ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಶುಕ್ರವಾರ, 1–9–1995

Last Updated 31 ಆಗಸ್ಟ್ 2020, 15:07 IST
ಅಕ್ಷರ ಗಾತ್ರ

ಭೀಕರ ಸ್ಫೋಟಕ್ಕೆ ಪಂಜಾಬ್‌ ಮುಖ್ಯಮಂತ್ರಿ ಬೇಅಂತ್‌ ಬಲಿ

ಚಂಡೀಗಡ, ಆ. 31 (ಪಿಟಿಐ, ಯುಎನ್‌ಐ)– ಉಗ್ರಗಾಮಿಗಳ ಉಪಟಳದಿಂದ ತತ್ತರಿಸಿದ್ದ ಪಂಜಾಬ್‌ನಲ್ಲಿ ಮೂರು ವರ್ಷದ ಹಿಂದೆ ಅಧಿಕಾರ ಸೂತ್ರ ಹಿಡಿದು ಶಾಂತಿ ಸ್ಥಾಪನೆ ಕಾರ್ಯದಲ್ಲಿ ಯಶಸ್ವಿಯಾಗಿದ್ದ ಮುಖ್ಯಮಂತ್ರಿ ಬೇಅಂತ್‌ ಸಿಂಗ್‌ ಇಂದು ಸಂಜೆ ಇಲ್ಲಿನ ಸಚಿವಾಲಯದ ಎದುರು ಸಂಭವಿಸಿದ ಪ್ರಬಲ ಕಾರ್‌ ಬಾಂಬ್‌ ಸ್ಫೋಟದಲ್ಲಿ ಅಸುನೀಗಿದರು.

ಮುಖ್ಯಮಂತ್ರಿಯವರು ಹತ್ತು ಅಂತಸ್ತಿನ ಬಿಗಿ ಭದ್ರತೆಯ ಪಂಜಾಬ್‌–ಹರಿಯಾಣ ಸಚಿವಾಲಯ ಕಟ್ಟಡದಲ್ಲಿ ಎರಡನೇ ಮಹಡಿಯಲ್ಲಿರುವ ಕಾರ್ಯಾಲಯದಿಂದ ದೈನಂದಿನ ಕೆಲಸ ಮುಗಿಸಿ ಕೆಳಗಿಳಿದು ಬಂದು ಹೊರಗಡೆ ಇರುವ ತಮ್ಮ ಕಾರನ್ನು ಸಂಜೆ 5.13ಕ್ಕೆ ಏರುತ್ತಿದ್ದಂತೆ ಭಾರಿ ಸ್ಫೋಟ ಸಂಭವಿಸಿತು. ಅವರ ಕಾರಿನಲ್ಲಿಯೇ ಬಾಂಬ್‌ ಇರಿಸಲಾಗಿತ್ತು ಎಂದು ಶಂಕಿಸಲಾಗಿದೆ.

ಬ್ರಾರ್‌ ಮುಖ್ಯಮಂತ್ರಿ: ಈ ಮಧ್ಯೆ ಬೇಅಂತ್‌ ಸಿಂಗ್‌ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ಹರ್‌ಚರಣ್‌ ಸಿಂಗ್‌ ಬ್ರಾರ್‌ ಅವರು ಹಂಗಾಮಿ ಮುಖ್ಯಮಂತ್ರಿಯಾಗಿ ಇಂದು ರಾತ್ರಿ ಪ್ರಮಾಣವಚನ ಸ್ವೀಕರಿಸಿದರು.

ಎನ್‌ಟಿಆರ್‌ ರಾಜೀನಾಮೆ, ವಿಶ್ರಾಂತಿಗೆ ಸಲಹೆ

ಹೈದರಾಬಾದ್‌, ಆ. 31 (ಪಿಟಿಐ)– ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷವನ್ನು ಹೆಚ್ಚು ಕಡಿಮೆ ಇಡಿಯಾಗಿ ಎನ್‌.ಟಿ.ರಾಮರಾವ್‌ ಅವರ ಸಮೀಪದ ಬಂಧುಗಳೇ ‘ಅಪಹರಿಸಿದ’ ವಿದ್ಯಮಾನಕ್ಕೆ ನಾಟಕೀಯ ಮುಕ್ತಾಯವೆಂಬಂತೆ ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಮರಾವ್‌ ಅವರು ರಾಜೀನಾಮೆ ನೀಡಿದರು.

ಬೆಳಿಗ್ಗೆ ರಾಜೀನಾಮೆ ಪತ್ರವನ್ನು ಬರೆದ ಸ್ವಲ್ಪವೇ ಹೊತ್ತಿನಲ್ಲಿ ಅವರು ಕೆಮ್ಮು, ಉಬ್ಬಸ ಹಾಗೂ ಎದೆ ನೋವಿನಿಂದ ಕುಸಿದುಬಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು. ಅವರಿಗೆ ಲಘು ಹೃದಯಾಘಾತವಾಗಿತ್ತು. ಮಧ್ಯರಾತ್ರಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು ಮೂರು ದಿನಗಳ ವಿಶ್ರಾಂತಿಗೆ ವೈದ್ಯರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT