿಕೆಯ ಕಮಿಷನರ್‌ ಸಮೀಕ್ಷೆಯ ವರದಿ ಒಪ್ಪಿಸಿದರು.

‘ನೀವೆಲ್ಲ ಹಿರಿಯ ಅಧಿಕಾರಿಗಳು ಆಂದೋಲನದ ರೂಪದಲ್ಲಿ ಶೌಚಾಲಯಗಳ ನಿರ್ಮಾಣ ಕೆಲಸಮಾಡಬೇಕು. ನೀವುಒಳ್ಳೆಯ ಕೆಲಸ ಮಾಡಿದ್ರ ಜನ ಹಲಿಗಿ ಬಾಜಾ ಹಚ್ಚಿ ಮೆರವಣಿಗೆ ತೆಗಿತಾರ’ ಎಂದು ಖರ್ಗೆ ಬುದ್ಧಿವಾದ ಹೇಳಿದರು.

‘ನಾನು ಕಂದಾಯ ಸಚಿವನಿದ್ದಾಗ ಜೇವರ್ಗಿಯಲ್ಲಿ ಕಾಂತಾ ಎನ್ನುವ ತಹಶೀಲ್ದಾರ್‌ ಇದ್ದರು. ಅತ್ಯಂತ ಪ್ರಾಮಾಣಿಕ ಅಧಿಕಾರಿ. ಅವರು ನಿವೃತ್ತಿ ಹೊಂದಿದಾಗ ಆ ತಾಲ್ಲೂಕಿನ 138 ಹಳ್ಳಿಗಳ ಜನ ತಮ್ಮೂರಿಗೆ ಕರೆದು ಸನ್ಮಾನಿಸಿ, ಚಿನ್ನದ ಉಂಗುರಗಳನ್ನು ಉಡುಗೊರೆ ನೀಡಿದರು. ಒಂದೂವರೆ ಕೆ.ಜಿ.ಯಷ್ಟು ಚಿನ್ನ ಅವರಿಗೆ ಉಡುಗೊರೆಯಾಗಿ ಬಂದಿರಬಹುದು’ ಎಂದು ಹಿಂದಿನ ಘಟನಾವಳಿ ಮೆಲುಕು ಹಾಕಿದ ಖರ್ಗೆ, ಅಧಿಕಾರಿಗಳಿಗೆ ಸ್ಫೂರ್ತಿ ತುಂಬಲು ಯತ್ನಿಸಿದರು.

ಆಗ ಅಡ್ಡಬಾಯಿ ಹಾಕಿದ ಪತ್ರಕರ್ತರೊಬ್ಬರು, ‘ಇಡೀ ಜೀವಮಾನದಾಗ ಗಳಿಸದಷ್ಟು ಆಸ್ತಿ ಒಮ್ಮೆ ಗಳಿಸಿದರು ಬಿಡಿ’ ಎಂದಾಗ ಹಣೆ ಚಚ್ಚಿಕೊಳ್ಳುವ ಸರದಿ ಖರ್ಗೆ ಅವರದ್ದಾಗಿತ್ತು. ಅಧಿಕಾರಿಗಳು ಮುಸಿಮುಸಿ ನಗಲಾರಂಭಿಸಿದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT