ಗುರುವಾರ , ಆಗಸ್ಟ್ 5, 2021
23 °C

25 ವರ್ಷಗಳ ಹಿಂದೆ | ಸೋಮವಾರ, 10–7–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಶವಮೂರ್ತಿಗಳಿಗೆ ‘ಕನಕ– ಪುರಂದರ’; ಅಡಿಗರಿಗೆ ‘ಪಂಪ’ ಪ್ರಶಸ್ತಿ ಪ್ರದಾನ

ಬೆಂಗಳೂರು, ಜುಲೈ 9– ನವ್ಯ ಕಾವ್ಯದ ‘ಮೋಹನ ಮುರಲಿ’ಯಿಂದ ಒಂದು ಜನಾಂಗದ ಕಣ್ಣು ತೆರೆಸಿದ ಕವಿ ದಿವಂಗತ ಪ್ರೊ. ಎಂ.ಗೋಪಾಲಕೃಷ್ಣ ಅಡಿಗ ಹಾಗೂ ಸಪ್ತ ತಂತಿಯ ಪಿಟೀಲಿನ ಮೂಲಕ ನಾದಗಂಗೆ ಹರಿಸಿದ ಆರ್‌.ಆರ್‌.ಕೇಶವಮೂರ್ತಿ ಇವರುಗಳಿಗೆ ನಾಡುನುಡಿಗೆ ಸಲ್ಲಿಸಿದ ಸೇವೆಗಾಗಿ ಇಂದು 1993ರ ‘ಪಂಪ’ ಹಾಗೂ ‘ಕನಕ– ಪುರಂದರ’ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಅಡಿಗರು ರಚಿಸಿದ ‘ಸುವರ್ಣ ಪುತ್ಥಳಿ’ ಕಾವ್ಯಕ್ಕೆ ನಾಡಿದ ಅತ್ಯುಚ್ಚ ಸಾಹಿತ್ಯ ಪ್ರಶಸ್ತಿಯಾದ ‘ಪಂಪ’ ಪ್ರಶಸ್ತಿ ನೀಡಲಾಗಿದ್ದು, ಆ ಪದ್ಯಕ್ಕೆ ವಸ್ತುವಾದ ಲಲಿತಾ ಅಡಿಗ ಅವರು ಈ ಪ್ರಶಸ್ತಿಯಾದ ‘ಸುವರ್ಣ ಲೇಪಿತ ವಾಗ್ದೇವಿ’ ಪುತ್ಥಳಿಯನ್ನು ಸ್ವೀಕರಿಸಬೇಕಾಗಿ ಬಂದದ್ದು ಯೋಗಾಯೋಗ. ಮುಖ್ಯಮಂತ್ರಿ ಎಚ್‌.ಡಿ.ದೇವೇಗೌಡರು ಶಾಲು ಹೊದಿಸಿ, ಬಹುಮಾನದ ಮೊತ್ತವಾದ ಒಂದು ಲಕ್ಷ ರೂ. ಹಾಗೂ ಫಲಕ ನೀಡಿ ಸನ್ಮಾನಿಸಿದರು. ಎಂಬತ್ತರ ಹರೆಯದ ಕೇಶವಮೂರ್ತಿ ಅವರಿಗೆ ಸುವರ್ಣಲೇಪಿತ ಚೌಕಟ್ಟಿನಲ್ಲಿ ಕೀಲಿಸಿದ ತಂಬೂರಿಯುಳ್ಳ ಫಲಕ ನೀಡಿ, ಶಾಲು ಹೊದಿಸಿ, ಮುಖ್ಯಮಂತ್ರಿ ಪ್ರಶಸ್ತಿ ಪ್ರದಾನ ಮಾಡಿದರು.

ಉಗ್ರಗಾಮಿ ವಶದಿಂದ ಪಾರು

ಶ್ರೀನಗರ, ಜುಲೈ 9 (ಯುಎನ್‌ಐ, ಪಿಟಿಐ)– ಕಾಶ್ಮೀರದಲ್ಲಿ ಉಗ್ರಗಾಮಿ ಸಂಘಟನೆಯೊಂದರಿಂದ ಅಪಹರಣಕ್ಕೆ ಒಳಗಾಗಿದ್ದ ಇಬ್ಬರು ಪತ್ರಕರ್ತರು ಇಂದು ಬಿಡುಗಡೆಗೊಂಡಿದ್ದಾರೆ. ಇನ್ನೊಂದು ಉಗ್ರಗಾಮಿ ಸಂಘಟನೆಯಿಂದ ಅಪಹರಣಕ್ಕೆ ಒಳಗಾಗಿರುವ ಐವರು ವಿದೇಶಿ ಪ್ರವಾಸಿಗರ ಪೈಕಿ ಒಬ್ಬರು ನಿನ್ನೆ ತಪ್ಪಿಸಿಕೊಂಡು ಬಂದಿದ್ದಾರೆ.

ಈ ಮಧ್ಯೆ ವಿದೇಶಿ ಪ್ರವಾಸಿಗರನ್ನು ಅಪಹರಿಸಿರುವ ಅಲ್‌ ಫರಾನ್‌ ಉಗ್ರಗಾಮಿ ಸಂಘಟನೆಯು ಸುಮಾರು ಐದು ದಿನಗಳ ಮೌನದ ನಂತರ ಇಂದು, ತನ್ನ ಬೇಡಿಕೆಗಳನ್ನು ಈಡೇರಿಸುವ ಭರವಸೆ ದೊರೆಯದಿದ್ದಲ್ಲಿ ಒತ್ತೆಯಲ್ಲಿರುವ ನಾಲ್ವರನ್ನು ಉಗ್ರವಾಗಿ ಶಿಕ್ಷಿಸುವುದಾಗಿ ಬೆದರಿಕೆ ಹಾಕಿದೆ. ತನ್ನ ಬೇಡಿಕೆಗಳನ್ನು ಜುಲೈ 15ರೊಳಗೆ ಈಡೇರಿಸದಿದ್ದಲ್ಲಿ ಮುಂದಾಗುವ ಪರಿಣಾಮಕ್ಕೆ ಭಾರತ ಸರ್ಕಾರವೇ ಹೊಣೆಯಾಗುತ್ತದೆ ಎಂದು ಅದು ಗಡುವು ನೀಡಿ ಎಚ್ಚರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು