ಸೋಮವಾರ, ಜನವರಿ 20, 2020
27 °C

25 ವರ್ಷಗಳ ಹಿಂದೆ ; ಗುರುವಾರ, 8–12–1994

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನಂತಮೂರ್ತಿಗೆ ಜ್ಞಾನಪೀಠ ಪ್ರಶಸ್ತಿ

ನವದೆಹಲಿ, ಡಿ. 7 (ಯುಎನ್‌ಐ)– ಕನ್ನಡದ ಖ್ಯಾತ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಅವರಿಗೆ 1994ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಇವರು ಜ್ಞಾನಪೀಠ ಪ್ರಶಸ್ತಿ ಪಡೆಯುತ್ತಿರುವ ಕನ್ನಡದ ಆರನೇ ಸಾಹಿತಿ.

ಸೃಜನಶೀಲ ಬರಹಕ್ಕಾಗಿ ನೀಡಲಾಗುವ ಈ ಪ್ರಶಸ್ತಿಯ ಜತೆ ಪ್ರಶಂಸಾ ಫಲಕ, ವಾಗ್ದೇವಿಯ ಕಂಚಿನ ಮೂರ್ತಿ ಹಾಗೂ 25 ಲಕ್ಷ ರೂಪಾಯಿ ನಗದು ನೀಡಲಾಗುವುದು.

‘ತುಂಬ ಹಿರಿಯರಿಗೆ ಸಿಕ್ಕಿದ ಗೌರವ ಇದು. ನನಗೆ ಬಹಳ ಸಂತೋಷವಾಗಿದೆ. ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಆದರೆ, ಓದುಗರಿಗೂ, ಬರಹಗಾರರಿಗೂ ಒಂದು ಸರಳವಾದ ಸಂಬಂಧ ಇರುತ್ತದೆ. ಇಂಥ ದೊಡ್ಡ ಗೌರವಗಳು ಆ ಸಂಬಂಧವನ್ನು ಕ್ಲಿಷ್ಟಗೊಳಿಸುವುದೇನೊ.....’ ಎಂದು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅನಂತಮೂರ್ತಿ ಪ್ರತಿಕ್ರಿಯಿಸಿದರು.

‘ಕನ್ನಡಿಗರಿಗೆ ಮತ್ತೊಂದು ಕೋಡು’

ಬೆಂಗಳೂರು, ಡಿ. 7– ‘ಸೂಕ್ಷ್ಮ ಸಂವೇದನಾಶೀಲ ಸಾಹಿತಿಯಾದ ಡಾ. ಯು.ಆರ್. ಅನಂತಮೂರ್ತಿ ಅವರಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರೆಯುವುದರೊಂದಿಗೆ ಕನ್ನಡಿಗರಿಗೆ ಮತ್ತೊಂದು ಕೋಡು ಮೂಡಿದೆ’ ಎಂದು ಹಿರಿಯ ಕವಿ ಡಾ. ಪು.ತಿ. ನರಸಿಂಹಚಾರ್ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

‘ಧೈರ್ಯಶಾಲಿಯಾದ ಅನಂತಮೂರ್ತಿಯವರ ಮನಸ್ಸು ಭಾರತೀಯ ಸಂಸ್ಕೃತಿ ವಿಚಾರದಲ್ಲಿ ವಿಮುಖವಾಗದೆ ಸುಮುಖವಾಗಿದೆ’ ಎಂದು ಹೇಳಿದರು.

‘ನಿಷ್ಕರ್ಷ’ ಅತ್ಯುತ್ತಮ ಚಲನಚಿತ್ರ, ರಾಜ್‌ಕುಮಾರ್ ಅತ್ಯುತ್ತಮ ನಟ; ಲಕ್ಷ್ಮೀ ಶ್ರೇಷ್ಠ ನಟಿ

ಬೆಂಗಳೂರು, ಡಿ. 7– 1993–94ನೇ ಸಾಲಿನ ಕನ್ನಡ ಚಲನಚಿತ್ರ ರಾಜ್ಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು ಮೊದಲನೆ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ‘ನಿಷ್ಕರ್ಷ’ ಪಡೆದುಕೊಂಡಿದೆ.

‘ಒಡಹುಟ್ಟಿದವರು’ ಚಿತ್ರದಲ್ಲಿನ ರಾಮಣ್ಣನ ಪಾತ್ರಕ್ಕಾಗಿ ಡಾ. ರಾಜ್‌ಕುಮಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ, ‘ಹೂವು ಹಣ್ಣು’ ಚಿತ್ರದ ರಮಾಬಾಯಿ ಪಾತ್ರಕ್ಕಾಗಿ ಲಕ್ಷ್ಮೀ (ಜೂಲಿ) ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಂದಿದೆ.

ಪ್ರತಿಕ್ರಿಯಿಸಿ (+)