ಬುಧವಾರ, ನವೆಂಬರ್ 13, 2019
17 °C
ಶುಕ್ರವಾರ, 11–11–1994

25 ವರ್ಷಗಳ ಹಿಂದಿನ ನೆನಪು | ಕುವೆಂಪು ನಿಧನಕ್ಕೆ ವ್ಯಾಪಕ ಶೋಕ

Published:
Updated:

ಕುವೆಂಪು ನಿಧನಕ್ಕೆ ವ್ಯಾಪಕ ಶೋಕ: ಇಂದು ಅಂತ್ಯಕ್ರಿಯೆ
ಮೈಸೂರು, ನ. 10– ಗುರುವಾರ ಬೆಳಗಿನ ಜಾವ ಒಂದು ಗಂಟೆಗೆ ‘ಉದಯ ರವಿ’ ಯಲ್ಲಿ ಅಸ್ತಂಗತರಾದ ಕನ್ನಡ ನಾಡಿನ ಅದ್ಭುತ ಚೇತನ, ಸಾರಸ್ವತ ಲೋಕದ ಮೇರು ಪ್ರತಿಭೆ, ರಾಷ್ಟ್ರಕವಿ ಡಾ. ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ಅವರ ಅಂತ್ಯಕ್ರಿಯೆ ನಾಳೆ ಅವರ ಸ್ವಗ್ರಾಮ ಕುಪ್ಪಳಿಯ ಕವಿಶೈಲದಲ್ಲಿ ಬೆಳಿಗ್ಗೆ 11 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.‌

ಅಂತ್ಯಸಂಸ್ಕಾರದಲ್ಲಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಪಾಲ್ಗೊಳ್ಳುವರು. ಗುರುವಾರ ಸಂಜೆ ವಾಹನದಲ್ಲಿ ಕುವೆಂಪು ಅವರ ಪಾರ್ಥಿವ ಶರೀರವನ್ನು ಮೈಸೂರಿನಿಂದ ಕುಪ್ಪಳಿಗೆ ಕೊಂಡೊಯ್ಯಲಾಯಿತು. ಅಲ್ಲಿ ನಾಳೆ ಬೆಳಿಗ್ಗೆ ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆ.

‘ನನ್ನಲ್ಲೇ ಕುವೆಂಪು’
ಮೈಸೂರು, ನ. 10– ‘ಕುವೆಂಪು ನನ್ನ ತಂದೆ. ನನ್ನ ಬರಹದಲ್ಲಿ ಕುವೆಂಪು ಇದ್ದಾರೆ. ನನ್ನ ಆಲೋಚನೆಯ ಹಿಂದೆ ಇದ್ದಾರೆ. ನನ್ನ ಇಡೀ ವ್ಯಕ್ತಿತ್ವದಲ್ಲೇ ಇದ್ದಾರೆ. ಕುವೆಂಪು ಅವರ ಬಗ್ಗೆ ಏನಾದರೂ ಹೇಳಲು ಹೋದರೆ ಅದು ನನ್ನ ಬಗ್ಗೆಯೇ ಹೇಳಿಕೊಂಡಂತಾಗುತ್ತದೆ. ಹೀಗಾಗಿ ನಾನು ಏನನ್ನೂ ಹೇಳಲು ಬಯಸುವುದಿಲ್ಲ’.

ಅಗ್ರಮಾನ್ಯ ಬರಹಗಾರ, ಕುವೆಂಪು ಅವರ ಪುತ್ರ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಕುವೆಂಪು ಅವರ ಬಗ್ಗೆ ಆಡಿದ ಮಾತುಗಳಿವು. ಈ ದುಃಖದ ಸಂದರ್ಭದಲ್ಲಿ ‍ಪ್ರತಿಕ್ರಿಯೆ ಬಯಸಿದಾಗ ಅವರು ಹೀಗೆ ಹೇಳಿದರು.

ಪ್ರತಿಕ್ರಿಯಿಸಿ (+)