ಗುರುವಾರ , ಅಕ್ಟೋಬರ್ 17, 2019
21 °C

ಗುರುವಾರ 13–10–1994

Published:
Updated:

ಚಿತ್ರಮಂದಿರದಲ್ಲಿ ಶಾಂತ ಸ್ಥಿತಿ: ಕರ್ಫ್ಯೂ ರದ್ದು 

ಬೆಂಗಳೂರು, ಅ. 12– ಉರ್ದು ವಾರ್ತಾ ಪ್ರಸಾರ ಸಂಬಂಧದ ಹಿಂಸಾಚಾರದಲ್ಲಿ ಬೆಂದ ಬೆಂಗಳೂರು ನಗರದಲ್ಲಿ ನಿನ್ನೆ ರಾತ್ರಿಯಿಂದೀಚೆಗೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಪ್ರಕ್ಷುಬ್ದ ಪ್ರದೇಶಗಳಲ್ಲಿ ಶಾಂತಿ ನೆಲೆಸಿದೆ. ಬ್ಯಾಟರಾಯನಪುರ ಹಾಗೂ ಜಗಜೀವನರಾಂ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಾರಿಯಲ್ಲಿದ್ದ ಕರ್ಫ್ಯೂವನ್ನು ತೆಗೆಯಲಾಗಿದೆ. ಈ ಮಧ್ಯೆ ನರ್ತಕಿ ಚಿತ್ರಮಂದಿರದಲ್ಲಿ ಸಿಡಿಯದ ಬಾಂಬ್ ಇಂದು ಬೆಳಿಗ್ಗೆ ಪತ್ತೆಯಾಗಿದೆ.

ನಿನ್ನೆ ಸಂಜೆ ಈ ಚಿತ್ರಮಂದಿರದಲ್ಲಿ ಪ್ರದರ್ಶನ ನಡೆದಿದ್ದಾಗಲೇ ದುಷ್ಕರ್ಮಿಯೊಬ್ಬ ಬಾಂಬ್ ಒಂದನ್ನು ಬಾಲ್ಕನಿಯಿದ ಎಸೆದು ಸಿಡಿಸಿದ್ದ. ಇದು ಕೂಡ ಬಾಲ್ಕನಿಯ ’ಎಫ್‘ ಸಾಲಿನ 16–17 ಸೀಟುಗಳ ನಡುವಿನ ಅಂಚಿನಲ್ಲಿ ‍ಪ್ಲಾಸ್ಟಿಕ್‌ ಚೀಲದಲ್ಲಿ ಸುತ್ತಲಿ ದಾರದಿಂದ ಬಿಗಿದಿದ್ದ ಈ ಬಾಂಬ್‌ ಇರಿಸಲಾಗಿತ್ತು.

ಇಬ್ಬರಿಗೆ ನೊಬೆಲ್‌ ಭೌತವಿಜ್ಞಾನ ಪ್ರಶಸ್ತಿ

ಸ್ಟಾಕ್‌ಹೋಮ್, ಅ. 12 (ಎಪಿ)– ಸಾಂದ್ರೀಕೃತ ದ್ರವ್ಯಕ್ಕೆ ಸಂಬಂಧಿಸಿದಂತೆ ಮಾಡಿದ ಸಂಶೋಧನೆಗಳಿಗಾಗಿ ಅಮೆರಿಕ ಒಬ್ಬ ಮತ್ತು ಕೆನಡಾದ ವಿಜ್ಞಾನಿಗೆ ಭೌತ ವಿಜ್ಞಾನದ ನೊಬೆಲ್ ಪ್ರಶಸ್ತಿ ದೊರೆತಿದೆ.

ಹ್ಯಾಮಿಲ್ಟನ್‌ನ ಮೆಕ್‌ಮಾಸ್ಟರ್ ವಿಶ್ವವಿದ್ಯಾಲಯದ ಬರ್ಟ್ರಾಮ್ ಎನ್. ಬ್ರಾಕ್‌ಹೌಸ್ ಮತ್ತು ಕೇಂಬ್ರಿಡ್ಜ್‌ನ ಮೆಸಾಚುಸೆಟ್ಸ್ ತಂತ್ರಜ್ಞಾನ ಸಂಸ್ಥೆಯ ಕ್ಲಿಪೋರ್ಡ್ ಜಿ. ಪುಲ್ ಅವರೇ ಈ ಇಬ್ಬರು ವಿಜ್ಞಾನಿಗಳಾಗಿದ್ದಾರೆ.

ಅಣ್ಣಾ ದೊರೆ ಸಿಐಎ ಏಜಂಟ್– ಶೇಷನ್ ಬರಹಕ್ಕೆ ಪ್ರತಿಭಟನೆ

ಮದ್ರಾಸ್, ಅ. 12 (ಪಿಟಿಐ)– ಡಿಎಂಕೆ ಸಂಸ್ಥಾಪಕ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಅಣ್ಣಾ ದೊರೆ ಅವರು ಅಮೆರಿಕ ಗೂಢಚಾರ ದಳದ (ಸಿಐಎ) ಜತೆ ಸಂಪರ್ಕ ಹೊಂದಿದ್ದರು ಎಂದು ಮುಖ್ಯ ಚುನಾವಣಾ ಕಮೀಷನರ್ ಟಿ.ಎನ್‌. ಶೇಷನ್ ಅವರು ಇನ್ನೂ ಪ್ರಕಾಶನಗೊಳ್ಳಬೇಕಿರುವ ತಮ್ಮ ಜೀವನ ಚರಿತ್ರೆಯಲ್ಲಿ ಆರೋಪಿಸಿರುವುದು ರಾಜ್ಯದ ವಿವಿಧ ಪಕ್ಷಗಳು ಕೆರಳುವಂತೆ ಮಾಡಿದೆ.

ಅಣ್ಣಾ ಡಿಎಂಕೆ ಮಹಾಪ್ರಧಾನ ಕಾರ್ಯದರ್ಶಿ ಮುಖ್ಯಮಂತ್ರಿ ಜಯಲಲಿತಾ, ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ, ಎಂಡಿಎಂಕೆ ಮುಖ್ಯಸ್ಥ ವಿ. ಗೋಪಾಲಸ್ವಾಮಿ, ಟಿಎನ್‌ಸಿಸಿಎ ವಕ್ತಾರ ಟಿ.ಎಸ್. ಕಿಳ್ಳವರವನ್ ಸೇರಿದಂತೆ ಹಲವಾರು ರಾಜಕೀಯ ಧುರೀಣರು ಶೇಷನ್ನರ ಈ ಬರಹವನ್ನು ಖಂಡಿಸಿದ್ದಾರೆ.

Post Comments (+)